ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಯದಲ್ಲಿ ಹೆದ್ದಾರಿ ದ್ವಿಪಥ: ಆಮೆವೇಗದ ಕಾಮಗಾರಿ- ಜನರ ಆಕ್ರೋಶ

Last Updated 23 ಸೆಪ್ಟೆಂಬರ್ 2011, 8:00 IST
ಅಕ್ಷರ ಗಾತ್ರ

ಸುಳ್ಯ: ರಾಜ್ಯ ಹೆದ್ದಾರಿ ದ್ವಿಪಥಗೊಳಿಸುವ ಯೋಜನೆಯ ಅಂಗವಾಗಿ ಸುಳ್ಯ ಪಟ್ಟಣದ ಮುಖ್ಯರಸ್ತೆಯ ಕಾಮಗಾರಿ ಆರಂಭವಾದರೂ, ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕಳೆದ 8ರಿಂದ ಹೆದ್ದಾರಿ ಬಂದ್ ಮಾಡಿ ಕಾಮಗಾರಿ ಆರಂಭಿಸುವಂತೆ ಮತ್ತು 40 ದಿದ ಒಳಗೆ ಕಾಮಗಾರಿ ಮುಗಿಸಿಕೊಡುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಆದರೆ ಹೆದ್ದಾರಿ ಬಂದ್‌ಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಅದರಂತೆ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.

ಇದೀಗ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ತಮಿಳುನಾಡು ಮೂಲದ ಕೃಷ್ಣಮೋಹನ್ ಕನ್‌ಸ್ಟ್ರಕ್ಷನ್ ಕಂಪೆನಿ ಬಳಿ ಅಗತ್ಯ ಯಂತ್ರೋಪಕರಣಗಳೂ ಇಲ್ಲ, ಸಾಮಗ್ರಿಗಳೂ ಇಲ್ಲ. ಅವರು ಪೂರ್ಣವಾಗಿ ತಯಾರಿ ನಡೆಸಿಯೂ ಇಲ್ಲ ಎಂದು ಕೆಆರ್‌ಡಿಸಿಎಲ್ ಎಂಜಿನಿಯರ್ ಒಪ್ಪಿಕೊಂಡಿದ್ದಾರೆ.

ಹೆದ್ದಾರಿಯನ್ನು ಪೂರ್ಣ ಬಂದ್ ಮಾಡಿ ಕಾಮಗಾರಿ ನಡೆಸುತ್ತಿದ್ದರೆ ಈಗಿನಷ್ಟೇ ಕೆಲಸ ನಡೆಯುತ್ತಿತ್ತೇ ಹೊರತು ಅದಕ್ಕಿಂತ ಹೆಚ್ಚಿಗೆ ನಡೆಯುತ್ತಿರಲಿಲ್ಲ ಎಂಬ ಅಂಶ ಸಾರ್ವಜನಿಕರಿಗೂ, ಜಿಲ್ಲಾಡಳಿತಕ್ಕೂ ಈಗ ಮನವರಿಕೆಯಾಗಿದೆ.

ಜನಪ್ರತಿನಿಧಿಗಳ ನಿರ್ಲಕ್ಷ್ಯ: ಒಳಚರಂಡಿ ಮಂಡಳಿಯವರು ಪೈಪ್ ಕೊರತೆಯಿಂದ ಕಾಮಗಾರಿ ಸ್ಥಗಿತ ಮಾಡಿದ್ದಾರೆ. ದೂರವಾಣಿ ಕೇಬಲ್‌ಗಳು, ಕುಡಿಯುವ ನೀರಿನ ಪೈಪ್‌ಗಳು ಅಸ್ತವ್ಯಸ್ತವಾಗಿದ್ದು, ಸ್ಥಳೀಯಾಡಳಿತ ಮತ್ತು ವಿವಿಧ ಇಲಾಖೆಗಳ ಮಧ್ಯೆ ಸಮನ್ವಯ ಇಲ್ಲದೆ ಕಾಮಗಾರಿ ನಡೆಯುತ್ತಿದೆ ಎಂಬ ಆರೋಪ ಸ್ಥಳೀಯರದ್ದು,

ಕಳೆದ 5ರಂದು ಅಧಿಕಾರಿಗಳ `ಗೌಪ್ಯ~ ಸಭೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಹೆದ್ದಾರಿ ಬಂದ್ ಮಾಡಲು ಶಿಫಾರಸು ಮಾಡಿದ ಸ್ಥಳೀಯ ಶಾಸಕ ಎಸ್.ಅಂಗಾರ, ರಸ್ತೆ ಕಾಮಗಾರಿ ಬಗೆಗೆ ಇಷ್ಟೆಲ್ಲಾ ಗೊಂದಲ ನಡೆದರೂ ತಟಸ್ಥರಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರೂ ಗಮನ ಹರಿಸಿಲ್ಲ ಎಂದೂ ಆರೋಪಿಸುತ್ತಾರೆ.

ಹೆಚ್ಚು ಗಟ್ಟಿಯಾಗಿರಲಿ: ಹೆಚ್ಚಿನ ವಾಹನಗಳ ಸಂಚಾರ, ಒತ್ತಡವಿರುವ ಪಟ್ಟಣದ ರಸ್ತೆಯು ಹೆಚ್ಚಿನ ಭಾರವನ್ನು ಹೊರುವ ಸಾಮರ್ಥ್ಯ ಹೊಂದಿರಬೇಕು. ಗ್ರಾಮೀಣ ರಸ್ತೆಗಳಷ್ಟೇ ದಪ್ಪಕ್ಕೆ ಈ ರಸ್ತೆಯನ್ನು ನಿರ್ಮಿಸಿದರೆ ಅದರ ಆಯುಷ್ಯ ಕೆಲವೇ ತಿಂಗಳಷ್ಟೇ ಇರಬಹುದು ಎಂದು ಸುಳ್ಯದ ವಾಣಿಜ್ಯೋದ್ಯಮಿಗಳ ಸಂಘ ಸಲಹೆ ಮಾಡಿದೆ.
ಹೆದ್ದಾರಿಯನ್ನು ಎಲ್ಲಾ ಕಡೆಗೆ ಒಂದೇ ದಪ್ಪಕ್ಕೆ ಡಾಂಬರೀಕರಣ ಮಾಡುವ ಬಗ್ಗೆ ಕೆಆರ್‌ಡಿಸಿಎಲ್‌ನವರು ತಯಾರಿಸಿರುವ ಅಂದಾಜು ಪಟ್ಟಿ ಸರಿಯಲ್ಲ ಎಂದು ಸಂಘದ ಅಧ್ಯಕ್ಷ ಕೆ.ವಿಶ್ವನಾಥ ರಾವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

20 ಸೆಂಟಿಮೇಟರ್ ಜಲ್ಲಿ ಕಲ್ಲು ಮತ್ತು ಅದರ ಹುಡಿಯ ಪದರ, ಅದರ ಮೇಲೆ 25 ಸೆಂ.ಮೀ. ಸಾಮಾನ್ಯ ಜಲ್ಲಿಮಿಕ್ಸ್, ಅದರ ಮೇಲೆ 5 ಸೆಂಟಿ ಮೀಟರ್ ದಪ್ಪಕ್ಕೆ ಸಾಮನ್ಯ ಟಾರ್ ಪದರ. ಅದರ ಮೇಲೆ 5 ಸೆ.ಮೀ. ಹೈಗ್ರೇಡ್ ಟಾರ್ ಪದರ ಇದು ಪಟ್ಟಣ ಹಾಗೂ ಗ್ರಾಮೀಣ ಎಲ್ಲಾ ಕಡೆಗೂ ಒಂದೇ ಎಂದು ನಿಗಮ ತಿಳಿಸಿದೆ.

ಆದರೆ ಮೈಸೂರಿನಿಂದ ಸಂಪಾಜೆಯವರೆಗೆ ಇದಕ್ಕಿಂತಲೂ ದಪ್ಪದಲ್ಲಿ ಕಾಮಗಾರಿ ಮಾಡಲಾಗಿದೆ. ಇಲ್ಲಿ ಮಳೆ ಕೂಡಾ ಹೆಚ್ಚು ಬೀಳುತ್ತದೆ. ಪಟ್ಟಣದಲ್ಲಿ ವಾಹನಗಳ ಸಂಚಾರವೂ ಹೆಚ್ಚು ಇರುವುದರಿಂದ ಹೆಚ್ಚು ದಪ್ಪಕ್ಕೆ ಡಾಮರು ಹಾಕಬೇಕು ಎಂದು ಅವರು ಆಗ್ರಹಿಸಿದರು. ಆದರೆ ಈಗ ನಡೆಯುತ್ತಿರುವ ಕಾಮಗಾರಿಗೆ ಸಂಘ ವಿರೋಧ ಮಾಡುವುದಿಲ್ಲ ಎಂದೂ ಭರವಸೆ ನೀಡಿದರು.

ಸಂಘದ ಪದಾಧಿಕಾರಿಗಳಾದ ಸುಧಾಕರ ರೈ, ದಯಾನಂದ ಕೊಯಿಂಗೋಡಿ, ಎಸ್. ಸಂಶುದ್ದೀನ್, ಜಯಂತ ಕೆದಿಲಾಯ, ಗಣೇಶ್ ಭಟ್, ಗೋಕುಲ್‌ದಾಸ್, ಪಿ.ಕೆ.ಉಮೇಶ್, ವಿಜಯಮ ಶಾಫಿ, ಸುಂದರ್ ರಾವ್, ಪಿ.ಎಸ್.ಗಂಗಾಧರ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT