ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಮನೋಹರ ಮೋಹಿನಿಯಾಟ್ಟಂ ಸಾಂಪ್ರದಾಯಿಕ ವೀಣಾ ವಾದನ

Last Updated 17 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಹವ್ಯಾಸವಾಗಿ ಉಳಿಸಿ, ಬೆಳೆಸಿಕೊಂಡಿರುವ ಕಲೆಯನ್ನು ಆರಾಧಿಸಿ ಏಕಾಗ್ರತೆ ಮತ್ತು ಪರಿಶ್ರಮಗಳಿಂದ ಆ ಕಲೆಯ ಸೂಕ್ಷ್ಮಗಳನ್ನು ಸಾಂಗವಾಗಿ ಮೈಗೂಡಿಸಿಕೊಂಡವರ ಪ್ರತಿಭಾ ಪ್ರದರ್ಶನ ಮಹತ್ವದ್ದಾಗಿರುತ್ತದೆ. ಕೋರಮಂಗಲದ ಇಂಡಿಯಾ ಹೆರಿಟೇಜ್ ಅಕಾಡೆಮಿ ಸಭಾಂಗಣದಲ್ಲಿ ಕಳೆದ ಭಾನುವಾರ ನಡೆದ ಡಾ. ಮೈಥಿಲಿ ಅನೂಪ್ ಅವರ ಮೋಹಿನೀಯಾಟ್ಟಂ ಕಾರ್ಯಕ್ರಮ ಆ ನೃತ್ಯ ಪ್ರಕಾರದ ಸೌಂದರ್ಯ, ಕಲೆ ಮತ್ತು ತಾಂತ್ರಿಕ ವಿಶೇಷತೆಗಳನ್ನು ಒಳಗೊಂಡು ಗಮನ ಸೆಳೆಯಿತು.

ಭಾವಗಳ ಲಾಲಿತ್ಯದ ಜೊತೆಗೆ ಅಭಿನಯದ ಸೊಗಸೂ ಮುದನೀಡಿತು. ಮೈಥಿಲಿ ಅವರ ರಂಗಪ್ರಜ್ಞೆ ಮತ್ತು ಭಾವ ಸಂವಾಹಕ ತಿಳಿಗಣ್ಣು, ಹುಬ್ಬುಗಳ ಚಲನೆ, ಲಾಸ್ಯ ಪ್ರಧಾನ ನಿಧಾನದ ದೈಹಿಕ ಗತಿಗಳು ನಯನ ಮನೋಹರವಾಗಿದ್ದವು. ನೃತ್ಯದ ಜತೆಗಿನ ಅವರ ತಾದಾತ್ಯ್ಮ ಅಂದಿನ ಕಾರ್ಯಕ್ರಮ ಅರ್ಥಪೂರ್ಣವೂ ಸಾರಗರ್ಭಿತವೂ ಆಗುವಂತೆ ಮಾಡಿತು. ತಮ್ಮ ಗುರು ಗೋಪಿಕಾ ವರ್ಮ ಸಂಯೋಜಿಸಿದ್ದ ಬಂಧಗಳನ್ನೇ ಆಯ್ದುಕೊಂಡು ಯಶಸ್ವೀ ಪ್ರದರ್ಶನ ನೀಡಿ ಅವರ ಮೆಚ್ಚುಗೆಗೂ ಪಾತ್ರರಾದರು.

ಗುರು ಗೋಪಿಕಾ ವರ್ಮ (ನಟುವಾಂಗ), ಅರುಣ್ ಗೋಪಿನಾಥ್ (ಗಾಯನ), ರಾಧಿಕಾ ವೆಂಕಟರಮಣ (ಪಿಟೀಲು), ಜಿ.ಎಸ್. ನಾಗರಾಜ್ (ಮೃದಂಗ) ಮತ್ತು ಅಚ್ಯುತಾನಂದನ್ ಎಡಕ್ಕ ಅವರ ಔಚಿತ್ಯಪೂರ್ಣ ಸಹಕಾರದೊಂದಿಗೆ ನಡೆದ ಅವರ ಕಾರ್ಯಕ್ರಮದ ಸಂರಚನೆ ಸಮಗ್ರವಾಗಿತ್ತು.

ಮೋಹಿನಿಯಾಟ್ಟಂ ನೃತ್ಯದ ವ್ಯಾಕರಣಕ್ಕೆ ಖಚಿತವಾಗಿ ಹೊಂದಿಕೊಂಡಿದ್ದ ಅವರ ನೃತ್ತವು ಆರಂಭದ ಚೊಲ್ಲುಕಟ್ಟನ್ನು (ಕಾನಡಾ) ತುಂಬಿತು. ಸಲೀಸಾದ ಚಲನೆಗಳು, ಆಂದೋಳಿಕಾ ಕಟಿ ಚಲನೆಗಳು ವೈಷ್ಣವ ಸ್ಥಾನಂಗಳು (ಅರ್ಧಮಂಡಲಿಗಳು) ವಿಳಂಬಕಾಲದಲ್ಲಿ ವೇದಿಕೆಯನ್ನಷ್ಟೇ ಅಲ್ಲದೇ ನೋಡುಗರ ನೋಟಗಳನ್ನೂ ತುಂಬಿಕೊಂಡವು. ಜತಿಸ್ವರ ಅಥವಾ ಸ್ವರಪಲ್ಲವಿ (ಬಹುದಾರಿ) ಮಧ್ಯ ಲಯದಲ್ಲಿ ಚೇತೋಹಾರಿ ಲಯ ಮಾದರಿಗಳು ಮತ್ತು ಶಾರೀರಿಕ ಚಲನೆಗಳಲ್ಲಿ ಹಾಸು ಹೊಕ್ಕಿತು.

ಸ್ವಾತಿ ತಿರುನಾಳರ ಶ್ರೀ  ಪದ್ಮನಾಭಸ್ವಾಮಿಯನ್ನು ಕುರಿತಾದ ತೋಡಿ ವರ್ಣ (ದಾನಿ ಸಾಮಜೇಂದ್ರ) ನಾಯಕಿಯ ಭಾವನಾತ್ಮಕ ನಿಲುವನ್ನು ವರ್ಣಿಸುತ್ತದೆ. ನಾಯಕಿಯು ತನ್ನ ಸಂದೇಶವನ್ನು ತನ್ನ ಪ್ರಭುವಿಗೆ ತಲುಪಿಸಬೇಕೆಂದು ಸಖಿಯನ್ನು ಕೇಳಿಕೊಳ್ಳುತ್ತಾಳೆ. ಆ ಸನ್ನಿವೇಶದ ನಿರ್ವಹಣೆಯಲ್ಲಿ ಮೈಥಿಲಿ ಅವರ ಅಭಿನಯ, ನೃತ್ಯ ಮತ್ತು ನೃತ್ತ ಅಭಿವ್ಯಂಜನಾ ಕೌಶಲದಿಂದ ಕಂಗೊಳಿಸಿತು. ಸಾರ್ಥಕ ಅಭಿನಯ, ಚುರುಕಾದ ರಂಗಕ್ರಿಯೆಗಳಿಂದ ಸುಪರಿಚಿತ ಮಹಾದೇವ ಶಿವ ಶಂಭೋ (ರೇವತಿ) ಕೀರ್ತನೆಯು ರಸಿಕರ ಮನ ಗೆದ್ದಿತು. ಭಕ್ತ ಮಾರ್ಕಂಡೇಯ, ರಾವಣ ವೀಣಾ, ಗಂಗಾವತರಣ ಇತ್ಯಾದಿ ಘಟನೆಗಳ ಚಿತ್ರಣ ಪ್ರಶಂಸಾರ್ಹ. ದ್ವಾರಕೀ ಕೃಷ್ಣಸ್ವಾಮಿ ಅವರ ಜಾವಳಿ (ಆನಂದಭೈರವಿ) ಮತ್ತು ಹುಸೇನಿ ರಾಗದ ತಿಲ್ಲಾನ ಸುಂದರವಾದ ಮುಕ್ತಾಯವನ್ನೊದಗಿಸಿತು.

ಸಾಂಪ್ರದಾಯಿಕ ವೀಣಾ ವಾದನ
ಶ್ರೇಷ್ಠ ವೀಣಾ ಪರಂಪರೆಗೆ ಸೇರಿರುವ ನುರಿತ ವೀಣಾ ವಾದಕ ಡಿ. ಬಾಲಕೃಷ್ಣ ಅವರು ಶುದ್ಧ ಸಾಂಪ್ರದಾಯಿಕ ವೀಣಾ ವಾದನದ ರುಚಿಯನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಮೊನ್ನೆ ನಡೆದ ತಮ್ಮ ಕಛೇರಿಯಲ್ಲಿ ಉಣಬಡಿಸಿದರು.

ಯುವ ಮೃದಂಗ ಪಟು ಎಚ್.ಎಸ್. ಸುಧೀಂದ್ರ (ಮೃದಂಗ) ಮತ್ತು ದಯಾನಂದ ಮೋಹಿತೆ (ಘಟ) ಅವರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಅದರ ಮೌಲ್ಯ ಹೆಚ್ಚಿತು. ಆಡಂಬರ, ಗಲಾಟೆ, ಗೊಂದಲ, ಲಯದ ಕಸರತ್ತು, ನಾದದ ಅಬ್ಬರಗಳಿಲ್ಲದ ಅವರ ನುಡಿಸಾಣಿಕೆ ಕೇಳ್ಮೆಯ ಆನಂದವನ್ನುಂಟುಮಾಡಿತು.

ಆರಂಭದ `ಶ್ರೀ ಗಣಪತಿನಿ~ (ಸೌರಾಷ್ಟ್ರ) ಸೊಗಸೆನಿಸಿತು. `ಎಂತ ವೇಡಿಕೊಂದು~ (ಸರಸ್ವತಿಮನೋಹರಿ), `ನೀದು ಮಹಿಮಾ~ (ಹಂಸಾನಂದಿ), `ನಗುಮೋಮು~ (ಆಲಾಪನೆ; ಅಭೇರಿ) ಮತ್ತು `ಆರಾಮದ ಆನಂದಭೈರವಿ~ (ಶಾಮಾಶಾಸ್ತ್ರಿಗಳ ಮರಿವೇರೆ) ಶಾಸ್ತ್ರೀಯ ಬೆಡಗಿನ ವಾಹಕವಾಗಿದ್ದವು.

ಪರಿಪಕ್ವವಾದ ಮನೋಧರ್ಮ ಜನ್ಯ,  ಕಲಾ ಪರಿಪೂರ್ಣತೆಯ ಭೈರವಿ ರಾಗಾಲಾಪನೆ ಮತ್ತು ತಾನ ಪುರಂದರದಾಸರ `ಓಡಿ ಬಾರಯ್ಯ~ ಪದಕ್ಕೆ ಉತ್ತಮ ಪೀಠಿಕೆಯನ್ನೊದಗಿಸಿತು. ಇದಾದ ನಂತರ ಆಯ್ದುಕೊಂಡ ಕನ್ನಡ ರಚನೆಗಳ ಪ್ರಸ್ತುತಿ ಸಂವಹನಕ್ಕೆ ಸುಲಭವಾಗಿ ಎಟಕುವಂತಿತ್ತು. `ಇನ್ನು ದಯಬಾರದೆ~ (ಕಲ್ಯಾಣವಸಂತ), `ನಾರಾಯಣ ನಿನ್ನ~ (ಶುದ್ಧ ಧನ್ಯಾಸಿ), `ಜಗದೋದ್ಧಾರನ~ (ಕಾಪಿ) ಹೊಸ ಕಳೆಯೊಂದಿಗೆ ಲವಲವಿಕೆಯಿಂದ ಮೂಡಿಬಂದವು.

ಖುಷಿ ಕೊಟ್ಟ ಯಕ್ಷಗಾನ
ಮಹಾಭಾರತದ ಶಶಿರೇಖಾ ಪರಿಣಯ ಬಹು ಮಾಧ್ಯಮಗಳಲ್ಲಿ ನಮೂದಾಗಿರುವ ವಿಷಯ ವಸ್ತು. ಅದು ಅಭಿಮನ್ಯು ಮತ್ತು ಶಶಿರೇಖಾಳ ವಿವಾಹದ ಕಥೆಗೆ ಸಂಬಂಧಿಸಿದ್ದು. ಕೃಷ್ಣ, ಬಲರಾಮ, ಅಭಿಮನ್ಯು, ಶಶಿರೇಖಾ, ದುರ್ಯೋಧನ, ಶಕುನಿ, ಘಟೋತ್ಕಚ ಮತ್ತಿತರ ಪಾತ್ರಗಳನ್ನೊಳಗೊಂಡ ಕಥಾ ಪ್ರಸಂಗವನ್ನು ಕೂಚಿಪುಡಿ ಯಕ್ಷಗಾನ ಶೈಲಿಯಲ್ಲಿ ನೋಡಿ ನೃತ್ಯ ಪ್ರೇಮಿಗಳು ಖುಷಿಪಟ್ಟಿದ್ದು ಚೌಡಯ್ಯ ಸ್ಮಾರಕ ಭವನದಲ್ಲಿ.

ವೀಣಾ ಮೂರ್ತಿ ವಿಜಯ್ ಅವರ ಶ್ರೀ ರಾಜರಾಜೇಶ್ವರಿ ಕಲಾ ನಿಕೇತನದ 37ನೆಯ ವಾರ್ಷಿಕೋತ್ಸವದ ನಿಮಿತ್ತ ನಡೆದ ಸಮನ್ವಯ ಕಲಾ ಉತ್ಸವದ ಮೊದಲ ದಿನದ ಸಂಜೆ ಪ್ರಸಿದ್ಧ ಕೂಚಿಪುಡಿ ಪ್ರತಿಪಾದಕ ಪಶುಮರ್ತಿ ರಾಮಲಿಂಗಾ ಶಾಸ್ತ್ರಿಗಳ ನಿರ್ದೇಶನದಲ್ಲಿ ಪ್ರದರ್ಶನವಿತ್ತು. ಕೆಲವು ತಾಂತ್ರಿಕ ಮತ್ತು ಕಲಾತ್ಮಕ `ಬಿಕ್ಕಳಿಕೆ~ಗಳ ನಡುವೆಯೂ ಪ್ರದರ್ಶನ ಮನಸೂರೆಗೊಂಡಿತು. ತಾಂಡವ ನೃತ್ಯ `ಕರಿ ಗಜಾನನ~ ರಚನೆಯ ಮೂಲಕ ಗಣೇಶ ನೃತ್ಯ ಮತ್ತು ವಂದನೆ ನಡೆಯಿತು.

ರಾಮಲಿಂಗಾ ಶಾಸ್ತ್ರಿಗಳೇ ಸ್ವತಃ ಕೃಷ್ಣನಾಗಿ ಹಾಗೂ ನಟುವನಾರ್ ಆಗಿ ಅದರ ಮೆರುಗನ್ನು ಹೆಚ್ಚಿಸಿದರು. ತೆರೆಯ ಹಿಂದೆ ಪಾತ್ರ ಪ್ರವೇಶ ಹಾಗೂ ನಿರ್ಗಮನ, ಶ್ರೀಮಂತವಾಗಿದ್ದ ಸಂಗೀತ ಸಹಕಾರ, ವರ್ಣಮಯ ಹಾಗೂ ಪೌರಾಣಿಕ ವೇಷ ಭೂಷಣಗಳು, ಸಾಂಪ್ರದಾಯಿಕ ರಂಗಪರಿಕರಗಳು ಹಾಗೂ ಕರ್ನಾಟಕ ಸಂಗೀತದ (ಮೋಹನ, ಕಾಂಭೋಜಿ, ದರ್ಬಾರ್, ಕದನಕುತೂಹಲ, ಅಠಾಣ ಇತ್ಯಾದಿ) ಬಳಕೆ ಪರಿಣಾಮಕಾರಿಯಾಗಿತ್ತು. ಅಭಿನಯದ ಚೆಲುವಿನ ಜೊತೆಗೆ ಮಧ್ಯೆ ಮಧ್ಯೆ ನಿರೂಪಿಸಲಾದ ನೃತ್ತ ಹಾಗೂ ನೃತ್ಯ ಅರ್ಥಪೂರ್ಣವೂ ಏಕತಾನತೆಯನ್ನು ಮುರಿಯುವಂತೆಯೂ ಇತ್ತು. ಎಂದಿನಂತೆ ವಾಚಿಕಾಭಿನಯ ಸರ್ವತ್ರವೂ ವ್ಯಾಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT