ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂಕೋರ್ಟ್‌ನಲ್ಲಿ ಜಯಾ ಪ್ರಶ್ನೆ

ಪ್ರಾಸಿಕ್ಯೂಟರ್‌ ಬದಲಾವಣೆ ವಿವಾದ
Last Updated 20 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ: ಆದಾಯ ಮೀರಿ ಆಸ್ತಿ ಸಂಪಾದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ಮೇಲಿನ ಪ್ರಕರಣದಲ್ಲಿ ಜಿ. ಭವಾನಿ ಸಿಂಗ್‌ ಅವರನ್ನು ಪ್ರಾಸಿಕ್ಯೂಟರ್‌ ಆಗಿ ನೇಮಿಸಿದ ಹೈಕೋರ್ಟ್‌ ಹಿಂದಿನ ಮುಖ್ಯ ನ್ಯಾಯಮೂರ್ತಿಗಳನ್ನು ಟೀಕಿಸಿರುವ ಹಾಲಿ ಮುಖ್ಯ ನ್ಯಾಯಮೂರ್ತಿಗಳ ಕ್ರಮವನ್ನು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಪ್ರಶ್ನಿಸಿದ್ದಾರೆ.

ಇದರಿಂದಾಗಿ ಭವಾನಿಸಿಂಗ್‌ ಬದಲಾವಣೆ ವಿವಾದವಾಗಿ ಪರಿಣಮಿಸಿದೆ. ‘ಇದರ ಹಿಂದೆ ರಾಜಕೀಯ ಉದ್ದೇಶವಿದೆ. ಅಲ್ಲದೆ, ಪ್ರಕರಣ ಇತ್ಯರ್ಥ ಇನ್ನಷ್ಟು ವಿಳಂಬ ಆಗಲಿದೆ’ ಎಂದು ಜಯಾ ವಾದಿಸಿದ್ದಾರೆ.

‘ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಜತೆ ಸರಿಯಾಗಿ ಸಮಾಲೋಚಿಸದೆ ಭವಾನಿ ಸಿಂಗ್‌ ಅವರನ್ನು ಬದಲಾವಣೆ ಮಾಡಲಾಗಿದೆ’ ಎಂದು ಜಯಲಲಿತಾ ಈ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದ ಬಳಿಕ ಕರ್ನಾಟಕ ಸರ್ಕಾರ ತನ್ನ ಸೆಪ್ಟೆಂಬರ್‌ 6ರ ಅಧಿಸೂಚನೆಯನ್ನು ಹಿಂದಕ್ಕೆ ಪಡೆದಿತ್ತು.

ಅನಂತರ ಕರ್ನಾಟಕ ಸರ್ಕಾರ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ಎಚ್‌. ವಘೇಲ ಅವರನ್ನು ಸಂಪರ್ಕಿಸಿತು. ಭವಾನಿಸಿಂಗ್‌ ಅವರನ್ನು ಸರಿಯಾದ ವಿಧಿವಿಧಾನಗಳನ್ನು ಅನುಸರಿಸದೆ ನೇಮಕ ಮಾಡಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಸೆಪ್ಟೆಂಬರ್‌ 14ರ ಆದೇಶದಲ್ಲಿ ಹೇಳಿದ್ದರು.

ಪ್ರಾಸಿಕ್ಯೂಟರ್‌ ಹುದ್ದೆಗೆ ಶಿಫಾರಸು ಆಗಿದ್ದ ನಾಲ್ಕು ಹೆಸರುಗಳಲ್ಲಿ ಸಿಂಗ್‌ ಅವರ ಹೆಸರು ಇರಲಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ಆದರೂ ಫೆಬ್ರುವರಿ 2ರಂದು ಭವಾನಿಸಿಂಗ್‌ ಅವರನ್ನು ನೇಮಿಸಲಾಗಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದರು.

ನ್ಯಾ. ಬಿ.ಎಸ್‌. ಚೌಹಾಣ್‌ ಮತ್ತು ನ್ಯಾ. ಎಸ್‌.ಎ ಬೋಬ್ಡೆ ಅವರ ನ್ಯಾಯಪೀಠದ ಮುಂದೆ ಸಲ್ಲಿಸಲಾದ ಮುಖ್ಯ ನ್ಯಾಯಮೂರ್ತಿ ಪತ್ರವನ್ನು ಪ್ರಶ್ನಿಸಿದ ಜಯಲಲಿತಾ ವಕೀಲ ಶೇಖರ್‌ ನಾಫಡೆ, ‘ಹಿಂದಿನ ಮುಖ್ಯ ನ್ಯಾಯಮೂರ್ತಿ ಯಾಂತ್ರಿಕೃತವಾಗಿ ಆದೇಶ ನೀಡಿದ್ದಾರೆ  ಎಂದು ಈಗಿನ ಮುಖ್ಯ ನ್ಯಾಯಮೂರ್ತಿ ಹೇಳಲು ಹೇಗೆ ಸಾಧ್ಯ’ ಎಂದು ಕೇಳಿದರು.

ಹಾಲಿ ನ್ಯಾಯಮೂರ್ತಿ ಹಿಂದಿನ ನ್ಯಾಯಮೂರ್ತಿಗಳನ್ನು ಟೀಕಿಸಲು ಹೇಗೆ ಸಾಧ್ಯ ಎಂದು ಕೇಳಿದರು. ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ನ್ಯಾಯಪೀಠ, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳನ್ನು ವಿವಾದದಲ್ಲಿ ಎಳೆದು ತರಬಾರದು ಎಂದು ಸೂಚಿಸಿತು.

ಆದರೆ, ನ್ಯಾಯಪೀಠದ ಸೂಚನೆಯನ್ನು ಕಿವಿ ಮೇಲೆ ಹಾಕಿಕೊಳ್ಳದ ನಾಫಡೆ ತಮ್ಮ ವಾದ ಮುಂದುವರಿಸಿದರು. ‘ಮುಖ್ಯ ನ್ಯಾಯಮೂರ್ತಿ ಹುದ್ದೆ ಒಂದು ಸಂಸ್ಥೆ. ಈ ಹಿನ್ನೆಲೆಯಲ್ಲಿ ಅದನ್ನು ಪ್ರಶ್ನಿಸಲು ನಮಗೆ ಅಧಿಕಾರವಿದೆ’ ಎಂದರು.

‘ಹೊಸ ಪ್ರಾಸಿಕ್ಯೂಟರ್‌ ನೇಮಕದಿಂದ ಪ್ರಕರಣದ ಇತ್ಯರ್ಥ ವಿಳಂಬವಾಗಲಿದೆ. ಈ ಕಾರಣಕ್ಕೆ ನಮ್ಮ ಕಕ್ಷಿಗಾರರು ಏಕೆ ಪರದಾಡಬೇಕು’ ಎಂದು ನ್ಯಾಯಪೀಠಕ್ಕೆ ನಾಫಡೆ ಕೇಳಿದರು. ಭವಾನಿಸಿಂಗ್‌ ನೇಮಕಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸಲು ಆದೇಶಿಸಬೇಕೆಂದು ಅವರು ಮನವಿ ಮಾಡಿದರು.

ಕರ್ನಾಟಕದ ಪರ ಹಾಜರಾದ ಅಟಾರ್ನಿ ಜನರಲ್‌ ಜಿ.ಇ.ವಾಹನ್ವತಿ ಅವರು, ಭವಾನಿಸಿಂಗ್‌ ನೇಮಕ ರದ್ದು ಮಾಡುವ ಸಂಬಂಧದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹೊಸ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಅರ್ಜಿಯನ್ನು ತಿದ್ದುಪಡಿ ಮಾಡಲು ಕೋರ್ಟ್‌ ಜಯಲಲಿತಾ ಅವರಿಗೆ ಅನುಮತಿ ನೀಡಿತು. ಪ್ರಕರಣದ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.

ಜಯಲಲಿತಾ 1991ರಿಂದ 96ರ ನಡುವೆ ತಮಿಳುನಾಡು ಮುಖ್ಯಮಂತ್ರಿ ಆಗಿದ್ದಾಗ ಆದಾಯ ಮೀರಿ 66.65ಕೋಟಿ ಮೌಲ್ಯದ ಆಸ್ತಿ ಹೊಂದಿದ್ದ ಆರೋಪಕ್ಕೆ ಈ ಪ್ರಕರಣ ಸಂಬಂಧಿಸಿದೆ. ಪ್ರಕರಣದ ವಿಚಾರಣೆ ಅಂತಿಮ ಹಂತ ಮುಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT