ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣ ಗ್ರಾಮ ಸಮಸ್ಯೆಗಳ ಗೂಡು

Last Updated 7 ಜನವರಿ 2014, 6:24 IST
ಅಕ್ಷರ ಗಾತ್ರ

ಜನವಾಡ: ಜಿಲ್ಲಾ ಕೇಂದ್ರಕ್ಕೆ ಹತ್ತಿರ­ದಲ್ಲಿಯೇ ಇರುವ ಬೀದರ್ ತಾಲ್ಲೂಕಿನ ಅಲಿಯಾಬಾದ್(ಜೆ) ಗ್ರಾಮ ಮೂಲಸೌಕರ್ಯಗಳಿಂದ ವಂಚಿತವಾಗಿ ಉಳಿದಿದೆ. ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವೂ ಆಗಿರುವ, 3 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಜನ ಈಗಲೂ ವಿವಿಧ ಸೌಕರ್ಯಗಳಿಗೆ ಪರಿತಪಿಸುತ್ತಿದ್ದಾರೆ.

‘ಸುವರ್ಣ ಗ್ರಾಮ’ ಯೋಜನೆಯಡಿ ಆಯ್ಕೆಯಾದರೂ ಗ್ರಾಮದ ಎಲ್ಲೆಡೆ ರಸ್ತೆ, ಚರಂಡಿಗಳು ನಿರ್ಮಾಣವಾಗಿಲ್ಲ. ಕೆಲಕಡೆ ಮಾತ್ರ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಿಸಲಾಗಿದೆ. ತುರ್ತು ಅವಶ್ಯಕತೆ ಇರುವ ಕಡೆಗಳಲ್ಲಿ ರಸ್ತೆ ನಿರ್ಮಾಣ ಆಗಿಲ್ಲ ಎಂದು ದೂರುತ್ತಾರೆ ಗ್ರಾಮದ ಶಿವಶರಣಪ್ಪ ಪಾಟೀಲ್.

ಗ್ರಾಮದ ಪ್ರಮುಖ ಮಾರ್ಗದಲ್ಲಿ ಸಿ.ಸಿ ರಸ್ತೆ ನಿರ್ಮಿಸಿಲ್ಲ. ಈ ಕುರಿತು ಕಿರಿಯ ಎಂಜಿನಿಯರ್ ಅವರನ್ನು ವಿಚಾರಿಸಿದರೆ ಚುನಾಯಿತ ಪ್ರತಿನಿಧಿಗಳು ಬೇಡ ಅಂದಿದ್ದಾರೆ, ಅದಕ್ಕೇ ನಿರ್ಮಿಸಿಲ್ಲ ಎಂದು ಉತ್ತರಿಸುತ್ತಾರೆ ಎಂದು ಅಳಲು ತೋಡಿಕೊಳ್ಳುತ್ತಾರೆ.

ಇದೇ ಮಾರ್ಗದಲ್ಲಿ ರಸ್ತೆ ಮಧ್ಯೆ ವಿದ್ಯುತ್ ಕಂಬ ಇದ್ದು, ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ. ಸಂಬಂಧಪಟ್ಟವರ ಗಮನಕ್ಕೆ ತಂದರೂ ಕಂಬ ಸ್ಥಳಾಂತರಿಸುತ್ತಿಲ್ಲ ಎಂದು ಆರೋಪಿಸುತ್ತಾರೆ.

ಇನ್ನು ಗ್ರಾಮದ ಮೇಲುಗಲ್ಲಿಯಲ್ಲಿ ನೀರು ಹರಿದು ಹೋಗುವಂತೆ ಸಿ.ಸಿ ಚರಂಡಿಗಳನ್ನು ನಿರ್ಮಿಸಲಾಗಿಲ್ಲ. ಹೀಗಾಗಿ ಹೊಲಸು ನೀರು ಚರಂಡಿ­ಗಳಲ್ಲಿಯೇ ನಿಂತುಕೊಂಡಿದೆ. ಸಾಂಕ್ರಾ­ಮಿಕ ರೋಗಗಳು ಹರಡಬಹುದಾದ ಭೀತಿ ಉಂಟಾಗಿದೆ.  ಗಲ್ಲಿಯಲ್ಲಿ ಎಲ್ಲೆಡೆ ನಲ್ಲಿದ ವ್ಯವಸ್ಥೆ ಇಲ್ಲ. ಇರುವ ಒಂದೇ ನಲ್ಲಿಯನ್ನು ಎಲ್ಲರೂ ಅವಲಂಬಿಸಬೇಕಾಗಿದೆ. ಸಮಸ್ಯೆ ಪರಿಹರಿಸಲು ಎಲ್ಲೆಡೆ ನಲ್ಲಿಗಳನ್ನು ಅಳವಡಿಸಬೇಕು. ರಸ್ತೆ, ಚರಂಡಿ ನಿರ್ಮಿಸಬೇಕು ಎಂದು ಸೈಯದ್ ಶಾದುಲ್ ಒತ್ತಾಯಿಸಿದ್ದಾರೆ.

ಗ್ರಾಮದಲ್ಲಿ ಏಳನೇ ತರಗತಿವರೆಗೆ ಶಾಲೆ ಇದೆ. ಆದರೆ ಒಂದು ವರ್ಷದಿಂದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ರಚಿಸಿಲ್ಲ. ಪ್ರೌಢಶಾಲೆ ಮಂಜೂರಿಗೆ  ಅನೇಕ ವರ್ಷಗಳಿಂದ ಬೇಡಿಕೆ ಸಲ್ಲಿದರೂ ಪ್ರಯೋಜನವಾಗಿಲ್ಲ. ಗ್ರಾಮದ ಆಣದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಸೇರಿದ್ದು, ಚಿಕಿತ್ಸೆಗಾಗಿ 15 ಕಿ.ಮೀ. ದೂರ ಹೋಗಬೇಕಾಗಿದೆ. ಪಶು ಆಸ್ಪತ್ರೆಗಾಗಿ 4 ಕಿ.ಮೀ. ದೂರದ ಮರಕಲ್‌ಗೆ ತೆರಳಬೇಕಿದೆ  ಎಂದು ಶಂಕರ್ ಹಲಗೆ ಹೇಳುತ್ತಾರೆ.

ಒಂದು ವರ್ಷದಿಂದ ಗ್ರಾಮಕ್ಕೆ ಬಸ್ ಬರುತ್ತಿಲ್ಲ. ಜನ ಆಟೊ, ಟಂಟಂನಲ್ಲಿ ಪ್ರಯಾಣಿಸುತ್ತಿದ್ದಾರೆ ಎಂಬ ಸಬೂಬು ನೀಡಿ ಸಂಚಾರ ಸ್ಥಗಿತಗೊಳಿಸಲಾಗಿದೆ.  ಜನವಾಡದಿಂದ ಅಲಿಯಾಬಾದ್(ಜೆ) ಮಾರ್ಗವಾಗಿ ನೌಬಾದ್‌ಗೆ ಬಸ್ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸುತ್ತಾರೆ ರಮೇಶ್ ಹುಮನಾಬಾದ್‌.

ಸುವರ್ಣ ಗ್ರಾಮ ಯೋಜನೆಯ ಪ್ರಥಮ ಹಂತದಲ್ಲಿ ಗ್ರಾಮದ ಕೆಲಕಡೆ ರಸ್ತೆ, ಚರಂಡಿ ನಿರ್ಮಿಸಲಾಗಿದೆ. ಇನ್ನೂ ಎರಡು ಹಂತ ಬಾಕಿ ಇದ್ದು, ಎಲ್ಲೆಡೆ ರಸ್ತೆ, ಚರಂಡಿ ನಿರ್ಮಾಣವಾಗಲಿವೆ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT