ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸಜ್ಜಿತ ಐಐಎಸ್‌ಸಿ ಕೇಂದ್ರ

Last Updated 11 ಸೆಪ್ಟೆಂಬರ್ 2011, 7:55 IST
ಅಕ್ಷರ ಗಾತ್ರ

ಚಿತ್ರದುರ್ಗ ಜಿಲ್ಲೆಯ ಕುದಾಪುರ ಕುರಿ ಸಂವರ್ಧನಾ ಅಭಿವೃದ್ಧಿ ಕೇಂದ್ರ ಈಗ ಕೌಶಲ ಅಭಿವೃದ್ಧಿ ಕೇಂದ್ರವಾಗಿ ಮಾರ್ಪಟ್ಟು ಶಿಕ್ಷಕರಿಗೆ ಉತ್ತಮ ತರಬೇತಿ ನೀಡುತ್ತಿರುವುದು ಶೈಕ್ಷಣಿಕವಾಗಿ, ವೈಜ್ಞಾನಿಕವಾಗಿ ಜಿಲ್ಲೆಯನ್ನು ಅಂತರಾಷ್ಟ್ರೀಯಮಟ್ಟದಲ್ಲಿ ಹೆಸರು ಮಾಡುವಂತೆ ಮಾಡಿದೆ.

ಕುದಾಪುರ ಕುರಿ ಫಾರಂನಲ್ಲಿ ದೇಶದ ಹಲವು ಪ್ರತಿಷ್ಠಿತ ವೈಜ್ಞಾನಿಕ ಸಂಸ್ಥೆಗಳು ತಲೆ ಎತ್ತುತ್ತಲಿದ್ದು ಈಗಾಗಲೇ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗಿವೆ. ದೇಶದ ಪ್ರತಿಷ್ಠಿತ ರಕ್ಷಣಾ ಸಂಸ್ಥೆಯಾದ ಡಿಆರ್‌ಡಿಒ ಸುಮಾರು 28 ಕಿ.ಮೀ. ಉದ್ದದ ರಕ್ಷಣಾ ಗೋಡೆ ನಿರ್ಮಿಸಿದೆ. ದೇಸೀ ಯುದ್ಧವಿಮಾನಗಳ ಪರೀಕ್ಷೆಯನ್ನು ಹಲವು ಬಾರಿ ಕೇಂದ್ರದಲ್ಲಿ ನಡೆಸಿ ಯಶಸ್ವಿಯಾಗಿದೆ. ಬಿಎಆರ್‌ಸಿ ಇಲ್ಲಿ ನೆಲೆಯನ್ನು ಕಂಡುಕೊಳ್ಳುತ್ತಿದೆ.

ಈ ಎಲ್ಲಾ ಅಭಿವೃದ್ಧಿಕಾರ್ಯಗಳನ್ನು  ಫೆ. 26. 2011ರಂದು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಉದ್ಘಾಟಿಸಿದ್ದರು.

ಟ್ಯಾಲೆಂಟ್ ಡೆವಲೆಪ್‌ಮೆಂಟ್ ಸೆಂಟರ್: ಕುರಿಫಾರಂ ಕಚೇರಿಯ ಹಿಂಭಾಗದಲ್ಲಿ ಈ ಮೊದಲು ಪಶುಸಂಗೋಪನೆ ಇಲಾಖೆಯು ಸಂಪನ್ಮೂಲ ವ್ಯಕ್ತಿಗಳ ತರಬೇತಿಗಾಗಿ ಬಳಸುತ್ತಿದ್ದ ಕಟ್ಟಡವನ್ನು ಭಾರತೀಯ ವಿಜ್ಞಾನ ಸಂಸ್ಥೆಯು ಸಂಪೂರ್ಣವಾಗಿ ನವೀಕರಣ ಮಾಡಿದೆಯಲ್ಲದೇ  ಆಧುನೀಕರಣದ ಸ್ಪರ್ಶವನ್ನು ನೀಡಲಾಗಿದೆ. ಸುಸಜ್ಜಿತವಾಗಿ ಹವಾನಿಯಂತ್ರಣ ಉಪಕರಣ ಅಳವಡಿಸಲಾಗಿದ್ದು, ರಸಾಯನ ಶಾಸ್ತ್ರ, ಭೌತಶಾಸ್ತ್ರ ಮತ್ತು ಜೀವಶಾಸ್ತ್ರಕ್ಕೆ ಸಂಬಂಧಿಸಿದಂತೆ ಪ್ರಯೋಗಾಲಯ ನಿರ್ಮಿಸಲಾಗಿದೆ. ಸುಮಾರು 21ಕ್ಕೂ ಹೆಚ್ಚು ಕಂಪ್ಯೂಟರ್‌ಗಳು ಶಿಕ್ಷಕರ ಜ್ಞಾನಾಭಿವೃದ್ಧಿಗಾಗಿ ಇವೆಯಲ್ಲದೇ ಅವುಗಳಿಗೆ ಅಂತರ್ಜಾಲದ ಸಂಪರ್ಕವನ್ನೂ ನೀಡಲಾಗಿದೆ.

ತರಬೇತಿ ಕೊಠಡಿಯಲ್ಲಿ ಪರಿಣಾಮಕಾರಿ ತರಬೇತಿ ನೀಡಲು ಎರಡು ಕಡೆ ದೊಡ್ಡದಾದ ಎಲ್‌ಸಿಡಿ ಪ್ರೊಜೆಕ್ಟರ್‌ನ್ನು ಅಳವಡಿಸಲಾಗಿದ್ದು, ಶಿಕ್ಷಕರಿಗೆ ಸ್ಥಳದಲ್ಲಿ ವಿವರಣೆ ನೀಡಲು 19 ಲ್ಯಾಪ್‌ಟ್ಯಾಪ್‌ಗಳನ್ನು ನೀಡಲಾಗಿದೆ. ತರಬೇತಿಯನ್ನು ಹತ್ತು ದಿನಗಳಿಗೆ ಒಂದು ತಂಡದಂತೆ ನೀಡುತ್ತಿದ್ದು, ಶಿಕ್ಷಕರಿಗೆ ತಂಗಲು ವಸತಿಗೃಹಗಳನ್ನು ನಿರ್ಮಿಸಲಾಗಿದೆ. ಈಗಾಗಲೇ ಜಿಲ್ಲೆಯ 300ಜನ ವಿಜ್ಞಾನ ಮತ್ತು ಗಣಿತ ಶಿಕ್ಷಕರಿಗೆ ತರಬೇತಿಯನ್ನು 3 ತಂಡಗಳಲ್ಲಿ ನೀಡಲಾಗಿದೆ.  ಸೆ. 3ರಿಂದ ಬಳ್ಳಾರಿ ಜಿಲ್ಲೆಯ 100 ಜನ ಗಣಿತ ಮತ್ತು ವಿಜ್ಞಾನ  ಶಿಕ್ಷಕರಿಗೆ ತರಬೇತಿ ಪ್ರಾರಂಭಿಸಲಾಗಿದೆ. ಇನ್ನೂ ರಾಜ್ಯದ ಹತ್ತು ಸಾವಿರ ವಿಜ್ಞಾನ ಮತ್ತು ಗಣಿತ ಶಿಕ್ಷಕರಿಗೆ ತರಬೇತಿ ನೀಡುವ ಯೋಜನೆ ಇದೆ ಎಂದು ಐಐಎಸ್‌ಸಿಯ ಪ್ರೊ.ಹೆಗಡೆ ಹೇಳುತ್ತಾರೆ.

ಕಾಡಿನ ಸುಂದರ ಗಿಡಮರಗಳ ಮರಗಳ ಮಧ್ಯೆ ಇಲ್ಲಿಗೆ ಮೊದಲು ಬಂದಾಗ ಏನು ತರಬೇತಿ ನೀಡುವರೋ ಎಂದು ಚಿಂತೆಯಾಗಿತ್ತು. ಆದರೆ, ಇಲ್ಲಿಗೆ ಬರುವಂತಹ ಉತ್ತಮ ಸಂಪನ್ಮೂಲ ವ್ಯಕ್ತಿಗಳು, ಇಲ್ಲಿನ ಸೌಲಭ್ಯಗಳನ್ನು ಬಳಸಿ ಅವರು ನೀಡುವಂತಹ ಶಿಕ್ಷಣ ನಮ್ಮನ್ನು ನಿಜ್ಜಕ್ಕೂ ಉತ್ಸಾಹಿಗಳನ್ನಾಗಿ ಮಾಡಿದೆ ಎನ್ನುತ್ತಾರೆ ಚಿತ್ರದುರ್ಗ ವಿಜ್ಞಾನ ಕೇಂದ್ರದ ನಿರ್ದೇಶಕ ದಾಸೇಗೌಡ. ಮತ್ತು ಚಿತ್ರದುರ್ಗದ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿಜ್ಞಾನ ಶಿಕ್ಷಕ ಬಿ.ವಿ. ವಿಶ್ವನಾಥ.

ನವೋದಯ ಶಿಕ್ಷಕರಿಗೆ ತರಬೇತಿ:
ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರಿಗೆ ತರಬೇತಿಯ ಅವಶ್ಯಕತೆ ಇದೆ. ಶಿಕ್ಷಕರು ನಿಂತ ನೀರಾಗದೇ ಹರಿಯುವ ನದಿಯಾಗಿರಬೇಕೆಂದರೆ ಕಾಲ ಕಾಲಕ್ಕೆ ಬದಲಾವಣೆಯಾಗಿ ಅಧಿಕ ಸಂಪನ್ಮೂಲಗಳನ್ನು ಗಳಿಸಲು ಉತ್ತಮ ತರಬೇತಿಗಳ ಆವಶ್ಯವಿದೆ. ಆದುದರಿಂದ ರಾಜ್ಯದಲ್ಲಿರುವ ನವೋದಯ ಕೇಂದ್ರೀಯ ವಿದ್ಯಾಲಯಗಳ ಶಿಕ್ಷಕರಿಗೆ ತರಬೇತಿ ನೀಡುವ ಯೋಜನೆಯಿದ್ದು, ಸೆಪ್ಟೆಂಬರ್ ಕೊನೆಯ ವಾರದಲ್ಲಿ ತರಬೇತಿ ಪ್ರಾರಂಭಿಸಲಾಗುವುದು ಎಂದು ಐಐಎಸ್‌ಸಿಯ  ಪ್ರೊ.ಜಗದೀಶ್ ತಿಳಿಸುತ್ತಾರೆ.

ಇಲ್ಲಿನ ವಾತಾವರಣ, ಶಿಕ್ಷಕರಿಗೆ ಸಿಗುವಂತಹ ಉತ್ತಮ ಸಂಪನ್ಮೂಲ, ತಂಗುವ ವ್ಯವಸ್ಥೆ, ನಿತ್ಯವೂ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳಿಂದ, ರಾಜ್ಯದ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಪಾಠಬೋಧನೆ ಇವೆಲ್ಲವುಗಳನ್ನು ಶಿಕ್ಷಕರು ಉತ್ತಮ ರೀತಿಯಲ್ಲಿ ಬಳಸಿಕೊಂಡು ಗುಣಮಟ್ಟದ ಶಿಕ್ಷಣವನ್ನು ನೀಡಲು ಶ್ರಮಿಸಿದರೆ ಇಂತಹ ತರಬೇತಿಯ ಹಿಂದಿನ ಶ್ರಮಕ್ಕೆ ಸಾರ್ಥಕತೆ ದೊರೆತಂತಾಗುತ್ತದೆ.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT