ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂಗೆ ಗಿಲಾನಿ ತಿರುಗೇಟು

Last Updated 9 ಮೇ 2012, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ನ್ಯಾಯಾಲಯದ ಆದೇಶ ಉಲ್ಲಂಘನೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನಿಂದ ವಜಾ ಎಚ್ಚರಿಕೆಗೆ ಗುರಿಯಾಗಿರುವ ಪಾಕಿಸ್ತಾನದ ಪ್ರಧಾನಿ ಯೂಸುಫ್ ರಜಾ ಗಿಲಾನಿ, ಸಂವಿಧಾನಬಾಹಿರ ರೀತಿಯಲ್ಲಿ ತಮ್ಮನ್ನು ಬಲವಂತವಾಗಿ ಅಧಿಕಾರದಿಂದ ಕೆಳಕ್ಕೆ ಇಳಿಸಲು ಯಾರಿಗೂ ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಇದೇ ವೇಳೆ, ನ್ಯಾಯಾಲಯ ಆದೇಶ ಉಲ್ಲಂಘಿಸಿದ ತೀರ್ಪಿನ ವಿರುದ್ಧ ತಾವು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಎಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿ, ಬ್ರಿಟನ್‌ಗೆ ಅಧಿಕೃತ ಭೇಟಿ ನೀಡಿರುವ ಗಿಲಾನಿ ತಮ್ಮ ಜತೆ ತೆರಳಿರುವ ಸುದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ.

`ಪ್ರಧಾನಿ ಅವರನ್ನು ಪದಚ್ಯುತಗೊಳಿಸಲು ಅನುಸರಿಸಬೇಕಾದ ಕ್ರಮದ ಬಗ್ಗೆ ಸಂವಿಧಾನದಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ. ಅದನ್ನು ಹೊರತುಪಡಿಸಿ ಬೇರ‌್ಯಾವುದೇ ಮಾರ್ಗದಲ್ಲಿ ತಮ್ಮನ್ನು ಪದಚ್ಯುತಗೊಳಿಸಲಾಗದು. ನಾನು ಎಲ್ಲ ನಿರ್ಧಾರಗಳನ್ನೂ ಸಂವಿಧಾನಕ್ಕೆ ಅನುಗುಣವಾಗಿಯೇ ತೆಗೆದುಕೊಂಡಿದ್ದೇನೆ.

ಪ್ರಧಾನಿ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ಸಂವಿಧಾನದ 248 (1)ನೇ ಪರಿಚ್ಛೇದದಡಿ ಸಂಪೂರ್ಣ ಪ್ರತಿರಕ್ಷೆ ಒದಗಿಸುತ್ತದೆ~ ಎಂದು ಅವರು ವಿವರಿಸಿದ್ದಾರೆ.

ರಾಷ್ಟಾಧ್ಯಕ್ಷ ಆಸಿಫ್ ಅಲಿ ಜರ್ದಾರಿ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ಮರು ವಿಚಾರಣೆ ಕೈಗೆತ್ತಿಕೊಳ್ಳಬೇಕೆಂಬ ತನ್ನ ಆದೇಶ ಉಲ್ಲಂಘಿಸಿದ್ದಕ್ಕಾಗಿ, ನ್ಯಾಯಾಲಯ ಏ.26ರಂದು ಗಿಲಾನಿ ಅವರಿಗೆ ಸಾಂಕೇತಿಕ ಶಿಕ್ಷೆ ವಿಧಿಸಿ,  ಸೆಕೆಂಡುಗಳ ಕಾಲ ಕಟಕಟೆಯಲ್ಲಿ ನಿಲ್ಲಿಸಿತ್ತು.

ಅಂದಿನ ಆದೇಶದ ಸಂಪೂರ್ಣ ವಿವರವನ್ನು ಕೋರ್ಟ್ ಮಂಗಳವಾರ ಬಹಿರಂಗಗೊಳಿಸಿದ್ದು, ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಕ್ಕಾಗಿ, ಗಿಲಾನಿ ಅವರ ಸಂಸತ್ ಸದಸ್ವತ್ವವನ್ನು ಐದು ವರ್ಷ ಅವಧಿಯವರೆಗೆ ವಜಾಗೊಳಿಸಲು ಅವಕಾಶವಿದೆ ಎಂದು ಎಚ್ಚರಿಕೆ ನೀಡಿತ್ತು.

ತಮ್ಮ ರಾಜೀನಾಮೆಗಾಗಿ ಒತ್ತಾಯಿಸುತ್ತಿರುವ ವಿರೋಧ ಪಕ್ಷಗಳ ಬೇಡಿಕೆಯನ್ನೂ ಗಿಲಾನಿ ತಳ್ಳಿಹಾಕಿದ್ದಾರೆ. ರಾಷ್ಟ್ರೀಯ ಸಂಸತ್ತಿನ ಸ್ಪೀಕರ್‌ಗೆ ಮಾತ್ರ ತಮ್ಮ ವಜಾ ಬಗ್ಗೆ ತೀರ್ಮಾನ ಕೈಗೊಳ್ಳುವ ಅಧಿಕಾರವಿದೆ ಎಂದು ಅವರು ಸವಾಲು ಎಸೆದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT