ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂತ್ರ ಪಾಲಿಸಿ ಕಲೆ ತೊಲಗಿಸಿ

Last Updated 14 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಎಷ್ಟೇ ಜಾಗರೂಕರಾಗಿದ್ದರೂ ತೊಟ್ಟ ಬಟ್ಟೆಗಳನ್ನು ವಿವಿಧ ಬಗೆಯ ಕಲೆಗಳಿಂದ ಮುಕ್ತವಾಗಿ ಇರಿಸಿಕೊಳ್ಳುವುದು ಅಸಾಧ್ಯ. ಅಂಥ ಕಲೆಗಳಲ್ಲಿ ರಕ್ತದ ಕಲೆ, ಬಣ್ಣದ ಕಲೆ, ಟೀ-ಕಾಫಿ ಕುಡಿಯುವಾಗ ಆಕಸ್ಮಿಕವಾಗಿ ಆಗುವ ಕಲೆ, ಬೆವರಿನ ಕಲೆ... ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಕಲೆಗಳು ಬಟ್ಟೆಯ ಮೇಲೆ ಬಿದ್ದು ಅದರ  ಅಂದವನ್ನು ಹಾಳುಗೆಡವುತ್ತವೆ.

ಕೆಲವು ಕಲೆಗಳಂತೂ ಎಷ್ಟು ವಿಧದಲ್ಲಿ ಪ್ರಯತ್ನಿಸಿದರೂ ಹೋಗದೆ ತಾಪತ್ರಯ ನೀಡುವುದುಂಟು. ಅದರಿಂದ ಕೆಲವೊಮ್ಮೆ ನಾವು ನಮಗಿಷ್ಟವಾದ ಬಟ್ಟೆಯನ್ನು ತೊಡಲೂ ಆಗದೆ, ಬಿಡಲೂ ಆಗದೆ ಒತ್ತಡಕ್ಕೆ ಒಳಗಾಗುತ್ತೇವೆ. ಹಾಗಾಗಿ ಬಟ್ಟೆಗೆ ಅಂಟಿದ ಕಲೆಗಳ ಸುಲಭ ನಿವಾರಣೆಗಾಗಿ ಇಲ್ಲಿ ಕೆಲ ಟಿಪ್ಸ್‌ಗಳಿವೆ. ಇವುಗಳನ್ನು ಪ್ರಯೋಗಿಸಿ ಕಲೆಯನ್ನು ಇನ್ನಿಲ್ಲದಂತೆ ಮಾಡಬಹುದು. ಆ ಮೂಲಕ, ಬಟ್ಟೆಗಳ ಅಂದವನ್ನು ಹೆಚ್ಚಿಸಬಹುದು. ಆದರೆ, ಇದಕ್ಕೆ ಕೊಂಚ ತಾಳ್ಮೆ ಅತಿ ಮುಖ್ಯ.

ಇದೋ ಓದಿ ನೋಡಿ; ಕಾರ್ಯೋನ್ಮುಖರಾಗಿ.
   1. ಬೆವರಿನ ಕಾರಣದಿಂದ ನಿಮ್ಮ ಬಿಳಿಯ ಬಟ್ಟೆಯಲ್ಲಾದ ಹಳದಿ ಕಲೆಯನ್ನು ಹೋಗಲಾಡಿಸ ಬೇಕಾದಲ್ಲಿ, ಆ ಬಟ್ಟೆಯನ್ನು ಮಜ್ಜಿಗೆಯೊಳಗೆ ಕೆಲ ಸಮಯ ನೆನಸಿಟ್ಟು, ನಂತರ ಸಾಬೂನಿನಿಂದ ತೊಳೆಯಿರಿ. ಆಗ ಕಲೆ ಮಾಯವಾಗಿ ನಿಮ್ಮ ಬಿಳಿ ಬಟ್ಟೆ ಮತ್ತಷ್ಟು ಹೊಳಪಿನಿಂದ ಕೂಡಿ ಹೊಚ್ಚ ಹೊಸದರಂತೆ ಕಾಣುತ್ತದೆ.

   2. ಚಹಾ/ ಕಾಫಿ ಚೆಲ್ಲಿದಾಗ ಕೂಡಲೇ ಬಿಸಿ ನೀರಿನಿಂದ ತೊಳೆದರೆ ಅಥವಾ ಬಿದ್ದ ಜಾಗದಲ್ಲಿ ಪುಡಿ ಸಕ್ಕರೆಯನ್ನು ಹಾಕಿ ಚೆನ್ನಾಗಿ ಉಜ್ಜಿದರೆ ಕಲೆ ಮಾಯವಾಗುತ್ತದೆ.

   3. ಇನ್ನು ಬಟ್ಟೆಯ ಮೇಲೆ ಚಹಾ/ ಕಾಫಿ ಬಿದ್ದ ಹಳೆಯ ಕಲೆಗಳಿದ್ದರೆ, ಅಡುಗೆ ಸೋಡಾ ಹಾಕಿದ ನೀರಿನಲ್ಲಿ ನೆನೆಸಿ ತೊಳೆದರೆ ಕಲೆ ಹೊರಟುಹೋಗುತ್ತದೆ.

   4. ರಕ್ತ ಮತ್ತು ಮೊಟ್ಟೆಯ ರಸದ ಕಲೆಯಾಗಿದ್ದಲ್ಲಿ ಅದನ್ನು ಅಮೋನಿಯಾ ಬೆರೆಸಿದ ನೀರಿನಲ್ಲಿ ಅದ್ದಿ ಚೆನ್ನಾಗಿ ತೊಳೆಯಬೇಕು.

   5. ರಕ್ತದಿಂದಾದ ಕಲೆಯ ಭಾಗಕ್ಕೆ ಅನ್ನದ ಗಂಜಿಯನ್ನು ಸವರಿ, ಬಟ್ಟೆ ಉಜ್ಜುವ ಬ್ರಷ್‌ನಿಂದ ಉಜ್ಜಿದರೆ ಕಲೆ ಇನ್ನಿಲ್ಲವಾಗುತ್ತದೆ.

   6.  ತುಕ್ಕಿನ ಕಲೆಯಾಗಿದ್ದರೆ ಉಪ್ಪು ಮತ್ತು ನಿಂಬೆ ರಸದ ಮಿಶ್ರಣದಲ್ಲಿ ಬಟ್ಟೆಯನ್ನು ನೆನೆಸಿ ಅಥವಾ ಕಲೆಯಾದ ಭಾಗಕ್ಕೆ ಮೊಸರನ್ನು ಸವರಿ, ನಂತರ ಬಿಸಿನೀರಿನಲ್ಲಿ ತೊಳೆಯಿರಿ. ಹೀಗೆ ಕನಿಷ್ಠ ಮೂರು ಬಾರಿ ಮಾಡಿದರೆ ಕಲೆ ಇಲ್ಲವಾಗುತ್ತದೆ.

   7. ಅಯೋಡಿನ್ ಕಲೆ ಆಗಿದ್ದರೆ ಅದರ ಮೇಲೆ ಮದ್ಯಸಾರವನ್ನು ಹಚ್ಚಿ, ಕೆಲ ಸಮಯದ ನಂತರ ಬಟ್ಟೆ ಒಗೆದರೆ ಕಲೆ ಮಾಯವಾಗುತ್ತದೆ.

   8. ಇನ್ನು ತಾಂಬೂಲದ ಕಲೆಯಾಗಿದ್ದರೆ, ಮಣ್ಣಿನ ಪಾತ್ರೆಯಲ್ಲಿ ಬೆಂಕಿ ಕೆಂಡವನ್ನು ಹಾಕಿ, ಅದರಿಂದ ಹೊರಬರುವ ಹೊಗೆಯಲ್ಲಿ ಆ ಬಟ್ಟೆಯನ್ನು ಹಿಡಿಯಬೇಕು. ನಂತರ ಸಾಬೂನಿನಿಂದ ತೊಳೆಯಬೇಕು.

9. ಲಿಪ್‌ಸ್ಟಿಕ್‌ನ ಕಲೆಯಾಗಿದ್ದರೆ ಅದರ ಮೇಲೆ ಗ್ಲಿಸರಿನ್ ಹಚ್ಚಿ ತೊಳೆಯಿರಿ.

  10. ಡಾಂಬರು ಅಂಟಿಕೊಂಡಿದ್ದಲ್ಲಿ ಅದರ ಮೇಲೆ ಸೀಮೆಎಣ್ಣೆ ಅಥವಾ ಪೆಟ್ರೋಲ್ ಹಾಕಿ, ನಂತರ ಚೆನ್ನಾಗಿ ತಿಕ್ಕಿ ಸಾಬೂನಿನಿಂದ ತೊಳೆಯಿರಿ. ಅಲ್ಲಿ ಟಾರಿನ ಯಾವುದೇ ಸುಳಿವು ಇರದು.

ಹೀಗೆ, ವಿವಿಧ ಕಲೆಗಳಿಗೆ ನಮ್ಮ ಮನೆಯಲ್ಲಿ ನಮ್ಮದೇ ತಂತ್ರಗಳನ್ನು ಬಳಸಿ ಬಟ್ಟೆಗಳ ಅಂದ ಮರಳುವಂತೆ ಮಾಡಬಹುದು. ಜೊತೆಗೆ ಡ್ರೈಕ್ಲೀನ್‌ಗೆ ಕೊಡುವುದನ್ನೂ ತಪ್ಪಿಸಿ ಹಣ ಉಳಿಸಬಹುದು, ಅಲ್ಲವೇ?

ಪಾತ್ರೆ ಕಲೆಗೂ ಇದೆ ಪರಿಹಾರ
ಮನೆಯ ಪಾತ್ರೆಗಳು ಮತ್ತು ಪೀಠೋಪಕರಣಗಳೂ ಕಲೆಗಳಿಂದ ಮುಕ್ತವಾಗಿರುವುದಿಲ್ಲ. ಆದ್ದರಿಂದ ಕಲೆಯಿಂದ ಅಂದಗೆಟ್ಟಿರುವ ಅವುಗಳಿಗೂ ಇಲ್ಲಿವೆ ಕೆಲ ಪರಿಹಾರೋಪಾಯಗಳು:

- ಸ್ಟೀಲ್ ಪಾತ್ರೆಗಳು ವಿವಿಧ ಕಾರಣಗಳಿಂದ ಕಲೆಯಾಗಿದ್ದರೆ ಅವುಗಳಿಗೆ ವಿನೆಗರ್ ಹಚ್ಚಿ ಚೆನ್ನಾಗಿ ತಿಕ್ಕಿ ತೊಳೆಯಿರಿ.
- ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳಿಗೆ ಹಿಡಿದಿರುವ ಕಿಲುಬು ಹಾಗೂ ಅಂಟಿರುವ ಕಲೆಯನ್ನು ಹೋಗಲಾಡಿಸಲು ಉಪ್ಪು, ಹುಣಿಸೇಹಣ್ಣಿನ ಮಿಶ್ರಣದಿಂದ ಚೆನ್ನಾಗಿ ತಿಕ್ಕಿ ತೊಳೆದರೆ ಪಾತ್ರೆಗಳು ಮಿಂಚುತ್ತವೆ.
- ಬೆಳ್ಳಿ ಪಾತ್ರೆಗಳು ಮಾಸಲಾಗಿದ್ದರೆ ಆಲೂಗೆಡ್ಡೆ ಬೇಯಿಸಿದ ನೀರಿನಲ್ಲಿ ಸ್ವಲ್ಪ ಕಾಲ ನೆನೆಸಿಟ್ಟು, ನಂತರ ಬೂದಿ, ಕಡಲೆಹಿಟ್ಟು ಹಾಗೂ ಸೀಗೆಕಾಯಿ ಮಿಶ್ರಣದಿಂದ ಉಜ್ಜಿ ತೊಳೆದರೆ ಮಾಸಲಾಗಿದ್ದ ಬೆಳ್ಳಿ ಪಾತ್ರೆಗಳು ಬೆಳ್ಳನೆ ಬೆಳಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT