ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಿದ ಮಳೆ: ರೈತನ ಮೊಗದಲ್ಲಿ ಸಂತಸ

Last Updated 4 ಜೂನ್ 2011, 5:40 IST
ಅಕ್ಷರ ಗಾತ್ರ

ವಿಜಾಪುರ: ಕಳೆದ ಮೂರು ದಿನಗಳಿಂದ ಜಿಲ್ಲೆಯ ವಿವಿಧೆಡೆ ಸುರಿಯುತ್ತಿರುವ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಭೂಮಿಯನ್ನು ಹದ ಮಾಡಿಟ್ಟುಕೊಂಡು ಬಿತ್ತನೆಗಾಗಿ ಆಗಸದತ್ತ ನೋಡುತ್ತಿದ್ದ ರೈತರು ಈಗ ನಿತ್ಯ ಬೆಳಿಗ್ಗೆ ಹೊಲಗಳಿಗೆ ಹೋಗಿ ತಮ್ಮ ಜಮೀನಿನ ಹಸಿಯನ್ನು ಪರೀಕ್ಷಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಮುಂದಿನ ಐದು ದಿನ ಹೆಚ್ಚಿನ ಪ್ರಮಾಣದಲ್ಲಿ ಮೋಡಗಳು ಕಂಡು ಬಂದು ಬಹುತೇಕ ಕಡೆಗಳಲ್ಲಿ ಮಧ್ಯಮ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಇದು ರೈತರ ಖುಷಿ ಇಮ್ಮಡಿ ಆಗುವಂತೆ ಮಾಡಿದೆ.

`ಹೊಲ ಹದ ಮಾಡಿಟ್ಟುಕೊಂಡಿದ್ದೇವೆ. ಈಗ ಸುರಿದ ಮಳೆಯಿಂದ ಭೂಮಿ ಹಸಿಯಾಗಿದೆ. ವಾರದ ನಂತರ ಬಿತ್ತನೆ ಕೈಗೊಳ್ಳುತ್ತೇವೆ. ಬಿಳಿ ಜೋಳ ಹೊರತುಪಡಿಸಿ ಉಳಿದೆಲ್ಲ ಬೆಳೆಗಳನ್ನೂ ಈ ಮುಂಗಾರು ಅವಧಿಯಲ್ಲಿ ಬೆಳೆಯಲು ಅವಕಾಶವಿದೆ~ ಎಂದು ತಾಲ್ಲೂಕಿನ ಮಹಲ್ ಗ್ರಾಮದ ರೈತ ಖೇಮು ಶಂಕರ ನಾಯಿಕ ಖುಷಿಯಿಂದ ಹೇಳುತ್ತಾರೆ.

ಜಿಲ್ಲೆಯಲ್ಲಿ ಸದ್ಯದ ಮಟ್ಟಿಗೆ ಬೀಜ-ಗೊಬ್ಬರದ ಕೊರತೆ ಎದುರಾಗಿಲ್ಲವಾದರೂ, ಕಾಳಸಂತೆ ಹಾಗೂ ಕಳಪೆ ಗುಣಮಟ್ಟದ ಬೀಜ-ಗೊಬ್ಬರದ ಬಗ್ಗೆ ರೈತರಲ್ಲಿ ಇರುವ ಆತಂಕ ದೂರವಾಗಿಲ್ಲ.

`12 ಸಾವಿರ ಟನ್ ರಸಗೊಬ್ಬರ, ಸಜ್ಜೆ, ಗೋವಿನ ಜೋಳ, ಹೆಸರು, ಉದ್ದು, ಮಡಿಕೆ, ಶೇಂಗಾ, ಸೂರ್ಯಕಾಂತಿ ಸೇರಿದಂತೆ 24,900 ಕ್ವಿಂಟಲ್ ವಿವಿಧ ಬಿತ್ತನೆ ಬೀಜ ದಾಸ್ತಾನಿದೆ. ರೈತರು ಭಯಪಡುವ ಅಗತ್ಯವಿಲ್ಲ~ ಎಂದು ಕೃಷಿ ಇಲಾಖೆಯವರು ಹೇಳುತ್ತಿದ್ದಾರೆ.

`ಮುಂಗಾರು ಬೆಳೆಗಳಾದ ಹೆಸರು, ಗೋವಿನ ಜೋಳ, ಬಿಟಿ ಹತ್ತಿ, ತೊಗರಿ, ಸಜ್ಜೆ, ಎಳ್ಳು, ಸಾವಿ, ಗೆಜ್ಜೆ ಶೇಂಗಾ ಬಿತ್ತನೆಗೆ ಆದ್ಯತೆ ನೀಡಬೇಕು~ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸ್ಥಳೀಯ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಜಿಲ್ಲೆಯ ರೈತರಿಗೆ ಸಲಹೆ ನೀಡಿದ್ದಾರೆ.

`ಹಗುರವಾದ ಹಾಗೂ ಮಧ್ಯಮ ಆಳದ ಕಪ್ಪು ಜಮೀನುಗಳಲ್ಲಿ ಅಂತರ ಬೆಳೆ ಪದ್ಧತಿಗಳಾದ ತೊಗರಿ ಮತ್ತು ಗೆಜ್ಜೆ ಶೇಂಗಾ (1:3), ಸಜ್ಜೆ ಮತ್ತು ತೊಗರಿ (2:1), ಸಜ್ಜೆ ಮತ್ತು ಗೆಜ್ಜೆ ಶೇಂಗಾ (2:4) ಬಿತ್ತನೆ ಮಾಡುವುದರಿಂದ ಅಧಿಕ ಇಳುವರಿ ಸಾಧ್ಯ~ ಎಂಬುದು ಅವರ ಸಲಹೆ.

`ಕಡಿಮೆ ಅವಧಿಯ ತೊಗರಿ ತಳಿಗಳನ್ನು ಬಿತ್ತನೆ ಮಾಡಬೇಕು. ಬಿತ್ತನೆ ಮಾಡುವಾಗ ಏಕದಳ ಧಾನ್ಯದ ಬೀಜಗಳಿಗೆ ಅಝೋಸ್ಟಿರಿಲಮ್ ಮತ್ತು ಪಿಎಸ್‌ಬಿ, ದ್ವಿದಳ ಧಾನ್ಯದ ಬೀಜಗಳಿಗೆ ರೈಝೋಬಿಯಮ್ ಮತ್ತು ಪಿಎಸ್‌ಬಿಯಿಂದ ಉಪಚಾರ ಮಾಡಿ ಬಿತ್ತಬೇಕು. ಬಿತ್ತುವ ಮುನ್ನ ಎಲ್ಲ ಬೆಳೆಗಳ ಬೀಜಗಳಿಗೆ ಕ್ಯಾಪ್ಟಾನ್/ಥೈರಾಮ್/ ಕಾರ್ಬನ್‌ಡೈಜಿಮ್ ಪುಡಿಯನ್ನು ಪ್ರತಿ ಕಿ.ಗ್ರಾಂ. ಬೀಜಕ್ಕೆ 2 ಗ್ರಾಂನಂತೆ ಅಥವಾ ಟ್ರೈಕೋಡರ್ಮಾ 4 ಗ್ರಾಂ ನಂತೆ ಉಪಚರಿಸಿ ಬಿತ್ತುವುದರಿಂದ ಬೆಳೆಗಳಿಗೆ ಮುಂದೆ ತಗುಲಬಹುದಾದ ರೋಗಗಳನ್ನು ತಡೆಗಟ್ಟಬಹುದು ಎಂದು ಅವರು ಹೇಳಿದ್ದಾರೆ.

ಜಾನುವಾರು ರಕ್ಷಣೆ: ಎಲ್ಲ ಜಾನುವಾರುಗಳಿಗೆ ಜಂತು ನಾಶಕ ಔಷಧಿ, ಕಾಲು, ಬಾಯಿ ಬೇನೆ, ಚೆಪ್ಪೆ ಬೇನೆಗೆ ಚುಚ್ಚುಮದ್ದು ಹಾಗೂ ಆಡು ಮತ್ತು ಕುರಿಗಳಿಗೆ ರೋಗ ನಿರೋಧಕ ಚುಚ್ಚುಮದ್ದು ಹಾಕಿಸಬೇಕು. ಎರೆಹುಳು ಕುಣಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳಬೇಕು ಎಂದು ಕೃಷಿ ವಿಜ್ಞಾನಿಗಳು ಸೂಚಿಸಿದ್ದಾರೆ.

ಮಳೆಯ ವಿವರ
`ಪ್ರಸಕ್ತ ಸಾಲಿನ ಜನವರಿಯಿಂದ ಜೂನ್ 3ರ ವರೆಗೆ ಜಿಲ್ಲೆಯಲ್ಲಿ ಸರಾಸರಿ 99 ಮಿ.ಮೀ. ಮಳೆಯಾಗಿದೆ. ಮೇ ಅಂತ್ಯದವರೆಗೆ ಜಿಲ್ಲೆಯ ವಾಡಿಕೆಯ ಮಳೆಯ ಪ್ರಮಾಣ 72 ಮಿ.ಮೀ. ಇದ್ದು, ಈ ಅವಧಿಯಲ್ಲಿ 75 ಮಿ.ಮೀ. ಮಳೆ ದಾಖಲಾಗಿದೆ. ಜೂನ್ ತಿಂಗಳ ವಾಡಿಕೆಯ ಮಳೆಯ ಪ್ರಮಾಣ 89 ಮಿ.ಮೀ. ಇದ್ದು, ಈಗ ಮೂರು ದಿನಗಳಲ್ಲಿ 24 ಮಿ.ಮೀ. ಮಳೆಯಾಗಿದೆ~ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ಮೂರು ದಿನಗಳಲ್ಲಿ ಜಿಲ್ಲೆಯ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾದ ಮಳೆಯ ಪ್ರಮಾಣ (ಮಿ.ಮೀ.ಗಳಲ್ಲಿ): ಬಸವನ ಬಾಗೇವಾಡಿ- 7.6, ಮನಗೂಳಿ-3, ಅರೇಶಂಕರ-29, ಆಲಮಟ್ಟಿ-77, ಹೂವಿನ ಹಿಪ್ಪರಗಿ-19.2, ಮಟ್ಟಿಹಾಳ-86.

ವಿಜಾಪುರ-20, ನಾಗಠಾಣ-2.2, ಭೂತನಾಳ 5.6, ಹಿಟ್ನಳ್ಳಿ-7.8, ಮಮದಾಪುರ-25.8, ಕುಮಠಗಿ-35.4, ಕನ್ನೂರ-8, ಬಬಲೇಶ್ವರ-3.6.

ಮುದ್ದೇಬಿಹಾಳ-67, ನಾಲತವಾಡ-17, ತಾಳಿಕೋಟೆ-62, ಢವಳಗಿ-10.4.,
ಸಿಂದಗಿ-1, ಆಲಮೇಲ- 9, ಸಾಸಾಬಾಳ-94, ರಾಮನಳ್ಳಿ-24.4, ಕಡ್ಲೇವಾಡ-10.3, ದೇವರ ಹಿಪ್ಪರಗಿ- 14.3,  ಕೊಂಡಗೂಳಿ-8.,

ಇಂಡಿ-7, ನಾದ ಬಿ.ಕೆ.-16.2, ಹೊರ್ತಿ-7, ಹಲಸಂಗಿ-3.5, ಚಡಚಣ-6, ಝಳಕಿ-30.2 ಮಿ.ಮೀ. ಮಳೆಯಾಗಿದೆ.

ಸಿಂದಗಿ ತಾಲ್ಲೂಕು ಸಾಸಾಬಾಳದಲ್ಲಿ ಒಂದೇ ದಿನ 94 ಮಿ.ಮೀ. ಮಳೆಯಾಗಿದ್ದರೆ, ಸಿಂದಗಿ ಪಟ್ಟಣದಲ್ಲಿ ಜೂನ್ 2ರಂದು ಕೇವಲ ಒಂದು ಮಿ.ಮೀ. ಮಳೆಯಾಗಿದೆ. ವಿಜಾಪುರ ತಾಲ್ಲೂಕು ತಿಕೋಟಾ, ಇಂಡಿ ತಾಲ್ಲೂಕು ಅಗರಖೇಡಗಳಲ್ಲಿ ಕಳೆದ ಮೂರು ದಿನಗಳಲ್ಲಿ ಮಳೆ ಆಗಿಲ್ಲ ಎಂದು ಜಿಲ್ಲಾ ಸಾಂಖ್ಯಿಕ ಇಲಾಖೆಯವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT