ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂಕೋರ್ಟ್‌ಗೆ ಗಿಲಾನಿ ಹಾಜರು

Last Updated 19 ಜನವರಿ 2012, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ಪಾಕಿಸ್ತಾನದ ಪ್ರಧಾನಿ ಯೂಸುಫ್ ರಜಾ ಗಿಲಾನಿ  ಗುರುವಾರ ಖುದ್ದಾಗಿ ಸುಪ್ರೀಂಕೋರ್ಟ್ ಎದುರು ಹಾಜರಾದರು.

ನಿರೀಕ್ಷೆಯಂತೆ ಗಿಲಾನಿ ಅವರು ನ್ಯಾಯಮೂರ್ತಿ ನಸಿರ್-ಉಲ್-ಮುಲ್ಕ್ ನೇತೃತ್ವದ ಏಳು ನ್ಯಾಯಮೂರ್ತಿಗಳ ಪೀಠದ ಮುಂದೆ ಬಂದರು.  ಇದರಿಂದ ಸಂತೃಪ್ತರಾದ ನ್ಯಾಯಮೂರ್ತಿಗಳು, ಮುಂದಿನ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಖುದ್ದು ಹಾಜರಾತಿಯಿಂದ ಅವರಿಗೆ ವಿನಾಯಿತಿ ನೀಡಿ, ವಿಚಾರಣೆಯನ್ನು ಫೆಬ್ರುವರಿ 1ಕ್ಕೆ ಮುಂದೂಡಿದರು. ಇದರಿಂದ ಗಿಲಾನಿ ಕೊಂಚ ಮಟ್ಟಿಗೆ ನಿರಾಳರಾದಂತೆ ಕಂಡುಬಂದರು.

ನ್ಯಾಯಾಲಯಕ್ಕೆ ಖುದ್ದು ಹಾಜರಾದ ಪ್ರಧಾನಿಯ ನಿರ್ಧಾರವನ್ನು ಪ್ರಶಂಸಿಸಿದ ನ್ಯಾಯಮೂರ್ತಿಗಳು, ಇದು ನ್ಯಾಯಾಂಗದ ಪ್ರಭುತ್ವವನ್ನು ಎತ್ತಿ ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ಮರು ತನಿಖೆಗೆ ತಾವು ಆದೇಶಿಸಿದರೂ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿರಲು ಕಾರಣವೇನು ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು.

ನ್ಯಾಯಾಂಗದ ಬಗ್ಗೆ ತಮಗೆ ಸಂಪೂರ್ಣ ಗೌರವವಿದ್ದು, ಆದೇಶ ಉಲ್ಲಂಘಿಸುವ ಬಗ್ಗೆ ಕನಸು, ಮನಸಿನಲ್ಲಿಯೂ ಯೋಚಿಸಿಲ್ಲ. ಅಧ್ಯಕ್ಷರು ಸಂವಿಧಾನದತ್ತ ರಿಯಾಯಿತಿಗಳನ್ನು ಹೊಂದಿರುವುದರಿಂದ ಅವರ ವಿರುದ್ಧ ತನಿಖೆ ನಡೆಸುವ ಅಧಿಕಾರ ಸರ್ಕಾರಕ್ಕಿಲ್ಲ ಎಂದು ಸಮರ್ಥಿಸಿಕೊಂಡರು. ಬಹುತೇಕ ರಾಷ್ಟ್ರಗಳ ರಾಷ್ಟ್ರಪತಿ ಅಥವಾ ಅಧ್ಯಕ್ಷರು ಇಂತಹ ರಿಯಾಯಿತಿ ಹೊಂದಿರುತ್ತಾರೆ ಎಂದು ತಿಳಿಸಿದರು.

ನ್ಯಾಯಾಂಗ ನಿಂದನೆ ಆರೋಪದ ಮೇಲೆ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾದ ಎರಡನೇ ಪ್ರಧಾನಿಯಾಗಿರುವ ಗಿಲಾನಿ, ಸ್ವತಃ ಕಾರು ಚಲಾಯಿಸಿಕೊಂಡು  ತಮ್ಮ ವಕೀಲ ಐತಜಾಜ್ ಅಹ್ಸಾನ್ ಮತ್ತು ಬೆಂಬಲಿಗರೊಂದಿಗೆ ನ್ಯಾಯಾಲಯಕ್ಕೆ ಆಗಮಿಸಿದರು. ಐದು ನಿಮಿಷ ನ್ಯಾಯಮೂರ್ತಿಗಳ ಮುಂದೆ ಹೇಳಿಕೆ ನೀಡಿದ ಅವರು ದೇಶದ ಸಂವಿಧಾನ, ನ್ಯಾಯಾಂಗದ ಆದೇಶ ಮತ್ತು ಆಶಯಗಳಿಗೆ ಅನುಗುಣವಾಗಿ ತಮ್ಮ ಸರ್ಕಾರ ನಡೆಯಲಿದೆ ಎಂದು ವಚನ ನೀಡಿದರು.

 ವಿಯೆನ್ನಾ ಒಡಬಂಡಿಕೆ ಅನ್ವಯ, ಸ್ವಿಸ್ ಸರ್ಕಾರವು ಸಾಂವಿಧಾನಿಕ ರಿಯಾಯಿತಿ ಹೊಂದಿರುವ ಜರ್ದಾರಿ ಅವರ ವಿರುದ್ಧ ಯಾವುದೇ ಕ್ರಮ ಜರುಗಿಸಲು ಮುಂದಾಗುವುದಿಲ್ಲ, ಹೀಗಾಗಿ ಸ್ವಿಸ್ ಸರ್ಕಾರಕ್ಕೆ ಪತ್ರ ಬರೆಯುವಂತೆ ಪಾಕಿಸ್ತಾನ ಸರ್ಕಾರದ ಮೇಲೆ ನ್ಯಾಯಾಲಯ ಒತ್ತಡ ಹೇರಬಾರದು ಎಂದು ಅಹ್ಸಾನ್ ಮನವಿ ಮಾಡಿದರು. ಈ ಕುರಿತು ಮುಂದಿನ ವಿಚಾರಣೆ ವೇಳೆ ವಿಸ್ತೃತ ಹೇಳಿಕೆ ನೀಡುವಂತೆ ನ್ಯಾಯಾಲಯ ಆದೇಶಿಸಿತು. ಸಂವಿಧಾನದ 248ನೇ ಕಲಂ ಅನ್ವಯ ಅಧ್ಯಕ್ಷರು ಸಂಪೂರ್ಣ ರಿಯಾಯಿತಿ ಹೊಂದಿದ್ದಾರೆ, ಇದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಅವರು ನಂತರ ಸುದ್ದಿಗಾರರಿಗೆ ತಿಳಿಸಿದರು.

ಭಾರಿ ಭದ್ರತೆ: ತಮ್ಮ ಹಾಜರಾತಿ ಬಗ್ಗೆ ಇದ್ದ ಎಲ್ಲ ಶಂಕೆಗಳನ್ನೂ ಹುಸಿಗೊಳಿಸಿದ ಪ್ರಧಾನಿಗೆ ಭಾರಿ ರಕ್ಷಣಾ ವ್ಯವಸ್ಥೆ ಮಾಡಲಾಗಿತ್ತು. ಹೆಲಿಕಾಪ್ಟರ್‌ಗಳು ಕಣ್ಗಾವಲು ಇರಿಸಿದ್ದವು. ಕಾರಿನಿಂದ ಇಳಿದ ಗಿಲಾನಿ ತಪಾಸಣಾ ಕಾರ್ಯ ಮುಗಿಸಿದ ಬಳಿಕ ನಡೆದುಕೊಂಡೇ ನ್ಯಾಯಾಲಯದ ನಾಲ್ಕನೇ ಹಾಲ್‌ಗೆ ತೆರಳಿದರು.

ಆಡಳಿತಾರೂಢ ಪಾಕಿಸ್ತಾನ ಪೀಪಲ್ಸ್ ಪಕ್ಷ ಮತ್ತು ಮಿತ್ರ ಪಕ್ಷಗಳ ಮುಖಂಡರು, ಸಚಿವರು ಪ್ರಧಾನಿಗೆ ಬೆಂಬಲ ಸೂಚಿಸಲು ನ್ಯಾಯಾಲಯ ಆವರಣದ ಹೊರಗೆ ಸೇರಿದ್ದರು. ಆರಂಭದಲ್ಲಿ ವಕೀಲರ ಗುಂಪೊಂದು ನ್ಯಾಯಾಂಗದ ಪರ ಮತ್ತು ಅಹ್ಸಾನ್ ಅವರ ವಿರುದ್ಧ ಘೋಷಣೆ ಕೂಗಿತು. ಇದನ್ನು ಹೊರತುಪಡಿಸಿದರೆ ಯಾವ ಅಹಿತಕರ ಘಟನೆ, ನಾಟಕೀಯ ಬೆಳವಣಿಗೆಗಳೂ ನಡೆಯಲಿಲ್ಲ. ಕೇವಲ ನೂರು ಮಾಧ್ಯಮ ಸಂಸ್ಥೆಗಳಿಗೆ ನ್ಯಾಯಾಲಯದ ಆವರಣ ಪ್ರವೇಶಿಸಲು ಪಾಸ್ ವಿತರಿಸಲಾಗಿತ್ತು. 

`ನಾನು ಸಂಕಷ್ಟಗಳ ಮನುಷ್ಯ~

ಇಸ್ಲಾಮಾಬಾದ್ (ಪಿಟಿಐ): ರಾಜಕೀಯವಾಗಿ ಸಂಕಷ್ಟದ ಸ್ಥಿತಿ ಎದುರಿಸುತ್ತಿರುವ ಪ್ರಧಾನಿ ಯೂಸುಫ್ ರಜಾ ಗಿಲಾನಿ ತಮ್ಮನ್ನು  `ಸಂಕಷ್ಟಗಳ ಮನುಷ್ಯ~ ಎಂದು ಬಣ್ಣಿಸಿಕೊಂಡಿದ್ದಾರೆ. 

ಪಾಕಿಸ್ತಾನ ಪ್ರವಾಸದಲ್ಲಿದ್ದ ಭಾರತೀಯ ಸಂಸದರ ನಿಯೋಗ ಬುಧವಾರ ಸಂಜೆ ತಮ್ಮನ್ನು ಭೇಟಿಯಾದ ಸಂದರ್ಭದಲ್ಲಿ ಅವರು ತಮ್ಮನ್ನು ಈ ರೀತಿ ಗೇಲಿ ಮಾಡಿಕೊಂಡರು. ಭಾರತ- ಪಾಕಿಸ್ತಾನದ ಮಧ್ಯೆ ಉತ್ತಮ ಸ್ನೇಹ,  ದ್ವಿಪಕ್ಷೀಯ ಸಂಬಂಧ ಹೊಂದುವುದು ತಮ್ಮ ಬಹು ದಿನಗಳ ಕನಸು ಎಂದರು.

ದ್ವಿಪಕ್ಷೀಯ ಮಾತುಕತೆಯಿಂದ ಮಾತ್ರ ಶಾಂತಿ ಮತ್ತು ಸ್ಥಿರತೆ  ಸಾಧ್ಯ ಎಂದು ನಿಯೋಗದ ಪ್ರಮುಖರಾದ ಮಣಿಶಂಕರ್ ಅಯ್ಯರ್ ಮತ್ತು ಯಶವಂತ ಸಿನ್ಹಾ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT