ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸುಳ್ಳು ಹೇಳುವುದರಲ್ಲಿ ಯಾಸಿನ್ ನಿಸ್ಸೀಮ'

Last Updated 5 ಡಿಸೆಂಬರ್ 2012, 6:27 IST
ಅಕ್ಷರ ಗಾತ್ರ

ರಾಯಚೂರು: ರಾಜ್ಯದ ನಗರ ಮತ್ತು ಪಟ್ಟಣ ಅಭಿವೃದ್ಧಿಗೆ ಬಿಜೆಪಿ ಸರ್ಕಾರವು ನಿರೀಕ್ಷೆಗೂ ಮೀರಿ ಅನುದಾನ ದೊರಕಿಸಿದೆ. ರಾಯಚೂರು ನಗರಸಭೆಗೆ 100 ಕೋಟಿ ದೊರಕಿಸಿದೆ. ಈ ನಗರ ಅಭಿವೃದ್ಧಿಗೆ ಸರ್ಕಾರ ಹಣ ದೊರಕಿಸದೆ. ಆದರೆ, ಶಾಸಕ ಸಯ್ಯದ್ ಯಾಸಿನ್ ಅವರು ತಾವೇ ಸರ್ಕಾರದ ಮೇಲೆ ಒತ್ತಡ ಹೇರಿ ಅನುದಾನ ತಂದಿರುವುದಾಗಿ ಹೇಳಿಕೊಂಡಿರುವುದು ಸುಳ್ಳು. ಸುಳ್ಳು ಹೇಳುವುದರಲ್ಲಿ ಶಾಸಕ ಯಾಸಿನ್ ಅವರು ನಿಸ್ಸೀಮರು ಎಂದು ಮಾಜಿ ಶಾಸಕ ಎ. ಪಾಪಾರೆಡ್ಡಿ ಆರೋಪಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ವರ್ಷ ರಾಯಚೂರು ನಗರಸಭೆಗೆ ಸರ್ಕಾರ 30 ಕೋಟಿ ಕೊಟ್ಟಿದೆ. ತಮ್ಮ ಒತ್ತಡದಿಂದಲೇ ಇಷ್ಟೊಂದು ಹಣ ಬಂದಿದೆ ಹೇಳಿಕೆ ನೀಡಿರುವುದು ಸರಿಯಲ್ಲ. ಉರ್ದು ಶಾಲೆ ಅಭಿವೃದ್ಧಿಗೆ ಹಣ ದೊರಕಿಸಿದ ಬಗ್ಗೆ ಹೇಳಿದ್ದಾರೆ. ಕನ್ನಡ ಸರ್ಕಾರಿ ಶಾಲೆ, ಕಾಲೇಜುಗಳ ಅಭಿವೃದ್ಧಿ ಗಮನ ಹರಿಸಿಲ್ಲ. ಬಾಲಕಿಯರ ಸರ್ಕಾರಿ ಕಾಲೇಜು ಕೊಠಡಿಗೆ ತಾವು ಶಾಸಕರಿದ್ದಾಗ ಅನುದಾನ ದೊರಕಿಸಿದ್ದಾಗಿ ಹೇಳಿದರು.

ಶಾಸಕರ ಹಸ್ತಕ್ಷೇಪ ಬೇಡ: ಎಸ್ಪಿ ಕಚೇರಿಯಿಂದ ಆರ್‌ಟಿಒ ಕಚೇರಿವರೆಗೆ ಚತುಷ್ಪಥ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ ಧಾರ್ಮಿಕ ಕಟ್ಟಡಗಳ ತೆರವು ಅನಿವಾರ್ಯ. ಯೋಜನೆ ನಿಯಮದ ಪ್ರಕಾರ ಅಧಿಕಾರಿಗಳು ಕೆಲಸ ಮಾಡಬೇಕಾಗುತ್ತದೆ. ಒಂದು ಕೋಮಿನ ಜನ ಈಗಾಗಲೇ ಧಾರ್ಮಿಕ ಕಟ್ಟಡ ತೆರವುಗೊಳಿಸಿ ಸಹಕರಿಸಿದ್ದಾರೆ. ಕೇವಲ ಈ ಕಾಮಗಾರಿಗಷ್ಟೇ ಅಲ್ಲ. ನಗರದ ಹೃದಯ ಭಾಗದಲ್ಲಿನ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಿ ಸಹಕರಿಸಿದ್ದಾರೆ. ಅದೇರೀತಿ ಬೇರೆ ಕೋಮಿನ ಜನರೂ ಧಾರ್ಮಿಕ ಕಟ್ಟಡ ತೆರವುಗೊಳಿಸಿ ಸಹಕರಿಸಬೇಕು ಎಂದು ಹೇಳಿದರು.

ಈ ವಿಷಯದಲ್ಲಿ ಶಾಸಕ ಸಯ್ಯದ್ ಯಾಸಿನ್ ಅವರು ಹಸ್ತಕ್ಷೇಪ ಮಾಡಿ ಒಂದು ಕೋಮಿನ ಕಟ್ಟಡ ತೆರವು ಮಾಡುವುದು ಬೇಡ ಎನ್ನುವುದು ಸರಿಯಲ್ಲ.  ಶಾಸಕರೇ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕೇ ಹೊರತೂ ಒಂದು ಕೋಮಿನ ಧಾರ್ಮಿಕ ಕಟ್ಟಡ ತೆರವಾಗಲಿ. ಬೇರೆ ಕೋಮಿನ ಕಟ್ಟಡ ತೆರವು ಬೇಡ ಎಂಬ ಧೋರಣೆ ಸರಿಯಲ್ಲ ಎಂದು ಹೇಳಿದರು.

`ನನಗೆ 70 ವರ್ಷ ವಯಸ್ಸು. ಇಲ್ಲಿಯೇ ಬೆಳೆದಿರುವವ. ನನಗೆ ಗೊತ್ತಿರುವ ಪ್ರಕಾರ ಎಸ್ಪಿ ಕಚೇರಿ ಹತ್ತಿರ ಇರುವ ಶಂಶಾಲಂ ದರ್ಗಾ ಹತ್ತಿರ 50 ಗೋರಿ ಇದ್ದವು. ಅವೆಲ್ಲವನ್ನೂ ಸಮತಟ್ಟು ಮಾಡಿ ಅಲ್ಲಿ ಊಟದ ಭವನ (ಡೈನಿಂಗ್ ಹಾಲ್) ಕಟ್ಟಲಾಗಿದೆ. ಅದೇ ರೀತಿ ಟಿಫಾನಿಸ್ ಹೋಟೆಲ್ ಹತ್ತಿರ 4 ಗೋರಿಗಳಿದ್ದವು. ಅವುಗಳನ್ನೂ ಸಮತಟ್ಟು ಮಾಡಿ ಅಲ್ಲಿ ಮೆಕ್ಯಾನಿಕ್ ಅಂಗಡಿ ಬಂದಿವೆ' ಎಂದು ಪಾಪಾರೆಡ್ಡಿ ಹೇಳಿದರು.

ಹೀಗಾಗಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಧಾರ್ಮಿಕ ಕಟ್ಟಡ ತೆರವು ವಿಚಾರದಲ್ಲಿ ತಕರಾರು ಸರಿಯಾದುದಲ್ಲ ಎಂದರು. ಟಿ. ಮಲ್ಲೇಶ, ದೊಡ್ಡಮಲ್ಲೇಶ, ಎಸ್. ಶ್ರೀನಿವಾಸರೆಡ್ಡಿ, ನಲ್ಲಾರೆಡ್ಡಿ, ಎನ್.ಎಸ್. ಲಾಲಪ್ಪ, ಎನ್. ಶ್ರೀನಿವಾಸರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT