ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾರಿತ ಜೆನರ್ಮ್‌ಗೆ ಕೇಂದ್ರದ ಸಿದ್ಧತೆ

Last Updated 15 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ದೇಶಾದ್ಯಂತ ನಗರ ಪ್ರದೇಶಗಳಲ್ಲಿ ಉತ್ತಮ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ಸುಧಾರಿತ ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಯೋಜನೆ (ಜೆನರ್ಮ್) ಜಾರಿಗೆ ತರಲು ಚಿಂತನೆ ನಡೆಸಿದೆ.

ಈ ಯೋಜನೆಯನ್ನು 12ನೇ ಪಂಚವಾರ್ಷಿಕ ಯೋಜನೆ (2012-17) ಅವಧಿಯಲ್ಲಿ ಜಾರಿಗೆ ತರಲಾಗುವುದು. ಪ್ರಸ್ತುತ ಜಾರಿಯಲ್ಲಿರುವ ಯೋಜನೆ 2005ರ ಡಿಸೆಂಬರ್ 5ರಂದು ಅನುಷ್ಠಾನಗೊಳಿಸಲಾಗಿದ್ದು, 2012ರ ಮಾರ್ಚ್‌ನಲ್ಲಿ ಅಂತ್ಯಗೊಳ್ಳಲಿದೆ. ಹಾಗಾಗಿ ಪ್ರಸ್ತುತ ಇರುವ ಯೋಜನೆಯನ್ನು ಸುಧಾರಿಸಿ ಹೊಸ ಸುಧಾರಿತ ಯೋಜನೆ ಜಾರಿಗೊಳಿಸಲು ಸಿದ್ಧತೆ ನಡೆಯುತ್ತಿದೆ.

ಯೋಜನಾ ಆಯೋಗದ ಸದಸ್ಯ ಅರುಣ್ ಮಾರಿಯಾ ಅವರು ವಿವಿಧ ಅಧಿಕಾರಿಗಳೊಂದಿಗೆ ಈ ಬಗ್ಗೆ ಈಚೆಗೆ ಚರ್ಚೆ ನಡೆಸಿದ್ದು, ನಗರಾಭಿವೃದ್ಧಿ ಕಾರ್ಯದರ್ಶಿ ನೇತೃತ್ವದಲ್ಲಿ ತಂಡವೊಂದನ್ನು ರಚನೆ ಮಾಡಿದ್ದು, ಈ ತಂಡ ಯೋಜನೆ ಕುರಿತು ನೀಲನಕ್ಷೆ ತಯಾರಿಸಲಿದೆ ಎಂದು ಯೋಜನಾ ಆಯೋಗದ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ಪ್ರಸ್ತುತ ಇರುವ ಯೋಜನೆಯಡಿ ದೇಶದ 63 ನಗರಗಳು ಮಾತ್ರ ಯೋಜನೆ ವ್ಯಾಪ್ತಿಗೆ ಬರುತ್ತಿವೆ. ಆದರೆ ಸುಧಾರಿತ ಹೊಸ ಯೋಜನೆ ಇನ್ನೂ ಹೆಚ್ಚಿನ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಜಾರಿಗೆ ಬರಲಿದೆ. ಇದರಲ್ಲಿ ಸಣ್ಣ, ಮಧ್ಯಮ ಹಾಗೂ ದೊಡ್ಡ ನಗರಗಳೂ ಸೇರ್ಪಡೆ ಆಗಲಿವೆ. ನಗರಗಳು ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಯೋಜನೆ ವ್ಯಾಪ್ತಿಯಲ್ಲಿ ಇಲ್ಲದ ಅನೇಕ ನಗರಗಳು ಹೊಸ ಯೋಜನೆ ವ್ಯಾಪ್ತಿಯಲ್ಲಿ ಬರಲಿವೆ ಎಂದು ನಗರಾಭಿವೃದ್ಧಿ ಸಚಿವ ಕಮಲ್‌ನಾಥ್ ತಿಳಿಸಿದ್ದಾರೆ.

2 ಲಕ್ಷ ಕೋಟಿ ವೆಚ್ಚ: ಹೊಸ ಯೋಜನೆಗೆ ಸುಮಾರು ಎರಡು ಲಕ್ಷ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುವ ಉದ್ದೇಶ ಹೊಂದಲಾಗಿದೆ. ಈಗ ಜಾರಿಯಲ್ಲಿರುವ ಯೋಜನೆಗೆ 1.2 ಲಕ್ಷ ಕೋಟಿ ರೂಪಾಯಿ ವ್ಯಯ ಮಾಡಲಾಗಿದೆ.

 ಉನ್ನತಾಧಿಕಾರವುಳ್ಳ ತಜ್ಞರ ಸಮಿತಿ ಗುರುತಿಸಿದ ನಗರಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಅಂತರರಾಷ್ಟ್ರೀಯ ಆರ್ಥಿಕ ಸಂಬಂಧಗಳ ಮೇಲೆ ಸಂಶೋಧನೆ ಬಗ್ಗ ಭಾರತೀಯ ಪರಿಷತ್‌ನ ಅಧ್ಯಕ್ಷರ ನೇತೃತ್ವದ ಸಮಿತಿ ಯಾವ ಯಾವ ನಗರಗಳಲ್ಲಿ ಮೂಲಭೂತಸೌಕರ್ಯ ಕಲ್ಪಿಸಲು ಎಷ್ಟು ಹಣ ವ್ಯಯ ಮಾಡಬೇಕು ಎನ್ನುವ ಅಂದಾಜು ಸಹ ಮಾಡಲಿದೆ.

ನಗರಾಭಿವೃದ್ಧಿ ಸಚಿವಾಲಯ ಈ ಸಮಿತಿಯನ್ನು ರಚನೆ ಮಾಡಲಿದೆ. ಸಾರ್ವಜನಿಕ ಸೇವೆಗಳಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಒಳಚರಂಡಿ, ಘನತ್ಯಾಜ್ಯ ವಿಲೇವಾರಿ ನಿರ್ವಹಣೆ, ರಸ್ತೆ ಮತ್ತು ಬೀದಿ ದೀಪಗಳಿಗೆ ಒತ್ತು ನೀಡುವಂತೆಯೂ ಸಮಿತಿಗೆ ಸೂಚನೆ ನೀಡಿದೆ.

ನಗರ ಪ್ರದೇಶಗಳಲ್ಲಿರುವ ಕೊಳಗೇರಿಗಳ ಪುನಃ ಅಭಿವೃದ್ಧಿ, ಪ್ರಾದೇಶಿಕ ಮತ್ತು ಮಹಾನಗರಗಳ ಯೋಜನೆ, ಸಾರಿಗೆ ಸೌಲಭ್ಯಗಳು ಬಡವರಿಗೆ ಲಭ್ಯವಾಗುವಂಥ ಯೋಜನೆ ರೂಪಿಸಲು ಸೂಚಿಸಲಾಗಿದೆ. ನಗರ ಸ್ಥಳೀಯ ಸರ್ಕಾರಗಳನ್ನು ಸ್ವಾತಂತ್ರ್ಯವಾಗಿ ಕಾರ್ಯನಿರ್ವಹಿಸಲು ಅನುಕೂಲ ಕಲ್ಪಿಸುವುದು.
 
ಅದಕ್ಕಾಗಿ ಅಗತ್ಯ ಹಣಕಾಸಿನ ನೆರವು ನೀಡುವುದು, ಹೊಸ ತೆರಿಗೆ ಹಾಕಲು ಅವಕಾಶ, ಆಕ್ಟ್ರಾಯ್ ನಿಷೇಧ, ಸಾರ್ವಜನಿಕರಿಗೆ ನೀಡಿದ ವಿವಿಧ ಸೇವೆಗಳ ಶುಲ್ಕವನ್ನು ಕಡ್ಡಾಯವಾಗಿ ವಸೂಲಿ, ಸ್ವಾತಂತ್ರವಾಗಿ ಬಂಡವಾಳ ಹೂಡಲು ಅವಕಾಶ ಕಲ್ಪಿಸುವ ಅಂಶಗಳು ಯೋಜನೆಯಲ್ಲಿ ಅಡಕವಾಗಿವೆ.

  ಈಗಿರುವ ಯೋಜನೆಗೆ ಕೇಂದ್ರ ಯೋಜನೆಯ ಶೇ 50ರಷ್ಟು ಹಣ ನೀಡುತ್ತಿದ್ದು, ಉಳಿದ ಹಣವನ್ನು ರಾಜ್ಯ ಸರ್ಕಾರಗಳು ಭರಿಸಬೇಕಾಗುತ್ತದೆ. ಆದರೆ ಹೊಸ ಯೋಜನೆಯಲ್ಲಿ ಯಾವ ರೀತಿಯಲ್ಲಿ ಹಣವನ್ನು ಭರಿಸಬೇಕು ಎನ್ನುವ ಕುರಿತು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳೊಂದಿಗೆ ಚರ್ಚೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT