ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಶ್ರಾವ್ಯಕಂಠ, ಸಮರಸ ಗಾಯನ

Last Updated 16 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ನಾದಜ್ಯೋತಿ ಶ್ರೀತ್ಯಾಗರಾಜಸ್ವಾಮಿ ಭಜನ ಸಭೆಯ 46ನೆ ವಾರ್ಷಿಕ ನಾದಜ್ಯೋತಿ ಸಂಗೀತೋತ್ಸವವು ಕಳೆದ ಭಾನುವಾರದಂದು ಸಮಾಪ್ತವಾಯಿತು. ಅಂದು ರುದ್ರಪಟ್ಟಣಂ ಸೋದರರು ಮತ್ತು ತವಿಲ್ ವಿದ್ವಾನ್ ಡೆಂಕಣಿಕೋಟ ಮುನಿರತ್ನಂ ಅವರಿಗೆ  ಹಿರಿಯ ಐಎಎಸ್ ಅಧಿಕಾರಿ ಕೆ. ಜಯರಾಜ್ ಮತ್ತು ಸಂಸ್ಕತ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಮಲ್ಲೆೀಪುರಂ ವೆಂಕಟೇಶ್ ಕಲಾಜ್ಯೋತಿ ಬಿರುದು ನೀಡಿ ಸನ್ಮಾನಿಸಿದರು. ನುರಿತ ಖಂಜರಿ ವಾದಕ-ಬೋಧಕ, ಸಂಘಟಕ ಮತ್ತು ಆಕಾಶವಾಣಿಯ ಏಟಾಪ್ ಗ್ರೇಡ್ ಕಲಾವಿದ ಸಿ.ಪಿ.ವ್ಯಾಸವಿಠ್ಠಲ ಅವರಿಗೆ ನಾದಜ್ಯೋತಿ ಪುರಸ್ಕಾರ ನೀಡಲಾಯಿತು. ಹೊಸದಾಗಿ ಚಾಲನೆಗೊಳಿಸಿರುವ ನಾದಜ್ಯೋತಿ ಆರೋಗ್ಯ ಸಂಪದ ಯೋಜನೆಯಡಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ಪಿಟೀಲು ವಿದ್ವಾಂಸ ಎಂ.ವೆಂಕಟಗಿರಿಯಪ್ಪ ಅವರಿಗೆ ಐದು ಸಾವಿರ ರೂಪಾಯಿಗಳ ನಿಧಿ ಸಮರ್ಪಿಸಲಾಯಿತು.

ಸುಶ್ರಾವ್ಯ ಕಂಠ
ಮಲ್ಲೆೀಶ್ವರದ ಕನ್ನಿಕಾಪರಮೇಶ್ವರಿ ದೇವಾಲಯದ ಆವರಣದಲ್ಲಿ ನಡೆದ ನಾದಜ್ಯೋತಿ ಸಂಗೀತೋತ್ಸವದ ಏಳನೇ ದಿನದಂದು ಹಾಡಿದ ಯುವ ಗಾಯಕಿ ಮಾನಸೀ ಪ್ರಸಾದ್ ತಮ್ಮ ಎಂದಿನ ಕಲಾಚಾತುರ್ಯವನ್ನು ಪ್ರದರ್ಶಿಸಿದರು. ದೈವದತ್ತವಾದ ಸುಶ್ರಾವ್ಯವಾದ ಕಂಠಸಿರಿಯನ್ನು ಎಷ್ಟು ಸೊಗಸಾಗಿ ಬಳಸಿಕೊಂಡು ರಸಿಕರನ್ನು ಮೆಚ್ಚಿಸಬಹುದು ಎಂಬುದಕ್ಕೆ ಅವರ ಗಾಯನ ನಿದರ್ಶನ. ವಿವಿಧ ಸ್ಥಾಯಿಗಳಲ್ಲಿ ಧ್ವನಿಯ ಹೊಂದಾಣಿಕೆ, ಭಾವದ ಉತ್ಕಟತೆ, ಲಯದ ಔಚಿತ್ಯಪೂರ್ಣ ಅಳವಡಿಕೆ ಮತ್ತು ಸಾಹಿತ್ಯ ಸ್ಪಷ್ಟತೆಗಳಿಂದ ಅವರು ಹಾಡಿದ ‘ದೇವಿ ರಮೆ’(ವಸಂತ), ರಾಗರತ್ನಮಾಲಿಕಚೆ (ರೀತಿಗೌಳ) ಮತ್ತು ಸವಿಸ್ತಾರ ಮೋಹನ (ನನ್ನು ಪಾಲಿಂಪ) ಹಾರ್ದಿಕವಾಗಿ ರೂಪುಗೊಂಡವು. ಕಛೇರಿಯ ಪ್ರಮುಖ ಅಂಶವಾಗಿದ್ದ ಅಪರೂಪ ಮತ್ತು ಕಷ್ಟಸಾಧ್ಯವಾದ ನಾಸಿಕಾಭೂಣಿ ರಾಗದಲ್ಲಿ ರಾಗ, ತಾನ ಮತ್ತು ಪಲ್ಲವಿ (ಕನ್ನಿಕಾ ಪರಮೇಶ್ವರಿ ನಾಸಿಕಾಭೂಣಿ ಪಾಹಿಂಆಮ ಶಾಂಭವಿ) ಖಂಡತ್ರಿಪುಟತಾಳದಲ್ಲಿ ನಿರೂಪಿತವಾಗಿ ರಾಗಮಾಲಿಕಾ ಸ್ವರಗಳು ಅದಕ್ಕೆ ಕಳಶಪ್ರಾಯವಾಗಿದ್ದವು. ಮೈಸೂರು ದಯಾಕರ(ಪಿಟೀಲು), ವಾಸುದೇವ(ಮೃದಂಗ) ಮತ್ತು ಜಿ.ಎಸ್.ನಾಗರಾಜ್(ಖಂಜಿರ) ಅವರ ಸಹಕಾರ ಪ್ರಶಂಸಾರ್ಹ.

ಸಮರಸ ಗಾಯನ
ಮತ್ತಷ್ಟು ಗಾಂಭೀರ್ಯದ ಅವಶ್ಯಕತೆ ಕಾಣಬಂದರೂ ಸಹ ಸ್ವಾತಿತಿರುನಾಳರ ವಂಶಸ್ಥರಾದ ತಿರುವಾಂಕೂರು ಪ್ರಿನ್ಸ್ ರಾಮವರ್ಮ ಅವರ ಸಂಗೀತದಲ್ಲಿ ಸಮರಸತೆ ಇತ್ತು. ಅವರೊಬ್ಬ ಉತ್ತಮ ವೈಣಿಕರೂ ಹೌದು. ಫೆ.5ರಂದು ನಡೆದ ಕಛೇರಿಯಲ್ಲಿ ನನ್ನುಕನ್ನ ತಲ್ಲಿ, ಜನನೀ ನಿನ್ನು ವಿನಾ (ರೀತಿಗೌಳ) ಮತ್ತು ಸುಧಾಮು ರಚನೆಗಳು ಅವರ ವಿದ್ವತ್ತು ಪ್ರಕಟಗೊಳಿಸಿದವು. ಯಾವಾಗಲೋ ಒಮ್ಮೆ ಅಲ್ಲಲ್ಲಿ ಕೇಳಿ ಬರುವ ಅತ್ಯಂತ ಮಹತ್ವ ಮತ್ತು ಸತ್ವದ ಸ್ವಾತಿ ತಿರುನಾಳರ ನವರಾತ್ರಿ ಕೃತಿಗಳಲ್ಲಿ ಒಂದಾದ ದೇವೀ ಪಾವನಿ ಕೇಳುವ ಸೌಭಾಗ್ಯ ರಸಿಕರಿಗೆ ಒದಗಿತು.  ರಘು(ಪಿಟೀಲು) ಮತ್ತು ಅರ್ಜುನಕುಮಾರ್(ಮೃದಂಗ) ಅವರು ಕ್ರಿಯಾಶೀಲ ಸಹಕಾರ ನೀಡಿದರು. ಈ ಬಾರಿಯ ನಾದಜ್ಯೋತಿ ಪುರಸ್ಕಾರ ವಿಜೇತ ಸಿ.ಪಿ.ವ್ಯಾಸವಿಠ್ಠಲ ಅವರ ಖಂಜಿರ ಪಕ್ಕವಾದ್ಯ ಗಮನಾರ್ಹವಾಗಿತ್ತು.

ಕಾಲಪ್ರಮಾಣದ ಸೊಗಸು
ಸುಪ್ರಸಿದ್ಧ ಮೃದಂಗ ಕಲಾವಿದ ಟಿಎಎಸ್ ಮಣಿ ಮತ್ತು ಅವರ ಪತ್ನಿ ಗಾಯಕಿ ರಮಾಮಣಿ ಅವರ ನೇತೃತ್ವದ ಕರ್ನಾಟಕ ಕಾಲೇಜ್ ಆಫ್ ಪರ್ಕಷನ್ ಸಂಸ್ಥೆಯ ಐದು ದಿನಗಳ 46ನೆ ವಾರ್ಷಿಕ ಸಂಗೀತೋತ್ಸವ ಅನನ್ಯ ಸಭಾಂಗಣದಲ್ಲಿ ಫೆ.13ರಂದು ಉದ್ಘಾಟನೆಗೊಂಡಿತು.

ಹಿರಿಯ ಗಾಯಕ ಡಾ. ಆರ್.ಕೆ.ಶ್ರೀಕಂಠನ್ ಮತ್ತು ಪಿಟೀಲು ಮಾಂತ್ರಿಕ ಪ್ರೊ.ಟಿ.ಎನ್.ಕೃಷ್ಣನ್ ಅವರಿಗೆ ಅಂದು ಸನ್ಮಾನಿಸಲಾಯಿತು. ನಂತರ ಕೃಷ್ಣನ್ ಅವರ ಶುದ್ಧ ಶಾಸ್ತ್ರೀಯ, ಬಹು ಮೌಲ್ಯದ ಹಾಗೂ ಅಂತರಂಗವನ್ನು ಹಾಯಾಗಿಸುವಂತಹ ಪಿಟೀಲು ತನಿ ಕಛೇರಿಯನ್ನು ನೀಡಿದರು. ಇಂದಿನ ಜೆಟ್ ವೇಗ ಮತ್ತು ರಭಸದ ಯುಗದಲ್ಲಿ ಹಿತವೆನಿಸುವ ವಿಳಂಬ ಕಾಲ, ಸವಾಲೊಡ್ಡುವ ಆರಾಮಿನ ಕಾಲಪ್ರಮಾಣದ ಮಹತ್ವ ಮತ್ತು ರೂಪ-ಸ್ವರೂಪ ಹಾಗೂ ಅದರ ಸಾತ್ವಿಕ ಪರಿಣಾಮಗಳ ಅನುಭವವನ್ನು ಕೇಳುಗರಿಗೆ ಒದಗಿಸಿದರು.  ಬೇಗಡೆ (ವಲ್ಲಭನಾಯಕಸ್ಯ), ಕನ್ನಡಗೌಳ(ಓರಜೂಪು), ಎವರಿನಿ, ಬೇಹಾಗ್ (ಕಂಡು ಧನ್ಯನಾದೆ) ಮುಂತಾದ ನಿರೂಪಣೆಗಳು ನಿರ್ಮಲ ವಿನಿಕೆಗೆ ಎಡಮಾಡಿಕೊಟ್ಟವು. ಅವರ ಯದುಕುಲಾಕಾಂಭೋಜಿ (ಹೆಚ್ಚರಿಕಗಾರಾರಾ)ಯಂತೂ ಅವಿಸ್ಮರಣೀಯ. ಕರ್ನಾಟಕ ಸಂಗೀತವು ಇಂತಹುದೇ ಕಾಲಪ್ರಮಾಣದಲ್ಲಿ ಸೊಗಸು ಕಾಣುತ್ತದೆ ಎಂದು ಸಾರಿ ಹೇಳುವಂತಿತ್ತು  ಮೃದಂಗ ಚಕ್ರವರ್ತಿ ಟಿಎಎಸ್ ಮಣಿ ಅವರ ಸಹ ವಾದನ ಪಿಟೀಲು ವಾದನದ ವಿಸ್ತರಣೆಯಂತೆಯೇ ಮೂಡಿ ಬಂದಿತು. ರಂಗನಾಥ ಚಕ್ರವರ್ತಿ ಅವರ ಘಟ ಪಕ್ಕವಾದ್ಯ ಪೂರಕವಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT