ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಲಭ ಗೋಬರ್ ಗ್ಯಾಸ್...!

Last Updated 5 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಅಡುಗೆ ಅನಿಲದ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಹಣ ಪಾವತಿಸಿದರೂ ಗ್ಯಾಸ್ ಸಿಗದಂತಹ ಪರಿಸ್ಥಿತಿ ಇನ್ನೊಂದೆಡೆ. ಇಂತಹ ಪರಿಸ್ಥಿತಿಯಲ್ಲಿ ಕೇವಲ ಎರಡು ಹಸುಗಳನ್ನು ಸಾಕುವುದರ ಮೂಲಕ ವರ್ಷವಿಡೀ ಕುಟುಂಬಕ್ಕೆ ಬೇಕಾದಷ್ಟು ಗ್ಯಾಸನ್ನು ಸುಲಭ ಪದ್ಧತಿಯಲ್ಲಿ ಮನೆಯಲ್ಲಿಯೇ ಪಡೆಯಬಹುದು ಎಂದರೆ ನಂಬುತ್ತೀರಾ?

ಅಸಾಧ್ಯ ಎಂಬ ಈ ಮಾತನ್ನು ಸಾಧ್ಯ ಮಾಡಿ ತೋರಿಸಿದ್ದಾರೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಗ್ರಾಮದ ರೈತರಾದ ಸವಿತಾ ಮತ್ತು ವಿಜೇಂದ್ರ ದಂಪತಿ. ತಮ್ಮಲ್ಲಿರುವ ಎರಡು ಹಸುಗಳ ಸಗಣಿ ವ್ಯರ್ಥವಾಗುವುದನ್ನು ತಪ್ಪಿಸಲು, ಗೋಬರ್ ಗ್ಯಾಸನ್ನು ತಯಾರಿಸಿಕೊಳ್ಳಲು ಯೋಜನೆ ರೂಪಿಸಿಕೊಂಡಿದ್ದಾರೆ. ಭೂಮಿಯೊಳಗೆ ಗುಂಡಿ ನಿರ್ಮಿಸಿ, ಕಬ್ಬಿಣದ ಹಂಡೆ ತೋಡಿಸುವ ಹಳೆ ಪದ್ಧತಿಯನ್ನು ಅನುಸರಿಸಲು, ಇಂದು ಕನಿಷ್ಠ 30 ಸಾವಿರ ರೂಪಾಯಿಗಳು ವೆಚ್ಚವಾಗುತ್ತದೆ ಎಂದು ತಿಳಿದಾಗ, ಬದಲಿ ವ್ಯವಸ್ಥೆಯ ಬಗ್ಗೆ ಚಿಂತನೆ ನಡೆಸಿದರು. ಪ್ಲಾಸ್ಟಿಕ್ ತೊಟ್ಟಿಯ ಮೂಲಕ ಗೋಬರ್‌ಗ್ಯಾಸ್ ಸ್ಥಾಪಿಸಲು ಮುಂದಾಗಿ ಆ ನಿಟ್ಟಿನಲ್ಲಿ ಯಶಸ್ವಿಯಾಗಿ ಕಳೆದ ಮೂರೂವರೆ ವರ್ಷಗಳಿಂದ ಗ್ಯಾಸ್ ಪಡೆಯುತ್ತಿದ್ದಾರೆ. 

`ನಾಲ್ಕು ಸಾವಿರ ರೂಪಾಯಿಗಿಂತ ಕಡಿಮೆ ವೆಚ್ಚದಲ್ಲಿ ಗೋಬರ್ ಗ್ಯಾಸಿನ ಈ ಪದ್ಧತಿ ಅನುಸರಿಸಬಹುದು. ಸಣ್ಣ ರೈತರಿಗೆ ಇದು ವರದಾನ. ಗ್ಯಾಸಿನ ಜೊತೆಗೆ ಕೃಷಿಗೆ ಉಪಯುಕ್ತವಾದ ಗೊಬ್ಬರವನ್ನೂ ಪಡೆಯಬಹುದು. ಈ ಪದ್ಧತಿಯಲ್ಲಿ ಬೃಹತ್ ಗೋಬರ್ ಗ್ಯಾಸ್ ಬಳಕೆಯಲ್ಲಿ ಅನುಭವಿಸುವ ಗ್ಯಾಸ್ ಕಟ್ಟಿಕೊಳ್ಳುವಿಕೆ, ಗ್ಯಾಸ್ ಮೇಲೇರದಿರುವಿಕೆ, ಸಗಣಿಬಗ್ಗಡ ಕಟ್ಟುವಿಕೆಯಂತಹ ಸಮಸ್ಯೆಯಿಂದ ಮುಕ್ತವಾಗಿದೆ' ಎನ್ನುತ್ತಾರೆ ದಂಪತಿ.

ಹೀಗಿದೆ ತಯಾರಿ
ಸುಲಭ ಗ್ಯಾಸ್ ತಯಾರಿಸಲು ಕೇವಲ ಪಾಲಿಥಿನ್ ಪ್ಲಾಸ್ಟಿಕ್, ಮೂರು ಪ್ಲಾಸ್ಟಿಕ್ ಪೈಪುಗಳು ಮತ್ತು ಅಡುಗೆ ಮನೆಯವರೆಗೆ ಬರಬಹುದಾದಂತಹ ರಬ್ಬರ್ ಪೈಪ್ ಹಾಗೂ ಒಲೆ ಸಾಕು. ಇಷ್ಟಿದ್ದರೆ ಗ್ಯಾಸ್ ತಯಾರಿ ಅತಿ ಸುಲಭ.

ಎರಡು ದನಗಳ ಸಗಣಿಯನ್ನು ಬಳಸುವ ಸಾಮರ್ಥ್ಯವಿರುವ ಗ್ಯಾಸ್ ಮಾದರಿ ತಯಾರಿಸಲು, 200 ಜಿ.ಎಸ್.ಎಂನ 11 ಅಡಿ ಉದ್ದ, 6 ಅಡಿ ಅಗಲ, 5 ಅಡಿ ಎತ್ತರದ ಪಾಲಿಥಿನ್ ಪ್ಲಾಸ್ಟಿಕನ್ನು ಸುತ್ತಲೂ ಗಾಳಿ ಹೋಗದಂತೆ ಮೋಲ್ಡಿಂಗ್ ಮಾಡಿಸಬೇಕು. ಅದರ ಒಂದು ಬದಿಯಲ್ಲಿ ಎರಡು ಇಂಚಿನ ಪೈಪು ನುಗ್ಗುವಷ್ಟು ದೊಡ್ಡದಾದ ತೂತನ್ನು ನಿರ್ಮಿಸಿಕೊಂಡು ಅದಕ್ಕೆ ಸಗಣಿ ಬಗ್ಗಡವನ್ನು ಹುಯ್ಯುವ ಪೈಪನ್ನು ಅಳವಡಿಸಬೇಕು. ಅದರ ವಿರುದ್ಧ ದಿಕ್ಕಿನಲ್ಲಿ ಪುನಃ ಎರಡು ಇಂಚಿನ ಪೈಪು ನುಗ್ಗುವಷ್ಟು ದೊಡ್ಡದಾದ ತೂತನ್ನು ನಿರ್ಮಿಸಿ, ಅದಕ್ಕೆ ಸುಮಾರು 5 ಅಡಿ ಉದ್ದದ ಪೈಪನ್ನು ಅಳವಡಿಸಬೇಕು. ಇದು ಗ್ಯಾಸ್ ಪಡೆದ ಬಳಿಕ ಕದಡಿದ ಸಗಣಿ ಬಗ್ಗಡ ಹೊರ ಹೋಗುವ ದಾರಿಯಾಗಿದೆ.

ಚೀಲದ ಮೇಲ್ಭಾಗಕ್ಕೆ ಅರ್ಧ ಇಂಚು ರಬ್ಬರ್ ಪೈಪನ್ನು ಅಳವಡಿಸಿ ಅದಕ್ಕೆ ನೇರವಾಗಿ ಅಡುಗೆ ಮನೆಯ ಒಲೆಗೆ ಸಂಪರ್ಕ ನೀಡಬೇಕು. ಇದರ ಮಧ್ಯದಲ್ಲಿ ಒಂದು `ಗೇಟ್‌ಹೋಲ್' ಅಳವಡಿಸಿಕೊಂಡರೆ ಗ್ಯಾಸಿನ ಪ್ರಮಾಣವನ್ನು ನಿಯಂತ್ರಿಸಲು ಅನುಕೂಲವಾಗುತ್ತದೆ.

ಪ್ರತಿದಿನ ಸಗಣಿಯನ್ನು ಕದಡಿ ಹುಯ್ಯುವುದರಿಂದ ಮುಂಭಾಗದ ಪೈಪಿನ ಮೂಲಕ ಪ್ಲಾಸ್ಟಿಕ್ ಚೀಲಕ್ಕೆ ತುಂಬುತ್ತದೆ. ಒಳ ಹೋಗುವ ಸಗಣಿಬಗ್ಗಡದಲ್ಲಿ ಉಂಟಾಗುವ ಗ್ಯಾಸ್ ಮೇಲ್ಮುಖವಾಗಿ ಒತ್ತಡ ಹೊಂದುವುದರಿಂದ, ಮೇಲ್ಮುಖದಲ್ಲಿ ಅಳವಡಿಸಿರುವ ಪೈಪಿನ ಮೂಲಕ ಇಂಧನವಾಗಿ ಸುಲಭವಾಗಿ ಗ್ಯಾಸನ್ನು ಪಡೆಯಬಹುದು.

ಪ್ಲಾಸ್ಟಿಕ್ ಚೀಲದಲ್ಲಿ ಸಗಣಿಬಗ್ಗಡದ ಒತ್ತಡ ಹೆಚ್ಚಿದಂತೆ ಹಿಂಭಾಗದಲ್ಲಿ ಅಳವಡಿಸಿರುವ ಪೈಪಿನ ಮೂಲಕ ಹೊರಹೋಗಲು ಅವಕಾಶ ಕಲ್ಪಿಸಿರುವುದರಿಂದ ತ್ಯಾಜ್ಯ ಸಗಣಿಬಗ್ಗಡ ಹೊರಹೋಗುತ್ತದೆ. ಇದನ್ನು ಸಂಗ್ರಹಿಸುವುದರಿಂದ ಉತ್ತಮ ಗೊಬ್ಬರವಾಗಿ ಮಾರ್ಪಡುತ್ತದೆ.

ಯಶಸ್ವಿ ಮೂರು ವರ್ಷ
`ಹೊಸದಾಗಿ ನಿರ್ಮಿಸಿಕೊಂಡಿದ್ದರಿಂದ, ಗ್ಯಾಸ್ ಮಾದರಿ ತಯಾರಿಸಲು 4200 ರೂಪಾಯಿ ವೆಚ್ಚವಾಗಿದೆ. ಎರಡು ದನಗಳ ಸಗಣಿಯನ್ನು ಪ್ರತಿನಿತ್ಯ ಬಳಸುವ ನಾವು, ಕಳೆದ ಮೂರುವರೆ ವರ್ಷದಿಂದ ಇದೇ ಗ್ಯಾಸನ್ನು ಬಳಸುತ್ತಿದ್ದೇವೆ. ದಿನದಲ್ಲಿ ನಾಲ್ಕು ಗಂಟೆಗಳ ಕಾಲ ಸರಾಗವಾಗಿ ಉರಿಸಬಹುದಾದಷ್ಟು ಪ್ರಮಾಣದಲ್ಲಿ ಗ್ಯಾಸ್ ಬರುವುದರಿಂದ ಇದರಲ್ಲಿಯೇ ನೀರನ್ನು ಸಹ ಕಾಯಿಸಬಹುದು. ದನಗಳನ್ನು ಸಾಕಿರುವ ಪ್ರತಿ ರೈತರೂ ಈ ಪದ್ಧತಿಯನ್ನು ಅಳವಡಿಸಿಕೊಂಡರೆ, ಸಬ್ಸಿಡಿ ಗ್ಯಾಸಿನ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಬಹುದು' ಎನ್ನುತ್ತಾರೆ ಸವಿತಾ.

`ರೈತರಿಗೆ ಗೋವುಗಳು ವರದಾನವಿದ್ದಂತೆ. ಗೋವುಗಳ ಸಗಣಿಯನ್ನು ಕೊಳೆಯುವ ಗೊಬ್ಬರಕ್ಕೆ ಮಾತ್ರ ಬಳಸಿಕೊಳ್ಳದೇ, ಅದರಿಂದ ಗ್ಯಾಸ್ ಪಡೆದು ನಂತರ ಗೊಬ್ಬರವಾಗಿ ಬಳಸಿಕೊಂಡರೆ ಲಾಭ ದ್ವಿಗುಣವಾಗುತ್ತದೆ. ದನ ಸಾಕಿರುವ ಎಲ್ಲಾ ರೈತರೂ ದುಬಾರಿ ವೆಚ್ಚದ ಗೋಬರ್‌ಗ್ಯಾಸ್ ಪಡೆಯಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಸುಲಭವಾಗಿ ಗ್ಯಾಸ್ ತಯಾರಿಸುವ ಬಗ್ಗೆ ದಾರದಹಳ್ಳಿ ಗ್ರಾಮದ ಪಶು ಆಸ್ಪತ್ರೆಯ ಹಿರಿಯ ಪಶು ಚಿಕಿತ್ಸಕ ಕ.ದಾ. ಕೃಷ್ಣರಾಜು ಅವರೊಡನೆ ಚರ್ಚಿಸಿದೆವು. ಪ್ಲಾಸ್ಟಿಕ್‌ನಲ್ಲಿ ಗ್ಯಾಸ್ ತಯಾರಿಸುವ ಬಗ್ಗೆ ಚಿಂತಿಸಿ, ಮಾದರಿ ತಯಾರಿಸಲಾಯಿತು. ನೂತನ ತಯಾರಿಯಾಗಿದ್ದರಿಂದ ವೆಚ್ಚ ಹೆಚ್ಚಾಗಿದ್ದು, ವೆಚ್ಚ ಕಡಿತಕ್ಕೆ ಇನ್ನಷ್ಟು ಅವಕಾಶಗಳಿವೆ.

ಪ್ಲಾಸ್ಟಿಕ್ ಗೋಬರ್ ಗ್ಯಾಸ್‌ನಲ್ಲಿ ಪ್ಲಾಸ್ಟಿಕ್ ಬಗ್ಗೆ ಹೆಚ್ಚು ಕಾಳಜಿವಹಿಸಿ, ಪ್ಲಾಸ್ಟಿಕ್ ತೂತಾಗದಂತೆ ಎಚ್ಚರಿಕೆ ವಹಿಸಿದರೆ ಸಾಕು. ಮತ್ತೆ ಯಾವ ತೊಂದರೆಯೂ ಬರದು. ಕಡಿಮೆ ವೆಚ್ಚದಲ್ಲಿ ಸುಲಭ ಮಾರ್ಗದಲ್ಲಿ ಗ್ಯಾಸ್ ಪಡೆಯಲು ಇದು ಉಪಯುಕ್ತ ಕ್ರಮವಾಗಿದೆ ಎನ್ನುತ್ತಾರೆ ವಿಜೇಂದ್ರ. ಸಂಪರ್ಕಕ್ಕೆ 9481589675.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT