ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷಿತ ಸಾಗಣೆಗೆ ವ್ಯವಸ್ಥೆಯಾಗಲಿ

Last Updated 10 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬುಲೆಟ್ ಟ್ಯಾಂಕರ್ ಒಂದು ಮಗುಚಿಬಿದ್ದ ಪರಿಣಾಮ, ಎಲ್‌ಪಿಜಿ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಎಂಟು ಮಂದಿ ಸಜೀವವಾಗಿ ದಹಿಸಿಹೋದ ಘಟನೆ ದುರದೃಷ್ಟಕರ.

ಅನಿಲ ಟ್ಯಾಂಕರ್‌ನಿಂದ ಹರಡಿದ ಬೆಂಕಿಯ ಕೆನ್ನಾಲಿಗೆಗೆ ಸುತ್ತಮುತ್ತಲಿನ ಆರು ಮನೆಗಳು, ಎರಡು ಅಂಗಡಿಗಳು, ಗ್ಯಾರೇಜ್ ಮತ್ತು ಕೆಲವು ವಾಹನಗಳೂ ಸುಟ್ಟು ಕರಕಲಾಗಿರುವುದು ಈ ಅಪಘಾತದ ಭೀಕರತೆಗೆ ನಿದರ್ಶನ.

ಪೆಟ್ರೋಲಿಯಂ ಉತ್ಪನ್ನಗಳಂತಹ ಸ್ಫೋಟಕ ವಸ್ತುಗಳನ್ನು ರಸ್ತೆಗಳಲ್ಲಿ ಸಾಗಿಸುವುದರ ಸುರಕ್ಷತೆಯ ಪ್ರಶ್ನೆಗಳನ್ನು ಈ ಘಟನೆ ಮತ್ತೊಮ್ಮೆ ಎತ್ತಿದೆ. ಈ ಟ್ಯಾಂಕರ್ 16,000 ಲೀಟರ್ ಎಲ್‌ಪಿಜಿಯನ್ನು ಸಾಗಣೆ ಮಾಡುತ್ತಿತ್ತು.  ಮಂಗಳೂರು - ಬೆಂಗಳೂರು ರಸ್ತೆಯಲ್ಲಿ ಪ್ರತಿ ದಿನ ಇಂತಹ ನೂರಾರು ಅನಿಲ ಟ್ಯಾಂಕರ್‌ಗಳು ಓಡಾಡುತ್ತವೆ. ಹಾಗೆಯೇ ಅಪಘಾತಗಳು ಸಂಭವಿಸುತ್ತಿರುವುದೂ ಮಾಮೂಲು.

ಬ್ರೇಕ್ ವೈಫಲ್ಯ, ಕಡಿದಾದ ರಸ್ತೆ ತಿರುವುಗಳಲ್ಲಿ ವಾಹನ ಮಗುಚಿಕೊಳ್ಳುವುದು, ಗುಂಡಿಗೆ ಬೀಳುವುದು ಇತ್ಯಾದಿ ವಿವಿಧ ರೀತಿಗಳಲ್ಲಿ ಈ ಅಪಘಾತಗಳು ಸಂಭವಿಸುತ್ತಿವೆ. ಆಗೆಲ್ಲಾ ರಸ್ತೆಯಲ್ಲಿ ವಾಹನ ಸಂಚಾರ ತಡೆದು, ಅಪಘಾತಕ್ಕೀಡಾದ ಟ್ಯಾಂಕರ್‌ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅನಿಲ ಸೋರಿಕೆಯಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಮತ್ತೆ ಸಂಚಾರಕ್ಕೆ ರಸ್ತೆಯನ್ನು ಮುಕ್ತಗೊಳಿಸುವ ಪರಿಪಾಠ ನಡೆದುಕೊಂಡೇ ಬಂದಿದೆ.

ತೈಲ ಟ್ಯಾಂಕರ್‌ಗಳಿಗೆ ಪ್ರಯಾಣಿಕ ವಾಹನಗಳು ಡಿಕ್ಕಿಯಾಗಿ ಅಪಘಾತ ಸಂಭವಿಸಿರುವಂತಹ ಪ್ರಕರಣಗಳು ಕಡಿಮೆ ಎಂಬುದನ್ನು ಗಮನಿಸಬೇಕು. ಹೀಗಾಗಿ ಅಜಾಗರೂಕ ಚಾಲನೆ ತಡೆಗಟ್ಟಲು ಟ್ಯಾಂಕರ್‌ಗಳ ಚಾಲಕರಿಗೆ ಸೂಕ್ತ ವಿಶ್ರಾಂತಿ ಹಾಗೂ ತರಬೇತಿಗಳಿಗೆ ಸೌಲಭ್ಯಗಳನ್ನು ಸೃಷ್ಟಿಸುವುದು ಜರೂರಾಗಿ ಆಗಬೇಕಿದೆ. ಆದರೆ ರಸ್ತೆಗಳ ಮೂಲಕ ಅಪಾಯಕಾರಿ ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆ ಎಂದಿದ್ದರೂ ಅಪಾಯಕಾರಿಯೇ.

ಶಿರಾಡಿ ಘಟ್ಟವನ್ನು ಹಾದು ಬರುವ ಮಂಗಳೂರು- ಬೆಂಗಳೂರು ರಸ್ತೆಯಂತೂ ಅನೇಕ ಪರಿಸರ ಸೂಕ್ಷ್ಮ ಪ್ರದೇಶಗಳನ್ನೊಳಗೊಂಡಿದೆ. ಹೀಗಾಗಿ ಅಪಘಾತಗಳು ಸಂಭವಿಸಿದಲ್ಲಿ ಜೀವ ಹಾಗೂ ಆಸ್ತಿಪಾಸ್ತಿಗೆ ಮಾತ್ರ ಹಾನಿಯಲ್ಲ, ಪರಿಸರಕ್ಕೂ ಧಕ್ಕೆ ಎಂಬುದನ್ನು ಗಂಭೀರವಾಗಿ ಪರಿಶೀಲಿಸಬೇಕು.

ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆಯನ್ನು ರಸ್ತೆಗಳಿಂದ ದೂರ ಇಡುವುದು ಸುರಕ್ಷತೆ ದೃಷ್ಟಿಯಿಂದ ಎಂದಿದ್ದರೂ ಕ್ಷೇಮಕರ. ಟ್ಯಾಂಕರ್ ಟ್ರಕ್ ಅಥವಾ ರೈಲುಗಳ ಮೂಲಕ  ಈ  ಸ್ಫೋಟಕ ಉತ್ಪನ್ನಗಳ ಸಾಗಣೆಗಳಲ್ಲಿ ಅಪಾಯದ ಅಂಶ ಇದ್ದೇ ಇರುತ್ತದೆ.

ಹೀಗಾಗಿ ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆಗೆ ಸುರಕ್ಷಿತ, ಅನುಕೂಲಕರ ಹಾಗೂ ಪರಿಸರ ಸ್ನೇಹಿ ಮಾರ್ಗಗಳೆಂದರೆ ಕೊಳವೆಮಾರ್ಗಗಳು. ಈ ನಿಟ್ಟಿನಲ್ಲಿ ಮೂಲಸೌಕರ್ಯಗಳನ್ನು ಸೃಷ್ಟಿಸಲು ಹೆಚ್ಚಿನ ಪ್ರಯತ್ನಗಳಾಗಬೇಕಿದೆ.

ಈಗ ಇರುವ ಮಂಗಳೂರು- ಬೆಂಗಳೂರು ಪೈಪ್‌ಲೈನ್ ಯೋಜನೆಯಲ್ಲಿ ಡೀಸೆಲ್ ಮತ್ತಿತರ ಇಂಧನ ಸಾಗಣೆಗೆ ಅವಕಾಶವಿದೆ.

ಕೊಳವೆ ಮಾರ್ಗಗಳ ಮೂಲಕ ಅನಿಲ ಸಾಗಣೆಗೂ ಅವಕಾಶ ಕಲ್ಪಿಸುವ ಮೂಲ ಸೌಕರ್ಯಗಳ ಸೃಷ್ಟಿಗೆ ಇರುವ ಅಡೆತಡೆ ನಿವಾರಣೆಗೆ ನೀತಿಗಳನ್ನು ರೂಪಿಸುವುದು ಅಗತ್ಯ. ಇಂತಹ ಮಾರ್ಗಗಳು ಸುರಕ್ಷಿತ ಮಾತ್ರವಷ್ಟೇ ಅಲ್ಲ ಅವುಗಳ ಕಾರ್ಯಾಚರಣೆ ಹಾಗೂ ನಿರ್ವಹಣಾ ವೆಚ್ಚಗಳೂ ಕಡಿಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT