ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುತ್ತೂರು ಜಾತ್ರೆ: ವೈಭವದ ರಥೋತ್ಸವ

Last Updated 1 ಫೆಬ್ರುವರಿ 2011, 16:55 IST
ಅಕ್ಷರ ಗಾತ್ರ

ನಂಜನಗೂಡು:ತಾಲ್ಲೂಕಿನ ಸುತ್ತೂರು ಕ್ಷೇತ್ರದಲ್ಲಿ ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ರಥೋತ್ಸವ ಮಂಗಳವಾರ ಸಾವಿರಾರು ಜನರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.

ಸುತ್ತೂರು ಗ್ರಾಮದ ಮೂಲ ಮಠದಿಂದ ಶಿವಯೋಗಿಗಳ ಉತ್ಸವಮೂರ್ತಿಯನ್ನು ಭಾನುವಾರವೇ  ನೂತನ ಕತೃ ಗದ್ದುಗೆಗೆ ತರಲಾಗಿತ್ತು. ಜಾತ್ರೆ ದಿನವಾದ ಮಂಗಳವಾರ ಬೆಳಗಿನ ಜಾವ 4 ಗಂಟೆಗೆ ಕತೃ  ಗದ್ದುಗೆಗೆ ಮಹಾ ರುದ್ರಾಭಿಷೇಕ ನಡೆಸಲಾಯಿತು. ಮೂರ್ತಿಗೆ ಫಲಾಲಂಕಾರ, ವಿಭೂತಿ ಪೂಜೆಯನ್ನು ಬೆಳಿಗ್ಗೆ  6 ಗಂಟೆಗೆ ನಡೆಸಲಾಯಿತು.

ಬೆಳಿಗ್ಗೆ 8ಕ್ಕೆ ಧ್ವಜಾರೋಹಣ, 9ಕ್ಕೆ ಉತ್ಸವಮೂರ್ತಿಗೆ ಅಭಿಷೇಕ ಮತ್ತು  ರಾಜೋಪಚಾರ ನಡೆಸಲಾಯಿತು. ಬೆಳಿಗ್ಗೆ 10 ಗಂಟೆಗೆ ಉತ್ಸವಮೂರ್ತಿಯನ್ನು ರಥದ ಮಂಟಪದಲ್ಲಿ  ಪ್ರತಿಷ್ಠಾಪಿಸಲಾಯಿತು. ಅರ್ಚಕರು ಪೂಜಾ ವಿಧಿ-ವಿಧಾನಗಳನ್ನು ಪೂರೈಸಿದರು. ಬಳಿಕ ಸುತ್ತೂರು  ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮೊದಲಿಗೆ ರಥದ ಹಗ್ಗವನ್ನು ಎಳೆಯುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ವಿವಿಧ ಮಠಾಧೀಶರು ಈ ಸಂದರ್ಭದಲ್ಲಿ ಹಾಜರಿದ್ದು, ರಥೋತ್ಸವಕ್ಕೆ ಶುಭ ಕೋರಿದರು.

ಗದ್ದಿಗೆ ಮುಂಭಾಗದಿಂದ ಬೆಳಿಗ್ಗೆ 10.45ಕ್ಕೆ ಹೊರಟ ರಥೋತ್ಸವದ ಮೆರವಣಿಗೆಯಲ್ಲಿ ಮಹಿಳೆಯರ ಕುಂಭಮೇಳ, ಲಿಂಗಧೀರರು, ಪೂಜಾ ಕುಣಿತ, ಡೊಳ್ಳು ಕುಣಿತ, ವೀರಮಕ್ಕಳು, ವೀರಗಾಸೆ, ವೀರಭದ್ರ, ಬೀಸು ಕಂಸಾಳೆ ಮತ್ತು ಕೊರವಂಜಿ ಕುಣಿತ ಜತೆಗೆ ಸ್ಯಾಕ್ಸೊಪೋನ್, ತಮಟೆ ಮತ್ತು ನಗಾರಿ ತಂಡ, ಜಿಂಜಿಮೇಳ,  ಭಜನಾಮೇಳ ಸೇರಿ 24 ತಂಡಗಳು ರಥೋತ್ಸವದಲ್ಲಿ ಭಾಗಿಯಾದವು.

ಸುಮಾರು ಒಂದು ಕಿ.ಮೀ. ದೂರ  ಸಾಗಿದ ರಥ, ಸುತ್ತೂರು ಗ್ರಾಮವನ್ನು ಸುತ್ತು ಹಾಕಿ ಮತ್ತೆ ಸ್ವಸ್ಥಾನ ಸೇರಿದಾಗ ಮಧ್ಯಾಹ್ನ 1.30  ಆಗಿತ್ತು. ಮೆರವಣಿಗೆ ಕಾಲಕ್ಕೆ ದಾರಿ ಉದ್ದಕ್ಕೂ ನೆರೆದಿದ್ದ ಭಕ್ತರು ರಥೋತ್ಸವ ವೀಕ್ಷಿಸಿ, ಹಣ್ಣ-ಜವನ ಎಸೆದು  ಸಂಭ್ರಮಪಟ್ಟರು. ಹಲವು ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿ ಬಂದವು. ನಾಡಿನ ವಿವಿಧೆಡೆಯಿಂದ  ಸುಮಾರು 50 ಸಾವಿರಕ್ಕೂ ಅಧಿಕ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. 

ಸೌಕರ್ಯ: ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರು ಹಾಗೂ ಸಾರ್ವಜನಿಕರ ಅನುಕೂಲಕ್ಕೆ ವೈದ್ಯಕೀಯ ನೆರವು  ಕೇಂದ್ರ, ಮಾಹಿತಿ ಕೇಂದ್ರ ತೆರೆಯಲಾಗಿತ್ತು.  ತುರ್ತು ಚಿಕಿತ್ಸಾ ವಾಹನಗಳು, ಅಗ್ನಿಶಾಮಕ ದಳದ  ವಾಹನಗಳು ಹಾಜರಿದ್ದವು. 

ಜನರ ಸಂಚಾರದಿಂದ ರಸ್ತೆಯಲ್ಲಿ ದೂಳು ಏಳದಂತೆ ಟ್ಯಾಂಕರ್ ಮೂಲಕ ನೀರು  ಚಿಮುಕಿಸುವ ಏರ್ಪಾಟು ಮಾಡಲಾಗಿತ್ತು. ಮಹಾ ದಾಸೋಹ ಕೇಂದ್ರದಲ್ಲಿ ಮಹಿಳೆಯರಿಗೆ ಹಾಗೂ ಪುರಷರಿಗೆ ಪ್ರತ್ಯೇಕವಾಗಿ ಪ್ರಸಾದ (ಆಹಾರ) ವಿತರಿಸಲಾಯಿತು.  ಹತ್ತಾರು ಸಾವಿರ ಜನರಿಗೆ ಬೆಳಿಗ್ಗೆ ಬೆಲ್ಲದ ಸಜ್ಜಿಗೆ, ಅಕ್ಕಿನುಚ್ಚು ಉಪ್ಪಿಟ್ಟು, ಮಧ್ಯಾಹ್ನ ಕ್ಯಾಬೇಜ್ ಬಾತ್, ಮೊಸರು ಅನ್ನ, ಕಡ್ಲೆಹುಳಿ, ಸಿಹಿ ಬೂಂದಿ, ಪಾಯಸ ಮತ್ತು ತುಪ್ಪ ಬಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT