ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣ ವಿಧಾನ ಸೌಧ ಉದ್ಘಾಟನೆ: ಅಸಮಾನತೆ ದೂರ ಮುಖರ್ಜಿ ಆಶಯ

Last Updated 11 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಳಗಾವಿ: ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು, `ಸುವರ್ಣ ವಿಧಾನ ಸೌಧ~ವನ್ನು ಗುರುವಾರ ಲೋಕಾರ್ಪಣೆ ಮಾಡುವ ಮೂಲಕ ಉತ್ತರ ಕರ್ನಾಟಕದ ಅಭಿವೃದ್ಧಿಯ ಹೊಸ ಮನ್ವಂತರಕ್ಕೆ ಬುನಾದಿ ಹಾಕಿದರು.
ರಾಜ್ಯದ ಇತಿಹಾಸದಲ್ಲಿ `ಸುವರ್ಣ~ ಅಕ್ಷರಗಳಲ್ಲಿ ಬರೆದಿಡುವ ಈ ಸುಮಧುರ ಕ್ಷಣಕ್ಕೆ ಉತ್ತರ ಕರ್ನಾಟಕದ ಸಹಸ್ರಾರು ಜನರು ಸಾಕ್ಷಿಯಾದರು.

ರಾಜ್ಯದ ಆಡಳಿತದ ಶಕ್ತಿ ಕೇಂದ್ರವಾದ `ಸುವರ್ಣ ವಿಧಾನ ಸೌಧ~ ಲೋಕಾರ್ಪಣೆಗೆ ಬಂದಿದ್ದ ಸಾವಿರಾರು ಜನರು `ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ~ ಎಂಬುದನ್ನು ಸಾರಿ, ಸಾರಿ ಹೇಳಿದರು.

`ಸುವರ್ಣ ವಿಧಾನ ಸೌಧ~ ಉದ್ಘಾಟಿಸಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ, `ಸುವರ್ಣ ವಿಧಾನ ಸೌಧದ ನಿರ್ಮಾಣದಿಂದಾಗಿ ಉತ್ತರ ಕರ್ನಾಟಕದ ಜನರ ಬಳಿಗೇ ಆಡಳಿತ ಬಂದಂತಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಸಮಾನವಾಗಿ ಆರ್ಥಿಕ ಬೆಳವಣಿಗೆ ಹೊಂದಲು ಸಾಧ್ಯವಿದೆ~ ಎಂದು ತಿಳಿಸಿದರು.

`ಸುವರ್ಣ ವಿಧಾನ ಸೌಧವು ಈ ಭಾಗಕ್ಕೆ ನೀಡಿದ ಬಹುದೊಡ್ಡ ಕೊಡುಗೆಯಾಗಿದ್ದು, ಜನರ ಆಶಯಗಳನ್ನು ಇದು ಈಡೇರಿಸಲಿದೆ. ಇಲ್ಲಿಯೂ ವಿಧಾನ ಮಂಡಲಗಳ ಅಧಿವೇಶನ ನಡೆಯಲಿರುವುದರಿಂದ ಕ್ರಿಯಾಶೀಲ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದು ನಾಂದಿ ಹಾಡಲಿದೆ~ ಎಂದು ಅಭಿಪ್ರಾಯಪಟ್ಟರು.

`ಡಿ.ಎಂ. ನಂಜುಂಡಪ್ಪ ಸಮಿತಿಯ ವರದಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಪ್ರಾದೇಶಿಕ ಅಸಮತೋಲನ ನಿವಾರಿಸಿ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಕೈಗೊಳ್ಳಬೇಕು~ ಎಂದೂ ಅವರು ಸಲಹೆ ನೀಡಿದರು.

`ಸ್ವಾತಂತ್ರ್ಯ ಪೂರ್ವದಲ್ಲೇ (1881ರಲ್ಲಿ) ಮೈಸೂರು ಮಹಾರಾಜರು `ಪ್ರಜಾ ಪ್ರತಿನಿಧಿ~ ವ್ಯವಸ್ಥೆಯ ಪರಿಕಲ್ಪನೆ ಹುಟ್ಟು ಹಾಕಿದ್ದರು. ಬಳಿಕ ಅವರ ಪುತ್ರ ಕೃಷ್ಣರಾಜ ಒಡೆಯರು 1907ರಲ್ಲಿ `ಮೈಸೂರು ಪ್ರಜಾಪ್ರತಿನಿಧಿ ಸಭೆ~ ಆರಂಭಿಸಿದ್ದರು. ಮೈಸೂರು ರಾಜ್ಯವು ಜನರ ಸಹಭಾಗಿತ್ವದಲ್ಲಿ ಕಾನೂನು ರೂಪಿಸಿ ಆಡಳಿತ ನಡೆಸುವುದರಲ್ಲಿ ನಂಬಿಕೆ ಇಟ್ಟಿತ್ತು.
 
ಅಂದಿನ ಪ್ರಜಾ ಪ್ರತಿನಿಧಿ ಸಭೆಯೇ ಇಂದು ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಆಗಿ ಮಾರ್ಪಾಡಾಗಿದೆ. ಇದೀಗ ಇಲ್ಲಿ `ಸುವರ್ಣ ವಿಧಾನ ಸೌಧ~ ನಿರ್ಮಿಸಿರುವುದು ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇನ್ನಷ್ಟು ಬಲ ನೀಡಿದಂತಾಗಿದೆ. ಇಲ್ಲಿ ಜನಪ್ರತಿನಿಧಿಗಳು ಕಾನೂನು ರೂಪಿಸುವ ಮೂಲಕ ಜನಪರ ಆಡಳಿತವನ್ನು ನೀಡಬೇಕು~ ಎಂದು ರಾಷ್ಟ್ರಪತಿಗಳು ಕಿವಿಮಾತು ಹೇಳಿದರು.

ಬೆಳಗಾವಿ ಬಣ್ಣನೆ: `ದೇಶದಲ್ಲಿ ವಸಾಹತುಶಾಹಿ ವಿರುದ್ಧ ಮೊದಲು ಸಿಡಿದೆದ್ದ ರಾಣಿ ಕಿತ್ತೂರು ಚನ್ನಮ್ಮ ಬೆಳಗಾವಿಯವರಾಗಿದ್ದರು. `ಹೋಂ ರೂಲ್ ಚಳವಳಿ~ ಸಂದರ್ಭದಲ್ಲಿ ಬಾಲಗಂಗಾಧರ ತಿಲಕರು `ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು~ ಎಂದು ಘೋಷಿಸಿದ್ದೂ ಬೆಳಗಾವಿಯಲ್ಲೇ! ಇಲ್ಲಿಯೇ 1924ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ `ಕಾಂಗ್ರೆಸ್ ಅಧಿವೇಶನ~ ನಡೆದಿತ್ತು. ಕರ್ನಾಟಕದ ಇಂಥ ಐತಿಹಾಸಿಕ ನೆಲದಲ್ಲಿ `ಸುವರ್ಣ ವಿಧಾನ ಸೌಧ~ ಲೋಕಾರ್ಪಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ~ ಎಂದು ಮುಖರ್ಜಿ ಅವರು, ಗಡಿನಾಡನ್ನು ಬಣ್ಣಿಸಿದರು.

`ಸಕ್ಕರೆ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಕೈಗಾರಿಕೆಗಳ ಬೆಳವಣಿಗೆ ಮೂಲಕ ರಾಜ್ಯಕ್ಕೆ ಆರ್ಥಿಕ ಕೊಡುಗೆ ನೀಡುತ್ತಿದೆ. ಕುಮಾರ ಗಂಧರ್ವರಂತಹ ಸಂಗೀತಗಾರರಿಂದಾಗಿ ಹಿಂದೂಸ್ತಾನಿ ಸಂಗೀತಕ್ಕೆ ಅಪಾರ ಕೊಡುಗೆಯನ್ನೂ ಬೆಳಗಾವಿ ನೀಡಿದೆ. ಶಿಕ್ಷಣ ಕ್ಷೇತ್ರದಲ್ಲೂ ಕರ್ನಾಟಕಕ್ಕೆ ಮಹತ್ವದ ಕಾಣಿಕೆಯನ್ನು ನೀಡುತ್ತಿದೆ~ ಎಂದು ಕುಂದಾನಗರಿಯನ್ನು ಶ್ಲಾಘಿಸಿದರು.

ರಾಜ್ಯಪಾಲ ಹಂಸರಾಜ ಭಾರದ್ವಾಜ್, `ದೇಶದ ಪ್ರಜಾಪ್ರಭುತ್ವ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಆಡಳಿತ ಚತುರ ಹಾಗೂ ಸಂಸದೀಯಪಟುವಾಗಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಇದಕ್ಕೆ ಪರಿಹಾರವನ್ನು ಕಲ್ಪಿಸುವುದರಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬ ವಿಶ್ವಾಸ ನಮಗಿದೆ. ವೈವಿಧ್ಯತೆಯಲ್ಲೂ ಏಕತೆ ಹೊಂದಿರುವ ದೇಶದಲ್ಲಿ ಸಮಗ್ರತೆ ಕಾಯ್ದುಕೊಂಡು ಹೋಗುವ ನಿಟ್ಟಿನಲ್ಲಿ ರಾಷ್ಟ್ರಪತಿಗಳು ಸೂಕ್ತ ಮಾರ್ಗದರ್ಶನ ನೀಡಬೇಕು~ ಎಂದು ಹೇಳಿದರು.

ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಕೇಂದ್ರ ಸಚಿವರಾದ ಎಂ. ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ, ಉಪಮುಖ್ಯಮಂತ್ರಿಗಳಾದ ಕೆ.ಎಸ್. ಈಶ್ವರಪ್ಪ, ಆರ್. ಅಶೋಕ, ಸಚಿವರಾದ ಸಿ.ಎಂ. ಉದಾಸಿ, ಬಾಲಚಂದ್ರ ಜಾರಕಿಹೊಳಿ, ಸುರೇಶ ಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ, ಡಿ.ವಿ. ಸದಾನಂದಗೌಡ, ಎನ್. ಧರ್ಮಸಿಂಗ್, ಸಂಸದರಾದ ಸುರೇಶ ಅಂಗಡಿ, ರಮೇಶ ಕತ್ತಿ, ಪ್ರಭಾಕರ ಕೋರೆ, ಶಾಸಕ ಸಂಜಯ ಪಾಟೀಲ ಈ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾದರು.

ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಸ್ವಾಗತಿಸಿದರು. ಸಭಾಪತಿ ಡಿ.ಎಚ್. ಶಂಕರಮೂರ್ತಿ ಮಾತನಾಡಿದರು. ಸಚಿವ ಉಮೇಶ ಕತ್ತಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT