ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣಸೌಧ ಇಂದು ಉದ್ಘಾಟನೆ

Last Updated 10 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿಗೆ ಸಮೀಪದ ಹಲಗಾ- ಬಸ್ತವಾಡ ಗ್ರಾಮಗಳ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಸುವರ್ಣಸೌಧ ಕಟ್ಟಡದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಗುರುವಾರ (ಅ.11) ಮಧ್ಯಾಹ್ನ 12.42ಕ್ಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಈ ಕಟ್ಟಡವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಉತ್ತರ ಕರ್ನಾಟಕದ ಬಹು ದಿನಗಳ ಕೂಗಿಗೆ ಸ್ಪಂದನೆ ಸಿಕ್ಕಿದ್ದು, ಅದು ಸಾಕಾರಗೊಳ್ಳುವುದನ್ನು ನೋಡಲು ಸಹಸ್ರಾರು ಮಂದಿ ಕಾತರದಿಂದ ಕಾಯುತ್ತಿದ್ದಾರೆ. ರಾಜ್ಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಬೆಂಗಳೂರಿನ ವಿಧಾನಸೌಧ ಮಾದರಿಯಲ್ಲಿಯೇ ನಿರ್ಮಾಣವಾಗಿರುವ ಈ ಕಟ್ಟಡ ಸಜ್ಜಾಗಿದೆ.

ವಿಧಾನಮಂಡಲದ ಅಧಿವೇಶನಕ್ಕೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು ಈ ಕಟ್ಟಡ ಹೊಂದಿದೆ. ಬೆಳಗಾವಿ ಸಮೀಪದ ಹಲಗಾ- ಬಸ್ತವಾಡ ಪ್ರದೇಶದ ಗುಡ್ಡದ ಮೇಲೆ 127 ಎಕರೆ ಜಾಗದಲ್ಲಿ 60,398 ಚ.ಮೀ ವಿಸ್ತೀರ್ಣದಲ್ಲಿ ಕಟ್ಟಲಾಗಿರುವ ಸುವರ್ಣಸೌಧದಲ್ಲಿ ಸಂಸತ್ ಭವನದಲ್ಲಿರುವಂತೆ ಸೆಂಟ್ರಲ್ ಹಾಲ್ ಹಾಗೂ  ಸಭಾಂಗಣಗಳನ್ನು ನಿರ್ಮಿಸಿರುವುದು ವಿಶೇಷ.

450 ಆಸನಗಳ ಸಾಮರ್ಥ್ಯ ಹೊಂದಿರುವ ಸೆಂಟ್ರಲ್ ಹಾಲ್‌ನಲ್ಲಿ ಜಂಟಿ ಅಧಿವೇಶನ ಸಹ ನಡೆಸಬಹುದು. 300 ಆಸನಗಳ ಸಾಮರ್ಥ್ಯವುಳ್ಳ ವಿಧಾನಸಭೆ ಅಧಿವೇಶನ ಸಭಾಂಗಣ, 100 ಆಸನಗಳ ಸಾಮರ್ಥ್ಯವಿರುವ ವಿಧಾನ ಪರಿಷತ್ ಅಧಿವೇಶನದ ಸಭಾಂಗಣ, ಸಂಪುಟ ಉಪಸಮಿತಿಗಳ ಸಭೆ ನಡೆಸಲು 14 ಸಭಾ ಭವನಗಳು ನಿರ್ಮಾಣಗೊಂಡಿವೆ. 300 ಆಸನಗಳ ಸಾಮರ್ಥ್ಯವಿರುವ ದೊಡ್ಡ ಸಭಾಗೃಹ ಸಹ ಸಿದ್ಧಗೊಂಡಿದೆ.

ಮೊದಲನೇ ಮಹಡಿಯಲ್ಲಿ ಮೂರು ಸಭಾಂಗಣಗಳಿವೆ. ಮೂರನೇ ಮಹಡಿಯಲ್ಲಿ ಮುಖ್ಯಮಂತ್ರಿಗಳ ಕೊಠಡಿ, ಸಂಪುಟ ಸಭಾಂಗಣ, ಸಭಾಗೃಹ, ನೆಲ ಮಹಡಿಯಲ್ಲಿ ಬ್ಯಾಂಕ್ವೆಟ್ ಹಾಲ್ ಇವೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಅಧಿವೇಶನ ಸಭಾಂಗಣದಲ್ಲಿ ಪ್ರೇಕ್ಷಕರ ವೀಕ್ಷಣೆಗೆ ಗ್ಯಾಲರಿ ವ್ಯವಸ್ಥೆ ಇದೆ.

ವಿಧಾನಸಭೆ ಅಧ್ಯಕ್ಷರು, ಉಪಸಭಾಧ್ಯಕ್ಷರು, ಸಭಾಪತಿಗಳು, ಉಪಸಭಾಪತಿಗಳಿಗೆ ಪ್ರತ್ಯೇಕ ಕೊಠಡಿಗಳಿವೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ ಸಚಿವಾಲಯ, ಮುಖ್ಯಮಂತ್ರಿಗಳ ಕೊಠಡಿ ಹಾಗೂ ಕಚೇರಿ ಮತ್ತು ಇತರೆ ಸಚಿವರಿಗಾಗಿ 38 ಕೊಠಡಿಗಳಿವೆ. ಈ ಕಟ್ಟಡದಲ್ಲಿ ಆರು ಚಿಕ್ಕ ಗೋಪುರಗಳಿವೆ. ಮಧ್ಯದಲ್ಲಿ ಮುಖ್ಯ ಗೋಪುರವಿದೆ.

ಸುವರ್ಣಸೌಧ ಕಟ್ಟಡದ ಕಾಮಗಾರಿಯನ್ನು ರೂ 232 ಕೋಟಿ ಅಂದಾಜು ವೆಚ್ಚಕ್ಕೆ ಪುಣೆಯ ಬಿ.ಜೆ.ಶಿರ್ಕೆ ಕನ್ಸ್‌ಟ್ರ್‌ಕ್ಷನ್ಸ್ ಕಂಪೆನಿಗೆ 2009ರಲ್ಲಿ ಗುತ್ತಿಗೆ ನೀಡಲಾಯಿತು. ಇದಕ್ಕೂ ಮುನ್ನ ರೂ 17.62 ಕೋಟಿ ವೆಚ್ಚದಲ್ಲಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಯಿತು. ಅವಶ್ಯಕತೆಗೆ ತಕ್ಕಂತೆ, ವಿಧಾನಸಭಾಧ್ಯಕ್ಷರು, ಸಭಾಪತಿಗಳು, ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರ ಸಲಹೆ ಪಡೆದು ಪರಿಷ್ಕೃತ ಅಂದಾಜು ರೂ 391 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ.

ಅದ್ದೂರಿ ಸಮಾರಂಭ: ಸುವರ್ಣಸೌಧ ಕಟ್ಟಡ ಉದ್ಘಾಟನೆಯನ್ನು ಅದ್ದೂರಿಯಾಗಿ ನಡೆಸಲು ನಿರ್ಧರಿಸಿರುವ ಸರ್ಕಾರ ರೂ 16 ಕೋಟಿ ಬಿಡುಗಡೆ ಮಾಡಿದೆ.  ಈ ಪೈಕಿ ಮಹಾನಗರ ಪಾಲಿಕೆ ರೂ 5.5 ಕೋಟಿ, ಲೋಕೋಪಯೋಗಿ ಇಲಾಖೆ ರೂ 8.5 ಕೋಟಿ ಹಾಗೂ ಜಿಲ್ಲಾ ಆಡಳಿತ ರೂ 2 ಕೋಟಿ ವೆಚ್ಚ ಮಾಡಿವೆ.

ಸುವರ್ಣಸೌಧ ಕಟ್ಟಡದ ಎದುರು 500 ಮೀಟರ್ ಉದ್ದ ಹಾಗೂ 180 ಮೀಟರ್ ಅಗಲದ ಬೃಹದಾಕಾರದ ಪೆಂಡಾಲ್ ಹಾಕಲಾಗಿದೆ. 80 ಅಡಿ ಅಗಲ ಹಾಗೂ 40 ಅಡಿ ಉದ್ದದ ವೇದಿಕೆ ಸಿದ್ಧಪಡಿಸಲಾಗಿದೆ. 15,000 ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಇದನ್ನು ಹೊರತುಪಡಿಸಿ ಶಾಸಕರು, ಮಾಜಿ ಶಾಸಕರು, ಸಂಸದರು, ಗಣ್ಯರಿಗಾಗಿ 700 ಆಸನಗಳ ವ್ಯವಸ್ಥೆ ಮಾಡಲಾಗಿದೆ.


4 ಜಿಲ್ಲೆಗಳಲ್ಲಿ ಬಂದ್
ಮುಂಬೈ (ಐಎಎನ್‌ಎಸ್):  ಬೆಳಗಾವಿಯ ಸುವರ್ಣ ಸೌಧ ಉದ್ಘಾಟನೆಗೆರಾಷ್ಟ್ರಪತಿ ಆಗಮಿಸುತ್ತಿರುವುದನ್ನು ವಿರೋಧಿಸಿ ಶಿವಸೇನೆ ಮಹಾರಾಷ್ಟ್ರದ ನಾಲ್ಕು ಜಿಲ್ಲೆಗಳಲ್ಲಿ ಬಂದ್‌ಗೆ ಕರೆನೀಡಿದೆ.

ಸಿಂಧುದುರ್ಗ, ಕೊಲ್ಲಾಪುರ, ಸಾಂಗ್ಲಿ ಹಾಗೂ ಸತಾರ ಜಿಲ್ಲೆಗಳಲ್ಲಿ ಬಂದ್‌ಗೆ ಕರೆ ನೀಡಲಾಗಿದ್ದು, ಕೊಲ್ಲಾಪುರ- ಬೆಳಗಾವಿ ಹೆದ್ದಾರಿ ಬಂದ್ ಮಾಡಲಾಗುವುದು ಎಂದು ಶಿವಸೇನೆಯ ಹಿರಿಯ ಮುಖಂಡ, ಶಾಸಕ ದಿವಾಕರ್ ರೌತೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT