ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದ್ದಿ ಚಾನೆಲ್‌ನಲ್ಲಿ ಗುಡ್ಡದ ಭೂತ

Last Updated 17 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ತೊಂಬತ್ತರ ದಶಕದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿ ಭಾರಿ ಜನಪ್ರಿಯತೆ ಗಳಿಸಿದ್ದ `ಗುಡ್ಡದ ಭೂತ~ ಧಾರಾವಾಹಿಯು ಸುದ್ದಿಗಾಗಿಯೇ ಮೀಸಲಾದ ಜನಶ್ರೀ ವಾಹಿನಿಯಲ್ಲಿ ಇಂದಿನಿಂದ (ಶನಿವಾರ) ವಾರಕ್ಕೊಮ್ಮೆ ಪ್ರಸಾರವಾಗಲಿದೆ.

ಚಾನೆಲ್ ಆರಂಭವಾಗಿ ಫೆಬ್ರುವರಿ 18ಕ್ಕೆ ಒಂದು ವರ್ಷ ತುಂಬಿದೆ. ಆ ನೆನಪಿಗಾಗಿಯೇ ಶನಿವಾರ ರಾತ್ರಿ 9.30ರಿಂದ 10 ಗಂಟೆಯವರೆಗೆ 13 ಕಂತುಗಳ ಈ ಧಾರಾವಾಹಿ ಮರು ಪ್ರಸಾರವಾಗಲಿದೆ. ದೇಶದ ಇತಿಹಾಸದಲ್ಲೇ ಸುದ್ದಿಗಳಿಗಷ್ಟೇ ಮೀಸಲಾದ ಚಾನೆಲ್ ಒಂದು ಧಾರಾವಾಹಿ ಪ್ರಸಾರ ಮಾಡುತ್ತಿರುವುದು ಇದೇ ಮೊದಲೆಂದು ವಾಹಿನಿಯವರು ಹೇಳುತ್ತಾರೆ.

`ಗುಡ್ಡದ ಭೂತ~ ಧಾರಾವಾಹಿ 1991ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ಸದಾನಂದ ಸುವರ್ಣ ನಿರ್ದೇಶನ, ಜಿ.ಎಸ್.ಭಾಸ್ಕರ್ ಛಾಯಾಗ್ರಹಣ ಹಾಗೂ ಗಿರೀಶ್ ಕಾಸರವಳ್ಳಿ ತಾಂತ್ರಿಕ ನಿರ್ದೇಶನದ ಈ ಧಾರಾವಾಹಿ ವೀಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆದಿತ್ತು. ಇದೇ ಧಾರಾವಾಹಿ ಪ್ರಕಾಶ್ ರೈ ಅವರನ್ನು ಚಿತ್ರ ಜಗತ್ತಿಗೆ ಪರಿಚಯಿಸುವಂತೆಯೂ ಮಾಡಿತ್ತು.
 
“ಕಳೆದ ವರ್ಷ ನಮ್ಮ ಚಾನೆಲ್ ಆರಂಭವಾದಾಗ `ಸೀರಿಯಲ್~ ಹೆಸರಲ್ಲಿ ಜನಪ್ರಿಯ ಧಾರಾವಾಹಿಗಳ ನಿರ್ಮಾಣದ ಬಗ್ಗೆ ಸರಣಿ ಕಾರ್ಯಕ್ರಮಗಳನ್ನು ನೀಡಿದ್ದೆವು. ಗುಡ್ಡದ ಭೂತ ನಿರ್ಮಾಣವಾದ ಬಗೆಯನ್ನು ತಿಳಿಸಿದಾಗ ಜನರಿಂದ ಬಂದ ಅದ್ಭುತ ಪ್ರತಿಕ್ರಿಯೆಯನ್ನು ಗಮನಿಸಿ ಈ ಧಾರಾವಾಹಿಯನ್ನು ಪ್ರಸಾರ ಮಾಡುವ ವಿಚಾರ ಬಂತು. ವೀಕ್ಷಕರಿಗೆ ಇದು ಇಷ್ಟವಾಗುವ ಆಶಯ ನಮ್ಮದು” ಎನ್ನುತ್ತಾರೆ ಜನಶ್ರಿ ಚಾನೆಲ್‌ನ ಕಾರ್ಯಕ್ರಮ ಮುಖ್ಯಸ್ಥ ಅನಂತ ಚಿನಿವಾರ್.

ಊರ ಹೊರಗಿನ ಮನೆಯೊಂದರಲ್ಲಿ ಭೂತವಿದೆ ಅಂತ ಅಲ್ಲಿನ ಜನರೆಲ್ಲ ನಂಬುವುದು, ಅದಕ್ಕೆ ಪೂರಕವೆಂಬಂತೆ ಕೆಲವು ಘಟನೆಗಳೂ ಆ ಮನೆಯಲ್ಲಿ ನಡೆಯುವುದು, ಮುಂಬಯಿಂದ ಬರುವ ಕಥಾನಾಯಕ ಭೂತದ ಮೂಲವನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಅನೇಕ ಸಾಹಸಗಳನ್ನು ಮಾಡುವುದು ಗುಡ್ಡದ ಭೂತ ಧಾರಾವಾಹಿಯ ಸಂಕ್ಷಿಪ್ತ ಕಥಾ ಹಂದರ. ಇದರ ಮೂಲ ತುಳು ನಾಟಕ.

ಕುಂದಾಪುರ ಬಳಿಯ ವಡ್ಡರ್ಸೆ ಎಂಬಲ್ಲಿ ಧಾರಾವಾಹಿಯ ಚಿತ್ರೀಕರಣ ನಡೆದಿತ್ತು. ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟರ ಮನೆಯೇ ಇಡೀ ಧಾರಾವಾಹಿಯ ಕೇಂದ್ರ ಬಿಂದು. ಈ ಧಾರಾವಾಹಿಯ ನೆನಪಿಗಾಗಿ ಈಗಲೂ ಆ ಮನೆಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಪ್ರಕಾಶ್ ರೈ ಅವರ ಅಭಿನಯ ಬಹಳ ಜನಪ್ರಿಯತೆ ಗಳಿಸಿತ್ತು. ಜತೆಗೆ ಬಿ.ಆರ್.ಛಾಯಾ ಅವರ ಹಾಡೂ ಖ್ಯಾತಿಯಾಗಿತ್ತು.                         
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT