ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾಕರ್ ನಾಮಪತ್ರ ಸಲ್ಲಿಕೆ

Last Updated 18 ಏಪ್ರಿಲ್ 2013, 10:35 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾದ ಬುಧವಾರದಂದು ಚಿಕ್ಕಬಳ್ಳಾಪುರದಲ್ಲಿ ಪ್ರಮುಖ ಬೀದಿಗಳಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಜನದಟ್ಟಣೆ ಕಂಡು ಬಂತು.

ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯನ್ನೇ ಸದ್ಬಳಕೆ ಮಾಡಿಕೊಂಡ ಇಲ್ಲಿನ ಚುನಾವಣಾ ಅಭ್ಯರ್ಥಿಗಳು ಭಾರಿ ಸಂಖ್ಯೆಯಲ್ಲಿ ಬೆಂಬಲಿಗರ ಮತ್ತು ಕಾರ್ಯಕರ್ತರ ಮೆರವಣಿಗೆ ನಡೆಸಿದರು. ತಮ್ಮಂದಿಗೆ ಇದ್ದ ಜನದಟ್ಟಣೆ ತೋರಿಸಿ ಚುನಾವಣೆಯಲ್ಲಿ ಗೆಲುವು ತಮ್ಮದೇ ಎಂಬುದನ್ನು ಸಾಬೀತುಪಡಿಸಲು ಯತ್ನಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಡಾ. ಕೆ.ಸುಧಾಕರ್ ಒಂದು ದಿಕ್ಕಿನಿಂದ ಮೆರವಣಿಗೆ ಕೈಗೊಂಡರೆ, ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ ಇನ್ನೊಂದು ದಿಕ್ಕಿನಿಂದ ಮೆರವಣಿಗೆ ನಡೆಸಿದರು. ಇಬ್ಬರೂ ಅಭ್ಯರ್ಥಿಗಳ ಮೆರವಣಿಗೆ ಬೇರೆ ಬೇರೆ ಸಮಯದಲ್ಲಾದರೂ ಬಿ.ಬಿ.ರಸ್ತೆಯ ಶಿಡ್ಲಘಟ್ಟ ವೃತ್ತದಲ್ಲಿ ಮಾತ್ರ ಜನದಟ್ಟಣೆಯು ದೀರ್ಘ ಕಾಲದವರೆಗೆ ಇತ್ತು. ಅಭ್ಯರ್ಥಿಗಳ ಪರ ಜೈಕಾರಗಳನ್ನು ಹಾಕಿದ ಬೆಂಬಲಿಗರು ಮತ್ತು ಕಾರ್ಯಕರ್ತರು, `ಚುನಾವಣೆಯ ಫಲಿತಾಂಶ ಘೋಷಣೆಯಾಗಿದೆ' ಎಂಬಂತೆ ಸಂಭ್ರಮ ಆಚರಿಸಿಕೊಂಡರು.

ಡಾ. ಕೆ.ಸುಧಾಕರ್ ಕಡೆಯವರು ಕಾಂಗ್ರೆಸ್ ಧ್ವಜಗಳನ್ನು ಹಿಡಿದುಕೊಂಡು ಬೀದಿ ಪೂರ್ತಿ ಓಡಾಡಿದರೆ, ಕೆ.ಪಿ.ಬಚ್ಚೇಗೌಡ ಬೆಂಬಲಿಸಿದ ಜೆಡಿಎಸ್ ಪಕ್ಷದ ಕಾರ್ಯಕರ್ತರು ತೆನೆ ಹೊತ್ತ ಮಹಿಳೆಯ ಪಕ್ಷದ ಧ್ವಜ ಹಿಡಿದು ಜಯಘೋಷ ಹಾಕಿದರು.

ಭಾರಿ ಸಂಖ್ಯೆಯಲ್ಲಿ ಜನರು ಸೇರಿರುವುದರಿಂದ ಅಹಿತಕರ ಘಟನೆ ಉಂಟಾಗಬಹುದು ಎಂದು ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡರು. ಮೆರವಣಿಗೆಯಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಕಾರಣ ಪೊಲೀಸರು ಕೆಲವು ಕ್ರಮ ತೆಗೆದುಕೊಳ್ಳಬೇಕಾಯಿತು.

ಮಧ್ಯಾಹ್ನ 2 ರಿಂದ 3 ಗಂಟೆ ಅವಧಿಯೊಳಗೆ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದ ಡಾ. ಕೆ.ಸುಧಾಕರ್ ಬೆಳಿಗ್ಗೆ 11ರ ಸುಮಾರಿಗೆ ಮೆರವಣಿಗೆ ನಡೆಸಲು ಆರಂಭಿಸಿದರು.

ಬೆಳಿಗ್ಗೆ 11ಕ್ಕೆ ವಾಪಸಂದ್ರ ಬಳಿಯಿರುವ ದೇಗುಲದಲ್ಲಿ ಪೂಜೆ ಸಲ್ಲಿಸಿದ ಅವರು ಬೆಂಬಲಿಗರೊಂದಿಗೆ ಮೆರವಣಿಗೆಗೆ ಚಾಲನೆ ನೀಡಿದರು.   ನಗರದ ಚನ್ನಯ್ಯ ಉದ್ಯಾನದ ಬಳಿ ಬರುತ್ತಿದ್ದಂತೆಯೇ  ಡಾ. ಕೆ.ಸುಧಾಕರ್ ಅವರು ಪ್ರಯಾಣಿಸುತ್ತಿದ್ದ ವಾಹನವನ್ನು ತಡೆ ಹಿಡಿಯಲಾಯಿತು. ನಿಯಮ ಉಲ್ಲಂಘಿಸಲಾಗಿದೆ ಎಂದು ಮೆರವಣಿಗೆಗೆ ಪೊಲೀಸರು ಅಡ್ಡಿಪಡಿಸಿದರು. ಮಧ್ಯಾಹ್ನ 12.30ರ ಸುಮಾರಿಗೆ ಹರ್ಷೋದಯ ಕಲ್ಯಾಣ ಮಂಟಪದಿಂದ ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಮೆರವಣಿಗೆ ನಡೆಸಿದರು.

ಪಕ್ಷದ ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಸೇರಿದ್ದ ಕಾರಣ ಒಂದು ಬದಿಯ ರಸ್ತೆ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಡಾ.ಕೆ.ಸುಧಾಕರ್ ಬೆಂಬಲಿಗರ ಮೆರವಣಿಗೆ ಶಿಡ್ಲಘಟ್ಟ ವೃತ್ತದ ಬಳಿಯಿರುವ ಚನ್ನಯ್ಯ ಉದ್ಯಾನದ ಬಳಿಯೇ ಸೀಮಿತಗೊಂಡರೆ, ಜೆಡಿಎಸ್ ಕಾರ್ಯಕರ್ತರ ಮೆರವಣಿಗೆಯು ಬಿ.ಬಿ.ರಸ್ತೆ ಮತ್ತು ಎಂ.ಜಿ.ರಸ್ತೆಯಲ್ಲಿ ಸಾಗಿ, ಚುನಾವಣಾ ಕಚೇರಿ ತಲುಪಿತು.

ಕೊನೆಯ ದಿನ; 66 ನಾಮಪತ್ರ ಸಲ್ಲಿಕೆ
ಪ್ರಜಾವಾಣಿ ವಾರ್ತೆ
ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬುಧವಾರ ಕೊನೆಯ ದಿನವಾದ ಹಿನ್ನೆಲೆಯಲ್ಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರಗಳು ಸಲ್ಲಿಕೆಯಾದವು. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲೂ ಬಹುತೇಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮುನ್ನ ಭಾರಿ ಮೆರವಣಿಗೆ ಕೈಗೊಳ್ಳುವ ಮೂಲಕ ತಮಗೆ ಜನಬೆಂಬಲವಿದೆ ಎಂದು ತೋರಿಸಿಕೊಡಲು ಪ್ರಯತ್ನಿಸಿದರು.

ಬುಧವಾರವೊಂದೇ ದಿನದಂದು ಅತ್ಯಧಿಕ 66 ನಾಮಪತ್ರಗಳು ಸಲ್ಲಿಕೆಯಾದವು. ಒಟ್ಟು 54 ಅಭ್ಯರ್ಥಿಗಳ ವತಿಯಿಂದ 66 ನಾಮಪತ್ರಗಳು ಸಲ್ಲಿಕೆಯಾದವು. ಅತಿ ಹೆಚ್ಚು 38 ಮಂದಿ ಪಕ್ಷೇತರರು ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು. ಚಿಂತಾಮಣಿ ಮತ್ತು ಬಾಗೇಪಲ್ಲಿಯಲ್ಲಿ ತಲಾ 9 ಮಂದಿ ಪಕ್ಷೇತರರು ನಾಮಪತ್ರ ಸಲ್ಲಿಸಿದರು.

ಗೌರಿಬಿದನೂರು-8, ಗೌರಿಬಿದನೂರು ಮತ್ತು ಶಿಡ್ಲಘಟ್ಟದಲ್ಲಿ ತಲಾ 5 ಮಂದಿ ಪಕ್ಷೇತರರು ನಾಮಪತ್ರ ಸಲ್ಲಿಸಿದರು.

ಬಿಎಸ್‌ಪಿ-5, ಬಿಜೆಪಿ-2, ಕಾಂಗ್ರೆಸ್-4, ಜೆಡಿಎಸ್-8, ಜೆಡಿಯು-4, ಕೆಜೆಪಿ-4, ಬಿಎಸ್‌ಆರ್ ಕಾಂಗ್ರೆಸ್-2 ಮತ್ತು ಸಮಾಜವಾದಿ ಪಕ್ಷ-1 ನಾಮಪತ್ರ ಸಲ್ಲಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ವಿ.ಶಂಕರ್ ತಿಳಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ, ಕಾಂಗ್ರೆಸ್ ಅಭ್ಯರ್ಥಿ ಡಾ. ಕೆ.ಸುಧಾಕರ್, ಕೆಜೆಪಿ ಅಭ್ಯರ್ಥಿ ಡಾ. ಲಕ್ಷ್ಮಿಪತಿ ಬಾಬು, ಜೆಡಿಯು ಅಭ್ಯರ್ಥಿ ಮಂಜುನಾಥ್ ನಾಮಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT