ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾರಿಸದ ರಸ್ತೆ ತಪ್ಪದ ಆತಂಕ

Last Updated 26 ಏಪ್ರಿಲ್ 2013, 10:05 IST
ಅಕ್ಷರ ಗಾತ್ರ

ಗುಬ್ಬಿ: ಪಟ್ಟಣದಿಂದ ಹಾದು ಹೋಗುವ ಗುಬ್ಬಿ- ಸಿ.ಎಸ್.ಪುರ ರಸ್ತೆ ಅಭಿವೃದ್ಧಿ ಕಾರ್ಯ ಕುಂಠಿತವಾಗಿರುವುದರಿಂದ ಸಾರ್ವಜನಿಕರ ಓಡಾಟ ಮತ್ತು ವಾಹನ ಸವಾರರಿಗೆ ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಆತಂಕ ತಂದಿಡುತ್ತಿದೆ.

ಇತ್ತ ಅಭಿವೃದ್ಧಿ ಕಾಣದ ಗುಬ್ಬಿ- ಸಿ.ಎಸ್.ಪುರ ರಸ್ತೆ ಬದಿಯಲ್ಲಿ ನೂರಾರು ವರ್ಷದ ಬೃಹತ್ ಆಲದ ಮರಗಳು ಎತ್ತರಕ್ಕೆ ಬೆಳೆದು ಪರಿಸರಕ್ಕೆ ಅನುಕೂಲವಾಗಿವೆ. ಆದರೆ ಈ ಸಾಲು ಮರಗಳ ನಡುವೆ ಮಾರ್ಗದುದ್ದಕ್ಕೂ ಅಲ್ಲಲ್ಲಿ ಹಳೆಯ ಒಣಗಿದ ಆಲದ ಮರಗಳು ಗಾಳಿ ಬೀಸಿದಾಗ ದಾರಿ ಹೋಕರ ಪ್ರಾಣಕ್ಕೆ ಕುತ್ತು ತರುತ್ತಿವೆ.

ಬಸ್, ಲಾರಿ, ದ್ವಿಚಕ್ರ ವಾಹನ ಸೇರಿದಂತೆ ಸಾವಿರಾರು ವಾಹನ ನಿತ್ಯ ಪ್ರಯಾಣಿಸುವುದಲ್ಲದೆ, ದಾರಿಹೋಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸೈಕಲ್ ಏರಿ ನಿತ್ಯ ಈ ಮಾರ್ಗದಲ್ಲಿ ಪಯಣ ಬೆಳಸುತ್ತಾರೆ.

ಹೇಮಾವತಿ ನೀರಿನ ಕಿರುಕಾಲುವೆ ಇರುವ ಏರಿಯನ್ನು ಏರಿ ಹರಸಾಹಸ ಪಡುವ ವಾಹನಗಳು. ದೂಳು ಸಿಂಪಡಿಸುತ್ತ ತೆರಳುವ ವಾಹನಗಳಿಂದ ಸಾರ್ವಜನಿಕರು ಕಣ್ಣು ಮುಚ್ಚಿ ನಡೆಯಬೇಕಿದೆ. ಜಿ.ಹೊಸಹಳ್ಳಿ ಗ್ರಾಮದ ರಸ್ತೆ ಬದಿ ಸಮೀಪದ ಐದಾರು ತಬ್ಬಿನ ಆಲದ ಮರ ಒಣಗಿ ಮೂರು ವರ್ಷ ಕಳೆದಿದ್ದು ಇದನ್ನು ತೆಗೆಯಲು ಅರಣ್ಯ ಇಲಾಖೆ ಗಮನಹರಿಸಿಲ್ಲ. ಪಕ್ಕದ ಹಸಿರಿರುವ ಆಲದ ಮರಗಳ ಕೊಂಬೆಗಳು ಈ ಒಣಗಿದ ಮರಗಳ ಕೊಬ್ಬೆಗೆ ತಾಕುವುದರಿಂದ ಒಣಗಿದ ಮರದ ಕೊಂಬೆಗಳು ಮುರಿದು ಬೀಳುತ್ತಿವೆ. ಈಚೆಗೆ ಕೊಂಬೆ ಮುರಿದು ಬಿದ್ದು ಜಿ.ಹೊಸಹಳ್ಳಿ ಗ್ರಾಮದ ಶಿವಣ್ಣ ಎಂಬುವವರಿಗೆ ಮುಖ, ಕೈಗೆ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಈ ಮಾರ್ಗದುದ್ದಕ್ಕೂ ಹತ್ತಾರು ಮರಗಳು ಒಣಗಿ ನಿಂತಿದ್ದು ಅವುಗಳನ್ನು ತೆಗೆಯಲು ಸಾರ್ವಜನಿಕರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ. ಅರಣ್ಯ ಇಲಾಖೆ ಕೆ-ಶಿಪ್ ಅಧಿಕಾರಿಗಳ ಜವಾಬ್ದಾರಿ ಎಂದು ಹೇಳಿ ಕೈ ತೊಳೆದುಕೊಳ್ಳುತ್ತಿದೆ. ಆದರೆ ಕೆ-ಶಿಪ್‌ನವರು ಮತ್ತು ಲೋಕೋಪಯೋಗಿ ಇಲಾಖೆ ನಡುವಿನ ಒಪ್ಪಂದ ಯಾವ ರೀತಿಯದು ಎನ್ನವುದು ರಸ್ತೆ ಅಭಿವೃದ್ಧಿಯಾಗದಿರುವುದರಿಂದ ಸಾರ್ವಜನಿಕರಿಗೆ ತಿಳಿಯುತ್ತಿಲ್ಲ. ಈ ವರ್ಷದ ಮಳೆಗಾಳಿ ಆರಂಭವಾಗುವ ಮುನ್ನ ಒಣಗಿ ನಿಂತ ಬೃಹತ್ ಮರಗಳನ್ನು ತೆಗೆದು ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟು ಪ್ರಾಣ ಹಾನಿ ತಪ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT