ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಪರ್‌ಸೀಡ್ ಮಾಡಿ ಸಿಐಡಿ ತನಿಖೆ ನಡೆಸಲಿ

Last Updated 25 ಫೆಬ್ರುವರಿ 2012, 8:40 IST
ಅಕ್ಷರ ಗಾತ್ರ

ರಾಯಚೂರು: ಹೈದರಾಬಾದ್ ಕರ್ನಾಟಕ ಪ್ರದೇಶದ ಪ್ರಮುಖ ಶಿಕ್ಷಣ ಸಂಸ್ಥೆಯಾದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯು(ಎಚ್‌ಕೆಇಎಸ್) ರೈತರು, ಈ ಭಾಗದ ಜನತೆ ಕೊಟ್ಟ ದೇಣಿಗೆ ಹಾಗೂ ಸರ್ಕಾರದ ನೆರವಿನಿಂದ ರೂಪಗೊಂಡ ಸಂಸ್ಥೆಯಾಗಿದ್ದು, ವ್ಯಾಪಕ ಅಕ್ರಮಗಳು ನಡೆದಿವೆ. ಹೊಸದಾಗಿ ಸದಸ್ಯತ್ವ ದೊರಕಿಸಿಲ್ಲ. ಕೂಡಲೇ ಸೂಪರ್‌ಸೀಡ್ ಮಾಡಬೇಕು ಎಂದು ಜನಸಂಗ್ರಾಮ ಪರಿಷತ್‌ನ ಸಂಚಾಲಕರಾದ ರಾಘವೇಂದ್ರ ಕುಷ್ಟಗಿ ಒತ್ತಾಯಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಶಿಕ್ಷಣ ಸಂಸ್ಥೆಯನ್ನು ನಾಗರಾಜರಾವ್ ಎಂಬುವವರು ನಿಜಲಿಂಗಪ್ಪ ಅವರ ಸಹಕಾರದಲ್ಲಿ ಆರಂಭಿಸಿದರು. ಈ ಭಾಗದ ಹೆಮ್ಮೆಯ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸುವ ಅಶಯದೊಂದಿಗೆ ಹೈ.ಕ ಭಾಗದ ಎಲ್ಲ ಜಿಲ್ಲೆಯ ಜನತೆ ಅದರಲ್ಲೂ ವಿಶೇಷವಾಗಿ ರೈತ ಸಮುದಾಯ ಅಪಾರ ದೇಣಿಗೆ ಕಲ್ಪಿಸಿದರು. 70 ರೂಪಾಯಿಗೆ ಒಂದು ತೊಲಿ ಬಂಗಾರ ಇದ್ದಾಗ ರಾಯಚೂರು ಜಿಲ್ಲೆಯ ರೈತ ಸಮುದಾಯ 90 ಲಕ್ಷ ಮೊತ್ತವನ್ನು ಈ ಸಂಸ್ಥೆಗೆ ಕೊಟ್ಟಿತ್ತು ಎಂದು ವಿವರಿಸಿದರು.

ಈ ಸಂಸ್ಥೆಗೆ ದೊರಕಿದ ದೇಣಿಗೆಯಲ್ಲಿ ಬಹುಪಾಲು ದೇಣಿಗೆ ಅಂದರೆ ಶೇ 45ರಷ್ಟು ರಾಯಚೂರು ಜಿಲ್ಲೆಯ ರೈತ ಸಮುದಾಯದಿಂದ ಕೊಡಮಾಡಲ್ಪಟ್ಟಿತ್ತು. ಆಗ 6ರಿಂದ 8 ಸಾವಿರ ಸದಸ್ಯರು ಸಂಸ್ಥೆಯಲ್ಲಿದ್ದರು. ಈಗ 850 ಜನ ಸದಸ್ಯರು ಮಾತ್ರ ಇದ್ದಾರೆ. ಅದರಲ್ಲೂ ಶೇ 45ರಷ್ಟು ದೇಣಿಗೆ ಕೊಟ್ಟ ರಾಯಚೂರು ಜಿಲ್ಲೆಯಿಂದ ಕೇವಲ 45 ಸದಸ್ಯರನ್ನು ಮಾತ್ರ ತೆಗೆದುಕೊಳ್ಳಲಾಗಿದೆ. ಶೇ 90ಕ್ಕೂ ಹೆಚ್ಚು ಗುಲ್ಬರ್ಗ ಜಿಲ್ಲೆಯವರೇ ಇದ್ದಾರೆ. ಹೈ.ಕ ಭಾಗದ ಎಲ್ಲ ಜಿಲ್ಲೆಗೂ ಸೇರಿದ ಈ ಸಂಸ್ಥೆಯಲ್ಲಿ ಈ ಸಮಸ್ಯೆ ಏಕೆ ಎಂದು ಪ್ರಶ್ನಿಸಿದರು.

ಮಹದೇವಪ್ಪ ರಾಂಪುರೆ ಅವರು ಸಂಸ್ಥೆಯನ್ನು ಅತ್ಯಂತ ಶಿಸ್ತುಬದ್ಧವಾಗಿ ರೂಪಿಸಿದರು. ಆದರೆ ನಂತರ ಬಂದಂಥವರು ಅದನ್ನು ಉಳಿಸಿಕೊಳ್ಳಲಿಲ್ಲ. ಕ್ರಮೇಣ ಈ ಸಂಸ್ಥೆಯನ್ನು ಒಂದು ಕೋಮಿನ ಅಂದರೆ `ಲಿಂಗಾಯತ ಸಮುದಾಯಕ್ಕೆ ಸೇರಿದ ಸಂಸ್ಥೆ~ ಎಂಬುವಂತೆ ರೂಪಿಸಿದರು. ಇದು ಯಾವುದೇ ಕಾರಣಕ್ಕೂ ಸಲ್ಲದು. ಇದರ ಅರ್ಥ ತಾವು ಲಿಂಗಾಯತ ಮತ್ತು ವೀರಶೈವ ಸಮುದಾಯ ವಿರೋಧಿಗಳೂ ಅಲ್ಲ. ಆದರೆ, ಸರ್ಕಾರ ಮತ್ತು ರೈತರ ದುಡ್ಡಿನಲ್ಲಿ ರೂಪಗೊಂಡ ಎಚ್‌ಕೆಇಎಸ್ ಸಂಸ್ಥೆ ಒಂದು ಕೋಮಿನ ಹಿಡಿತಕ್ಕೆ ಸಿಗುವುದು ಸಲ್ಲದು ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಪ್ರತಿಷ್ಠಿತ ಈ ಶಿಕ್ಷಣ ಸಂಸ್ಥೆಯ ಸದಸ್ಯತ್ವ ಕೋರಿ ಸುಮಾರು 70 ಸಾವಿರ ಅರ್ಜಿಗಳು ಸಲ್ಲಿಕೆ ಆಗಿದ್ದರೂ ಅವೆಲ್ಲವನ್ನೂ ತಡೆ ಹಿಡಿಯಲಾಗಿದೆ. ಕೇವಲ 850 ಸದಸ್ಯರು ಮಾತ್ರ ಇದ್ದಾರೆ. ಈಗ ಆ ಸಂಸ್ಥೆಗೆ ರಕ್ತಸಂಬಂಧಿ ರೋಗ ಅಂಟಿಕೊಂಟಿದೆ. ಸದಸ್ಯರಾದವರೇ ತಮ್ಮ ಸಂಬಂಧಿಕರನ್ನೇ ಸದಸ್ಯರನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದರು.

ಅಲ್ಲದೇ ಸಂಸ್ಥೆಯಲ್ಲಿ 4,500 ನೌಕರರಿದ್ದಾರೆ. ಇದರಲ್ಲಿ 3,200 ನೌಕರರು ಸದಸ್ಯರ ಸಂಬಂಧಿಕರೇ ಆಗಿದ್ದಾರೆ. ಮೀಸಲಾತಿ ನಿಯಮಾವಳಿ ಉಲ್ಲಂಘನೆ ಮಾಡಿ ಅನೇಕ ಹುದ್ದೆಗೆ ನೇಮಕಾತಿ ಮಾಡಲಾಗಿದೆ. ಸಂಸ್ಥೆ ಚುನಾವಣೆ ದಿನಾಂಕ ಘೋಷಣೆಗೆ ಮುನ್ನ ಹಿಂದಿನ ದಿನಾಂಕ ಹಾಕಿ 500 ಜನ ನೇಮಕ ಮಾಡಲಾಗಿದೆ. ಹೀಗೆ ಹಲವು ರೀತಿ ಅಕ್ರಮಗಳು ನಡೆದಿವೆ. ಹೀಗಾಗಿ ಕೂಡಲೇ ಈ ಸಂಸ್ಥೆಯನ್ನು ಸೂಪರ್‌ಸೀಡ್ ಮಾಡಬೇಕು ಎಂದು ಆಗ್ರಹಿಸಿದರು.

ಅಕ್ರಮಗಳ ಬಗ್ಗೆ ಸಿಐಡಿ ತನಿಖೆ ನಡೆಸಬೇಕು. ಸರ್ಕಾರಿ ಅಧಿಕಾರಿಗಳ ನೇರ ನಿಯಂತ್ರಣದಲ್ಲಿ ಸಂಸ್ಥೆಗೆ ಅರ್ಹರಿಗೆ ಜಾತ್ಯತೀತ ತಳಹದಿಯಲ್ಲಿ ಸದಸ್ಯತ್ವ ಕೊಡಬೇಕು. ಹೈ.ಕ ಭಾಗದ ಜಿಲ್ಲೆಗಳಿಗೆ ಸಮಾಜ ರೀತಿ ಸದಸ್ಯತ್ವ ದೊರಕಿಸಬೇಕು. ಶೇ 45 ರಷ್ಟು ದೇಣಿಗೆ ಕೊಟ್ಟ ರಾಯಚೂರು ಜಿಲ್ಲೆಗೆ ಸಾಧ್ಯವಾದರೆ ಸ್ವಲ್ಪ ಹೆಚ್ಚು ಸದಸ್ಯತ್ವ ಕೊಡುವುದು ನ್ಯಾಯಯುತವಾಗುತ್ತದೆ ಎಂದರು.

ಈ ಎಲ್ಲ ಅಂಶಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲು ಇದೇ 25ರಂದು ಸಂಜೆ ಪತ್ರಿಕಾ ಭವನದಲ್ಲಿ ಸಂಘ ಸಂಸ್ಥೆಗಳ, ಎಚ್‌ಕೆಇಎಸ್ ಸಂಸ್ಥೆಗೆ ಸದಸ್ಯತ್ವ ಕೋರಿ ಅರ್ಜಿ ಸಲ್ಲಿಸಿದವರ ಸಭೆಯನ್ನು ಕರೆಯಲಾಗಿದೆ. ಗುಲ್ಬರ್ಗದ ಪ್ರಗತಿಪರ ಚಿಂತಕ ಆರ್.ಕೆ ಹುಡಗಿ ಅವರು ಆಗಮಿಸಲಿದ್ದಾರೆ ಎಂದು ತಿಳಿಸಿದರು.ಟಿ.ಮಾಣಿಕಪ್ಪ, ಬಂದಪ್ಪಗೌಡ, ಪರಪ್ಪ ನಾಗೋಲಿ, ವಿ.ಎನ್.ಅಕ್ಕಿ, ಶಾಂತಪ್ಪ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT