ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸ್ಥಿರ ಸರ್ಕಾರಕ್ಕೆ ಕಾಶಿ ಯಾತ್ರೆ! : ಬಿಎಸ್‌ವೈ

Last Updated 20 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಸ್ಥಿರ ಸರ್ಕಾರ ನೀಡುವ ಶಕ್ತಿ ಬಿಜೆಪಿಗೆ ಬರಲಿ. ನಾಡಿಗೆ ಒಳ್ಳೆಯದಾಗಲಿ. ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವ ಶಕ್ತಿಯನ್ನು ಭಗವಂತ ಕೊಡಲಿ~ ಎಂದು ಕಾಶಿ ವಿಶ್ವನಾಥನಲ್ಲಿ ಬೇಡಿಕೊಂಡಿರುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಇಲ್ಲಿ ತಿಳಿಸಿದರು.

ಕಾಶಿ ಪ್ರವಾಸದಿಂದ ನಗರಕ್ಕೆ ಹಿಂತಿರುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ದೂರವಾಗಬೇಕಾಗಿದೆ. ಸುಸ್ಥಿರ ಸರ್ಕಾರ ಬೇಕಾಗಿದೆ~ ಎಂದು ಅಭಿಪ್ರಾಯಪಟ್ಟರು.

`ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಇದೇ 24, 25ರಂದು ನಗರದಲ್ಲೇ ಇರುತ್ತಾರೆ. ಆ ಸಂದರ್ಭದಲ್ಲಿ ರಾಜ್ಯದ ವಿದ್ಯಮಾನಗಳನ್ನು ಅವರಿಗೆ ವಿವರಿಸಲಾಗುವುದು. `ರಾಜಕೀಯ ಬೆಳವಣಿಗೆಗಳನ್ನು ನೋಡಿಕೊಂಡು, ಆಪ್ತ ಶಾಸಕರೊಂದಿಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬರುತ್ತೇನೆ~ ಎಂದು ಹೇಳಿದರು.

`ರಾಜ್ಯದ ಜನತೆಗೆ ಒಳ್ಳೆಯದಾಗಲಿ ಎಂದು ಕಾಶಿಗೆ ಹೋಗಿ ಬಂದಿದ್ದೇನೆ. ವಿಶ್ವನಾಥನ ದರ್ಶನದಿಂದ ಇನ್ನಷ್ಟು ಶಕ್ತಿ ಬಂದಿದೆ. ಶಿವರಾತ್ರಿ ದಿನ ವಿಶ್ವನಾಥನ ದರ್ಶನಕ್ಕೆ ಪೂರ್ವಜನ್ಮದ ಪುಣ್ಯ ಇರಬೇಕು~ ಎಂದರು.

`ಶಕ್ತಿಪ್ರದರ್ಶನ ಬಗೆಗಿನ ಹೇಳಿಕೆಗಳನ್ನು ಪತ್ರಿಕೆಗಳಲ್ಲಿ ಓದಿದ್ದೇನೆ. ಅದರ ಸತ್ಯಾಸತ್ಯತೆ ನೋಡಿ ಪ್ರತಿಕ್ರಿಯೆ ನೀಡುವುದು ಸೂಕ್ತ. ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರ ವಿರುದ್ಧ ಶಕ್ತಿಪ್ರದರ್ಶನ ಮಾಡುತ್ತೇನೆ ಎಂದು ನಾನು ಎಲ್ಲೂ ಹೇಳಿಲ್ಲ. ಕುಮಾರಸ್ವಾಮಿ ವಿರುದ್ಧ ಶಕ್ತಿ ಪ್ರದರ್ಶನಕ್ಕೆಸಿದ್ಧ ಎಂದು ಹೇಳಿದ್ದೆ. ಸದಾನಂದಗೌಡರು ಅದನ್ನು ತಪ್ಪಾಗಿ ಗ್ರಹಿಸಿದಂತಿದೆ ಅಷ್ಟೇ~ ಎಂದರು.

`ರಾಜ್ಯದಲ್ಲಿ ಸಮೃದ್ಧಿ ಇದ್ದರೆ, ಅಭಿವೃದ್ಧಿ ಆಗಿದ್ದರೆ ಅದು ನನ್ನ ಸರ್ಕಾರದ ಕೊಡುಗೆ ಎಂದು ಜನ ಹೇಳುತ್ತಿದ್ದಾರೆ. ಪಕ್ಷದ ಬೇರುಗಳನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂಬುದು ನನ್ನ ಆಕಾಂಕ್ಷೆ. ಈ ವಿಚಾರವಾಗಿ ಗಡ್ಕರಿ ಅವರೊಂದಿಗೆ ಚರ್ಚಿಸುತ್ತೇನೆ~ ಎಂದರು.

`ದಕ್ಷಿಣದ ಕಾಗೆ ಉತ್ತರದ ಕಾಶಿಗೆ ಹೋದರೂ ಕೋಗಿಲೆಯಾಗುವುದಿಲ್ಲ ಎಂಬ ಕವಿವಾಣಿಯನ್ನು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಉಲ್ಲೇಖಿಸಿರುವುದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, `ಕಾಗೆ ಯಾರು? ಕೋಗಿಲೆ ಯಾರು? ಎಂಬುದು ಚುನಾವಣೆಯಲ್ಲಿ ಗೊತ್ತಾಗುತ್ತದೆ. ಅವರು ಒಂದು ವರ್ಷ ಸಂಯಮದಿಂದ ಇರಲಿ~ ಎಂದರು.

`ಕುಮಾರಸ್ವಾಮಿ ಹಗುರವಾಗಿ ಮಾತನಾಡಿದ್ದಾರೆ. ತಾವೊಬ್ಬರೇ ಪ್ರಾಮಾಣಿಕರು, ಬೇರೆ ಎಲ್ಲರೂ ಅಪ್ರಾಮಾಣಿಕರು ಎಂಬ ಭಾವನೆ ಅವರಲ್ಲಿದೆ. ಕಾಗೆ, ಕೋಗಿಲೆ ಬಗ್ಗೆ ಅವರಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಜನರೇ ಈ ಬಗ್ಗೆ ತೀರ್ಮಾನ ಮಾಡುತ್ತಾರೆ~ ಎಂದು ಮಾರ್ಮಿಕವಾಗಿ ಹೇಳಿದರು.

ಸಚಿವರಾದ ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಸಂಸದ ಸುರೇಶ್ ಅಂಗಡಿ ಅವರೊಂದಿಗೆ ಬಿ.ಎಸ್ ಯಡಿಯೂರಪ್ಪ ಭಾನುವಾರ ಸಂಜೆ ಕಾಶಿಗೆ ತೆರಳಿದ್ದರು. ಕಾಶಿಯಲ್ಲಿ ವಿಶೇಷ ಪೂಜೆ, ದರ್ಶನದ ಬಳಿಕ ಸೋಮವಾರ ಸಂಜೆ ನವದೆಹಲಿಗೆ ತೆರಳಿ, ಮಂಗಳವಾರ ಗಡ್ಕರಿ ಅವರೊಂದಿಗೆ ಚರ್ಚೆ ನಡೆಸುವ ಕಾರ್ಯಕ್ರಮವಿತ್ತು. ಆದರೆ ಪೂರ್ವನಿಗದಿತ ದೆಹಲಿ ಭೇಟಿಯನ್ನು ರದ್ದುಪಡಿಸಿ ಸೋಮವಾರ ಮಧ್ಯಾಹ್ನವೇ ನಗರಕ್ಕೆ ಹಿಂತಿರುಗಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT