ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣಸೌಧ: ಕಾರ್ಯಪಡೆ ಭೇಟಿ

Last Updated 9 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಳಗಾವಿಯ ಸುವರ್ಣಸೌಧ ಕಟ್ಟಡ ಕಾಮಗಾರಿಯ ವಸ್ತುಸ್ಥಿತಿ ಬಗ್ಗೆ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡುವ ಸಲುವಾಗಿ ಟಾರ್ ಸ್ಟೀಲ್ ಕಂಪೆನಿಯ ಮುಖ್ಯಸ್ಥ ಡಾ. ಜೆ. ವಿಶ್ವನಾಥ್ ಅಧ್ಯಕ್ಷತೆಯ ಗುಣಮಟ್ಟ ನಿಯಂತ್ರಣ ಕಾರ್ಯಪಡೆಯ ತಂಡ ಶುಕ್ರವಾರ ಬೆಳಗಾವಿಗೆ ಭೇಟಿ ನೀಡಲಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಧಾನಸಭೆಯ ಸ್ಪೀಕರ್ ಕೆ.ಜಿ.ಬೋಪಯ್ಯ ಅವರ ಸಮ್ಮುಖದಲ್ಲಿ ಗುರುವಾರ ಇಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸುವರ್ಣಸೌಧ ಕಾಮಗಾರಿಯ ವಸ್ತುಸ್ಥಿತಿ, ಬಾಕಿ ಇರುವ ಕಾಮಗಾರಿ, ಪರಿಷ್ಕೃತ ಟೆಂಡರ್‌ನ ಅಗತ್ಯ ಇತ್ಯಾದಿ ವಿಷಯಗಳ ಬಗ್ಗೆ ಸಮಗ್ರವಾದ ವರದಿ ತರಿಸಿಕೊಳ್ಳಲು ನಿರ್ಧರಿಸಲಾಯಿತು.

ಸರ್ಕಾರದ ಗಮನಕ್ಕೆ ತರದೆ ಲೋಕೋ ಪಯೋಗಿ ಇಲಾಖೆಯ ಅಧಿಕಾರಿಗಳು ಮನಬಂದಂತೆ ಪರಿಷ್ಕೃತ ಅಂದಾಜು ಪಟ್ಟಿಯನ್ನು ತಯಾರಿಸಿರುವ ಬಗ್ಗೆ `ಪ್ರಜಾವಾಣಿ~ ವಿಶೇಷ ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸರ್ಕಾರ ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಕಾರ್ಯಪಡೆಯ ಇಬ್ಬರು ಸದಸ್ಯರು ಶುಕ್ರವಾರ ಬೆಳಗಾವಿಗೆ ಭೇಟಿ ನೀಡಲಿದ್ದಾರೆ. 2-3 ದಿನಗಳಲ್ಲಿ ವಿಶ್ವನಾಥ್ ಸಹ ತೆರಳಲಿದ್ದಾರೆ. ಹಣಕಾಸು ಮತ್ತು ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು, ಯೋಜನೆಯ ಸಲಹೆಗಾರರು ಸಹ ಬೆಳಗಾವಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಕಾರ್ಯಪಡೆ ನೀಡುವ ವರದಿಯನ್ನು ಆಧರಿಸಿ ಸರ್ಕಾರ ಮುಂದೆ ಏನು ಮಾಡಬೇಕು ಎಂದು ನಿರ್ಧರಿಸಲಿದೆ.

ಆದಷ್ಟು ಬೇಗ ವರದಿ ನೀಡಿ, ಸೆಪ್ಟೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳಿಸಿ ಎಂದು ಯಡಿಯೂರಪ್ಪ ಅಧಿಕಾರಿಗಳಿಗೆ ಆದೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT