ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣ ಸಂತಸದಲ್ಲಿ ಸೈನಿಕ ಶಾಲೆ

Last Updated 23 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಸುತ್ತಲೂ ಹಸಿರು ವನಸಿರಿ, ಸುಂದರ ಪುಟ್ಟ ಪುಟ್ಟ ಉದ್ಯಾನ, ಅರಳಿ ನಿಂತ ಕೆಂಗುಲಾಬಿಗಳ ಸೊಬಗು... ಇನ್ನೊಂದೆಡೆ ಪಾಕಿಸ್ತಾನದೊಂದಿಗೆ ನಡೆದ ಯುದ್ಧದಲ್ಲಿ ಬಳಸಿದ್ದ ಗನ್‌ಗಳು, ಲಘು ಯುದ್ಧ ವಿಮಾನ, ನಯನ ಮನೋಹರ ಕ್ರೀಡಾ ಸಮುಚ್ಛಯ... ಮತ್ತೊಂದೆಡೆ ಬಣ್ಣ ಬಳಿದುಕೊಂಡು ಶೃಂಗಾರಗೊಂಡಿರುವ ಕಟ್ಟಡಗಳ ಸಾಲು. ಕುದುರೆ ಸವಾರಿ ಮುಂತಾದ ಆಟೋಟಗಳಲ್ಲಿ ತೊಡಗಿರುವ ವಿದ್ಯಾರ್ಥಿಗಳ ಕಲರವ...

ಇಂಥ ಒಂದು ಸುಂದರ ನೋಟ ಕಾಣಸಿಗುವುದು ವಿಜಾಪುರದ ಸೈನಿಕ ಶಾಲೆಯಲ್ಲಿ. ವಿಜಾಪುರದ ಮುಕುಟ ಪ್ರಾಯ ಎಂದೇ ಬಿಂಬಿತವಾಗಿರುವ, ಭಾರತೀಯ ಸೇನೆಗೆ 872 ಅಧಿಕಾರಿಗಳನ್ನು ಕೊಡುಗೆ ನೀಡಿದ ಈ ಶಾಲೆಗೀಗ ಸುವರ್ಣ ಸಂಭ್ರಮ. ಎಂಟು ಜನ ಹಳೆಯ ವಿದ್ಯಾರ್ಥಿಗಳು ದೇಶ ರಕ್ಷಣೆಗಾಗಿ ಬಲಿದಾನ ಮಾಡಿ ಹುತಾತ್ಮರಾಗಿದ್ದು ಈ ಶಾಲೆಯ ಹೆಮ್ಮೆ.

ಹಿನ್ನೆಲೆ ಹೀಗೆ
ಅದು 60ರ ದಶಕ. ಭಾರತೀಯ ರಕ್ಷಣಾ ಪಡೆಯಲ್ಲಿ ಅಧಿಕಾರಿಗಳ ಕೊರತೆ ಕಂಡು ಬಂತು. ಅಂದಿನ ರಕ್ಷಣಾ ಖಾತೆ ಸಚಿವ ದಿ.ವಿ.ಕೆ. ಕೃಷ್ಣ ಮೆನನ್‌ ಚಿಂತನೆಯ ಫಲವಾಗಿ ಸೈನಿಕ ಶಾಲೆಗಳು ಆರಂಭಗೊಂಡವು. ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ)ಗೆ ಪರಿಣತ ಮತ್ತು ದೈಹಿಕ ಸಾಮರ್ಥ್ಯ ಹೊಂದಿರುವ ಅಭ್ಯರ್ಥಿಗಳನ್ನು ರೂಪಿಸುವುದು, ಭಾರತೀಯ ರಕ್ಷಣಾ ಪಡೆಗೆ ಬೇಕಿರುವ ಅಧಿಕಾರಿಗಳನ್ನು ಸಿದ್ಧ ಪಡಿಸುವುದು.

ರಕ್ಷಣಾ ಪಡೆಗಳಲ್ಲಿನ ಅಧಿಕಾರಿಗಳು, ಒಂದೇ ಪ್ರದೇಶದ ಬದಲು ಎಲ್ಲ ರಾಜ್ಯಗಳವರೂ ಇರುವಂತೆ ನೋಡಿಕೊಳ್ಳುವುದು ಸೈನಿಕ ಶಾಲೆಗಳ ಸ್ಥಾಪನೆಯ ಮುಖ್ಯ ಉದ್ದೇಶ. ಭಾರತೀಯ ಸೇನೆಯ ಕರ್ನಲ್‌ ಅಥವಾ ತತ್ಸಮಾನ ದರ್ಜೆಯ ಅಧಿಕಾರಿ ಪ್ರಾಚಾರ್ಯರಾಗಿದ್ದರೆ,  ಕುಲ ಸಚಿವ, ಮುಖ್ಯ ಶಿಕ್ಷಕ ಸಹ ರಕ್ಷಣಾ ಇಲಾಖೆಯವರು.

ಅನುದಾನ ರಾಜ್ಯ ಸರ್ಕಾರ ನೀಡಿದರೆ, ನಿರ್ವಹಣೆ ‘ಸೈನಿಕ ಶಾಲೆಗಳ ಸೊಸೈಟಿ’ಯದ್ದು. ಕೇಂದ್ರ ರಕ್ಷಣಾ ಸಚಿವರು ಈ ಸೊಸೈಟಿಯ ಅಧ್ಯಕ್ಷರು. 6ನೇ ತರಗತಿಯಿಂದ 12ನೇ ತರಗತಿಯವರೆಗೆ ವಸತಿ ಸಹಿತ ಶಿಕ್ಷಣ ನೀಡಲಾಗುತ್ತಿದ್ದು, 6ನೇ ತರಗತಿ ಪ್ರವೇಶಕ್ಕೆ ಪ್ರತಿ ವರ್ಷ ಜನವರಿ ತಿಂಗಳ ಎರಡನೇ ಭಾನುವಾರ ದೇಶವ್ಯಾಪಿ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. 

ಅಜೀತ್‌ ಹೈ ಅಭಿತ್‌ ಹೈ
‘ಅಜೀತ್‌ ಹೈ ಅಭಿತ್‌ ಹೈ’ ಎಂಬುದು ವಿಜಾಪುರ ಸೈನಿಕ ಶಾಲೆಯ ಘೋಷವಾಕ್ಯ. ದೇಶದ 13ನೇ ಸೈನಿಕ ಶಾಲೆ ವಿಜಾಪುರದಲ್ಲಿ ಸ್ಥಾಪನೆಯಾಗಿದ್ದು, ಸೆಪ್ಟೆಂಬರ್‌ 16, 1963ರಂದು. ಈ ಶಾಲೆ ವಿಜಾಪುರದಲ್ಲಿ ಸ್ಥಾಪನೆಯಾಗಲು ಅಂದಿನ ಮುಖ್ಯಮಂತ್ರಿ ದಿ.ಎಸ್‌.ಆರ್‌. ಕಂಠಿ ಅವರ ದೂರದೃಷ್ಟಿ ಕಾರಣ. ಈ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದವರಲ್ಲಿ ದಿ.ಬಿ.ಡಿ. ಜತ್ತಿ, ದಿ.ಎಸ್‌. ನಿಜಲಿಂಗಪ್ಪ ಪ್ರಮುಖರು. ಆರಂಭದಲ್ಲಿ ಬಿಎಲ್‌ಡಿಇ ಸಂಸ್ಥೆಯ ವಿಜಯ ಕಾಲೇಜು ಆವರಣದಲ್ಲಿ ಸೈನಿಕ ಶಾಲೆ ಆರಂಭಗೊಂಡಿತು.

ನವೆಂಬರ್‌ 2, 1963ರಲ್ಲಿ ಇಂದಿರಾ ಗಾಂಧಿ ಅವರು ಶಾಲೆಯ ಸ್ವಂತ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. 406 ಎಕರೆ ವಿಶಾಲ ಪ್ರದೇಶದಲ್ಲಿ ತಲೆ ಎತ್ತಿದ ನೂತನ ಕಟ್ಟಡವನ್ನು ಅಂದಿನ ಉಪ ರಾಷ್ಟ್ರಪತಿ ಝಾಕಿರ್‌ ಹುಸೇನ್‌ ಅವರು ಡಿಸೆಂಬರ್‌ 17, 1966ರಲ್ಲಿ ಲೋಕಾರ್ಪಣೆ ಮಾಡಿದರು. ಕೇಂದ್ರ ಪಠ್ಯಕ್ರಮದ ಜೊತೆಗೆ ಇಲ್ಲಿ ದೈಹಿಕ ಕಸರತ್ತು ಮತ್ತು ಶಸ್ತ್ರಾಸ್ತ್ರಗಳ ಬಳಕೆಯ ತರಬೇತಿಗೆ ಒತ್ತು ನೀಡಲಾಗುತ್ತಿದೆ.

ಅಶ್ವಾರೋಹಣಕ್ಕೆ 11 ಅಶ್ವಗಳಿವೆ. ಈಜು ಕೊಳ, ಶೂಟಿಂಗ್‌ ರೇಂಜ್‌ ಸಹ ಇಲ್ಲಿದೆ.  ₨ 5 ಕೋಟಿ ವೆಚ್ಚದಲ್ಲಿ ರಾಜ್ಯ ಸರ್ಕಾರ ಉತ್ತರ ಕರ್ನಾಟಕದಲ್ಲಿಯೇ ಪ್ರಥಮ ಎನ್ನಲಾದ ಅತ್ಯಾಧುನಿಕ ಸೌಲಭ್ಯಗಳ ಒಳಾಂಗಣ ಕ್ರೀಡಾಂಗಣ ನಿರ್ಮಿಸುತ್ತಿದೆ. ‘651 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈವರೆಗೆ 4,000 ಜನ ವಿದ್ಯಾಭ್ಯಾಸ ಪೂರೈಸಿದ್ದಾರೆ.

ಲೆಫ್ಟಿನಂಟ್‌ ಜನರಲ್‌ ಓಂಪ್ರಕಾಶ, ಲೆಫ್ಟಿನಂಟ್‌ ಜನರಲ್‌ (ನಿವೃತ್ತ) ರಮೇಶ ಹಲಗಲಿ, ಕ್ಯಾ.ಗೋಪಿನಾಥ್‌, ಏರ್‌ ಮಾರ್ಷಲ್‌ ಶ್ರೀರಾಮ ಸುಂದರಂ, ಮೇಜರ್‌ ಜನರಲ್‌ ಪಿ.ಡಿ. ಹಳ್ಳೂರ, ಕರಿಯಪ್ಪ, ಆರ್‌.ಎಂ. ಪುರಂಧರೆ,  ಕೆ.ಎನ್‌. ಮಿರ್ಜಿ ಮತ್ತಿತರರು ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿಗಳು. ನಮ್ಮ ಹಳೆಯ ವಿದ್ಯಾರ್ಥಿಗಳಲ್ಲಿ ಆರು ಜನ ಐಎಎಸ್‌, ಹತ್ತು ಜನ ಕೆಎಎಸ್‌ ಅಧಿಕಾರಿಗಳಾಗಿದ್ದಾರೆ’ ಎಂದು ಹೆಮ್ಮೆ ಪಡುತ್ತಾರೆ ಪ್ರಾಚಾರ್ಯ ಕರ್ನಲ್‌ ಆರ್‌. ಬಾಲಾಜಿ. ದೇಶದಲ್ಲಿ ಒಟ್ಟಾರೆ 24 ಸೈನಿಕ ಶಾಲೆಗಳಿವೆ. ಕರ್ನಾಟಕ ರಾಜ್ಯ ವಿಜಾಪುರ ಮತ್ತು  ಕೊಡಗು ಜಿಲ್ಲೆ ಹೀಗೆ ಎರಡು ಸೈನಿಕ ಶಾಲೆಗಳನ್ನು ಪಡೆದುಕೊಂಡಿದೆ.

ಭಾರತೀಯ ಸೇನೆಗೆ ಪುರುಷ
ಅಧಿಕಾರಿಗಳನ್ನು ಸಿದ್ಧಗೊಳಿಸುವುದು ಮೂಲ ಉದ್ದೇಶವಾಗಿರುವುದರಿಂದ ಕೇವಲ ಬಾಲಕರಿಗೆ ಮಾತ್ರ ಪ್ರವೇಶ. ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ–ಎನ್‌ಡಿಎ)ಯಲ್ಲಿ ಮಹಿಳೆಯರಿಗೂ ಪ್ರವೇಶ ನೀಡಬೇಕು ಎಂಬ ಬೇಡಿಕೆ ಬಲಗೊಳ್ಳುತ್ತಿದೆ. ಅದು ಈಡೇರಿದರೆ ಸೈನಿಕ ಶಾಲೆಗಳಲ್ಲಿಯೂ ಬಾಲಕಿಯರಿಗೆ ಪ್ರವೇಶ ನೀಡುವ, ಇಲ್ಲವೆ ಬಾಲಕಿಯರಿಗಾಗಿಯೇ ಪ್ರತ್ಯೇಕ ಸೈನಿಕ ಶಾಲೆಗಳನ್ನು ಆರಂಭಿಸಬೇಕು ಎಂಬುದು ಕೇಂದ್ರ ಸರ್ಕಾರದ ಚಿಂತನೆ.
-ಗಣೇಶ ಚಂದನಶಿವ. ಚಿತ್ರ: ಸಂಜೀವ ಅಕ್ಕಿ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT