ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಕ್ತ ಮಾರುಕಟ್ಟೆ ಭರವಸೆ

Last Updated 21 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  `ಅವೇಕ್ ಸಂಸ್ಥೆಯ ಕಚೇರಿ ಸ್ಥಾಪನೆಗೆ ಈಗಾಗಲೇ ಬಿಡದಿ ಸಮೀಪ ಐದು ಎಕರೆ ಜಾಗವನ್ನು ಮಂಜೂರು ಮಾಡಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ 25 ಲಕ್ಷ ರೂಪಾಯಿ ಧನಸಹಾಯ ನೀಡಲಾಗುವುದು~ ಎಂದು ಸಣ್ಣ ಕೈಗಾರಿಕೆ ಸಚಿವ ರಾಜೂಗೌಡ ತಿಳಿಸಿದರು.

ಕರ್ನಾಟಕ ರಾಜ್ಯ ಮಹಿಳಾ ಉದ್ಯಮಿಗಳ ಸಂಸ್ಥೆ (ಅವೇಕ್) ನಗರದ ಯವನಿಕ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ `ಉದ್ಯಮಶೀಲತಾ ಶ್ರೇಷ್ಠ ಪ್ರಶಸ್ತಿ~ಯನ್ನು ಪ್ರದಾನ ಮಾಡಿ ಅವರು ಮಾತನಾಡಿದರು.

`ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆಯನ್ನು ಒದಗಿಸಬೇಕಿದೆ. ಮಹಿಳಾ ಉದ್ಯಮಿಗಳು ತಯಾರಿಸುವ ಉತ್ಪನ್ನಗಳನ್ನು ಕೊಂಡುಕೊಳ್ಳುವ ಬಗ್ಗೆ ನಿರ್ದಿಷ್ಟ ನಿಯಮ ರೂಪಿಸಲು ಸರ್ಕಾರ ಅವೇಕ್‌ನಂತಹ ಸಂಸ್ಥೆಗಳ ಸಹಕಾರ ಪಡೆಯಲಿದೆ~ ಎಂದು ಹೇಳಿದರು.

`ಸ್ತ್ರೀಶಕ್ತಿ ಸಂಘಗಳು ಮಾತ್ರ ಬ್ಯಾಂಕುಗಳ ಸಾಲವನ್ನು ಸಮರ್ಪಕವಾಗಿ ಮರುಪಾವತಿ ಮಾಡುತ್ತಿವೆ. ಸ್ವಾವಲಂಬನೆ ಮತ್ತು ಆರ್ಥಿಕ ಸ್ವಾತಂತ್ರ್ಯ ನೀಡುವ ಮೂಲಕ ಮಹಿಳೆಯರಿಗೆ ಉತ್ತಮ ಜೀವನವನ್ನು ರೂಪಿಸುವಲ್ಲಿ ಪಾತ್ರವಹಿಸಿರುವ ಅವೇಕ್ ಸಂಸ್ಥೆಗೆ ಪ್ರಸಕ್ತ ವರ್ಷದಲ್ಲಿ ಹೆಚ್ಚಿನ ಮಹಿಳೆಯರು ಸೇರ್ಪಡೆಯಾಗಬೇಕು~ ಎಂದು ಸಲಹೆ ನೀಡಿದರು.

ಇಂಧನ ಸಚಿವೆ ಶೋಭಾ ಕರಂದ್ಲಾಜೆ, `ಆರ್ಥಿಕ ಸ್ವಾತಂತ್ರ್ಯ ಪಡೆದ ಅನಕ್ಷರಸ್ಥ ಮಹಿಳೆಯರೂ ಸಹ ಕೌಟುಂಬಿಕ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಸಮರ್ಥರಾಗಿದ್ದಾರೆ. ಇದಕ್ಕೆ ಕರಾವಳಿ ಭಾಗದಲ್ಲಿ ಮೀನು ಮಾರಾಟ ಮಾಡುವ ಮಹಿಳೆಯರೇ  ಉತ್ತಮ ಉದಾಹರಣೆ. ಹಾಗಾಗಿ ಪದವಿ ಗಳಿಸುವುದಕ್ಕಿಂತ ಜೀವನ ಕೌಶಲಕ್ಕೆ ಹೆಚ್ಚಿನ ಆದ್ಯತೆ ನೀಡಿ~ ಎಂದು ಸಲಹೆ ಮಾಡಿದರು.

`ಅವೇಕ್ ಸಂಸ್ಥೆಯ ಕಚೇರಿಯು ಕೇವಲ ಕಟ್ಟಡವಾಗಿ ಮಾತ್ರ ನಿರ್ಮಾಣಗೊಳ್ಳದೇ ಮಹಿಳಾ ಉದ್ಯಮಿಯನ್ನು ರೂಪಿಸುವ ಪ್ರಯೋಗಾಲಯವಾಗಬೇಕು. ಉದ್ಯಮ ನಡೆಸುವುದು ಸುಲಭದ ಮಾತಲ್ಲ, ಕುಹಕಿಗಳಿಂದ ಎದುರಾಗುವ ಅಡೆ-ತಡೆಗಳನ್ನು ಮೆಟ್ಟಿ ನಿಲ್ಲಲ್ಲು ಆತ್ಮವಿಶ್ವಾಸ ಬೆಳಸಿಕೊಳ್ಳಿ. ಅದಕ್ಕೆ ಪೂರಕವಾಗಿ ಬೇಕಿರುವ ಜ್ಞಾನವನ್ನು ಹೆಚ್ಚಿಸಿಕೊಳ್ಳಿ~ ಎಂದು ತಿಳಿಸಿದರು.

ಮಹಿಳಾ ಉದ್ಯಮಿಗಳಾದ ವಿಜಾಪುರದ ಶೋಭಾಲಕ್ಷ್ಮಿ ಬಾಬು, ಬೆಂಗಳೂರಿನ ಪದ್ಮಜಾ ಸುಬ್ರಹ್ಮಣ್ಯ, ಬಿ.ಜಿ.ಲತಾ, ಕೊಡಗಿನ ಪೂರ್ಣಿಮಾ ವಿರೂಪಾಕ್ಷ, ಶಿವಮೊಗ್ಗದ ರಾಜಶ್ರೀ ಗುರುಪ್ರಸಾದ್, ಗುಲ್ಬರ್ಗದ ಸರಸ್ವತಿ, ತುಮಕೂರಿನ ಜಿ.ಎನ್.ಉಷಾರಾಣಿ  ಅವರಿಗೆ `ಉದ್ಯಮಶೀಲತಾ ಶ್ರೇಷ್ಠ ಪ್ರಶಸ್ತಿ~ಯನ್ನು ನೀಡಲಾಯಿತು.

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ಅಧ್ಯಕ್ಷೆ ಸರೋಜಿನಿ ಭಾರದ್ವಾಜ್, ಸಂಸ್ಥೆಯ ಅಧ್ಯಕ್ಷೆ ಧನವಂತಿ ಜೈನ್, ಮಾಜಿ ಅಧ್ಯಕ್ಷೆ ರೇವತಿ ವೆಂಕಟರಾಮನ್, ಉಪಾಧ್ಯಕ್ಷೆ ಡಾ.ರಾಜೇಶ್ವರಿ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT