ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಪರ್‌ಮ್ಯಾನ್ ಸೃಷ್ಟಿ, ದೃಷ್ಟಿ

ಮಿನುಗುಮಿಂಚು
Last Updated 11 ಜನವರಿ 2014, 19:30 IST
ಅಕ್ಷರ ಗಾತ್ರ

ಕಾಮಿಕ್ ಹೀರೊಗಳಲ್ಲಿ ಸೂಪರ್‌ಮ್ಯಾನ್ ಅತಿ ಹೆಚ್ಚು ಜನಪ್ರಿಯ ಎಂಬುದರಲ್ಲಿ ಅನುಮಾನವೇ ಇಲ್ಲ. ಅಮೆರಿಕದಲ್ಲಿ ಅವನ ಜನಪ್ರಿಯತೆಯ ತಳಹದಿಯ ಮೇಲೆಯೇ ಕಾಮಿಕ್ ಪುಸ್ತಕಗಳ ಸುವರ್ಣ ಸೌಧ ನಿರ್ಮಾಣವಾದದ್ದು. ಕೆನಡಾದ ಕಲಾವಿದರಾದ ಜೋ ಶಸ್ಟರ್ ಹಾಗೂ ಅಮೆರಿಕದ ಬರಹಗಾರ ಜೆರ್ರಿ ಸೀಗೆಲ್ ಸೃಷ್ಟಿಸಿದ ಪಾತ್ರ ಸೂಪರ್‌ಮ್ಯಾನ್. ೧೯೩೮ರಲ್ಲಿ ಸಾಹಸ ಪ್ರಧಾನ ಕಾಮಿಕ್ ಒಂದರಲ್ಲಿ ಅವನು ಮೊದಲು ಪ್ರಕಟವಾದದ್ದು.

ಅಭಿಮಾನಿಗಳು ‘ಐರನ್ ಮ್ಯಾನ್’ ಎಂದೇ ಸೂಪರ್‌ಮ್ಯಾನ್‌ನನ್ನು ಕರೆಯುತ್ತಿದ್ದದ್ದು. ‘ಮ್ಯಾನ್ ಆಫ್ ಟುಮಾರೊ’, ‘ಸನ್ ಆಫ್ ಕ್ರಿಪ್ಟಾನ್’ ಎಂದೂ ಅವನಿಗೆ ಗುಣ ವಿಶೇಷಣಗಳಿವೆ. ಚಿಕ್ಕ ಮಕ್ಕಳಿಗೂ ಅವನ ಕಡೆದಿಟ್ಟಂಥ ಆಕೃತಿಯ ಪರಿಚಯವಿದೆ. ಮೈಗಂಟಿದ ನೀಲಿ ಉಡುಗೆ, ಬೆನ್ನಿನಲ್ಲಿ ಹಾರಾಡುವ ಕೆಂಪು ವಸ್ತ್ರ ಸೂಪರ್‌ಮ್ಯಾನ್‌ನ ಪೋಷಾಕು. ಕ್ರಿಪ್ಟಾನ್ ಗ್ರಹದಲ್ಲಿ ಹುಟ್ಟಿದ ಸೂಪರ್‌ಮ್ಯಾನ್‌ನ ಮೂಲ ಹೆಸರು ಕಲ್–ಎಲ್. ಕ್ರಿಪ್ಟಾನ್ ನಾಶವಾಗುವ ಕೆಲವೇ ಕ್ಷಣಗಳ ಮೊದಲು ಶೈಶವಾವಸ್ಥೆಯಲ್ಲಿ ಇದ್ದಾಗಲೇ ಅವನು ಭೂಮಿಗೆ ಬಂದ.

ಅವನ ಸಾಕು ತಾಯಿ–ತಂದೆ ಕೆಂಟ್ ಕ್ಲಾರ್ಕ್ ಎಂದು ಹೆಸರಿಟ್ಟು, ಮುದ್ದಾಗಿ ಬೆಳೆಸಿದರು. ತನಗಿರುವ ದೈತ್ಯ ಶಕ್ತಿ, ವಿಶೇಷ ಸಾಮರ್ಥ್ಯ ಗೊತ್ತಾದ ಮೇಲೆ ಸೂಪರ್‌ಮ್ಯಾನ್ ಆಗಿ, ಸಮಾಜದ ಒಳಿತಿಗೆಂದು ಅವನು ಕಾರ್ಯತತ್ಪರನಾದ. ಕ್ಲಾರ್ಕ್ ಕೆಂಟ್ ಆಗಿ ಅವನು ಮೃದು ಸ್ವಭಾವದವನು. ಕನ್ನಡಕ ಹಾಕಿಕೊಂಡ ಒಬ್ಬ ಪತ್ರಕರ್ತ. ಅವನ ಎರಡು ವ್ಯಕ್ತಿತ್ವ ಬಹುತೇಕ ಜನಪ್ರಿಯ ಸೂಪರ್‌ಹೀರೊಗಳಂತೆ ಸಾಮಾನ್ಯವಾದದ್ದು.

ಹರ್ಕ್ಯುಲಸ್, ಸ್ಯಾಮ್ಸನ್‌ನಂಥ ಪೌರಾಣಿಕ ಪಾತ್ರಗಳ ಪೋಷಣೆಯನ್ನು ಮಾದರಿಯಾಗಿಟ್ಟುಕೊಂಡು ಸೂಪರ್‌ಮ್ಯಾನ್‌ನನ್ನು ಸೃಷ್ಟಿಸಿದರು. ಅವನ ಸೃಷ್ಟಿಕರ್ತರು ಆ ಕಾಲಘಟ್ಟದ ವಿಜ್ಞಾನ ಸೃಜನಶೀಲ ಸಾಹಿತ್ಯದಿಂದ ಸಾಕಷ್ಟು ಪ್ರಭಾವಿತರಾಗಿದ್ದರು. ರಾಬಿನ್‌ಹುಡ್ ಚಲನಚಿತ್ರಗಳೂ ಅವನ ಸೃಷ್ಟಿಯಲ್ಲಿ ಪರಿಣಾಮ ಬೀರಿದ್ದವು. ಬರಬರುತ್ತಾ ಕಲಾವಿದರು ಅವನ ವಿಶೇಷ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುತ್ತಾ ಹೋದರು. ಅವನು ಹಾರತೊಡಗಿದ. ಅತಿ ವಿಶೇಷವಾದ ಎಕ್ಸ್-ರೇ ದೃಷ್ಟಿ ಅವನದ್ದು.

ಶ್ರವಣ ಶಕ್ತಿ ಅಗಾಧ. ಅವನ ಉಸಿರಾಟದ ಶಕ್ತಿಯಂತೂ ಅದ್ಭುತ. ಬಾಯಿಂದ ತಣ್ಣನೆ ಗಾಳಿಯನ್ನು ಊದಿ ವಸ್ತುವೊಂದು ಹಿಮಗಟ್ಟುವಂತೆ ಮಾಡಬಲ್ಲ. ೧೯೮೬ರಲ್ಲಿ ಜಾನ್ ಬೈರ್ನ್ ಅವನ ಪಾತ್ರಕ್ಕೆ ಒಂದಿಷ್ಟು ಮಿತಿಗಳನ್ನು ಕಲ್ಪಿಸಿದರು. ಕ್ರಿಪ್ಟೊನೈಟ್ ಇರುವಲ್ಲಿ ಅವನ ಚಲನಶಕ್ತಿ ಇಲ್ಲವಾಗಬಲ್ಲದು. ಅಂಥ ವಾತಾವರಣದಲ್ಲಿ ಅವನನ್ನು ಕೊಲ್ಲಲೂಬಹುದು ಎಂಬ ಅಂಶವನ್ನು ಅವರು ಸೇರಿಸಿಕೊಂಡರು. ಇದರಿಂದ ಸೂಪರ್‌ಮ್ಯಾನ್ ಸಾಹಸಗಳು ಇನ್ನಷ್ಟು ರೋಚಕವಾದವು. ಸಾವಿನ ದವಡೆಯಿಂದ ಅವನು ಪಾರಾಗುವ ಪ್ರಸಂಗಗಳು ಮೈನವಿರೇಳಿಸಿದವು.

ಬಹುತೇಕ ಕಥೆಗಳಲ್ಲಿ ಸೂಪರ್‌ಮ್ಯಾನ್‌ಗೆ ಸಾಮಾನ್ಯವಾದ ಪೋಷಕ ಪಾತ್ರಗಳಿವೆ. ಲಾಯಿಸ್ ಲೇನ್ ಅವನ ಸಹೋದ್ಯೋಗಿ. ಅವಳೇ ಆಮೇಲೆ ಜೀವನ ಸಂಗಾತಿಯಾದಳು. ಈಮ್ಮಿ ಆಲ್ಸನ್, ಪೆರ್ರಿ ವೈಟ್, ಲಾನಾ ಲ್ಯಾಂಗ್, ಲೂಯಿ ಲೆಮಾರಿಸ್ ಎಲ್ಲರೂ ಅವನ ಪರವಾಗಿ ವರ್ತಿಸುವ ಪಾತ್ರಗಳು. ಕ್ರೂರಿಯೂ ಆದ ವಿಜ್ಞಾನಿ ಲೆಕ್ಸ್ ಪೂಥರ್, ಯಂತ್ರಮಾನವ ಬ್ರೇನಿಯಾಕ್, ರಕ್ಕಸ ಡೂಮ್ಸ್‌ಡೇ ಮೊದಲಾದವರು ಸೂಪರ್‌ಮ್ಯಾನ್‌ ಶಕ್ತಿ ಎದುರಿಸಲಾಗದೆ ಹತವಾಗುವ ಪಾತ್ರಗಳು.

ಸೂಪರ್‌ಮ್ಯಾನ್ ಯಶಸ್ಸಿನಿಂದ ಸ್ಫೂರ್ತಿಗೊಂಡು ಹಲವು ಸೂಪರ್‌ಹೀರೊಗಳನ್ನು ಸೃಷ್ಟಿಸಲಾಯಿತು. ಕಾಮಿಕ್ ಪುಸ್ತಕಗಳಲ್ಲಷ್ಟೇ ಅಲ್ಲದೆ ರೇಡಿಯೊ, ಟೀವಿ ಹಾಗೂ ಕೆಲವು ಜನಪ್ರಿಯ ಸಿನಿಮಾಗಳಲ್ಲೂ ಸೂಪರ್‌ಮ್ಯಾನ್ ಛಾಪು ಮೂಡಿಸಿದ. ಇಷ್ಟು ದಶಕಗಳ ಕಾಲ ಜನಪ್ರಿಯನಾಗಿ ಉಳಿದ ಅವನ ಪಾತ್ರವನ್ನು ಸಂಶೋಧಕರು, ಸಮಾಜ ವಿಜ್ಞಾನಿಗಳು ಅಧ್ಯಯನ ಮಾಡಿದ್ದಾರೆ. ಸೂಪರ್‌ಮ್ಯಾನ್ ಪ್ರಭಾವ ಹಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT