ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಮನಾ ಸಿನಿಮಾ ಸಖ್ಯ

Last Updated 2 ಡಿಸೆಂಬರ್ 2012, 20:54 IST
ಅಕ್ಷರ ಗಾತ್ರ

ಸಾಂಸ್ಕೃತಿಕ ಲೋಕ ಮತ್ತು ಸಿನಿಮಾ ನಡುವೆ ಸೇತುವೆ ಇದ್ದ ದಿನಗಳನ್ನು `ಎದೆಗಾರಿಕೆ' ಮರುಕಳಿಸುವಂತೆ ಮಾಡಿದೆ ಎಂಬ ಖುಷಿ ನಿರ್ದೇಶಕಿ ಸುಮನಾ ಕಿತ್ತೂರು ಅವರದು.
`ಎದೆಗಾರಿಕೆ' ಚಿತ್ರಕ್ಕೆ ಸಿನಿಮಾ ಮತ್ತು ಸಾಂಸ್ಕೃತಿಕ ವಲಯಗಳಿಂದ ಏಕರೀತಿಯ ಪ್ರತಿಕ್ರಿಯೆಗಳು ಬರುತ್ತಿರುವುದು ಅವರ ಖುಷಿಗೆ ಕಾರಣ.

ಜೊತೆಗೆ ಪುಸ್ತಕವನ್ನು ಆಧರಿಸಿ ಸಿನಿಮಾ ರೂಪಿಸುತ್ತಿದ್ದ ದಿನಗಳು ಕಣ್ಮರೆಯಾಗುತ್ತಿದ್ದ ಕಾಲದಲ್ಲಿ `ಎದೆಗಾರಿಕೆ' ಮತ್ತೆ ಆ ದಿನಗಳತ್ತ ನೋಡುವಂತೆ ಮಾಡಿರುವುದು ಅವರ ಸಂತಸವನ್ನು ಇಮ್ಮಡಿಯಾಗಿಸಿದೆ.

ನಿರ್ದೇಶಕರಾದ ಕೆ.ಎಸ್.ಎಲ್. ಸ್ವಾಮಿ, `ದುನಿಯಾ' ಸೂರಿ, ನಾಗತಿಹಳ್ಳಿ ಚಂದ್ರಶೇಖರ್ ಜೊತೆಗೆ ದೇವನೂರು ಮಹಾದೇವ, ಸಿ. ಬಸವಲಿಂಗಯ್ಯ ಅಂಥವರು ಸಿನಿಮಾ ಪ್ರಶಂಸಿಸಿದ್ದಾರೆ. `ಪುಸ್ತಕ ಕೊಡುವ ಕಾವನ್ನು ಸಿನಿಮಾ ಹಿಡಿದುಕೊಟ್ಟಿದೆ' ಎಂಬುದು ಅವರೆಲ್ಲರ ಒಕ್ಕೊರಲ ಹೇಳಿಕೆಯಂತೆ.
`ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಒಂದೇ ಉದ್ದೇಶದಿಂದ ಮಾಡಿದ ಸಿನಿಮಾ ಇದು' ಎಂದು ಹೇಳುವ ಸುಮನಾ ಅವರಿಗೆ ಕತೆ ಬರೆದಿರುವ ಅಗ್ನಿ ಶ್ರೀಧರ್ ಅವರು ಒಬ್ಬ ಪ್ರೇಕ್ಷಕನೇ ಇರಲಿ ಅವನನ್ನು ಮೆಚ್ಚಿಸುವ ಪ್ರಯತ್ನ ಅದರಲ್ಲಿ ಇರಬೇಕು ಎಂದು ಹೇಳಿದ್ದ ಕಿವಿಮಾತು ಮನದಲ್ಲಿತ್ತು.

`ನಾನು ಆರಿಸಿಕೊಂಡಿದ್ದು ಕಟ್ಟುಕತೆ ಆಗಿರಲಿಲ್ಲ. ಸಾಂಸ್ಕೃತಿಕ ವಲಯದಲ್ಲಿ ಪ್ರತಿಯೊಬ್ಬರಿಗೂ ತಿಳಿದಿರುವ ಕೃತಿ ಅದು. ಕೊನೆಯಲ್ಲಿ ಸೋನು ಸಾಯುತ್ತನೆ ಎಂದು ಎಲ್ಲರಿಗೂ ಗೊತ್ತು. ಅದರಿಂದಲೇ ಸಿನಿಮಾದಲ್ಲಿ ಕುತೂಹಲ ಕಾಯ್ದುಕೊಳ್ಳಬೇಕು ಎಂಬ ಒತ್ತಡ ನನಗಿತ್ತು. ತಿಳಿದವರು ಸಿನಿಮಾ ನೋಡಿ ಇಂಥ ಪುಸ್ತಕ ಇಂಥ ಸಿನಿಮಾ ಆಗಬಾರದಿತ್ತು ಎನ್ನಬಾರದಲ್ಲವೇ?' ಎನ್ನುವ ಸುಮನಾ ಆ ಸವಾಲಿಗೆ ಎದೆಗೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಚಿತ್ರದ ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಸಮಯ ಮತ್ತು ಸಂಯಮ ನೀಡಿದ್ದ ಸುಮನಾಗೆ ಅದಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಮನಮುಟ್ಟುವಂತಿದೆಯಂತೆ. `ತಾಯಿಗೆ ಎಲ್ಲಾ ಮಕ್ಕಳೂ ಒಂದೇ. ಸಣ್ಣ ಪಾತ್ರವೇ ಇರಲಿ ದೊಡ್ಡಪಾತ್ರವೇ ಇರಲಿ ಅದಕ್ಕೆ ಸೂಕ್ತ ರೀತಿಯಲ್ಲಿ ಒತ್ತು ನೀಡುತ್ತಿದ್ದೆ. ಅಂತಿಮವಾಗಿ ಅದರ ಫಲಿತಾಂಶ ತೆರೆಯ ಮೇಲೆ ಕಾಣುತ್ತಿದೆ' ಎನ್ನುತ್ತಾರೆ.

`ತೆರೆಯ ಮೇಲೆ ಸಿನಿಮಾ ನೋಡಿದಾಗ ಅದು ಪರ್ಫೆಕ್ಟ್ ಎನಿಸಿದರೆ ಅಂದಿಗೆ ನಾವು ಸತ್ತಂತೆ. ಸಾಯುವ ತನಕ ಇನ್ನೂ ಸರಿ ಮಾಡಬಹುದಿತ್ತು ಎಂಬ ಕೊರಗು ಇದ್ದೇ ಇರುತ್ತದೆ. ಸಿನಿಮಾ ಎಂಬುದು ಹರಿಯುವ ನದಿಯಂತೆ. ಸಿನಿಮಾ ನೋಡುವಾಗ ಸಿಗುವ ಹೊಳಹುಗಳನ್ನು ಮುಂದಿನ ಸಿನಿಮಾಗಳಲ್ಲಿ ಬಳಸುತ್ತಾ ಸಾಗುವುದೇ ನಮ್ಮ ವೃತ್ತಿ' ಎನ್ನುವುದು ಅವರ ವಿನಯವಂತಿಕೆ.

ಐಟಂ ಹಾಡಿಲ್ಲದೆ ಅಂಗಿ-ಚಡ್ಡಿ ತೊಟ್ಟ ನಾಯಕಿಯರಿಲ್ಲದೆ, ರಕ್ತಪಾತ ಇಲ್ಲದೆ, ಅಶ್ಲೀಲ ಮಾತುಗಳಿಲ್ಲದೆ ತಮ್ಮ ಕಲ್ಪನೆಯಂತೆಯೇ ಸಿನಿಮಾವನ್ನು ತೆರೆಗೆ ತಂದಿರುವ ಅವರಿಗೆ ಇದೀಗ ಹಿಂದಿಯ `ತಲಾಶ್' ಚಿತ್ರಕ್ಕಾಗಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರವನ್ನು ತೆಗೆದುಹಾಕುತ್ತಿರುವುದು ನೋವಿನ ಸಂಗತಿ. `ಹಿಂದಿ ಚಿತ್ರಗಳಿಂದ ಒಳ್ಳೆ ಹಣ ಸಿಗುತ್ತದೆ.

ಮಂಗಳವಾರ, ಬುಧವಾರ ನಿಮ್ಮ ಸಿನಿಮಾಗೆ ಶೋ ಕೊಡ್ತೀವಿ' ಎಂದು ಮಂತ್ರಿ ಮಾಲ್‌ನಲ್ಲಿ ಇರುವ ಐನಾಕ್ಸ್‌ಚಿತ್ರಮಂದಿರದವರು ಹೇಳುತ್ತಿದ್ದಾರಂತೆ. ಇದರಿಂದ ನೊಂದುಕೊಂಡಿರುವ ಸುಮನಾ, `ಒಂದು ಸಿನಿಮಾಗೆ ಬ್ರೀಥಿಂಗ್ ಸ್ಪೇಸ್ ಕೊಡದೇ ಕೊಂದು ಹಾಕಿದರೆ ನಮಗೆ ಉತ್ಸಾಹ ಎಲ್ಲಿಂದ ಬರುತ್ತದೆ? ನೋಡಿದವರ‌್ಯಾರೂ ಇದನ್ನು ಕೆಟ್ಟ ಸಿನಿಮಾ ಎಂದು ಹೇಳಿಲ್ಲ.

ಅದೊಂದೇ ಖುಷಿ. ಇನ್ನು ಸಿನಿಮಾವನ್ನು ಜನರಿಗೆ ತಲುಪಿಸುವುದು ಒಂದು ಸವಾಲೇ ಸರಿ' ಎಂದು ವಿಷಾದಿಸುತ್ತಿದ್ದಾರೆ.ಸದ್ಯಕ್ಕೆ ಸಿನಿಮಾ ತಲುಪಿಸುವ ಕೆಲಸದಲ್ಲಿ ಬಿಜಿಯಾಗಿರುವ ಅವರು ಮುಂದಿನ ಚಿತ್ರದ ಕುರಿತು ಯೋಚನೆ ಮಾಡಿಲ್ಲ. ಕರ್ನಾಟಕದ ಹೊರಗೂ `ಎದೆಗಾರಿಕೆ' ಚರ್ಚೆಯಾಗುತ್ತಿರುವುದು ಅವರನ್ನು ಜವಾಬ್ದಾರಿಯುತ ಸಿನಿಮಾಗಳನ್ನು ಮಾಡುವಂತೆ ಪ್ರೇರೇಪಿಸಿದೆಯಂತೆ. ಪ್ರತಿಕ್ರಿಯೆಗಳಿಂದ ಖುಷಿಯಾಗಿರುವ ಸುಮನಾ, ಹೊಣೆಗಾರಿಕೆಯನ್ನು ಮರೆತಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT