ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾರಿತ ಅಣಬೆ ಅರ್ಕಾ ಒಎಂ -1

Last Updated 9 ಜನವರಿ 2012, 19:30 IST
ಅಕ್ಷರ ಗಾತ್ರ

ಸಾವಯವ ತ್ಯಾಜ್ಯ ವಸ್ತುಗಳಿಂದ ಸುಲಭವಾಗಿ ಬೆಳೆಯಬಹುದಾದ ಅಣಬೆ ಬೇಸಾಯ ಹೆಚ್ಚಿನ ಬಂಡವಾಳವಿಲ್ಲದ ಲಾಭದಾಯಕ ಕೃಷಿ. ಶಿಲೀಂದ್ರ ಜಾತಿಗೆ ಸೇರಿದ ಈ ಸಸ್ಯವನ್ನು ಹೆಚ್ಚಾಗಿ ಮಾಂಸಾಹಾರ ತಯಾರಿಕೆಯಲ್ಲಿ ಬಳಸುವುದರಿಂದ ಇದು ಮಾಂಸಾಹಾರಿ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಆದರೆ ಇದು ಪೋಷಕಾಂಶ ಭರಿತ ಶುದ್ಧ ಸಸ್ಯಹಾರಿ ತರಕಾರಿ. 

ವಿವಿಧ ಗಾತ್ರ, ಬಣ್ಣ, ಆಕಾರಗಳಲ್ಲಿ ಕಾಣಸಿಗುವ ಅಣಬೆಯಲ್ಲಿ ಆಹಾರಕ್ಕಾಗಿ, ಔಷಧಿಗಾಗಿ ಬಳಸಬಹುದಾದ್ದು ಮತ್ತು ವಿಷಕಾರಿ ಎಂಬ ಮೂರು ವಿಧಗಳಿವೆ.

ಭಾರತವೂ ಸೇರಿದಂತೆ ಅನೇಕ ದೇಶಗಳಲ್ಲಿ ಅಣಬೆಯನ್ನು ಮೌಲ್ಯವರ್ಧಿತ ಆಹಾರ ಉತ್ಪನ್ನಗಳು ಮತ್ತು ಔಷಧಿಗಳ ತಯಾರಿಕೆಗಾಗಿ ಬಳಸಲಾಗುತ್ತಿದೆ. ಹೀಗಾಗಿ ಅಣಬೆ ಬೇಸಾಯ ಕೂಡ ಲಾಭದಾಯಕ ಉದ್ಯಮವಾಗಿದೆ.   ಸುಮಾರು 14,000 ಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿರುವ ಅಣಬೆಯ ಪ್ರಭೇದಗಳಲ್ಲಿ ಸುಮಾರು 5000 ಅಣಬೆಗಳನ್ನು ಮಾತ್ರ ಆಹಾರಕ್ಕಾಗಿ ಬಳಸಬಹುದು.
 
ಆದರೂ 31 ವಿಭಾಗಗಳಲ್ಲಿ ಹರಿದು ಹಂಚಿಹೋಗಿರುವ ಅವುಗಳಲ್ಲಿ 2000 ಪ್ರಭೇದಗಳು ಮಾತ್ರ ತಿನ್ನಲು ಯೋಗ್ಯವಾಗಿವೆ. ಈ ಪೈಕಿ 100 ಪ್ರಭೇದಗಳನ್ನು ಪ್ರಾಯೋಗಿಕವಾಗಿ, 50 ಪ್ರಭೇದಗಳನ್ನು ಖರ್ಚು ವೆಚ್ಚವಿಲ್ಲದೆ, 30 ಪ್ರಭೇದಗಳನ್ನು ವಾಣಿಜ್ಯೋದ್ಯಮ ಉದ್ದೇಶದಿಂದ ಮತ್ತು ಬಟನ್, ಓಯಿಸ್ಟರ್, ಮೈಟೆಕ್, ಟರ್ಕಿ ಟೈಲ್ ಹಾಗೂ ರೀಶಿ ಎಂಬ  ಕೇವಲ 6 ಪ್ರಭೇದಗಳನ್ನು ಮಾತ್ರ ಆಹಾರ ಉದ್ದೇಶದಿಂದ ಬೆಳೆಯಲಾಗುತ್ತಿದೆ.

ದೇಶಿಯ ಅಣಬೆಗಳ ಸಂರಕ್ಷಣೆ ಮತ್ತು ಬಳಕೆ ದೃಷ್ಟಿಯಿಂದ ಜೈವಿಕ ವೈವಿಧ್ಯತೆಯ ಸಂಶೋಧನೆ ಕಾರ್ಯ ನಡೆಸುತ್ತಿರುವ ಬೆಂಗಳೂರಿನ ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಅಣಬೆ ಸಂಶೋಧನಾ ಪ್ರಯೋಗಾಲಯವು ಅರ್ಕಾ ಓಎಂ -1 ಎಂಬ ಆಕರ್ಷಕ ನೈಸರ್ಗಿಕ ಗುಲಾಬಿ ಬಣ್ಣದ ಸುಧಾರಿತ ಅಣಬೆ ತಳಿ ಅಭಿವೃದ್ಧಿಪಡಿಸಿದೆ.   

ಭಾರತದ ಉಷ್ಣ ವಲಯ ಹಾಗೂ ಸಮಶೀತೋಷ್ಣ ವಲಯಗಳಲ್ಲಿ ಕಂಡುಬರುವ ದೇಶಿಯ ಅಣಬೆಗಳನ್ನು ದಾಖಲಿಕರಣಗೊಳಿಸುವ ಹಾಗೂ ಸಂರಕ್ಷಿಸುವ ಕಾರ್ಯ ಪ್ರಯೋಗಾಲಯ ಕೈಗೆತ್ತಿಕೊಂಡಿತ್ತು. ಅದು ಪಶ್ಚಿಮಘಟ್ಟ ಪ್ರದೇಶ, ಅಂಡಮಾನ್ ನಿಕೋಬಾರ್ ದ್ವೀಪ, ರಾಜಸ್ತಾನ, ಗುಜರಾತ್ ಮತ್ತು ಸಿಕ್ಕಿಂ ಸೇರಿದಂತೆ ಅನೇಕ ಕಡೆಗಳಲ್ಲಿ ಸರಣಿ ಸಂಶೋಧನೆ ನಡೆಸಿ ಇವರೆಗೆ ಸುಮಾರು 300 ಅಣಬೆ ಪ್ರಭೇದಗಳನ್ನು ದಾಖಲಿಕರಣಗೊಳಿಸಿದೆ. 

ಸಂಶೋಧನೆ ಕಾರ್ಯ ನಡೆಸುತ್ತಿದ್ದ ವೇಳೆ ಪಶ್ಚಿಮಘಟ್ಟ ವ್ಯಾಪ್ತಿಯ ಶಿವಮೊಗ್ಗ  ಅರಣ್ಯ ಪ್ರದೇಶವೊಂದರಲ್ಲಿ ಕಂಡು ಬಂದ ಗುಲಾಬಿ ಓಯಿಸ್ಟರ್ ಅಣಬೆ ಪ್ರಭೇದವನ್ನು (pleurotus djamr) ಸಂಗ್ರಹಿಸಿ ತಂದು ಅದನ್ನು ಪ್ರಯೋಗಾಲಯದಲ್ಲಿ ಸತತ ಐದು ವರ್ಷಗಳ ಕಾಲ ಅಧ್ಯಯನಕ್ಕೆ ಒಳಪಡಿಸಲಾಯಿತು.

ನಂತರ ಅದರ ಗುಣ ವಿಶೇಷತೆಯನ್ನು ಅರಿತು, ಶುದ್ಧಿಕರಿಸಿ ತಿನ್ನಲು ಯೋಗ್ಯವಾದ ರೀತಿಯಲ್ಲಿ  ಅಭಿವೃದ್ಧಿಪಡಿಸಿ  ಅರ್ಕಾ ಓಎಂ -1 ಎಂಬ ಹೆಸರಿನಲ್ಲಿ ಇತ್ತೀಚೆಗಷ್ಟೇ ಬಿಡುಗಡೆಗೊಳಿಸಲಾಗಿದೆ ಎನ್ನುತ್ತಾರೆ ಪ್ರಯೋಗಾಲಯದ ವಿಜ್ಞಾನಿ ಮೀರಾ ಪಾಂಡೆ.  

ಆಹಾರ ಯೋಗ್ಯವಾದ ಇತರೆ ಅಣಬೆಯಂತೆ  ಹೆಚ್ಚಿನ ಬಂಡವಾಳವಿಲ್ಲದೇ ಇದನ್ನು ಬೆಳೆಯಬಹುದು. ಸಾಮಾನ್ಯ ಅಣಬೆಗಿಂತ  ಕಡಿಮೆ ಆಮ್ಲಜನಕ ಉಪಯೋಗಿಸಿ ಕಡಿಮೆ ಅವಧಿಯಲ್ಲಿ ಕೊಯ್ಲಿಗೆ ಬರುತ್ತದೆ. ಆದ್ದರಿಂದ ಇದು ಕೊಳೆಯುವುದಾಗಲಿ ಅಥವಾ ಯಾವುದೇ ರೀತಿಯ ಕೀಟಗಳ ಬಾಧೆಗೆ ಒಳಗಾಗಲಾರದು.

ಜತೆಗೆ ಹೆಚ್ಚು ಕಾಲ ಸಂಸ್ಕರಿಸಿ ಇಡಬಹುದಾದ ಸಾಮರ್ಥ್ಯ, ಗುಣಮಟ್ಟದ ಪೋಷಕಾಂಶಗಳನ್ನು ಹೊಂದಿರುವುದು ಇದರ ವಿಶೇಷ.   ನೈಸರ್ಗಿಕವಾದ ಆಕರ್ಷಕ ಗುಲಾಬಿ ಬಣ್ಣದ ಜತೆಗೆ ಹಲವು ವೈಶಿಷ್ಟ್ಯತೆಯನ್ನು ಹೊಂದಿರುವ ಈ ಹೊಸ ತಳಿಯು ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಬೇಗ ಸೆಳೆಯುವುದರಿಂದ ಸಾಮಾನ್ಯ ಅಣಬೆಗಿಂತ ಇದನ್ನು ಬೆಳೆಯುವುದು ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎನ್ನುತ್ತಾರೆ ಮೀರಾ.  

ಆಸಕ್ತ ರೈತರು ಗುಲಾಬಿ ಅಣಬೆಯ ಬೀಜಗಳು ಮತ್ತು ಮಾರ್ಗದರ್ಶನಕ್ಕಾಗಿ ಸಂಪರ್ಕಿಸಬೇಕಾದ ವಿಳಾಸ: ನಿರ್ದೇಶಕರು, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಹೆಸರಘಟ್ಟ, ಬೆಂಗಳೂರು -560 089, ದೂರವಾಣಿ 080-28646 6420
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT