ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಮಾಹಿತಿ ನೀಡಿ ಸಿಎಂ ಆಯ್ಕೆ

Last Updated 15 ಫೆಬ್ರುವರಿ 2011, 18:20 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ತಿ ವಿವರಗಳಿಗೆ ಸಂಬಂದಿಸಿದಂತೆ ಸುಳ್ಳು ಮಾಹಿತಿ ನೀಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2008ರ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ ಎಂದು ಜೆಡಿಎಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಆರೋಪಿಸಿದರು.

ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರು ಸುಳ್ಳು ಮಾಹಿತಿ ನೀಡಿದ್ದಾರೆ ಎಂಬ ಬಗ್ಗೆ ಕೆಲವೊಂದು ದಾಖಲೆ ನೀಡಿದರು.
ಕೆಲವೊಂದು ವಿಮಾ ಪಾಲಿಸಿಯ ಮಾಹಿತಿಯನ್ನು ಬಹಿರಂಗಗೊಳಿಸಿಲ್ಲ. ಅಷ್ಟೇ ಅಲ್ಲದೇ ಶಿಕಾರಿಪುರ ಸೇರಿದಂತೆ ಕೆಲವು ಕಡೆಗಳಲ್ಲಿನ ಜಮೀನಿನ ಬೆಲೆಯನ್ನು ಅತಿ ಕಡಿಮೆಯಾಗಿ ನಮೂದು ಮಾಡಿದ್ದಾರೆ. ಈ ಮೂಲಕ ಚುನಾವಣಾ ಅಕ್ರಮ ಎಸಗಿದ್ದಾರೆ ಎಂದು ಅವರು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ, ಭಾರತೀಯ ದಂಡ ಸಂಹಿತೆಯ ವಿವಿಧ ಕಲಮುಗಳ ಅಡಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅವರನ್ನು ಶಾಸಕ ಸ್ಥಾನದಿಂದಲೇ ಅನರ್ಹಗೊಳಿಸಬೇಕು ಎಂದು ಸಂಬಂಧಿತ ಅಧಿಕಾರಿಗಳಿಗೆ ಬಂಗಾರಪ್ಪ ಮನವಿ ಮಾಡಿಕೊಂಡರು.

‘ಇಂತಹ ಸುಳ್ಳು ಮಾಹಿತಿ ನೀಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವ ಅಧಿಕಾರ ಆಯೋಗಕ್ಕೆ ಇದೆ. ಚುನಾವಣಾ ಅಧಿಕಾರಿಯೂ ಕ್ರಮ ತೆಗೆದುಅೊಳ್ಳಬಹುದಾಗಿದೆ. ಈ ಬಗ್ಗೆ ಸಂಪೂರ್ಣ ವರದಿಯನ್ನು ಶಿಕಾರಿಪುರದ ಚುನಾವಣಾ ಅಧಿಕಾರಿ ಹಾಗೂ ಆಯೋಗಕ್ಕೆ ಕಳುಹಿಸಲಾಗಿದೆ. ಮುಂದೆ ಅವರು ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕು ಎಂದರು.

ಮುಂದಿನ ಹೆಸರು ನನ್ನದೇ: ಒಂದು ವೇಳೆ, ಆಸ್ತಿ ಘೋಷಣೆಯಲ್ಲಿ ತಪ್ಪು ಇರುವುದು ಕಂಡು ಬಂದರೆ ಅವರನ್ನು ಅವರ ಸ್ಥಾನದಿಂದ ಅನೂರ್ಜಿತಗೊಳಿಸಿ, ಅವರದ್ದೇ ಕ್ಷೇತ್ರದ ಇನ್ನೊಂದು ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅಧಿಕಾರ ಚುನಾವಣಾ ಅಧಿಕಾರಿಗೆ ಇದೆ.

‘ಈ ನಿಟ್ಟಿನಲ್ಲಿ ಹೋದರೆ, ಯಡಿಯೂರಪ್ಪನವರ ನಂತರ ಅದೇ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿನಲ್ಲಿ ಮುಂದಿನ ಹೆಸರು ನನ್ನದೇ ಇದೆ’ ಎಂದು ಅವರು ಹೇಳಿದರು.
ರಾಜೀನಾಮೆ ಕೇಳಿ ಪ್ರಯೋಜವಿಲ್ಲ: ‘ಯಡಿಯೂರಪ್ಪನವರು ರಾಜೀನಾಮೆ ಕೊಡಲಿ ಎಂದು ನಾನು ಕೇಳುವುದಿಲ್ಲ. ಅದನ್ನು ಕೇಳಿಯೂ ಪ್ರಯೋಜನ ಇಲ್ಲ. ಅವರನ್ನು ಕಾನೂನಿನ ಅಡಿ ಶಿಕ್ಷೆಗೆ ಒಳಪಡಿಸಬೇಕು ಎನ್ನುವುದು ನನ್ನ ಆಶಯ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಅತ್ತ ಅನಂತಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ಕಾಯುತ್ತಾ ಇದ್ದಾರೆ. ಇತ್ತ ಯಡಿಯೂರಪ್ಪ ಕುರ್ಚಿ ಬಿಡಲು ಒಪ್ಪುತ್ತಿಲ್ಲ. ತಮ್ಮ ಸ್ಥಾನವನ್ನು ಅಷ್ಟು ಸುಲಭದಲ್ಲಿ ಬೇರೆಯವರಿಗೆ ನೀಡುವ ಪ್ರವೃತ್ತಿ ಯಡಿಯೂರಪ್ಪನವರಲ್ಲಿ ಇಲ್ಲ.

ಈ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವ ಪ್ರಸಂಗ ಬಂದರೆ, ಮಧ್ಯಂತರ ಚುನಾವಣೆಗೆ ಅವರು ಹೋಗುವ ಸಾಧ್ಯತೆಗಳೇ ಹೆಚ್ಚು. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ಚುನಾವಣೆ ಆಗುವ ನಿರೀಕ್ಷೆ ಇದೆ’ ಎಂದು ಇನ್ನೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ರಾಜ್ಯದಾದ್ಯಂತ ಪ್ರವಾಸ: ಜೆಡಿಎಸ್ ಪಕ್ಷವನ್ನು ಬಲಪಡಿಸಲು ರಾಜ್ಯದಾದ್ಯಂತ ಪ್ರವಾಸ ಹಮ್ಮಿಕೊಂಡಿರುವ ಬಗ್ಗೆ ಅವರು ವಿವರಿಸಿದರು. ಶಿವಮೊಗ್ಗ, ಮಂಗಳೂರು, ಉಡುಪಿ, ಕಾರವಾರ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿಯೂ ಶೀಘ್ರದಲ್ಲಿ ಪ್ರವಾಸ ನಡೆಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT