ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಡುವ ಅನ್ನ ಹಿಡಿಯುವ ಪೂಜಾರಿ

Last Updated 9 ಜೂನ್ 2011, 7:20 IST
ಅಕ್ಷರ ಗಾತ್ರ

ರೋಣ: ಸ್ವಲ್ಪ ಶಾಖ ತಗುಲಿದರೂ ಒದ್ದಾಡುವ ಸಾಮಾನ್ಯ ಜನರ ಮಧ್ಯೆ ಸುಡುತ್ತಿರುವ ಅನ್ನದ ಪಾತ್ರೆಯಲ್ಲಿ ಕೈಹಾಕಿ ಮುಷ್ಠಿಯಲ್ಲಿ ಅನ್ನ ತೆಗೆದುಕೊಳ್ಳುವುದು! ಅಪರೂಪದ ಈ ದೃಶ್ಯ ರೋಣ ತಾಲ್ಲೂಕಿನ ಹೊನ್ನಿಗನೂರ ಗ್ರಾಮ ದೇವತೆ ಹುಲಿಗೆಮ್ಮದೇವಿ ವಾರ್ಷಿಕ ಜಾತ್ರಾ ಮಹೋತ್ಸವ ದಿನವಾದ ಬುಧವಾರ ಕಂಡು ಬಂದಿತು. ಜಾತ್ರೆಯಲ್ಲಿ ನೆರೆದಿರುವ ಭಕ್ತ ಸಮುದಾಯಕ್ಕೆ ತೋರಿಸುವುದರ ಜೊತೆಗೆ ಅದನ್ನೇ ಪ್ರಸಾದವೆಂದು ವಿತರಿಸುವ ಘಟನೆ ಜರುಗಿತು. 

 ಬಾದಾಮಿ ಅಮವಾಸ್ಯೆ ಕಳೆದ ನಂತರ ಬರುವ ಮೊದಲ ಶುಕ್ರವಾರ, ಪೂಜಾರಿಗಳು ಮತ್ತು ಅಗ್ನಿ ಹಾಯುವ ಜನರು ಐದು ದಿನಗಳಿಂದ ಕಠಿಣ ಉಪವಾಸವೃತ ಕೈಕೊಂಡು ಕಂಕಣ ಧರಿಸುತ್ತಾರೆ. ನಂತರ ಬರುವ ಮಂಗಳವಾರ ದಿನದಂದು ರಾತ್ರಿ ಸುಮಾರು 9 ಗಂಟೆಗೆ ಗ್ರಾಮಸ್ಥರು ಗ್ರಾಮದ ಬಸವಣ್ಣನ ದೇವರ ಕಟ್ಟೆಯ ಹತ್ತಿರ ದೇವಿಯನ್ನು ಪ್ರತಿಷ್ಠಾಪಿಸಿ ರಾತ್ರಿಯಿಡೀ ಜಾಗರಣೆ ಮಾಡುವುದು ರೂಢಿ.

ಮರುದಿನ ಬೆಳಗಿನ ಜಾವ 4 ಗಂಟೆಗೆ ಅಲ್ಲಿಂದ ಹೊರಟ ದೇವಿಯ ಪಲ್ಲಕ್ಕಿಯನ್ನು ದೇವಸ್ಥಾನದಲ್ಲಿ ಸ್ಥಾಪಿಸಿ  ಸಾಸ್ವಿ ಹಳ್ಳದಲ್ಲಿ ದೇವಿಯ ಮೂರ್ತಿಗೆ ಸ್ನಾನ ಮಾಡಿಸುತ್ತಾರೆ. ನಂತರ ಪೂಜಾ ಕಾರ‌್ಯ ಮುಗಿಸಿ ಮರಳಿ ದೇವಸ್ಥಾನಕ್ಕೆ ತರಲಾಗುವುದು. ದೇವಿಯು ಗುಡಿಗೆ ಬಂದ ನಂತರ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಿರುವ ಅಗ್ನಿ ಕುಂಡದಲ್ಲಿ ಅಗ್ನಿ ಹಾಯುವ ಸಮಾರಂಭ ನಡೆಯುವುದು.

ಈ ಕಾರ‌್ಯದಲ್ಲಿ ಗ್ರಾಮದ ಪೂಜಾರಿಯ ಮನೆತನದವರು ಸೇರಿದಂತೆ ಹಲವರು ಪಾಲ್ಗೊಳ್ಳುವರು. ಭಕ್ತರು ನಿಗಿ ನಿಗಿ ಕೆಂಡವಿರುವ ಅಗ್ನಿ ಕುಂಡದಲ್ಲಿ ಹಾಯ್ದು ತಮ್ಮ ಸೇವೆ ಅರ್ಪಿಸುವರು. ಇದು ಪ್ರತಿವರ್ಷವೂ ನಡೆದುಕೊಂಡು ಬಂದಿರುವ ಪದ್ಧತಿ.

ಅಂದಾಜು  200 ವರ್ಷಕ್ಕೂ ಹೆಚ್ಚು ಇತಿಹಾಸ ಹೊಂದಿದ ಈ ಗ್ರಾಮ ದೇವತೆಗಾಗಿ ತೊಡಿಸಿರುವ ರೇಷ್ಮೆ ಸೀರೆಯು ಇಂದಿಗೂ ಹಾಗೇ ಇದೆ.  ಗ್ರಾಮಸ್ಥರು ಎರಡು ತಿಂಗಳು ಹಿಂದೆ ದೇವಿಗೆ ತೊಡಿಸಿದ ಸೀರೆಯನ್ನು ಬಾಗಲಕೋಟೆ ಜಿಲ್ಲೆಯ ಸೂಳಿಭಾವಿಯ ನೇಕಾರರಿಗೆ ತೋರಿಸಿದ್ದಾರೆ. ಅವರು, `ಈ ಸೀರೆ ಸುಮಾರು 200ಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದಾದದ್ದು. ಈ ರೀತಿಯ ಸೀರೆಯನ್ನು ಇಂದಿನ ದಿನಮಾನಗಳಲ್ಲಿ ಚಾಲನೆಯಲ್ಲಿರುವ ಮಗ್ಗಗಳನ್ನು ಬಳಸಿ  ತಯಾರಿಸಲು ಸಾಧ್ಯವಿಲ್ಲ~ ಎಂದಿದ್ದಾರೆ. 200ವರ್ಷಕ್ಕೂ ಹೆಚ್ಚು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ ಈ ದೇವಿಯ ಮಹಾತ್ಮೆ ಎಂದು ಗ್ರಾಮದ ಹಿರಿಯರು ವಿವರಿಸುತ್ತಾರೆ.
ದೇವಸ್ಥಾನದಿಂದ ಅಂದಾಜು 50 ಅಡಿ ದೂರ ದಲ್ಲಿರುವ ಕಣಗಲಿ ಹೂವಿನ ಗಿಡದ ಒಂದು ವೈಶಿಷ್ಟ್ಯವೇ ಬೇರೆ. ದೇವಿಗೆ ಮುಡಿಪಾಗಿರುವ ಈ ಹೂವು ದೇವಸ್ಥಾನದ ಜಾಗ ಬಿಟ್ಟು ಗ್ರಾಮದ ಬೇರೆ ಕಡೆಗೆ ನಾಟಿಯಾಗುವುದಿಲ್ಲ. ಅಷ್ಟೇ ಅಲ್ಲ, ಹೂವು ಕೂಡಾ ಅರಳುವುದಿಲ್ಲ ಎಂದು ದೇವಿಯ ಭಕ್ತರು ತಿಳಿಸಿದರು. 

ಪ್ರತಿ ವರ್ಷಕ್ಕೊಮ್ಮೆ ಜರುಗುವ ಗ್ರಾಮ ದೇವಿ ಜಾತ್ರೆಯಲ್ಲಿ ಗ್ರಾಮದ ಸಕಲ ಸಮಾಜದವರು ಭಕ್ತಿ ಭಾವಗಳಿಂದ ಬೆರೆಯುತ್ತಾರೆ. ದೇಶದಾದ್ಯಂತ ಕೋಮುಭಾವನೆ ಕೆರಳಿಸುವ ಕೋಮುದ್ವೇಷ ಹೆಚ್ಚುತ್ತಿರುವ ಇಂದಿನ ದಿನಮಾನಗಳಲ್ಲಿ ಗ್ರಾಮಸ್ಥ ರೆಲ್ಲರೂ ಒಗ್ಗೂಡಿ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸುವುದು ಭಾವೈಕ್ಯತೆಗೆ ಸಾಕ್ಷಿಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT