ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಬ್ರಹ್ಮಣ್ಯ: ಬಿಗಿಭದ್ರತೆ ಮಧ್ಯೆ ಮಡೆಸ್ನಾನ

Last Updated 6 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ನಾಗಾರಾಧನೆಯ ಮೂಲ ಕೇಂದ್ರವಾದ ಕುಕ್ಕೆ ಸುಬ್ರಹ್ಮಣ್ಯ ದೇವ­ಸ್ಥಾನದ ಚಂಪಾಷಷ್ಟಿ ಜಾತ್ರೆಯ ಆರಂಭ­ದ ಚೌತಿಯ ದಿನವಾದ ಶುಕ್ರವಾರ ಮಧ್ಯಾಹ್ನ ಮಡೆ ಮಡೆ ಸ್ನಾನ ಸೇವೆಯು ಸಾಂಗವಾಗಿ ನೆರವೇರಿತು.

ದೇವಳದ ಹೊರಾಂಗಣದಲ್ಲಿ ಮಹಾ­ಪೂಜೆ ಬಳಿಕ ಮಧ್ಯಾಹ್ನ ಬ್ರಾಹ್ಮಣರಿಗೆ ನೈವೇದ್ಯ ಪ್ರಸಾದ ನೀಡ­ಲಾಯಿತು. ಭೋಜನದ ಬಳಿಕ ಸುಮಾರು 200ಕ್ಕೂ ಹೆಚ್ಚು ಭಕ್ತರು ಉಂಡ ಎಂಜಲೆಲೆ ಮೇಲೆ ಉರುಳುವ ಮೂಲಕ ಮಡೆ ಮಡೆ ಸ್ನಾನ ಸೇವೆ ಸಲ್ಲಿಸಿದರು.

ಈ ಸೇವೆ ಕುರಿತು ವಿರೋಧವಿರುವ ಹಿನ್ನೆಲೆಯಲ್ಲಿ ಮತ್ತು ಯಥಾಸ್ಥಿತಿ ಕಾಪಾಡುವಂತೆ ಸುಪ್ರೀಂ­ಕೋರ್ಟ್ ಸೂಚನೆ ಇರುವುದರಿಂದ ದೇವಳ­ದಲ್ಲಿ ನಡೆಯುವ ಮಡೆಸ್ನಾನ ಸಂದರ್ಭ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ಇಲ್ಲಿ ನಡೆಯುವ, ಎಂಜಲೆಲೆ ಮೇಲೆ ಉರುಳುವ ಸೇವೆ ಅನಿಷ್ಟ ಪದ್ಧತಿ, ಇದನ್ನು ನಿಷೇಧಿಸುವಂತೆ ಎರಡು ವರ್ಷಗಳಿಂದ ಒಂದು ವರ್ಗದ ಜನರು ಆಗ್ರಹಿಸುತ್ತಾ ಬಂದಿದ್ದಾರೆ. ಮಡೆ ಸ್ನಾನ ಸೇವೆಯನ್ನು ಭಕ್ತರು ಸ್ವಂತ ಇಚ್ಛೆಯಿಂದ- ಇಷ್ಟಾನುಸಾರ ನಡೆಸುತ್ತಾ ಬಂದಿದ್ದಾರೆ. ಇದು ಹಿಂದಿನಿಂದಲೂ ನಡೆದು­ ಬಂದ ಸಂಪ್ರದಾಯ. ಅವರವರ ನಂಬಿಕೆ ಮೇಲೆ ನಡೆಯುವ ಮಡೆ ಸ್ನಾನ ನಡೆಸಲು ಯಾರೂ ಒತ್ತಾಯ ಹೇರಿಲ್ಲ. ನಂಬಿಕೆ ಮೇಲೆ ನಡೆಯುವ ಈ ಸೇವೆಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂಬ ವಾದ ಇನ್ನೊಂದು ವರ್ಗದ್ದಾಗಿದೆ.

ಎರಡು ವರ್ಷಗಳ ಹಿಂದೆ ಈ ಪದ್ಧತಿಯನ್ನು ನಿಷೇಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲು ಬಂದ ಸಂಘಟನೆ­ಯೊಂದರ ಮುಖಂಡರಿಗೆ ಸ್ಥಳೀಯ ದೇವಾಲಯಕ್ಕೆ ಸಂಬಂಧಿಸಿದ ಮಲೆಕುಡಿ­ಯ ಜನಾಂಗ­ದ ವ್ಯಕ್ತಿಗಳು ಹಲ್ಲೆ ನಡೆಸಿ, ಅಹಿತಕರ ಘಟನೆ ನಡೆದು ರಾಜ್ಯ­ದಾದ್ಯಂತ ಪರ–ವಿರೋಧ ಪ್ರತಿಭಟನೆ ನಡೆದಿ­ದ್ದವು.

ಅಂತಿಮವಾಗಿ ಪ್ರಕರಣ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿ ಯಥಾಸ್ಥಿತಿ ಕಾಪಾಡುವಂತೆ ಆದೇಶ ಬಂದುದರಿಂದ   ಸಂಪ್ರದಾಯದಂತೆ ಈ ಬಾರಿ­ಯೂ ಮಡೆ ಸ್ನಾನ ಸೇವೆ ಅಡೆತಡೆ ಇಲ್ಲದೆ ನಡೆಯು­ತ್ತಿದೆ. ಈ ಸೇವೆಯು ಶನಿವಾರವೂ ನಡೆಯಲಿದ್ದು ಹೆಚ್ಚಿನ ಸಂಖ್ಯೆಯ ಭಕ್ತರು ಈ ಸೇವೆಯಲ್ಲಿ ಪಾಲ್ಗೊ­ಳ್ಳುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT