ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂ ಕೋರ್ಟ್‌ಗೆ ಬಿಸಿಸಿಐ ಮೇಲ್ಮನವಿ

ಸ್ಪಾಟ್ ಫಿಕ್ಸಿಂಗ್: ಹೈಕೋರ್ಟ್ ತೀರ್ಪಿಗೆ ತಡೆ ನೀಡುವಂತೆ ಕೋರಿದ ಮಂಡಳಿ
Last Updated 5 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣದ ವಿಚಾರಣೆಗೆ ನೇಮಿಸಿದ್ದ ತನಿಖಾ ಆಯೋಗದ ರಚನೆ `ಕಾನೂನುಬಾಹಿರ ಹಾಗೂ ಅಸಾಂವಿಧಾನಿಕ' ಎಂದು ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಬಿಸಿಸಿಐ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತು.

ತನಿಖಾ ಆಯೋಗವನ್ನು ಕಾನೂನುಬದ್ಧವಾಗಿಯೇ ರಚಿಸಲಾಗಿದ್ದು, ಬಾಂಬೆ ಹೈಕೋರ್ಟ್ ತೀರ್ಪಿಗೆ ತಕ್ಷಣ ತಡೆಯಾಜ್ಞೆ ವಿಧಿಸಬೇಕು ಎಂದು ಬಿಸಿಸಿಐ ತನ್ನ ಮೇಲ್ಮನವಿಯಲ್ಲಿ ಕೋರಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ನಡೆದಿರುವ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದ ವಿಚಾರಣೆಗೆ ಬಿಸಿಸಿಐ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಟಿ. ಜಯರಾಮ ಚೌಟ ಮತ್ತು ಆರ್. ಬಾಲಸುಬ್ರಮಣ್ಯನ್ ಅವರನ್ನೊಳಗೊಂಡ ಆಯೋಗ ರಚಿಸಿತ್ತು.

ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ್ದ ಆಯೋಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಗುರುನಾಥ್ ಮೇಯಪ್ಪನ್ (ಎನ್. ಶ್ರೀನಿವಾಸನ್ ಅಳಿಯ)  ಮತ್ತು ರಾಜಸ್ತಾನ ರಾಯಲ್ಸ್ ತಂಡದ ಸಹ ಮಾಲೀಕ ರಾಜ್ ಕುಂದ್ರಾ ಅವರಿಗೆ `ಕ್ಲೀನ್‌ಚಿಟ್' ನೀಡಿತ್ತು. ಇದರಿಂದ ಎನ್. ಶ್ರೀನಿವಾಸನ್ ಮತ್ತೆ ಬಿಸಿಸಿಐ ಅಧ್ಯಕ್ಷರಾಗಲು ಸಿದ್ಧತೆ ನಡೆಸಿದ್ದರು.

ಆದರೆ ಬಿಹಾರ ಕ್ರಿಕೆಟ್ ಸಂಸ್ಥೆ ಹಾಗೂ ಅದರ ಕಾರ್ಯದರ್ಶಿ ಆದಿತ್ಯ ವರ್ಮ ತನಿಖಾ ಆಯೋಗದ ರಚನೆಯನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ತನಿಖಾ ಆಯೋಗವು `ಅಸಾಂವಿಧಾನಿಕ' ಎಂದು ಜುಲೈ 30 ರಂದು ನೀಡಿದ್ದ ತನ್ನ ತೀರ್ಪಿನಲ್ಲಿ ತಿಳಿಸಿತ್ತು. ಬಿಸಿಸಿಐ ಸ್ವಂತ ನಿಯಮ ಉಲ್ಲಂಘಿಸಿ ಆಯೋಗ ರಚಿಸಿದೆ ಎಂದು ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿತ್ತು.

ಹೈಕೋರ್ಟ್ ತೀರ್ಪು ಬಿಸಿಸಿಐ ಹಾಗೂ ಎನ್. ಶ್ರೀನಿವಾಸನ್‌ಗೆ ಹಿನ್ನಡೆ ಉಂಟುಮಾಡಿತ್ತು. ಆಗಸ್ಟ್ 2 ರಂದು ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಬಾಂಬೆ ಹೈಕೋರ್ಟ್ ತೀರ್ಪಿನ ಬಗ್ಗೆ ಚರ್ಚೆ ನಡೆಸಿ, ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT