ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸುಚಿತ್ರ' ಆವರಣದಲ್ಲಿ `ತೇಜಸ್ವಿ ಲೋಕ'

Last Updated 7 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಸುಚಿತ್ರದ ಆವರಣದಲ್ಲಿ ಭಾನುವಾರ ತೇಜಸ್ವಿಲೋಕ ಅನಾವರಣಗೊಂಡಿತ್ತು. ಸಭಾಂಗಣದೊಳಗೆ ಸಾಹಿತಿಗಳು ತಾವು ಕಂಡ ತೇಜಸ್ವಿ ಅವರನ್ನು ಮಾತಿನಲ್ಲಿ ಹಿಡಿದಿಡುವ ಪ್ರಯತ್ನ ಮಾಡುತ್ತಿದ್ದರೆ, ಹೊರಗೆ ಕ್ಯಾಮೆರಾದ ಮೂಲಕ ತೇಜಸ್ವಿ ಸೆರೆಹಿಡಿದ ಹಕ್ಕಿಗಳು ಚೌಕಟ್ಟಿನಾಚೆಗೆ ಹಾರಲು ಸಿದ್ಧಗೊಂಡಂತಿತ್ತು.

ಸಮುದಾಯ ಹಾಗೂ ಸುಚಿತ್ರ ಅಕಾಡೆಮಿ ಆಯೋಜಿಸಿದ್ದ `ತೇಜಸ್ವಿ ನೆನಪು' ಕಾರ್ಯಕ್ರಮದಲ್ಲಿ ದಿ. ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ವ್ಯಕ್ತಿತ್ವವನ್ನು ಹಿಡಿಯುವ ಪ್ರಯತ್ನ ನಡೆಯಿತು. ವೇದಿಕೆಯ ಮೇಲಿದ್ದವರು ತೇಜಸ್ವಿ ಅವರನ್ನು ತಮ್ಮ ನೆನಪಿನ ಗಣಿಯಿಂದ ಹೊರತೆಗೆಯುತ್ತಾ ಹೋದಂತೆ, ಸಭಿಕರು ತೇಜಸ್ವಿ ವ್ಯಕ್ತಿತ್ವವನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಿದರು.

ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, `ಕುವೆಂಪು ಹಾಗೂ ತೇಜಸ್ವಿ ಕನ್ನಡದ ಎರಡು ಅದ್ಭುತಗಳು. ಆಲದಮರದ ಕೆಳಗೆ ಬೇರಾವುದೇ ಗಿಡಗಳು ಬೆಳೆಯುವುದಿಲ್ಲ ಎಂಬ ಮಾತಿದೆ. ಆದರೆ, ಕುವೆಂಪು ಹಾಗೂ ತೇಜಸ್ವಿ ಎಂಬ ಎರಡೂ ಆಲದಮರಗಳು ಅನೇಕರ ಮೇಲೆ ಪ್ರಭಾವ ಬೀರಿ ಅವರ ಬೆಳವಣಿಗೆಗೆ ಕಾರಣವಾದರು. ನಗರದ ವೈಚಾರಿಕತೆಯನ್ನು ತುಂಬಿಕೊಂಡು ಹಳ್ಳಿಗೆ ಹೋದ ತೇಜಸ್ವಿ ಜಗತ್ತನ್ನು ಗ್ರಾಮೀಣ ಜೀವನದ ಮೂಲಕ ಗ್ರಹಿಸಲು ಆರಂಭಿಸಿದರು' ಎಂದು ಅಭಿಪ್ರಾಯಪಟ್ಟರು.

ಸಾಹಿತಿ ಪ್ರೊ.ಎಂ.ಎಚ್.ಕೃಷ್ಣಯ್ಯ ಮಾತನಾಡಿ, `ಹಕ್ಕಿಗಳ ಛಾಯಾಚಿತ್ರಗಳನ್ನು ಸೆರೆ ಹಿಡಿಯಲು ಕಾಯುತ್ತಾ ಕೂರುತ್ತಿದ್ದ ತೇಜಸ್ವಿ ಅವರಿಗೆ ಹಕ್ಕಿಗಳ ಚಿತ್ರ ಸೆರೆ ಸಿಗುವುದು ದಿವ್ಯಕ್ಷಣವಾಗಿತ್ತು. ಅದನ್ನು ತೇಜಸ್ವಿ ಅವರಿಗೆ ಹೇಳಿದಾಗ ಅದನ್ನು ಗೇಲಿ ಮಾಡಿದ್ದರು. ಆದರೂ ಅದು ದಿವ್ಯಕ್ಷಣವೇ. ಕಂಪ್ಯೂಟರ್ ಬಳಸಿಕೊಂಡು ಚಿತ್ರ ರಚನೆ ಮಾಡುವ ಹಾಗೂ ಕಂಪ್ಯೂಟರ್‌ನ ಸಾಧ್ಯತೆಗಳ ಬಗ್ಗೆ ಅನ್ವೇಷಣೆ ಮಾಡುತ್ತಿದ್ದ ಅವರು ಅವರ ಸಮಕಾಲೀನರಿಗಿಂತ ಭಿನ್ನವಾಗಿರುತ್ತಿದ್ದರು' ಎಂದ ಅವರು ತೇಜಸ್ವಿ ಅವರ ಮೊದಲ ಕಥೆ `ಲಿಂಗ ಬಂದ' `ಪ್ರಜಾವಾಣಿ'ಯಲ್ಲಿ ಪ್ರಕಟವಾಗಿದ್ದನ್ನು ಅವರು ನೆನಪಿಸಿಕೊಂಡರು.

ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಲೇಖಕರಾದ ಅಬ್ದುಲ್ ರಷೀದ್, ಡಾ.ಎಸ್.ತುಕಾರಾಂ ಅವರು ತೇಜಸ್ವಿಯವರನ್ನು ನೆನಪಿಸಿಕೊಂಡರು.

ನಂತರ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ - ಸೇನಾನಿ ಅವರು ನಿರ್ದೇಶಿಸಿರುವ ತೇಜಸ್ವಿ ಸಾಕ್ಷ್ಯಚಿತ್ರದ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT