ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಆರೋಪ: ಬಾಕಿ ಕಡತ 20 ಮಾತ್ರ !

ವರ್ಗಾವಣೆಗೆ ಶಾಸಕರ ಸಂಚು: ಎ.ಸಿ.ಆಯೀಷಾ ಆರೋಪ
Last Updated 13 ಜುಲೈ 2013, 10:19 IST
ಅಕ್ಷರ ಗಾತ್ರ

ಬಂಗಾರಪೇಟೆ: ವರ್ಷವಾದರೂ ಕಡತಗಳನ್ನು ವಿಲೇವಾರಿ ಮಾಡದೆ ಜನರನ್ನು ಅಲೆದಾಡಿಸುತ್ತಾರೆ ಎಂದು ನನ್ನ ವಿರುದ್ಧ ಇಲ್ಲಿನ ಶಾಸಕ ಕೆ.ಎಂ.ನಾರಾಯಣಸ್ವಾಮಿ ಮಾಡಿರುವ ಆರೋಪ ಆಧಾರರಹಿತ. ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ತಿದ್ದುಪಡಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳು ಸಾವಿರಾರು ಅಲ್ಲ. ಕೇವಲ 20 ಮಾತ್ರ ಎಂದು ಉಪವಿಭಾಗಾಧಿಕಾರಿ ಆಯೀಷಾ ಪರ್ವೀನ್ ಹೇಳಿದ್ದಾರೆ.

ಶುಕ್ರವಾರ ಪಟ್ಟಣದ ತಾಲ್ಲೂಕು ಕಚೇರಿಗೆ ಭೇಟಿ ನೀಡಿ ತಿದ್ದುಪಡಿಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿದ ಬಳಿಕ ಪ್ರಜಾವಾಣಿ'ಯೊಡನೆ ಮಾತನಾಡಿ, ತನ್ನನ್ನು ಬೇರೆಡೆಗೆ ವರ್ಗಾವಣೆ ಮಾಡಿಸಲು ಶಾಸಕರು ಉದ್ದೇಶಪೂರ್ವಕವಾಗಿ ಸಂಚು ರೂಪಿಸಿದ್ದಾರೆ. ಅದಕ್ಕಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಸಭೆಗಳಲ್ಲಿ ಎರಡು ಬಾರಿ ಇಲ್ಲಿನ ಶಾಸಕರು ನನ್ನ ಮೇಲೆ ಆರೋಪ ಮಾಡಿದ್ದಾರೆ. ಸಾವಿರಾರು ಕಡತಗಳನ್ನು ವಿಲೇವಾರಿ ಮಾಡದೆ ಜನರಿಗೆ ತೊಂದರೆ ನೀಡುತ್ತಿರುವೆ ಎಂದು ಆರೋಪಿಸಿದ್ದಾರೆ. ಆದರೆ ಅವೆಲ್ಲವೂ ಸುಳ್ಳು. ಶಾಸಕರು ಆರೋಪಿಸಿರುವಂತೆ, ತಿದ್ದುಪಡಿಗೆ ಸಂಬಂಧಿಸಿ ಈ ತಾಲ್ಲೂಕಿನಲ್ಲಿ ಇತ್ಯರ್ಥಕ್ಕೆ ಉಳಿದಿರುವುದು ಕೇವಲ 20 ಕಡತ ಮಾತ್ರ ಎಂದರು.

ಉಪವಿಭಾಗಾಧಿಕಾರಿ ಕಚೇರಿಗೆ ಬಂದು ಜನ ತೊಂದರೆ ಅನುಭವಿಸುವುದು ಬೇಡವೆಂದು ನಾನೇ ಆಯಾ ತಾಲ್ಲೂಕು ಕಚೇರಿಗೆ ಭೇಟಿ ನೀಡಿ ಕಡತಗಳನ್ನು ವಿಲೇವಾರಿ ಮಾಡುತ್ತಿರುವೆ. ತಿದ್ದುಪಡಿ ಕಡತಗಳು ವಿಲೇವಾರಿಯಾಗುತ್ತಿವೆ. ಶಾಸಕರು ಹೇಳಿದಂತೆ ಸಾವಿರಾರು ಕಡತಗಳನ್ನು ಬಾಕಿ ಉಳಿಸಿಕೊಂಡಿಲ್ಲ ಎಂದರು.

ಇಡೀ ತಾಲ್ಲೂಕಿಗೆ ಸಂಬಂಧಿಸಿದ ಕೇವಲ 20 ಕಡತಗಳು ಮಾತ್ರ ವಿಲೇವಾರಿ ಮಾಡಬೇಕಿದೆ. ಅದರಲ್ಲಿ ಇರುವ ಕೆಲ ಕಡತಗಳು ನನ್ನ ಅಧಿಕಾರದ ವ್ಯಾಪ್ತಿಗೆ ಬರುವುದಿಲ್ಲ. ಅವು ಮೇಲ್ಮನವಿಗೆ ಸಲ್ಲಿಸುವಂಥವು. ನೈಜ ಕಾರಣ ತಿಳಿಯದೆ ಶಾಸಕರು ನನ್ನ ವ್ಯಕ್ವಿತ್ವಕ್ಕೆ ಕುಂದು ತರುತ್ತಿದ್ದಾರೆ. 2 ಸಾವಿರ ಕಡತ ವಿಲೇವಾರಿಯಾಗದೆ ಬಾಕಿ ಉಳಿದಿದೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ನನ್ನ ವರ್ಗಾವಣೆಗೆ ಕಾನೂನು ಅಡ್ಡಿಯಾಗಿರುವುದರಿಂದ ಸಾರ್ವಜನಿಕ ಹಿತಾಸಕ್ತಿ ಕಾರಣ ಒಡ್ಡಿ ವರ್ಗಾವಣೆ ಮಾಡಿಸಲು ಹುನ್ನಾರ ನಡೆಸಲಾಗಿದೆ ಎಂದು ಆಯೀಷಾ ತಿಳಿಸಿದರು.

ದಲ್ಲಾಳಿಗಳ ಹಾವಳಿ: ಪಟ್ಟಣದಲ್ಲಿರುವ ತಾಲ್ಲೂಕು ಕಚೇರಿಯಲ್ಲಿ 150ಕ್ಕೂ ಹೆಚ್ಚು ಮಂದಿ ದಳ್ಳಾಳಿಗಳು ವ್ಯವಹಾರ ನಡೆಸುತ್ತಿದ್ದಾರೆ. ಅಲ್ಲದೆ  ನಕಲಿ ದಾಖಲೆಗಳೂ ಹೆಚ್ಚುತ್ತಿವೆ. ಈಗಾಗಲೇ ದುರಸ್ತಿ ಮಾಡಿಸಿ ಪೈಕಿ ಸಂಖ್ಯೆ ಹಂಚಿಕೆಯಾಗಿರುವ ಗೋಮಾಳಗಳಿಗೆ ಸಂಬಂಧಿಸಿದ ಆರ್‌ಟಿಸಿಗಳು ತಿದ್ದುಪಡಿಗೆ ಹೆಚ್ಚಾಗಿ ಬರುತ್ತಿವೆ. ಜತೆಗೆ ತಿದ್ದುಪಡಿಗೆ ಪೂರಕ ದಾಖಲೆ ಸಲ್ಲಿಸದ ಕೆಲ ಕಡತಗಳನ್ನು ಮರು ಪರಿಶೀಲನೆಗಾಗಿ (ಅಬ್‌ಸರ್‌ವೇಶನ್) ಹಿಂದಿರುಗಿಸಲಾಗಿದೆ ಎಂದು ಹೇಳಿದರು.

ಆರೋಪ: ಜು.3ರಂದು ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕ ಕೆ.ಎಂ.ನಾರಾಯಣಸ್ವಾಮಿ,  ವರ್ಷವಾದರೂ ಕಡತಗಳನ್ನು ವಿಲೇವಾರಿ ಮಾಡದೆ ಜನರನ್ನು ಅಲೆದಾಡಿಸುತ್ತಾರೆ ಎಂದು ಅಧಿಕಾರಿ ವಿರುದ್ಧ ಆರೋಪ ಮಾಡಿದ್ದರು. ಅದಕ್ಕೆ ಮಾಲೂರು ಶಾಸಕ ಕೆ.ಎಸ್.ಮಂಜುನಾಥರೂ ದನಿಗೂಡಿಸಿದ್ದರು. ನಂತರ ಬುಧವಾರ ನಡೆದ ಸಭೆಯಲ್ಲಿ ಈ ಇಬ್ಬರ ಜೊತೆಗೆ ಶಾಸಕ ಆರ್.ವರ್ತೂರು ಪ್ರಕಾಶ್ ಕೂಡ ಅಧಿಕಾರಿ ವಿರುದ್ಧ ವಿಳಂಬ ಕಾರ್ಯನೀತಿ ಮತ್ತು ಭ್ರಷ್ಟಾಚಾರ ಆರೋಪ ಮಾಡಿದ್ದರು. ಅದಾಗಿ ಎರಡನೇ ದಿನಕ್ಕೆ ಅಧಿಕಾರಿಯು ಬಂಗಾರಪೇಟೆ ತಾಲ್ಲೂಕು ಕಚೇರಿಗೆ ಭೇಟಿ ಕಡತಗಳನ್ನು ಪರಿಶೀಲಿಸಿರುವುದು ಹೊಸ ಬೆಳವಣಿಗೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT