ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ಪ್ರಗತಿ ಪರಿಶೀಲನಾ ಸಭೆ

Last Updated 19 ಫೆಬ್ರುವರಿ 2011, 6:45 IST
ಅಕ್ಷರ ಗಾತ್ರ

ಸುರಪುರ: ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಇದೇ ಮೊದಲ ಬಾರಿಗೆ ಇಲ್ಲಿಗೆ ಆಗಮಿಸಿದ ಪ್ರೊ. ಮುಮ್ತಾಜ ಅಲಿಖಾನ್ ತಾ.ಪಂ. ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಿದರು. ಅಧಿಕಾರ ಜನ ಕಲ್ಯಾಣಕ್ಕಾಗಿ ಸ್ವಹಿತಾಸಕ್ತಿಗೆ ಅಲ್ಲ ಎಂದು ಅಧಿಕಾರಿಗಳಿಗೆ ಉಪದೇಶ ನೀಡಿದರು. ಯೋಜನೆಗಳನ್ನು ಸಿದ್ಧಪಡಿಸುವಲ್ಲಿ ನಮ್ಮ ಅಧಿಕಾರಿಗಳು ಸಿದ್ಧಹಸ್ತರು. ಆದರೆ ಅನುಷ್ಠಾನದಲ್ಲಿ ಹಿಂದೆ ಬೀಳುವುದು ಏಕೆ ಎಂದು ಪ್ರಶ್ನಿಸಿದ ಅವರು ಹೀಗೆ ಉತ್ತರಿಸಿದರು.

ದಕ್ಷತೆ ಮತ್ತು ಪ್ರಾಮಾಣಿಕತೆಯ ಕೊರತೆ ಇದಕ್ಕೆ ಕಾರಣ. ಸರ್ಕಾರದ ಯೋಜನೆಗಳನ್ನು ಜನರತ್ತ ತಲುಪಿಸುವ ಗುರುತರ ಜವಾಬ್ದಾರಿ ನಿಮ್ಮ ಮೇಲೆ ಇದೆ. ಅಡ್ಡದಾರಿ ಹಿಡಿಯದೆ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ಸೂಚಿಸಿದರು. ಕ್ರೀಯಾ ಯೋಜನೆ ವರದಿ ನನಗೆ ಬೇಕಿಲ್ಲ. ಯೋಜನೆ ಬಳಕೆ ಬಗ್ಗೆ ಎಷ್ಟು ಕೆಲಸ ಮಾಡಿದ್ದೀರಿ ಎಂಬ ಬಗ್ಗೆ ವರದಿ ನೀಡಿ. ವಾಮಮಾರ್ಗದಿಂದ ಹಣ ಮಾಡುವ ಗೋಜಿಗೆ ಹೋಗಬೇಡಿ. ನಾವು ಸತ್ತಾಗ ಏನನ್ನು ಜೊತೆಗೆ ತೆಗೆದುಕೊಂಡು ಹೋಗುವುದಿಲ್ಲ. ನಾವು ಮಾಡುವ ಕೆಲಸ ದೇವರಿಗೆ ಮೆಚ್ಚಿಗೆಯಾಗಬೇಕು ಎಂದು ಹಿತವಚನ ಹೇಳಿದರು.

60 ವರ್ಷಗಳಿಂದ ದಲಿತರಿಗಾಗಿ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ರೂಪಿಸಿವೆ. ಆದರೆ ಇಂದಿಗೂ ದಲಿತರ ಸ್ಥಿತಿ ಗತಿ ಬಗ್ಗೆ ಯಾವುದೆ ಬದಲಾವಣೆ ಆಗಿಲ್ಲ ಎಂದು ವಿಷಾದಿಸಿದರು. ಇದಕ್ಕೆ ಅಧಿಕಾರಿಗಳ ಪ್ರಾಮಾಣಿಕತೆಯ ಕೊರತೆ ಕಾರಣ. ಯೋಜನೆಗಳ ಸಮರ್ಪಕ ಅನುಷ್ಠಾನ ಆಗದಿರುವುದು ಇನ್ನೊಂದು ಕಾರಣ ಎಂದರು. ನಾಯಿ ತನ್ನ ಬಾಲವನ್ನು ಅಲ್ಲಾಡಿಸುವದು ಸಹಜ. ಆದರೆ ಬಾಲವೇ ನಾಯಿಯನ್ನು ಅಲ್ಲಾಡಿಸಿದರೆ ಹೇಗೆ. ನಮ್ಮ ಪರಿಸ್ಥಿತಿಯೂ ಹೀಗೆ ಆಗಿದೆ ಎಂದು ಮಾರ್ಮಿಕವಾಗಿ ನುಡಿದರು.

ಶಾಸಕ ರಾಜೂಗೌಡ ಮಾತನಾಡಿ, ತಾಲ್ಲೂಕಿನ ಮುರಾರ್ಜಿ ಮತ್ತು ಕಿತ್ತೂರ ವಸತಿ ಶಾಲೆಗಳ ಸಿಬ್ಬಂದಿಗೆ ವಿಜಾಪುರದ ಕಲಾ ಚೇತನ ಸರ್ಕಾರೇತರ ಸಂಸ್ಥೆ 4 ತಿಂಗಳಿನಿಂದ ಸಂಬಳ ನೀಡಿಲ್ಲ. ಸಂಬಳ ಕೇಳಿದರೆ ಗುಂಡಾಗಿರಿ ಮಾಡುತ್ತಾರೆ. ನಿಗದಿತ 7600 ವೇತನದ ಬದಲಿಗೆ 5 ಸಾವಿರ ವೇತನ ನೀಡುತ್ತಾರೆ. ಈ ಬಗ್ಗೆ ತಕ್ಷಣ ಪರಿಶೀಲನೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ಜಿ.ಪಂ. ಉಪಕಾರ್ಯದರ್ಶಿ ಬಿ.ವಿ. ಭೊಸ್ಲೆ ಅವರಿಗೆ ಸೂಚಿಸಿದರು.

ಕಕ್ಕೇರಾ ಮತ್ತು ದೇವಪುರದ ವಿದ್ಯುತ್ ಘಟಕಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ಸುರಪುರ ಯಾದಗಿರಿ ರಸ್ತೆ ಕಾಮಗಾರಿಗೆ ಹಣ ಬಿಡುಗಡೆ ಮಾಡಿಸಬೇಕು. ಸುರಪುರದಲ್ಲಿ ಶಾದಿಮಹಲ್‌ಗಾಗಿ ರೂ. 50 ಲಕ್ಷ ಬಿಡುಗಡೆ ಮಾಡಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು. ಜಿ.ಪಂ. ಸದಸ್ಯ ಎಚ್.ಸಿ. ಪಾಟೀಲ, ಮಾಜಿ ಸಚಿವ ರಾಜಾ ಮದನಗೋಪಾಲನಾಯಕ್, ಜಿ.ಪಂ. ಉಪಕಾರ್ಯದರ್ಶಿ ಬಿ.ವಿ. ಭೊಸ್ಲೆ, ಇ.ಓ. ಚನ್ನಬಸಪ್ಪ ಮೆಕಾಲೆ, ತಹಸೀಲ್ದಾರ್ ಸುಲ್ತಾನ ಮಹೆಮೂದ್, ಎಲ್ಲಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT