ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾರಿತ ಈರುಳ್ಳಿ ತಳಿಗಳು

Last Updated 9 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಭಾರತದಲ್ಲಿ ಸುಮಾರು 5.6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 75ಲಕ್ಷ ಟನ್ ಈರುಳ್ಳಿ ಬೆಳೆಯಲಾಗುತ್ತಿದೆ. ವಾರ್ಷಿಕ ಒಂದು ಸಾವಿರ ಕೋಟಿ ರೂಪಾಯಿ ಮೌಲ್ಯದ ಈರುಳ್ಳಿ ಹೊರ ರಾಷ್ಟ್ರಗಳಿಗೆ ರಫ್ತಾಗುತ್ತಿದೆ. ಮಾರುಕಟ್ಟೆಯಲ್ಲಿ ಈರುಳ್ಳಿಗೆ  ವರ್ಷವೆಲ್ಲಾ ಬೇಡಿಕೆ ಇದೆ.

ಕಳೆದ ಒಂದೆರಡು ತಿಂಗಳಿನಿಂದ ಈರುಳ್ಳಿ ಬೆಲೆ ಏರುಮುಖವಾಗಿದೆ. ಈ ಅವಧಿಯಲ್ಲಿ ಈರುಳ್ಳಿ ಬೆಳೆದವರು ಭಾರಿ ಆದಾಯ ಪಡೆದಿದ್ದಾರೆ. ಈರುಳ್ಳಿ ನೀರಾವರಿ ಹಾಗೂ ಮಳೆ ಆಶ್ರಯದ ಬೆಳೆ. ರೈತರು ಬೇಸಾಯದಲ್ಲಿ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಳ್ಳದ ಕಾರಣ ಉತ್ಪಾದನೆ ಕುಂಠಿತವಾಗಿದೆ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.

ವೈಜ್ಞಾನಿಕ ರೀತಿಯಲ್ಲಿ ಬೇಸಾಯ ಮಾಡಿದರೆ ಗುಣಮಟ್ಟದ ಈರುಳ್ಳಿ ಬೆಳೆಬಹುದು. ಈರುಳ್ಳಿಯಲ್ಲಿ ಅನೇಕ ತಳಿಗಳಿವೆ. ಆದರೆ ನಮ್ಮ ರೈತರಲ್ಲಿ ಸ್ಥಳೀಯ ತಳಿಗಳನ್ನು ಬೆಳೆಯುವವರು ಹೆಚ್ಚಾಗಿದ್ದಾರೆ. ಬೆಂಗಳೂರಿನ ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ನಾಲ್ಕು ಈರುಳ್ಳಿ ತಳಿಗಳನ್ನು ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿಪಡಿಸಿದೆ. ಈ ತಳಿಗಳ ಬೀಜ ಬಳಸಿ ಗುಣಮಟ್ಟದ ಈರುಳ್ಳಿ ಬೆಳೆಯಬಹುದು.

ಅರ್ಕಾ ಕಲ್ಯಾಣ್ : ಗೋಲಾಕೃತಿಯ ಕಡುಗೆಂಪು ಬಣ್ಣದ ದಪ್ಪ ಚಪ್ಪಟೆ ಗಡ್ಡೆಗಳು ಈ ತಳಿ ವಿಶೇಷ. ಮಳೆಆಶ್ರಯದಲ್ಲಿ ಮುಂಗಾರಿನಲ್ಲಿ ಬೆಳೆಯಲು ಸೂಕ್ತವಾದ ಈ ತಳಿ ರೋಗ ಸಹಿಷ್ಣುತೆ ಹೊಂದಿದೆ. ಹೆಕ್ಟೇರ್‌ಗೆ  35-40 ಟನ್ ಇಳುವರಿ ಪಡೆಯಬಹುದು.

ಅರ್ಕಾ ಪ್ರಗತಿ :    ಕೆಂಪು ಬಣ್ಣದ ದುಂಡನೆಯ ಮಧ್ಯಮ ಗಾತ್ರದ ಗೆಡ್ಡೆ ಈ ತಳಿಯ ವಿಶೇಷ. ಚಳಿಗಾಲ ಹಾಗೂ ಮಳೆಗಾಲದಲ್ಲಿ ಬೆಳೆಯಬಹುದು. ರೋಗ ನಿರೋಧಕ ಶಕ್ತಿ ಇರುವ ಈ ತಳಿ ಹೆಕ್ಟೇರ್‌ಗೆ 30-35 ಟನ್ ಇಳುವರಿ ಕೊಡುತ್ತದೆ.

ನಾಟಿ ಮಾಡಿದ 125 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ.ಅರ್ಕಾ ಕೀರ್ತಿಮಾನ್: ಮಧ್ಯಮ ಹಾಗೂ ಕೆಂಪು ಬಣ್ಣದ ದೊಡ್ಡ ಗಾತ್ರದ ಗಡ್ಡೆ ಈ ತಳಿಯ ವಿಶೇಷ. ಹೆಕ್ಟೇರ್‌ಗೆ 40-45 ಟನ್ ಇಳುವರಿ ಬರುತ್ತದೆ. ಇದು ಎಲೆ ಮಚ್ಚೆ ರೋಗನಿರೋಧಕ ಶಕ್ತಿ ಹೊಂದಿದೆ. ಇದು  ಮುಂಗಾರು ಅವಧಿಗೆ ಹೆಚ್ಚು ಸೂಕ್ತ. ನಾಟಿ ಮಾಡಿದ 140 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ.

ಅರ್ಕಾ ಲಾಲಿಮಾ:  ಕೆಂಪು ಬಣ್ಣದ ಸಮಗಾತ್ರದ ಗಡ್ಡೆಗಳು ಈ ತಳಿಯ ವಿಶೇಷ. ಇವು ಹೆಚ್ಚು ಶೇಖರಣಾ ಸಾಮರ್ಥ್ಯ ಪಡೆದಿವೆ. ಈ ತಳಿಯ ಗಡ್ಡೆಗಳು ರೋಗ ನಿರೋಧಕ ಗುಣ ಹೊಂದಿದೆ. ಹೆಕ್ಟೇರ್‌ಗೆ 40-45 ಟನ್ ಇಳುವರಿ ಬರುತ್ತದೆ. ಇದು ಮುಂಗಾರು ಅವಧಿಗೆ ಸೂಕ್ತವಾದ ತಳಿ. ನಾಟಿ ಮಾಡಿದ 135-140 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ.

ಬೆಳೆಯುವ ವಿಧಾನ: ಮೇಲಿನ ಎಲ್ಲಾ ತಳಿಗಳನ್ನು ನೇರ ಬಿತ್ತನೆ ಹಾಗೂ ನಾಟಿ ವಿಧಾನದ ಮೂಲಕ ಬೆಳೆಯಬಹುದು. ನೇರ ಬಿತ್ತನೆಯಲ್ಲಿ ಕೈಯಿಂದ ಬೀಜ ಚೆಲ್ಲುವುದು ಹಾಗೂ ಕೂರಿಗೆ ಬಿತ್ತನೆ ಹಾಗೂ ಯಂತ್ರ ಬಳಸಿ ಬಿತ್ತನೆ ಮಾಡಬಹುದು. ನೇರ ಬಿತ್ತನೆಗಿಂತ ಯಂತ್ರ ಹಾಗೂ ಕೂರಿಗೆ ಬಿತ್ತನೆ ವಿಧಾನ ಉತ್ತಮ. ಈ ವಿಧಾನದಲ್ಲಿ ಗೆಡ್ಡೆಗಳ ನಡುವೆ ಸಾಕಷ್ಟು ಸ್ಥಳಾವಕಾಶ ಇರುವುದರಿಂದ ಸಮಗಾತ್ರದ ಗೆಡ್ಡೆಗಳ ಬೆಳವಣಿಗೆಗೆಸಹಾಯಕವಾಗುತ್ತದೆ. ಗುಣಮಟ್ಟದ ಗೆಡ್ಡೆಗಳ ಜತೆಗೆ ಹೆಚ್ಚಿನ ಇಳುವರಿ ಪಡೆಯಬಹುದು.

ನೇರ ಬಿತ್ತನೆ: ಭೂಮಿಯಲ್ಲಿ ತೇವಾಂಶ ಇದ್ದಾಗ ಕೈಯಿಂದ ಬೀಜಗಳನ್ನು ಚೆಲ್ಲುವುದು ನೇರ ಬಿತ್ತನೆ. ಬೀಜ ಸಮನವಾಗಿ ಎಲ್ಲಾ ಕಡೆಯಲ್ಲಿ ಬೀಳುವಂತೆ ಹಾಗೂ ಒತ್ತಾಗಿ ಬೀಳದ ಹಾಗೆ ಚೆಲ್ಲಬೇಕು. ಮಳೆ ಆಶ್ರಯದಲ್ಲಿ ಈ ವಿಧಾನ ಹೆಚ್ಚು ಜನಪ್ರಿಯ. ಅನುಭವಿ ರೈತರು ಪ್ರತಿ ಹೆಕ್ಟೇರಿಗೆ ಕೇವಲ 2-5 ಕೆ.ಜಿ ಬೀಜ ಬಳಸಿ ಉತ್ತಮ ಬೆಳೆ ಬೆಳೆಯುತ್ತಾರೆ. ಕೂರಿಗೆ ಹಾಗೂ ಯಂತ್ರಗಳ ಬಿತ್ತನೆಮಾಡುವವರು ಭೂಮಿಯಲ್ಲಿ ತೇವಾಂಶವಿದ್ದಾಗ ಬಿತ್ತನೆ ಕೈಗೊಳ್ಳಬೇಕು.

ನಾಟಿ ವಿಧಾನ: ಎತ್ತರದ ಸಸಿ ಮಡಿಗಲ್ಲಿ ಈರುಳ್ಳಿ ಸಸಿಗಳನ್ನು ಬೆಳೆಸಿಕೊಂಡು ನಂತರ ನಾಟಿ ಮಾಡುವ ವಿಧಾನ ನೀರಾವರಿಯಲ್ಲಿ ಬಳಕೆಯಲ್ಲಿದೆ. ಸಸಿ ಮಡಿಗಳ ಅಳತೆ 25X30.5ಅಡಿಗಳು ಇರಬೇಕು. ಒಂದು ಸಸಿ ಮಡಿಗೆ 10 ಕೆ.ಜಿ ಕೊಟ್ಟಿಗೆ ಗೊಬ್ಬರ, ಅರ್ಧ ಕೆ.ಜಿ ಟ್ರೈಕೋರಿಚ್ ಸೇರಿಸಿ ಬೀಜಗಳನ್ನು ಸಸಿ ಮಡಿಯಲ್ಲಿ 3X2 ಇಂಚು ಅಂತರದಲ್ಲಿ ಬಿತ್ತನೆ ಮಾಡಬೇಕು. ಬಿತ್ತನೆಗೆ ಮುಂಚೆ ಬೀಜಗಳನ್ನು (ಪ್ರತಿ ಕೆ.ಜಿ. ಬೀಜಕ್ಕೆ 5 ಗ್ರಾಂ ಬಾವಿಸ್ಟಿನ್ ಅಥವಾ  10 ಗ್ರಾಂ ಟ್ರೈಕೋರಿಚ್‌ನಿಂದ ) ಉಪಚರಿಸಬೇಕು. ಇದರಿಂದ ಹಲವಾರು ರೋಗಗಳನ್ನು ಪ್ರಾರಂಭಿಕ ಹಂತದಲ್ಲಿಯೇ ತಡೆಗಟ್ಟಬಹುದು. ಬೀಜ ಬಿತ್ತಿದ ನಂತರ ಮಡಿಗಳ ಮೇಲೆ ಒಣ್ಣ ಹುಲ್ಲಿನ ಹೊದಿಕೆ ಹೊದಿಸಿ ನಿಯಮಿತವಾಗಿ ನೀರು ಕೊಡಬೇಕು. ಇದರಿಂದ ಬೀಜಗಳು ಚೆನ್ನಾಗಿ ಮೊಳೆಕೆ ಬರುತ್ತವೆ. ಮೊಳಕೆ ನಂತರ ಹುಲ್ಲಿನ ಹೊದಿಕೆ ತೆಗೆಯಬೇಕು. ಸಸಿ ಮಡಿಗಳಲ್ಲಿ ನೀರು ನಿರ್ವಹಣೆ, ಸಸ್ಯ ಸಂರಕ್ಷಣೆ ಅತಿ ಮುಖ್ಯ.ಇದರಿಂದ ಉತ್ತಮ ಸಸಿಗಳನ್ನು ಪಡೆಯಬಹುದು. 

   ಆರೇಳು ವಾರಗಳ ಸಸಿಗಳನ್ನು ಸಸಿ ಮಡಿಯಿಂದ ಕಿತ್ತು ಟ್ರೈಕೋರಿಚ್ (10 ಗ್ರಾಂ ಪ್ರತಿ ಲೀಟರ್‌ಗೆ) ದ್ರಾವಣದಲ್ಲಿ ಉಪಚರಿಸಬೇಕು. ನಂತರ ಸಾಲಿನಿಂದ ಸಾಲಿಗೆ 15 ಸೆಂ.ಮೀ, ಗಿಡದಿಂದ ಗಿಡಕ್ಕೆ 10 ಸೆಂ.ಮೀ ಅಂತರದಲ್ಲಿ ನಾಟಿ ಮಾಡಬೇಕು. ನಾಟಿಗೆ ಮುಂಚೆ 2 ಮೀ ಉದ್ದ, 1.50 ಮೀ. ಅಗಲ ಅಳತೆಯ ಪಟಗಳನ್ನು ಮಾಡಿಕೊಂಡು ಅದರಲ್ಲಿ ನಾಟಿ ಮಾಡಬೇಕು. ನಾಟಿಯ ನಂತರ ನೀರುಣಿಸಬೇಕು. ಇದರಿಂದ ಸಸಿಗಳು ಬೇಗ ಚೇತರಿಸಿಕೊಳ್ಳುತ್ತವೆ.

ಈರುಳ್ಳಿ ಗೆಡ್ಡೆಗಳ ಮೇಲ್ಭಾಗ ಬಾಗಿ ಎಲೆಗಳ ಹಳದಿ ಬಣ್ಣ ತಿರುಗಿದ್ದರೆ ಹಾಗೂ ಅಂತಹ ಗಡ್ಡೆಗಳ ಪ್ರಮಾಣ ಶೇಕಡ 60ಕ್ಕೂ ಹೆಚ್ಚಾಗಿದ್ದರೆ ಬೆಳೆ ಕೊಯ್ಲಿಗೆ ಬಂದಿದೆ ಎಂದು ತಿಳಿಯಬೇಕು. ಅವಧಿಗೆ ಮುನ್ನ ಹಾಗೂ ನಂತರ ಕೊಯ್ಲು ಮಾಡುವುದರಿಂದ ಗೆಡ್ಡೆಗಳ ಗುಣಮಟ್ಟ ಹಾಗೂ ಇಳುವರಿ ಕಡಿಮೆಯಾಗುತ್ತದೆ. ಗೆಡ್ಡೆಗಳ ಮೇಲ್ಭಾಗ 2-2.5 ಸೆಂ. ಮೀ ಅಂತರ ಬಿಟ್ಟು ಮೇಲ್ಭಾಗವನ್ನು ಕತ್ತರಿಸಬೇಕು. ಭೂಮಿಯಿಂದ ತೆಗೆಯುವಾಗ ಗಡ್ಡೆಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು. ಗೆಡ್ಡೆಗಳನ್ನು 2-3 ದಿನ ಒಣಗಲು ಬಿಟ್ಟು ನಂತರ ನೆರಳಿನಲ್ಲಿ ಹದ ಮಾಡಬೇಕು. ಮಾರಾಟಕ್ಕೆ ಅರ್ಹವಾದ ಉತ್ತಮ ಗಾತ್ರದ ಗಡ್ಡೆಗಳನ್ನು ಮಾತ್ರ ತೆಳುವಾದ ಗೋಣಿ ಚೀಲಕ್ಕೆ ತುಂಬಬೇಕು. ಗಾಳಿಯಾಡುವ ಎತ್ತರದ ಸ್ಥಳಗಳಲ್ಲಿ ಈರುಳ್ಳಿ ಶೇಖರಿಸಿಡಬೇಕು.

ಹೆಚ್ಚಿನ ಮಾಹಿತಿಗೆ: ನಿರ್ದೇಶಕರು, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಹೆಸರಘಟ್ಟ ಬೆಂಗಳೂರು -560089. ದೂರವಾಣಿ ಸಂಖ್ಯೆ: 080- 28466420/21/22/23/ 24.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT