ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂ ಸೂಚನೆಗೆ ಸ್ವಾಗತ

Last Updated 20 ಜನವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅದಿರು ಸಂಪತ್ತು ಲೂಟಿ ತಡೆಗಟ್ಟುವ ಸಂಬಂಧ ಹೊಸ ಅದಿರು ನೀತಿ ರೂಪಿಸುವಂತೆ ಸುಪ್ರೀಂ ಕೋರ್ಟ್ ಕೊಟ್ಟಿರುವ ಆದೇಶವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ವಾಗತಿಸಿದರು.

ಬಜೆಟ್ ಪೂರ್ವ ಸಭೆ ನಂತರ ಅವರು ಗುರುವಾರ ಸುದ್ದಿಗಾರರ ಜತೆ ಮಾತನಾಡಿದರು. ‘ಈ ಕೆಲಸ ನಡೆಯಬೇಕು ಎಂದು ನಾವು ಹಿಂದೆಯೇ ಕೇಂದ್ರ ಸರ್ಕಾರಕ್ಕೆ ಹೇಳಿದ್ದೆವು. ನಮ್ಮ ಸಂಪತ್ತು ನಮಗೆ ಉಳಿಯಬೇಕು. ಹೀಗಾಗಿ ಅದಿರು ಲೂಟಿಯನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವಂತೆ ನಾವು ಪ್ರಧಾನಿ ಸಿಂಗ್ ಅವರಿಗೆ ಮನವಿ ಮಾಡಿದ್ದೆವು. ಆದರೆ ಸೂಕ್ತ ಕ್ರಮ ಕೈಗೊಳ್ಳುವ ಕೆಲಸ ಕೇಂದ್ರ ಸರ್ಕಾರದಿಂದ ಆಗಲಿಲ್ಲ’ ಎಂದು ವಿಷಾದಿಸಿದರು.

ಪ್ರಧಾನಿಯವರು ಇನ್ನಾದರೂ ಎಲ್ಲ ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳ ಸಭೆ ಕರೆದು ಈ ಕುರಿತು ಚರ್ಚಿಸಬೇಕು. ಅದಿರು ಸಂಪತ್ತನ್ನು ಉಳಿಸಲು ಅಗತ್ಯವಾದ ನೀತಿಯನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯಪಾಲರು ತಮ್ಮ ವಿರುದ್ಧ ವೊಕದ್ದಮೆ ದಾಖಲಿಸಲು ಅನುಮತಿ ನೀಡುತ್ತಾರೆನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ‘ರಾಜ್ಯಪಾಲರನ್ನು ಕಾಂಗ್ರೆಸ್‌ನವರಿಗಿಂತ ಹೆಚ್ಚಾಗಿ ಜೆಡಿಎಸ್‌ನವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ರಾಜಕೀಯ ಸಮಸ್ಯೆಯನ್ನು ಹುಟ್ಟು ಹಾಕಲು ಅಪ್ಪ-ಮಕ್ಕಳು ಪ್ರಯತ್ನಿಸುತ್ತಿದ್ದಾರೆ’ ಎಂದು ದೂರಿದರು.

ರಾಷ್ಟ್ರಪತಿಗೆ ದೂರು: ‘ರಾಜ್ಯಪಾಲರ ನಡೆ ಮತ್ತು ಪ್ರತಿಪಕ್ಷಗಳ ಕ್ರಮದ ಬಗ್ಗೆ ನಮ್ಮ ಸಂಸದರು ಮತ್ತು ಪಕ್ಷದ  ಮುಖಂಡರು ರಾಷ್ಟ್ರಪತಿಗಳಿಗೆ ಇದೇ 24ರಂದು ದೂರು ನೀಡಲಿದ್ದಾರೆ. ಅಲ್ಲಿ ಎಲ್ಲವನ್ನೂ ವಿವರಿಸಿ ಹೇಳಲಾಗುವುದು’ ಎಂದರು.

ಪಕ್ಷದ ರಾಷ್ಟ್ರೀಯ ಮುಖಂಡರ ಸಲಹೆ ಪ್ರಕಾರ ತುರ್ತು ಸಂಪುಟ ಸಭೆ ಕರೆದು ನಿರ್ಣಯ ತೆಗೆದುಕೊಳ್ಳಲಾುತು. ಮುಂದೆಯೂ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT