ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾರಣೆ ಕಾಣದ ಸಂಚಾರ ವ್ಯವಸ್ಥೆ

Last Updated 26 ಫೆಬ್ರುವರಿ 2011, 8:05 IST
ಅಕ್ಷರ ಗಾತ್ರ

ಬಳ್ಳಾರಿ: ದಿನದಿಂದ ದಿನಕ್ಕೆ ವ್ಯಾಪಕವಾಗಿ ಬೆಳೆಯುತ್ತ ಸಾಗಿರುವ ನಗರದಲ್ಲಿ ವಾಹನಗಳ ಸಂಖ್ಯೆಯೂ ಅದೇ ಧಾಟಿಯಲ್ಲಿ ಹೆಚ್ಚುತ್ತಲೇ ಸಾಗಿದೆ. ಇದರಿಂದಾಗಿ ಸಂಚಾರ ದಟ್ಟಣೆ ಹೆಚ್ಚುತ್ತಿದ್ದರೂ, ಸಂಚಾರ ವ್ಯವಸ್ಥೆ ಸುಧಾರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಕಂಡುಬರುತ್ತಿಲ್ಲ.ನಿತ್ಯವೂ ಬೆಳಿಗ್ಗೆ ಮಧ್ಯಾಹ್ನ ಹಾಗೂ ಸಂಜೆಯ ವೇಳೆ ಪ್ರಮುಖ ವೃತ್ತಗಳಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತ ವಾಹನಗಳ ಸಾಲು ಕಿಲೋ ಮೀಟರ್‌ಗಟ್ಟಲೆ ಕಂಡುಬರುವುದು ಸಾಮಾನ್ಯವಾಗಿದೆ.

ಸಿಗ್ನಲ್‌ಗಳು ಸಮರ್ಪಕವಾಗಿ ಕೆಲಸ ಮಾಡದಿರುವುದು, ರಸ್ತೆಗಳಲ್ಲಿ ಸೂಕ್ತ ರೀತಿಯ ಮಾರ್ಗಸೂಚಿಗಳೂ, ನಿಯಮ ಸೂಚಿಸುವ ಫಲಕಗಳು ಇಲ್ಲದಿರುವುದು, ಕೆಲವೆಡೆ ಹೊರತುಪಡಿಸಿ, ಅನೇಕ ಕಡೆ ರಸ್ತೆ ವಿಭಜಕಗಳು ಇಲ್ಲದಿರುವುದು, ಚಾಲಕರ ಅಸಡ್ಡಯ ಚಾಲನೆಯು ಸಂಚಾರ ದಟ್ಟಣೆ ಹೆಚ್ಚಲು ಪ್ರಮುಖ ಕಾರಣವಾಗಿದ್ದರೂ, ಅದನ್ನು ನಿಯಂತ್ರಿಸಲೆಂದೇ ನಿಯೋಜಿತವಾಗಿರುವ ಸಂಚಾರಿ ಪೊಲೀಸರು ಮೂಕ ಪ್ರೇಕ್ಷಕರಾಗಿರುವುದು ಸಾರ್ವಜನಿಕರಲ್ಲಿ ಸೋಜಿಗ ಮೂಡಿಸಿದೆ.

ಮೊಬೈಲ್ ಬಳಕೆ
ನಗರದಲ್ಲಿ ಯುವಕರು, ವಯಸ್ಕರು ಒಳಗೊಂಡಂತೆ ಅನೇಕರು ಮೊಬೈಲ್ ದೂರವಾಣಿ ಬಳಸುತ್ತಲೇ ವಾಹನ ಚಾಲನೆ ಮಾಡುವ ದೃಶ್ಯ ಮಾತ್ರ ಸಾಮಾನ್ಯವಾಗಿ ಕಂಡುಬರುತ್ತಿದ್ದು, ಅಪಘಾತಗಳಿಗೆ ಪ್ರೇರಣೆಯಾಗಿದೆ.ಮಹಿಳೆಯರು, ಕಾಲೇಜು ಯುವಕ/ ಯುವತಿಯರು, ಮಧ್ಯವಯಸ್ಕರು, ವೃದ್ಧರು ಎನ್ನದೆ ಎಲ್ಲ ವಯೋಮಾನದ ಜನರೂ ಬೈಕ್, ಸ್ಕೂಟಿ, ಕಾರ್,  ವ್ಯಾನ್‌ಗಳನ್ನು ಚಾಲನೆ ಮಾಡುವಾಗ ಮೊಬೈಲ್‌ನಲ್ಲಿ ಮಾತನಾಡುತ್ತಲೇ ಸಾಗುತ್ತಿದ್ದರೂ ಎದುರು ನಿಂತ ಪೊಲೀಸರು ಅಂಥವರನ್ನು ತಡೆದು, ಗದರಿ, ತಿಳಿ ಹೇಳುವುದು ಮಾತ್ರ ಕಂಡುಬರುವುದಿಲ್ಲ.

ಅನೇಕ ಪೊಲೀಸರೇ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಮೊಬೈಲ್ ಬಳಸುತ್ತಲೇ ಮುಂದೆ ಸಾಗುವುದರಿಂದ ಇನ್ನು ಅವರು ಸಾರ್ವಜನಿಕರಿಗೆ ತಿಳಿ ಹೇಳುವುದಾದರೂ ಎಲ್ಲಿಂದ? ಎಂಬ ಪ್ರಶ್ನೆ ಮೂಡುವಂತೆ ವರ್ತಿಸುತ್ತಾರೆ.

ವೇಗಕ್ಕೂ ಇಲ್ಲ ನಿಯಂತ್ರಣ
 ನಗರ ವ್ಯಾಪ್ತಿಯಲ್ಲಿ ಬೈಕ್, ಕಾರ್ ಮತ್ತಿತರ ವಾಹನಗಳು ವಿಪರೀತ ವೇಗದಿಂದ ಸಾಗುತ್ತ ಎದುರು ಬರುವವರನ್ನು ಇಕ್ಕಟ್ಟಿಗೆ ಸಿಲುಕಿಸುವುದೂ ಇಲ್ಲಿನ ಅತ್ಯಂತ ಸಹಜ ಕ್ರಿಯೆಯಾಗಿ ಮುಂದುವರಿದಿದೆ. ಶಾಲೆ- ಕಾಲೇಜುಗಳಿರುವ ಕಡೆಯೂ ವೇಗ ಕಡಿಮೆ ಮಾಡದೆ, ಭರದಿಂದ ಸಾಗುತ್ತ ಅಪಘಾತಕ್ಕೆ ಕಾರಣವಾಗುವವರನ್ನು ತಡೆದು, ವೇಗ ಕಡಿಮೆ ಮಾಡುವಂತೆ ಸೂಚಿಸುವ ಅಗತ್ಯವೂ ಇದೆ ಎಂಬುದು ಅನೇಕ ಜನರ ಆಗ್ರಹವಾಗಿದೆ.

ಪ್ರಮುಖ ಮಾರುಕಟ್ಟೆಯನು ಹೊಂದಿರುವ ಬೆಂಗಳೂರು ರಸ್ತೆ, ರಾಯಲ್ ವೃತ್ತ, ಜಿಲ್ಲಾಧಿಕಾರಿ ಕಚೇರಿ ವೃತ್ತ, ರೈಲು ನಿಲ್ದಾಣ ರಸ್ತೆ, ಹಳೆ ಬಸ್ ನಿಲ್ದಾಣದ ಎದುರಿನ ರಸ್ತೆ, ಮೋತಿ ವೃತ್ತ, ಕನಕ ದುರ್ಗಮ್ಮ ದೇವಸ್ಥಾನದ ಎದುರಿನ ವೃತ್ತ, ಎಸ್.ಪಿ. ವೃತ್ತಗಳಲ್ಲಿ ವಾಹನಗಳ ವೇಗಕ್ಕೆ ಮಿತಿಯೇ ಇಲ್ಲದ್ದರಿಂದ ಆಗಾಗ ಚಿಕ್ಕಪುಟ್ಟ ಅಪಘಾತಗಳು ಸಂಭವಿಸುತ್ತಲೇ ಸಾಗಿವೆ.
ಸಿಗ್ನಲ್‌ಗಳೇ ಇಲ್ಲ

ನಗರದ ಪ್ರಮುಖ ವೃತ್ತವಾಗಿರುವ ರಾಯಲ್ ವೃತ್ತದಲ್ಲಿ ಸದಾ ಗಿಜಿಗುಡುವ ಸಂಚಾರ ದಟ್ಟಣೆ ಕಂಡುಬರುತ್ತದೆ. ಆದರೆ, ಅಲ್ಲಿ ಅಳವಡಿಸಲಾಗಿರುವ ಸಂಚಾರ ಸಿಗ್ನಲ್‌ಗಳು ಪದೇಪದೇ ಸ್ಥಗಿತಗೊಳ್ಳುವುದರಿಂದ ವಾಹನ ಸವಾರರು ಮತ್ತು ಸಂಚಾರಿ ಠಾಣೆ ಪೊಲೀಸರಿಗೆ ತೀವ್ರ ತೊಂದರೆ ಎದುರಾಗುತ್ತಿದೆ.ಅಲ್ಲಿರುವ ನಾಲ್ಕು ರಸ್ತೆಗಳಲ್ಲಿ, ಏಕ ಮುಖ ಸಂಚಾರ ವ್ಯವಸ್ಥೆ ಇದ್ದು, ಒಮ್ಮಿಂದೊಮ್ಮಲೇ ಬರುವ ವಾಹನಗಳನ್ನು ಸರದಿ ಪ್ರಕಾರವೇ ಬಿಟ್ಟರೂ ಅನೇಕ ತಿರುವುಗಳು ಇರುವುದರಿಂದ ವಾಹನ ಸವಾರರ ನಡುವೆ ಸ್ಫರ್ಧೆ ಏರ್ಪಟ್ಟು, ಟ್ರಾಫಿಕ್ ಜಾಮ್ ಆಗುತ್ತದೆ.

ರಾಘವ ಕಲಾಮಂದಿರದತ್ತ ಸಾಗುವ ಡಾ.ರಾಜಕುಮಾರ್ ರಸ್ತೆಯಲ್ಲಿ ವಿಭಜಕ  ಅಳವಡಿಸಿದರೆ, ಸಂಚಾರ ದಟ್ಟಣೆ ತಪ್ಪಿಸಬಹುದಾಗಿದೆ ಎಂಬುದು ವಾಹನ ಸವಾರರ ಸಲಹೆಯಾಗಿದೆ.
ಈ ವೃತ್ತ ಮಾತ್ರವಲ್ಲದೆ, ನಗರದ ಇನ್ನುಳಿದ ಅನೇಕ ವೃತ್ತಗಳಲ್ಲಿ ಸಿಗ್ನಲ್‌ಗಳು ಸರಿಯಾಗಿ ಕೆಲಸ ಮಾಡದ್ದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥವಾಗುತ್ತ ಸಾಗುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT