ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುನಾಮಿ ದುರಂತ ನಂತರದ ಆರು ವರ್ಷ

Last Updated 27 ಡಿಸೆಂಬರ್ 2010, 7:10 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ಆರು ವರ್ಷಗಳ ಹಿಂದೆ ಅಪ್ಪಳಿಸಿದ ಸುನಾಮಿಯಿಂದ ಮಡದಿ ಮತ್ತು ಒಂದು ವರ್ಷದ ಮಗನನ್ನು ಕಳೆದುಕೊಂಡ ತಂದೆಗೆ ಕಣ್ಮರೆಯಾಗಿರುವ ಮಗಳು ಮರಳಿ ಸಿಗುತ್ತಾಳೆ ಎಂಬ ಅಗಾಧ ಭರವಸೆ ಇದೆ.ಭಾರತೀಯ ವಾಯು ಪಡೆಯ ಅಧಿಕಾರಿಯಾದ ರವಿಶಂಕರ್ ಕಾರ್ ನಿಕೋಬಾರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಡಿಸೆಂಬರ್ 2004ರಲ್ಲಿ ಉಂಟಾದ ಸುನಾಮಿ ಅವರ ಇಡೀ ಕುಟುಂಬವನ್ನೇ ಎಳೆದೊಯಿತು.

ಈ ದುರಂತ ಸಂಭವಿಸಿದಾಗ ರವಿ ಶಂಕರ್ ಅವರ ಕೈ ಹಿಡಿದಿದ್ದ ಅವರ ಎಂಟು ವರ್ಷದ ಪುತ್ರಿ ಅಪೂರ್ವ ಕೊಚ್ಚಿಕೊಂಡು ಹೋದಳು. ಇತ್ತ ಮಗನನ್ನು ಅಪ್ಪಿಕೊಂಡಿದ್ದ ಅವರ ಪತ್ನಿ ಮರವೊಂದನ್ನು ಗಟ್ಟಿಯಾಗಿ ಹಿಡಿದಿದ್ದರೂ ಬದುಕುಳಿಯಲಿಲ್ಲ. ಅಪೂರ್ವ ಸತ್ತಿಲ್ಲ, ಅವಳು ಸುನಾಮಿ ಸಂತ್ರಸ್ತರ ಶಿಬಿರದಲ್ಲಿದ್ದಳು. ಆದರೆ, ಆಕೆಯನ್ನು ಅಲ್ಲಿಂದ ಅಪಹರಿಸಲಾಗಿದೆ ಎಂದು ಪೊಲೀಸರು ರವಿಶಂಕರ್‌ಗೆ ತಿಳಿಸಿದರು.

ಪೊಲೀಸರ ಈ ಹೇಳಿಕೆ ಕತ್ತಲು ಕವಿದಿದ್ದ ರವಿಶಂಕರ ಅವರ ಬಾಳಿನಲ್ಲಿ ಭರವಸೆಯ ಬೆಳಕನ್ನು ಮೂಡಿಸಿತು. ಮಗಳ ಭಾವಚಿತ್ರ ಹಿಡಿದುಕೊಂಡು ರವಿಶಂಕರ್ ಕಂಡಕಂಡಲೆಲ್ಲಾ ಹುಡುಕಿದರು.ಈ ಮಧ್ಯೆ ಸುನಾಮಿಗೆ ಸಿಲುಕಿದ ಹುಡುಗಿಯೊಬ್ಬಳು ಪೋಷಕರಿಂದ ದೂರವಾಗಿ ಕೇರಳದ ಮಲಪುರಂನಲ್ಲಿ ಇದ್ದಾಳೆ ಎಂಬ ವರದಿಯನ್ನು ನೋಡಿದ ರವಿಶಂಕರ್, ಮಗಳನ್ನು ಹುಡುಕಿಕೊಂಡು ಅಲ್ಲಿಗೆ ಕಳೆದ ಅಕ್ಟೋಬರ್‌ನಲ್ಲಿ ಹೋಗಿದ್ದರು. ಆದರೆ, ಅಲ್ಲಿದ್ದ ಹುಡುಗಿ ಅವರ ಮಗಳಾಗಿರಲಿಲ್ಲ. ರವಿಶಂಕರ್ ಆ ಹುಡುಗಿಯನ್ನು ಸಾಕುವುದಾಗಿ ಹೇಳಿದರೂ, ಆಕೆ ತನ್ನ ಪೋಷಕರಾದ ಮೀನಗಾರರಲ್ಲಿಗೆ ಹೊರಟು ಹೋದಳು.

‘ಅಪೂರ್ವಳಿಗೆ ಈಗ 14 ವರ್ಷ. ಅವಳು ಖಂಡಿತವಾಗಿಯೂ ಸಿಗುತ್ತಾಳೆ’ ಎಂದು  ಭರವಸೆ ಇಟ್ಟುಕೊಂಡಿರುವ ರವಿಶಂಕರ್, ಆಕೆಯ ಹುಡುಕಾಟಕ್ಕೆ ಭಗೀರಥ ಪ್ರಯತ್ನ ಮಾಡುತ್ತಿದ್ದಾರೆ.‘ಕರ್ನಾಟಕದ ಕೋಲಾರದ ಆಸುಪಾಸಿನಲ್ಲಿ ದರೋಡೆ ಮಾಡುವ ಅಲೆಮಾರಿ ಜನಾಂಗದವರ ಬಳಿ ಅಪೂರ್ವ ಇದ್ದಾಳೆ ಎಂಬ ಸುಳಿವು ಕಳೆದ ವರ್ಷ ಸಿಕ್ಕಿತ್ತು. ಆದರೆ ಈ ಬಗ್ಗೆ ಯಾವುದೇ ಬಲವಾದ ಆಧಾರ ದೊರಕಲಿಲ್ಲ’ ಎಂದು ರವಿ ಶಂಕರ್ ದುಃಖಿತರಾದರು.

ವಾಯು ಪಡೆಯ ಮಾಜಿ ಅಧಿಕಾರಿ ಎಂ. ವೆಂಕಟರಾಮನ್ ಅವರೂ ಇಂತಹದ್ದೇ ಭರವಸೆ ಇಟ್ಟುಕೊಂಡಿದ್ದಾರೆ. ಅವರ 18 ವರ್ಷದ ಮಗ ಅರವಿಂದ್ ಕೂಡ ಸುನಾಮಿ ದುರಂತದಲ್ಲಿ ಕಣ್ಮರೆಯಾಗಿದ್ದಾನೆ. ಅವನಿಗಾಗಿ ವೆಂಕಟರಾಮನ್ ಹಗಲಿರುಳು ಹುಡುಕುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT