ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣ ಸೌಧ: ಕಾರ್ಯಪಡೆ ಅಧ್ಯಯನ ಆರಂಭ

Last Updated 10 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಳಗಾವಿ:  ನಗರದ `ಸುವರ್ಣ ಸೌಧ~ ಕಟ್ಟಡ ನಿರ್ಮಾಣ ಕಾಮಗಾರಿಯ ಗುಣಮಟ್ಟದ ಅಧ್ಯಯನವನ್ನು ಗುಣಮಟ್ಟ ನಿಯಂತ್ರಣ ಕಾರ್ಯಪಡೆಯ ತಂಡ ಶುಕ್ರವಾರ ಆರಂಭಿಸಿತು.

ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಆರ್ಕಿಟೆಕ್ಟ್ ಎಸ್.ಎನ್. ಕಿರಣಶಂಕರ ನೇತೃತ್ವದ ಐವರ ಸದಸ್ಯರನ್ನೊಳಗೊಂಡ ಕಾರ್ಯಪಡೆಯ ತಂಡ ಶುಕ್ರವಾರ ನಗರಕ್ಕೆ ಆಗಮಿಸಿ ಸುವರ್ಣ ಸೌಧ ಕಾಮಗಾರಿಯ ವಸ್ತುಸ್ಥಿತಿಯನ್ನು ಅರಿಯಲು ಅಧ್ಯಯನ ನಡೆಸಿತು.

ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮನಬಂದಂತೆ ಪರಿಷ್ಕೃತ ಅಂದಾಜು ಪಟ್ಟಿ ಸಲ್ಲಿಸುತ್ತಿರುವ ಕುರಿತು `ಪ್ರಜಾವಾಣಿ~ಯಲ್ಲಿ ಪ್ರಕಟಗೊಂಡ ವಿಶೇಷ ವರದಿ ಹಿನ್ನೆಲೆಯಲ್ಲಿ ಕಾಮಗಾರಿಯ ವಸ್ತುಸ್ಥಿತಿ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಪಡೆಗೆ ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ ಕಾರ್ಯಪಡೆಯ ಸದಸ್ಯರು ಇಲ್ಲಿನ ಸರ್ಕಿಟ್‌ಹೌಸ್‌ನಲ್ಲಿ ಬೆಳಿಗ್ಗೆಯಿಂದಲೇ ಸುವರ್ಣ ಸೌಧದ ಕಾಮಗಾರಿಯ ನೀಲನಕ್ಷೆ, ಹಿಂದೆ ಕರೆದಿದ್ದ ಟೆಂಡರ್, ಪರಿಷ್ಕೃತ ಟೆಂಡರ್‌ಗಳ ಕಾಗದಪತ್ರಗಳನ್ನು ಪರಿಶೀಲಿಸಿದರು. ಲೋಕೋಪಯೋಗಿ ಇಲಾಖೆ ಸೂಪರಿಟೆಂಡಿಂಗ್ ಎಂಜಿನಿಯರ್ ವಿನಾಯಕ ಸುಗೂರ ಅವರಿಂದ ಕಾಮಗಾರಿಗಳ ಬಗ್ಗೆ ವಿವರಣೆ ಪಡೆದರು.

ನಗರದ ಹೊರವಲಯದಲ್ಲಿ ನಿರ್ಮಾಣಗೊಳ್ಳುತ್ತಿರುವ `ಸುವರ್ಣ ಸೌಧ~ಕ್ಕೆ ಮಧ್ಯಾಹ್ನ ಕಾರ್ಯಪಡೆ ಸದಸ್ಯರು ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು. ಇನ್ನೂ ಏನೇನು ಕೆಲಸಗಳು ನಡೆಯಬೇಕು ಎಂಬುದನ್ನು ವೀಕ್ಷಿಸಿದರು.

`ಶುಕ್ರವಾರ ದಿನವಿಡೀ ಸುವರ್ಣ ಸೌಧದ ಕಾಮಗಾರಿಯ ದಾಖಲೆಪತ್ರಗಳನ್ನು ಪರಿಶೀಲಿಸಿದ ಕಾರ್ಯಪಡೆ ಸದಸ್ಯರು, ಲೋಪ-ದೋಷಗಳನ್ನು ಪಟ್ಟಿಮಾಡಿಕೊಂಡರು. ಶುಕ್ರವಾರ ಎಲ್ಲ ಕಾಗದಪತ್ರಗಳನ್ನು ಮೇಲಿಂದ ಮೇಲೆ ಪರಿಶೀಲಿಸಿದ್ದು, ಶನಿವಾರ ಇನ್ನಷ್ಟು ಆಳವಾಗಿ ಅಧ್ಯಯನ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾರ್ಯಪಡೆಯ ನೇತೃತ್ವ ವಹಿಸಿದ್ದ ಎಸ್.ಎನ್. ಕಿರಣಶಂಕರ ಅವರನ್ನು `ಪ್ರಜಾವಾಣಿ~ ಸಂಪರ್ಕಿಸಿದಾಗ, ಇಂದಷ್ಟೇ ನಾವು ಪರಿಶೀಲನೆ ಆರಂಭಿಸಿದ್ದೇವೆ. ಕಾಮಗಾರಿಯಲ್ಲಿ ಆಗಿರುವ ಲೋಪದೋಷಗಳನ್ನು ಪಟ್ಟಿ ಮಾಡಿಕೊಂಡು ಇನ್ನೆರಡು ದಿನಗಳಲ್ಲಿ ಪ್ರಾಥಮಿಕ ವರದಿ ಸಿದ್ಧಪಡಿಸುತ್ತೇವೆ. ಕಾರ್ಯಪಡೆಯ ಅಧ್ಯಕ್ಷ ಡಾ. ವಿಶ್ವನಾಥ್ ಇಲ್ಲಿಗೆ ಬಂದು ಖುದ್ದು ಪರಿಶೀಲನೆ ನಡೆಸಿದ ಬಳಿಕ ಸಮಗ್ರ ವರದಿ ಸಿದ್ಧಪಡಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ಕಾರ್ಯಪಡೆ ತಂಡದ ಸದಸ್ಯರಾದ ಐ. ರವೀಂದ್ರನಾಥ, ಪ್ರೊ. ಬಾವಿಕಟ್ಟಿ, ಬಿ.ವಿ. ಬೆಲ್ಲದ ಹಾಗೂ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ ಅಧ್ಯಯನ ನಡೆಸಿದರು.

ಕಾರ್ಯಪಡೆಯ ಅಧ್ಯಕ್ಷ ಡಾ. ಜೆ. ವಿಶ್ವನಾಥ್ ಜೊತೆ ಹಣಕಾಸು ಇಲಾಖೆಯ ಕಾರ್ಯದರ್ಶಿಗಳು ಸೋಮವಾರ ನಗರಕ್ಕೆ ಆಗಮಿಸಿ ಸುವರ್ಣ ಸೌಧ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT