ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸಜ್ಜಿತ ಬಸ್ ನಿಲ್ದಾಣ ಉದ್ಘಾಟನೆ

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವತಿಯಿಂದ ಇಸ್ರೊ ಬಡಾವಣೆಯಲ್ಲಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಸುಸಜ್ಜಿತ ಬಸ್ ನಿಲ್ದಾಣವನ್ನು ಶುಕ್ರವಾರ ಉದ್ಘಾಟಿಸಲಾಯಿತು.

ಒಂದು ಎಕರೆ 5 ಗುಂಟೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಬಸ್ ನಿಲ್ದಾಣವು ಎರಡು ಪ್ಲಾಟ್‌ಫಾರಂಗಳನ್ನು ಒಳಗೊಂಡಿದೆ. ನಿಲ್ದಾಣವು ತಳ ಅಂತಸ್ತು, ನೆಲ ಅಂತಸ್ತು, ಮೊದಲ ಅಂತಸ್ತುಗಳನ್ನು ಒಳಗೊಂಡಿದೆ. ಪ್ರಯಾಣಿಕರಿಗೆ ಆಸನಗಳ ವ್ಯವಸ್ಥೆ, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ.

ಬಡವರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಐದು `ಅಟಲ್ ಸಾರಿಗೆ~ ಮತ್ತು ಎರಡು `ಚಕ್ರ ಸಾರಿಗೆ~ ಬಸ್‌ಗಳನ್ನು ಇದೇ ಸಂದರ್ಭದಲ್ಲಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಯಿತು. `ಅಟಲ್ ಸಾರಿಗೆ~ ಬಸ್ ಮಾಮೂಲಿ ದರಕ್ಕಿಂತ ಶೇ 50ರಷ್ಟು ಕಡಿಮೆ ದರವನ್ನು ಹೊಂದಿರುತ್ತದೆ. `ಚಕ್ರ ಸಾರಿಗೆ~ಯು ಬನಶಂಕರಿ ಬಸ್ ನಿಲ್ದಾಣದಿಂದ ಜರಗನಹಳ್ಳಿ, ಕುಮಾರಸ್ವಾಮಿ ಬಡಾವಣೆ, ಪದ್ಮನಾಭನಗರ ಸೇರಿದಂತೆ ವರ್ತುಲಾಕಾರದಲ್ಲಿ ಸಂಚರಿಸಲಿದೆ.

ಬಸ್ ನಿಲ್ದಾಣವನ್ನು ಉದ್ಘಾಟಿಸಿದ ಉಪಮುಖ್ಯಮಂತ್ರಿ ಆರ್.ಅಶೋಕ, `ಗುಣಮಟ್ಟ ಮತ್ತು ಮೂಲಸೌಕರ್ಯ ಹೆಚ್ಚಿಸುವ ಉದ್ದೇಶದಿಂದ ಇಸ್ರೊ ಬಡಾವಣೆಯಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ~ ಎಂದರು.
`ನಗರದಲ್ಲಿ ನಾಲ್ಕು ವರ್ಷಗಳಲ್ಲಿ ಬಸ್ ಪ್ರಯಾಣಿಕರ ಸಂಖ್ಯೆ 10 ಲಕ್ಷಕ್ಕೂ ಹೆಚ್ಚಾಗಿರುವುದು ಸಂತಸದ ವಿಚಾರ. ಮೈಸೂರಿನಲ್ಲಿ ಉನ್ನತ ತಂತ್ರಜ್ಞಾನವುಳ್ಳ ಬಸ್‌ಗಳು ಸಂಚರಿಸುತ್ತಿವೆ. ನಗರದಲ್ಲಿಯೂ ಇದೇ ಮಾದರಿಯ ಬಸ್ ಸಂಚಾರದ ಕನಸಿದ್ದು, ಸದ್ಯದಲ್ಲೇ ಈಡೇರಲಿದೆ~ ಎಂದು ವಿಶ್ವಾಸ ವ್ಯಕ್ತಪಡಿಸಿದರು.

`ಉತ್ತಮ ಸಾರಿಗೆ ವ್ಯವಸ್ಥೆ ಕೇವಲ ನಗರಕ್ಕೆ ಸೀಮಿತವಲ್ಲ. ನಗರದಲ್ಲಿ ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡಿರುವಂತೆ ಗುಲ್ಬರ್ಗ ಮತ್ತು ಬೀದರ್‌ನಲ್ಲಿಯೂ ಅತ್ಯಾಧುನಿಕ ಮಾದರಿಯಲ್ಲಿ ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗಿದೆ. ನಾಲ್ಕೂವರೆ ವರ್ಷಗಳಲ್ಲಿ ರಾಜ್ಯದಲ್ಲಿ 500ಕ್ಕೂ ಅಧಿಕ ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗಿದೆ~ ಎಂದುತಿಳಿಸಿದರು.

ವಿಧಾನಪರಿಷತ್ ಸದಸ್ಯ ರಾಮಚಂದ್ರಗೌಡ, `ಬಿಎಂಟಿಸಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ರಾಜ್ಯ ಸರ್ಕಾರದ ಹೆಗ್ಗಳಿಕೆ. ಕಾರ್ಮಿಕ ವರ್ಗದ ಪರಿಶ್ರಮದಿಂದ ಬಿಎಂಟಿಸಿ ಉತ್ತಮ ಸಾಧನೆ ಮಾಡಿದೆ~ ಎಂದು ಶ್ಲಾಘಿಸಿದರು.

 ಶಾಸಕ ಕೃಷ್ಣಪ್ಪ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಇತರರು ಉಪಸ್ಥಿತರಿದ್ದರು.

`ನಾಡು ಪ್ರತ್ಯೇಕಿಸುವ ಮಾತು ಸಲ್ಲ~
`ಕನ್ನಡ ನಾಡನ್ನು ಕಟ್ಟಲು ಕುವೆಂಪು, ಪಾಟೀಲ ಪುಟ್ಟಪ್ಪ ಅವರಂತಹ ಎಷ್ಟೋ ಮಹನೀಯರು ಶ್ರಮಿಸಿದ್ದಾರೆ. ಕನ್ನಡ ನಾಡನ್ನು ಉತ್ತರ, ದಕ್ಷಿಣವೆಂದು ಒಡೆಯುವ ಮಾತನಾಡುವುದು ಸರಿಯಲ್ಲ~ ಎಂದು ಸಚಿವ ಆರ್. ಅಶೋಕ ಪ್ರತಿಕ್ರಿಯಿಸಿದರು.

ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಸಚಿವ ಉಮೇಶ ಕತ್ತಿ ಯಾವ ಕಾರಣಕ್ಕಾಗಿ ಕರ್ನಾಟಕವನ್ನು ಒಡೆಯುವ ಮಾತನಾಡಿದ್ದರೋ ತಿಳಿದಿಲ್ಲ. ಆದರೆ, ಸಮಸ್ತ ಕರ್ನಾಟಕ ಮತ್ತು ಕನ್ನಡ ಒಂದೇ ಎಂಬ ಭಾವನೆ ಇರುವಾಗ ಅದನ್ನು ಪ್ರತ್ಯೇಕಿಸುವ ನೀತಿಯಿಂದ ಜನರಿಗೆ ನೋವಾಗುತ್ತದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT