ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಟ್ಟ ಗಾಯಗಳ ಶುಶ್ರೂಷೆ

Last Updated 18 ನವೆಂಬರ್ 2011, 19:30 IST
ಅಕ್ಷರ ಗಾತ್ರ

 ಮಧ್ಯರಾತ್ರಿ 1 ಗಂಟೆ. ಶೇ 90ರಷ್ಟು ಸುಟ್ಟ ಗಾಯಗಳಾಗಿದ್ದ ಮಹಿಳೆಯನ್ನು ಕರೆ ತಂದು ಆಸ್ಪತ್ರೆಗೆ ಸೇರಿಸಲಾಯಿತು. ಹೀಗೆ ಚಿಕಿತ್ಸೆಗೆಂದು ಸೀಮೆಎಣ್ಣೆ ಸುರಿದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ವಯಸ್ಸು 33. ಮೂರು ಪದವಿಗಳು ಬೆನ್ನಿಗಿವೆ, ಪತಿ ಎಂಜಿನಿಯರ್. ಹೇಗೇ ನೋಡಿದರೂ ನೆಮ್ಮದಿಯ ಸಂಸಾರ. ಆದರೆ, ಗಂಡನ ಕಿರುಕುಳ ತಾಳದೆ ಆಕೆ ದುಡುಕಿನ ನಿರ್ಧಾರ ಕೈಗೊಂಡದ್ದರಿಂದ ಜೀವವನ್ನೇ ಬಲಿ ಕೊಡಬೇಕಾಯಿತು.
* * *
ಆತನಿಗೆ 35 ವರ್ಷ. ಪತ್ನಿ ಜಗಳ ಮಾಡಿಕೊಂಡು ತವರು ಮನೆ ಸೇರಿದ್ದಳು. ಚಿನ್ನ, ರನ್ನ ಎಂದು ಎಷ್ಟೇ ಮುದ್ದಿಸಿದರೂ ಮರಳುವ ಇಂಗಿತ ವ್ಯಕ್ತಪಡಿಸಲಿಲ್ಲ. ಇದರಿಂದ ನೊಂದ ಪತಿ `ನೀನು ಬಾರದಿದ್ದರೆ ಸೀಮೆಎಣ್ಣೆ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ~ ಎಂದು ಬೆದರಿಕೆ ಹಾಕಿದ. ಆದರೆ, ಗಂಡನ ಬೆದರಿಕೆಗೆ ಆಕೆ ಸೊಪ್ಪು ಹಾಕಲಿಲ್ಲ. ಇದರಿಂದ ರೋಸಿಹೋದ ಪತಿ ಮರ್ಮಾಂಗದ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡ.
 * * *
ಅವಳ ಹೆಸರು ಕಮಲಮ್ಮ (ಹೆಸರು ಬದಲಿಸಿದೆ). 80 ವರ್ಷ ವಯಸ್ಸು. ಮಕ್ಕಳು ಸರಿಯಾಗಿ ನೋಡುತ್ತಿಲ್ಲ ಎಂಬ ಕೊರಗು, ಒಬ್ಬಂಟಿತನದ ಬೇಸರ. ಇದರಿಂದ ಮನನೊಂದ ಅವರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ತಕ್ಷಣ ಆಕೆಯನ್ನು ಕುಟುಂಬದವರು ಆಸ್ಪತ್ರೆಗೆ ಕರೆ ತಂದರು. ಇಪ್ಪತ್ತು ದಿನಗಳ ನಿರಂತರ ಚಿಕಿತ್ಸೆಗೆ ಸ್ಪಂದಿಸದ ಅವರು ಕೊನೆಯುಸಿರೆಳೆದರು.
 * * *
ಇಂತಹ ನೂರಾರು ಮನಕಲಕುವ ಪ್ರಸಂಗಗಳಿಗೆ ಮೈಸೂರಿನ ಕೃಷ್ಣರಾಜೇಂದ್ರ ಆಸ್ಪತ್ರೆಯ ( ಕೆ.ಆರ್. ಆಸ್ಪತ್ರೆ) ಸುಟ್ಟ ಗಾಯಗಳ ವಿಭಾಗ  ಸಾಕ್ಷಿಯಾಗಿದೆ. `23 ವರ್ಷದ ವೃತ್ತಿಯಲ್ಲಿ ಹಲವು ಸಾವುಗಳನ್ನು ಕಂಡಿದ್ದೇನೆ. ಕೆಲವು ಸಾರಿ ದೇವರು ಯಾಕಿಷ್ಟು ಕ್ರೂರಿ, ಈ ಸಮಸ್ಯೆಗಳಿಗೆ ಕೊನೆ ಇಲ್ಲವೆ? ಎಂದೆನಿಸಿದೆ. ಸುಟ್ಟ ಗಾಯಗಳ ವಾರ್ಡ್‌ಗೆ ಬಂದು ಮೂರೂವರೆ ವರ್ಷವಾಯಿತು. ಇಲ್ಲಿಗೆ ದಾಖಲಾಗುವ ರೋಗಿಗಳ ಹಿನ್ನೆಲೆ ತಿಳಿದಾಗ ಕರುಳು ಕಿತ್ತು ಬರುತ್ತದೆ~ ಎನ್ನುತ್ತಾರೆ ಮುಖ್ಯ ಶುಶ್ರೂಷಕಿ ಟಿ.ಜೆ.ಫಿಲೋಮಿನಾ.

 ಈ ವಿಭಾಗಕ್ಕೆ ದಾಖಲಾಗುವವರಲ್ಲಿ ಗ್ರಾಮೀಣ ಭಾಗದವರೇ ಹೆಚ್ಚು. ಮಕ್ಕಳು, ಹದಿಹರೆಯದವರು, ದಾಂಪತ್ಯಕ್ಕೆ ಆಗಷ್ಟೇ ಕಾಲಿಟ್ಟವರು, ಯುವಕರು, ಮಧ್ಯ ವಯಸ್ಕ ಗಂಡಸರು ಸೀಮೆಎಣ್ಣೆ ಸುರಿದು ಸುಟ್ಟುಕೊಂಡು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗುತ್ತಾರೆ. ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು, ಅದರಲ್ಲೂ ಅವಿವಾಹಿತರು ಸಣ್ಣ- ಪುಟ್ಟ ವಿಷಯಕ್ಕೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವ ಪ್ರಸಂಗಗಳು ಅಧಿಕ. ವರದಕ್ಷಿಣೆ ಪ್ರಕರಣಗಳೂ ಕಡಿಮೆ ಏನಿಲ್ಲ. ಇದು ಮೈಸೂರು ಸುತ್ತಲಿನ ಊರುಗಳ ಕತೆ.

ಇತ್ತೀಚೆಗಷ್ಟೇ ಪ್ರಕಟವಾಗಿರುವ ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ (ಎನ್‌ಸಿಆರ್‌ಬಿ)ದ 2009ರ ಅಂಕಿ-ಅಂಶಗಳನ್ನು ಗಮನಿಸಿದಾಗ ಆತ್ಮಹತ್ಯೆಗೆ ಬಲಿಯಾಗುತ್ತಿರುವವರ ಸಂಖ್ಯೆ ಬೆಚ್ಚಿ ಬೀಳಿಸುತ್ತದೆ. 2009ರಲ್ಲಿ ಬೆಂಗಳೂರಿನಲ್ಲಿ 2,167 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಷ್ಟೇ ಅಲ್ಲ, ಬೆಂಗಳೂರು `ಆತ್ಮಹತ್ಯೆಗಳ ನಗರಿ~ ಎಂದು ಪ್ರಥಮ ಸ್ಥಾನದಲ್ಲಿ ಗುರುತಿಸಿಕೊಂಡಿರುವುದನ್ನು ಕಾಣಬಹುದು.

ಕೌಟುಂಬಿಕ ಕಲಹ, ಗಂಡ- ಹೆಂಡತಿ ಜಗಳ, ಪ್ರೇಮ ವೈಫಲ್ಯ, ಪ್ರೀತಿ ನಿರಾಕರಣೆ, ಏಕಾಂಗಿತನ, ಮಕ್ಕಳು ನೋಡಿಕೊಳ್ಳುತ್ತಿಲ್ಲ ಎಂಬ ಬೇಸರ.. ಹೀಗೆ ನಾನಾ ಕಾರಣಗಳಿಂದ ಆತ್ಯಹತ್ಯೆಗೆ ಶರಣಾಗುವವರ ಸಂಖ್ಯೆ ಹೆಚ್ಚುತ್ತಿದೆ. `ರಾತ್ರಿ ಎಷ್ಟೇ ಹೊತ್ತಿನಲ್ಲಿ ರೋಗಿಗಳು ಬಂದರೂ ಚಿಕಿತ್ಸೆಗೆ ಸಜ್ಜಾಗುತ್ತೇನೆ. ಕೆಲವೊಮ್ಮೆ ವಾರ್ಡ್‌ನಲ್ಲಿ ಒಬ್ಬಳೇ ಇರುತ್ತೇನೆ. ಒಂದೇ ಸಮಯದಲ್ಲಿ 2-3 ರೋಗಿಗಳು ಬಂದಾಗ, ಚಿಕಿತ್ಸೆ ನೀಡುವಲ್ಲಿ ವಿಳಂಬವಾದರೆ ರೋಗಿಯ ಕಡೆಯವರು ಒತ್ತಡ ಹೇರುತ್ತಾರೆ. ಇಂತಹ ಸಮಯದಲ್ಲಿ ತಾಳ್ಮೆ ಅಗತ್ಯ~ ಎನ್ನುತ್ತಾರೆ  ಫಿಲೋಮಿನಾ.

ಚಿಕಿತ್ಸೆ ಹೇಗೆ
 ಸುಟ್ಟ ಗಾಯಗಳಾದ ವ್ಯಕ್ತಿ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಆತ/ಆಕೆಗೆ ಸಲಾಯಿನ್ ಬಾತ್ ಕೊಡಲಾಗುತ್ತದೆ. ಕಪ್ಪಾಗಿರುವ ಚರ್ಮ ತೆಗೆದು, ಸಿಲ್ವರ್ ಸಲ್ಫರ್ ಡ್ರಗ್ ಮುಲಾಮು ಹಚ್ಚಿ, ಡ್ರೆಸ್ಸಿಂಗ್ ಮಾಡಲಾಗುತ್ತದೆ. ಬಳಿಕ ನೋವು ನಿವಾರಕ ಮಾತ್ರೆ, ಸಲಾಯಿನ್, ನಿದ್ರೆ ಮಾತ್ರೆಗಳನ್ನು ನೀಡಲಾಗುತ್ತದೆ. ಗಾಯ ತೀವ್ರವಾಗಿದ್ದರೆ ರೋಗಿಯ ದೇಹಕ್ಕೆ ಕೃತಕ ಚರ್ಮ (ಕೊಲೆಜಿನ್ ಶೀಟ್) ಹಾಕಲಾಗುವುದು.

`ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಆತ್ಮಹತ್ಯೆಯಿಂದ ಉಂಟಾಗುವ ಸಮಸ್ಯೆ, ಬದುಕುಳಿದ ಮೇಲೆ ಮುಂದಿನ ಜೀವನ ಹೇಗೆ ಇರುತ್ತದೆ ಎಂಬ ಬಗ್ಗೆ ಕೈಪಿಡಿ ಮುದ್ರಿಸಿ, ಗ್ರಾಮ ಪಂಚಾಯಿತಿಗಳ ಮೂಲಕ ಮನೆ- ಮನೆಗೆ ತಲುಪಿಸಬೇಕು. ಟಿವಿ, ರೈಲು ಮತ್ತು ಬಸ್ ನಿಲ್ದಾಣಗಳಲ್ಲಿ ಸುಟ್ಟ ಗಾಯಗಳಿಂದ ಕೂಡಿದ ವ್ಯಕ್ತಿಯ ಚಿತ್ರಗಳನ್ನು ಪ್ರದರ್ಶಿಸಬೇಕು. ಈ ಬಗ್ಗೆ ಜಾಗೃತಿ ಕೈಗೊಳ್ಳಬೇಕು~ ಎಂಬುದು  ಸುಟ್ಟಗಾಯಗಳ ವಿಭಾಗದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಅಭಿಪ್ರಾಯ. 

`ಸುಟ್ಟ ಗಾಯಗಳಿಗೆ ಕಾರಣರಾದವರ ಕುಟುಂಬಗಳಿಗೆ ಸರ್ಕಾರ ಯಾವುದೇ ಸವಲತ್ತುಗಳನ್ನು ನೀಡಬಾರದು. ಹಳ್ಳಿಗಳಲ್ಲಿ ಇಂತಹ ಘಟನೆ ನಡೆದರೆ ಗ್ರಾಮದ ಮುಖಂಡರು ಅದನ್ನು ಖಂಡಿಸಬೇಕು. ನೊಂದ ಮಹಿಳೆಯ ಪರವಾಗಿ ಮಾತನಾಡಿ, ಆಕೆಗೆ ಸಹಾಯಹಸ್ತ ಚಾಚಬೇಕು~ ಎಂಬುದು ಶುಶ್ರೂಷಕಿ ಎಚ್.ಎಸ್. ವೇದಾವತಿ ಅವರ ಅಭಿಮತ.

ಸುಟ್ಟಗಾಯಗಳಿಗೆ ಚಿಕಿತ್ಸೆ....
 ಕೆ.ಆರ್.ಆಸ್ಪತ್ರೆಯಲ್ಲಿ 2009ರಲ್ಲಿ 549, 2010ರಲ್ಲಿ 604 ಹಾಗೂ 2011ರ ಅಕ್ಟೋಬರ್ ವರೆಗೆ 482 ಮಂದಿ ಸುಟ್ಟಗಾಯಗಳಿಗೆ ಚಿಕಿತ್ಸೆ ಪಡೆದಿದ್ದಾರೆ. ಈ ಪೈಕಿ ಅರ್ಧದಷ್ಟು ಜನ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಇದು ಒಂದು ಜಿಲ್ಲೆಯ ಕತೆ.

ರಾಜ್ಯದಲ್ಲಿ ಪ್ರತಿ ವರ್ಷ ಕನಿಷ್ಠ 15 ಸಾವಿರ ಮಂದಿ ಸೀಮೆಎಣ್ಣೆ ಸುರಿದುಕೊಂಡು ಸುಟ್ಟುಕೊಳ್ಳುವ ಘಟನೆಗಳು ನಡೆಯುತ್ತಿದ್ದು, ಇವರಲ್ಲಿ ಜೀವ ತ್ಯಜಿಸುವವರ ಸಂಖ್ಯೆಯೇ ಹೆಚ್ಚು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT