ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಣ್ಣದ ಕಲ್ಲಿನ ಗುಹೆಗಳೊಳಗೆ...

Last Updated 28 ಜನವರಿ 2012, 19:30 IST
ಅಕ್ಷರ ಗಾತ್ರ

ಚೆನ್ನೈನಿಂದ 1500ಕಿ.ಮೀ ದೂರದಲ್ಲಿರುವ ಅಂಡಮಾನ್ ನಿಕೋಬಾರ್ ದ್ವೀಪಸಮೂಹಗಳ ರಾಜಧಾನಿ ಪೋರ್ಟ್‌ಬ್ಲೇರ್. ಪೋರ್ಟ್‌ಬ್ಲೇರ್ ನಗರದಿಂದ ಮೂರೂವರೆ ಗಂಟೆ ರಸ್ತೆ ಪ್ರಯಾಣ ಮಾಡುತ್ತ, ದಾರಿ ಮಧ್ಯೆ ಸಿಗುವ ಅಂಡಮಾನಿನ ಆದಿವಾಸಿಗಳಾದ ಜರುವಾಗಳನ್ನು ನೋಡುತ್ತ, ಬಾರಾಟಂಗ್ ವಿಭಾಗದ ಕೊನೆಗೆ ಬಂದರೆ ನಿಲಂಬೂರ್ ದ್ವೀಪ ಸಿಗುತ್ತದೆ.

ಅಲ್ಲಿಂದ ಸ್ಪೀಡ್ ಮೋಟಾರ್ ಬೋಟ್‌ನಲ್ಲಿ ಒಂದು ಗಂಟೆ ಸಾಗಿದ ನಂತರ ಎರಡೂ ಕಡೆ ಒತ್ತೊತ್ತಾಗಿ ಬೆಳೆದು ನಿಂತು ನೈಸರ್ಗಿಕ ಕಮಾನು ನಿರ್ಮಿಸಿರುವ ಮ್ಯೋಂಗ್ರೂವ್ಸ್ ಪೊದೆಗಳು- ತಮ್ಮ ಉದ್ದುದ್ದದ ಬೇರುಗಳನ್ನು ಸಮುದ್ರದಲ್ಲಿ ಆಳವಾಗಿ ಬೇರೂರಿಯೂ, ನೀರಿನ ಮಟ್ಟಕ್ಕಿಂತ ಮೇಲೆ ತಮ್ಮ ಬೇರಿನ ದಪ್ಪ ತಂತುಗಳನ್ನು ಕಾಣಿಸುತ್ತ- ಭಯಾಕರ್ಷಕ ರೀತಿಯಲ್ಲಿ ನಿಮ್ಮನ್ನು ಸ್ವಾಗತಿಸುತ್ತವೆ.

ಈ ಮ್ಯೋಂಗ್ರೂವ್ಸ್ ಮರಗಳ ದಟ್ಟ ಪೊದೆಗಳನ್ನು ಸೀಳಿಕೊಂಡು ಅರ್ಧ ಕಿ.ಮೀ.ನಷ್ಟು ಆಳದವರೆಗೆ ಸಾಗಿರುವ ಹಿನ್ನೀರಿನ ಕಿರುತೊರೆಯಲ್ಲಿ ಆ ನಸುಗತ್ತಲು, ಹಕ್ಕಿಗಳ ಅಸ್ಪಷ್ಟ ಕಿಚಿಪಿಚಿ ಮತ್ತು ನೀರಲ್ಲಿ ಮಗ್ಗುಲು ಬದಲಿಸುತ್ತಿರಬಹುದಾದ ಜಲಚರಗಳ ಸರಪರ-ಸದ್ದುಗಳನ್ನು ದಾಟಿಕೊಂಡು ಒಳಸಾಗುವುದೇ ಒಂದು ರೋಚಕ ಅನುಭವ. ಈ ಮುಂಚೆ ಈ ಹಾದಿಯನ್ನು ಮ್ಯೋಂಗ್ರೂವ್ಸ್ ಮರಗಳ ರೆಂಬೆಗಳ ಮಧ್ಯೆಯೇ ಕಡಿದು ಮಾಡಲಾಗಿರುವ ಹಲಗೆಯ ಪಾದಚಾರಿ ಮಾರ್ಗದ ಮೂಲಕವೂ ದಾಟಲು ಅವಕಾಶವಿತ್ತು.
 
ಆದರೆ ಅದು ಸುನಾಮಿಯಲ್ಲಿ ಛಿದ್ರ ಛಿದ್ರವಾಗಿ ಈಗ ಅದರ ಪಳಿಯುಳಿಕೆಗಳು ಮಾತ್ರ ಉಳಿದಿವೆ. ಅಲ್ಲಿಂದ ಒಂದೂವರೆ ಕಿ.ಮೀ.ನಷ್ಟು ಒಳಗೆ, ನಿರ್ಜನವಾದ ದಟ್ಟ ಕಾಡಿನ ನಡುವೆ ಗಟ್ಟಿ ಗಾರೆಯಂತಿರುವ ಮಣ್ಣಹಾದಿಯನ್ನು ಸವೆಸಿದ ಮೇಲೆ ಸಿಗುವುದೇ ಲೈಮ್ ಸ್ಟೋನ್ ಕೇವ್!

ಈವರೆಗಿನ ಎಲ್ಲ ದೂರಪ್ರಯಾಣದ ಆಯಾಸವನ್ನು ಕ್ಷಣಾರ್ಧದಲ್ಲಿ ನಿವಾರಿಸಿಬಿಡುವಷ್ಟು ಅದ್ಭುತವಾಗಿರುವ ಈ ನಿಸರ್ಗ ನಿರ್ಮಿತ ಸುಣ್ಣದಕಲ್ಲಿನ ಗುಹೆ ಒಳಗೆ 20 ಮೀಟರ್ ದೂರದವರೆಗೆ ಹಬ್ಬಿದೆ. ಆನೆಯ ಮುಖ, ಕಮಲದ ಮೊಗ್ಗು, ಹಾವಿನ ಹೆಡೆ- ಹೀಗೆ ವಿವಿಧ ರೂಪಗಳನ್ನು ಧರಿಸಿರುವ ಈ 20 ಅಡಿ ಎತ್ತರ ಮತ್ತು 20 ಮೀಟರ್ ಉದ್ದದ ಈ ಗುಹೆ ಅಂಡಮಾನಿಗೆ ಭೇಟಿ ನೀಡುವ ಪ್ರತಿಯೊಬ್ಬರೂ ತಪ್ಪದೆ ನೋಡಬೇಕಾದದ್ದು.

ಅದೃಷ್ಟವಿದ್ದರೆ ವಾಪಸು ಬರುವಾಗ ಚಿಕ್ಕ ನಡುಗಡ್ಡೆಯ ದಂಡೆಯ ಮೇಲೆ ಬಾಯಿ ತೆರೆದುಕೊಂಡು ಮಲಗಿರುವ ದೊಡ್ಡ ಮೊಸಳೆಗಳನ್ನು ಹತ್ತಿರದಿಂದ ನೋಡಬಹುದು. ಇನ್ನು ಆ ತೆರೆದ ಮೋಟರ್ ಬೋಟ್‌ನಲ್ಲಿಯೇ, ಸಮುದ್ರ ಮಧ್ಯೆ ಸಾಗುತ್ತಲೇ ಊಟ ಮಾಡುವ ಅನುಭವವಂತೂ ವರ್ಣಿಸಲಸದಳವಾದ್ದು.
 -
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT