ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂ ತಡೆ; ಸಂಸದೆ ಶಾಂತಾ ನಿರಾಳ

Last Updated 26 ಜೂನ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಬಳ್ಳಾರಿ ಲೋಕಸಭಾ ಸದಸ್ಯೆ ಜೆ.ಶಾಂತಾ ಅವರ ಆಯ್ಕೆ  ಅನೂರ್ಜಿತಗೊಳಿಸಿರುವ ರಾಜ್ಯ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿದೆ. ಇದರಿಂದ ಶಾಂತಾ ಸದ್ಯಕ್ಕೆ ನಿರಾಳರಾಗಿದ್ದಾರೆ.

`ಲೋಕಸಭೆ ಕಲಾಪದಲ್ಲಿ ಶಾಂತಾ ಭಾಗವಹಿಸಬಹುದು. ಆದರೆ, ಮತದಾನದಲ್ಲಿ ಪಾಲ್ಗೊಳ್ಳುವಂತಿಲ್ಲ. ಯಾವುದೇ ವಿಧದ ಭತ್ಯೆಗಳನ್ನು ತೆಗೆದುಕೊಳ್ಳುವಂತಿಲ್ಲ~ ಎಂದು ನ್ಯಾ. ಎಚ್. ಎಲ್. ಗೋಖಲೆ ಮತ್ತು ನ್ಯಾ. ರಂಜನ್‌ಪ್ರಕಾಶ್ ದೇಸಾಯಿ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠ ಹೇಳಿದೆ.

ಬಳ್ಳಾರಿ (ಪರಿಶಿಷ್ಟ ಪಂಗಡ ಮೀಸಲು) ಲೋಕಸಭಾ ಕ್ಷೇತ್ರದಲ್ಲಿನ ಚುನಾವಣಾ ಅಕ್ರಮಗಳ ಹಿನ್ನೆಲೆಯಲ್ಲಿ ಹೈಕೋರ್ಟ್ ಜೂನ್11ರಂದು ಶಾಂತಾ ಸದಸ್ಯತ್ವ ಅನರ್ಹಗೊಳಿಸಿತ್ತು. ಈ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿರುವ ವಿಶೇಷ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಅಂಗೀಕರಿಸಿದೆ.

`ಶಾಂತಾ ಆಯ್ಕೆಯನ್ನು ಬದಿಗೊತ್ತಿ ಮತಗಳ ಮರು ಎಣಿಕೆಗೆ ಹೈಕೋರ್ಟ್ ನೀಡಿರುವ ಆದೇಶ ಕಾನೂನಿನ ಉಲ್ಲಂಘನೆ ಆಗಿದೆ. ಚುನಾವಣಾ ತಕರಾರು ಅರ್ಜಿ ಸಲ್ಲಿಸಿರುವ ಕಾಂಗ್ರೆಸ್ ಕಾರ್ಯಕರ್ತ ಎಂ. ಚಂದ್ರೇಗೌಡ ತಮ್ಮ ಆರೋಪಗಳಿಗೆ ಪೂರಕವಾದ ದಾಖಲೆ ಒದಗಿಸಿಲ್ಲ~ ಎಂದು ಅರ್ಜಿದಾರರ ಪರ ವಕೀಲರಾದ ಮಣಿಂದರ್‌ಸಿಂಗ್ ಹಾಗೂ ಬಾಲಾಜಿ ಶ್ರೀನಿವಾಸನ್ ವಾದಿಸಿದರು. ಈ ಕಾರಣಕ್ಕೆ ಹೈಕೋರ್ಟ್ ತೀರ್ಪನ್ನು ಬದಿಗೊತ್ತಬೇಕೆಂದು ಅವರು ಮಾಡಿದ ಮನವಿಗೆ ಸುಪ್ರೀಂಕೋರ್ಟ್ ಮನ್ನಣೆ ನೀಡಲಿಲ್ಲ.

2009ರಲ್ಲಿ ನಡೆದ ಬಳ್ಳಾರಿ ಲೋಕಸಭಾ ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ನಡೆದ ಅಕ್ರಮಗಳ ಹಿನ್ನೆಲೆಯಲ್ಲಿ ಶಾಂತಾ ಅವರ ಆಯ್ಕೆಯನ್ನು ಅನೂರ್ಜಿತಗೊಳಿಸಬೇಕೆಂದು ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಭಾಗಶಃ ಅಂಗೀಕರಿಸಿದ್ದರು. ಶಾಂತಾ ಆಯ್ಕೆಯನ್ನು ಅನೂರ್ಜಿತಗೊಳಿಸಿದ ನ್ಯಾಯಮೂರ್ತಿಗಳು ನಾಲ್ಕು ವಾರದಲ್ಲಿ ಮತ ಎಣಿಕೆ ಪೂರ್ಣಗೊಳಿಸಿ ಹೊಸದಾಗಿ ಫಲಿತಾಂಶ ಪ್ರಕಟಿಸುವಂತೆ ಚುನಾವಣಾ ಅಧಿಕಾರಿಗೆ ಸೂಚಿಸಿದ್ದಾರೆ.

ಮಾಜಿ ಸಚಿವ ಬಿ. ಶ್ರೀರಾಮುಲು ಅವರ ಸೋದರಿ ಶಾಂತಾ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಅವರನ್ನು ಅತ್ಯಲ್ಪ ಮತಗಳ ಅಂತರದಿಂದ ಸೋಲಿಸಿ ಲೋಕಸಭೆಗೆ ಆಯ್ಕೆ ಆಗಿದ್ದಾರೆ.
ಬಳ್ಳಾರಿ ಲೋಕಸಭಾ ಕ್ಷೇತ್ರದ ಮರು ಮತ ಎಣಿಕೆ ಆದೇಶಕ್ಕೆ ಸಮರ್ಥನೆ ನೀಡಿರುವ ಹೈಕೋರ್ಟ್ ನ್ಯಾಯಮೂರ್ತಿಗಳು, `15ನೇ ಸುತ್ತಿನವರೆಗೂ ಎಲ್ಲವೂ ಸುಸೂತ್ರವಾಗಿಯೇ ಇತ್ತು.

16ನೇ ಸುತ್ತಿನ ಎಣಿಕೆ ಆರಂಭ ಆಗುತ್ತಿದ್ದಂತೆ ಚುನಾವಣಾ ಅಧಿಕಾರಿಗಳಿಗೆ ಒಂದೇ ಸಮನೆ ದೂರವಾಣಿ ಕರೆಗಳು ಬರಲಾರಂಭಿಸಿದವು. ಅವರು ಮೊಬೈಲ್ ಹಿಡಿದು ಪದೇ ಪದೇ ಪಕ್ಕದ ಕೋಣೆಗೆ ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಮತ ವಿವರಗಳು ಫಲಕದಲ್ಲಿ ಪ್ರದರ್ಶನಗೊಳ್ಳಲಿಲ್ಲ. ಬಳಿಕ ಶಾಂತಾ ಪರ ಬಿಜೆಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಮತಗಳ ಮರು ಎಣಿಕೆಗೆ ಮಾಡಿದ ಮನವಿಗೆ ಪುರಸ್ಕಾರ ಸಿಗಲಿಲ್ಲ~ ಎಂಬ ಅರ್ಜಿದಾರರ ವಾದವನ್ನು ಒಪ್ಪಿದ್ದಾರೆ.

`ಇದನ್ನು ಗಮನಿಸಿದರೆ ಮತ ಎಣಿಕೆ ವೇಳೆ ಅಕ್ರಮ ನಡೆದಿರಬಹುದು ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಶಾಂತಾ ಬರೀ 2,243 ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ. ಆದ್ದರಿಂದ ಮರು ಎಣಿಕೆ ಅಗತ್ಯ~ ಎಂದು ಹೈಕೋರ್ಟ್ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಹಿಂದುಳಿದ ವರ್ಗಕ್ಕೆ ಸೇರಿದ ಬೋಯ ಜಾತಿಯ ಶಾಂತಾ ವಾಲ್ಮೀಕಿ ಎಂದು ಸುಳ್ಳು ಜಾತಿ ಪ್ರಮಾಣಪತ್ರ ನೀಡಿ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ ಎಂಬ ಚಂದ್ರೇಗೌಡ ಅವರ ವಾದವನ್ನು ಹೈಕೋರ್ಟ್ ತಳ್ಳಿಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT