ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರಿಗಾಗಿ ಅಬಲೆಯ ಅಲೆದಾಟ!

Last Updated 10 ಏಪ್ರಿಲ್ 2013, 4:55 IST
ಅಕ್ಷರ ಗಾತ್ರ

ಮಾಯಕೊಂಡ: ಸತತ 20ವರ್ಷದಿಂದ ಸೂರಿಗಾಗಿ ಅಲೆದು ದಾರಿಕಾಣದೆ ಮಹಿಳೆಯೊಬ್ಬಳು ರಸ್ತೆಯ ಮೆಲೆಯೇ ಗುಡಿಸಲು ಹಾಕಿಕೊಂಡು ಪಶುವಿನಂತೆ ಜೀವಿಸುತ್ತಿರುವ ದಯನೀಯ ದೃಶ್ಯ ಕೊಡಗನೂರು ಗ್ರಾಮದ ಪರಿಶಿಷ್ಟರ ಕಾಲೊನಿಯಲ್ಲಿದೆ. ವಿಧವೆ ರಂಗಮ್ಮ , ತಾಯಿ ನೀಲಮ್ಮ ಮತ್ತು ಮಗ ಆಕಾಶ ಸೂರಿಲ್ಲದ ಬೀದಿಗೆ ಬಂದ ನತದೃಷ್ಟರು.

ಪತಿ ಸತ್ತು 6ವರ್ಷವಾಗಿದೆ. ಹಾಲು ಕುಡಿಯುವ 2ವರ್ಷದ ಮಗು ಆಕಾಶ, ನಿರಂತರ ಹತ್ತಾರು ವರ್ಷದಿಂದ ಗ್ರಾಮ ಪಂಚಾಯ್ತಿ, ಜಿಲ್ಲಾಧಿಕಾರಿ ಮುಂದೆ ಸೂರಿಗಾಗಿ ಮೊರೆಯಿತ್ತರೂ ಆಲಿಸದ್ದರಿಂದ ನೊಂದು ಕೊನೆಗೆ ಹರಿಜನ ಕಾಲೊನಿಯ ರಸ್ತೆಯ ಮೇಲೆಯೇ ತೆಂಗಿನ ಗರಿಗಳಿಂದ ಗುಡಿಸಲು ಹಾಕಿಕೊಂಡು ಬದುಕು ನಡೆಸುತ್ತಿದ್ದಾರೆ. 

ಆರು ವರ್ಷದ ಹಿಂದೆ ಗಂಡನನ್ನು ಕಳೆದುಕೊಂಡ ರಂಗವ್ವ ತನ್ನ ತಾಯಿ ನೀಲಮ್ಮನೊಂದಿಗೆ ಬದುಕುತ್ತಿದ್ದಾಳೆ. ನೀಲಮ್ಮನ ಅಣ್ಣ ತಮ್ಮಂದಿರು ಸರ್ಕಾರ ನೀಡಿದ ಆಶ್ರಯ ಮನೆಯನ್ನು ಯಾವುದೋ ಕಷ್ಟಕ್ಕೆ ಮಾರಿಕೊಂಡರು. ಅಲ್ಲಿಂದ ಬೇರೊಬ್ಬರ ಜಾಗದಲ್ಲಿ ಕಾಡಿ ಬೇಡಿ ಗುಡಿಸಲು ಹಾಕಿಕೊಂಡಿದ್ದರು. ಅವರೂ ಕೂಡಾ ತಮ್ಮ ಮಕ್ಕಳ ಮದುವೆಯಾಗಿದ್ದು, ನಮಗೆ ಜಾಗ ಸಾಕಾಗಲ್ಲ ಎಂದು ಅಲ್ಲಿಂದಲೂ ಜಾಡು ಬಿಡಿಸಿದರು.

ಕೊನೆಗೆ ಕಾಲೊನಿಯ ಸಮೀಪದ ಅಂಬೇಡ್ಕರ್ ಸಮುದಾಯ ಭವನದಲ್ಲಿ 2ವರ್ಷ ಕಾಲ ತಳ್ಳಿದರು. ಅಂಬೇಡ್ಕರ ಸಮುದಾಯ ಭವನದಲ್ಲಿ ಸಿಲಿಂಡರ್ ಇರಿಸಿದ್ದು, ನೀವು ಇಲ್ಲಿ ಒಲೆ ಉರಿಸಿದರೆ ಅಪಾಯ ಆಗಬಹುದು ಎಂದು ಅಲ್ಲಿಂದಲೂ ಹೊರಹಾಕಲಾಯಿತು.

ರಂಗವ್ವ ಕೊನೆಗೆ ಸ್ಥಳೀಯರ ವಿರೋಧದ ನಡುವೆ ಪರಿಶಿಷ್ಟರ ಕಲೊನಿಯ ರಸ್ತೆಯ ಮೇಲೆ ಚಿಕ್ಕ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದಾಳೆ. ಚರಂಡಿಗೆ ಎದುರಾಗಿರುವ ನೆರಕೆ ಗುಡಿಸಲಲ್ಲಿ ಸೊಳ್ಳೆ, ದುರ್ವಾಸನೆ ತುಂಬಿದ್ದು, ಅಕ್ಷರಶಃ ಪಶುವಿನಂತೆ ಜೀವಿಸುತ್ತಿರುವುದು ನಾಗರಿಕ ಸಮಾಜವನ್ನು ಅಣಕಿಸುತ್ತದೆ. ವಿಧವಾ ವೇತನ ಕೊಡಿಸುತ್ತೇವೆ ಎಂದು ಕೆಲವರು ಅವರಿದಲೇ ಹಣ ಕಿತ್ತಿದ್ದಾರೆ!

`ನನ್ನ ಗಂಡ ಸತ್ತಾಗಿನಿಂದ ಬದುಕೋದು ಕಷ್ಟವಾಗಿದೆ. ಹೊಲ-ಮನೆ ಏನೂ ಇಲ್ಲ., ಹೊಟ್ಟೆಹೊರೆಯಲು ಕೂಲಿ ಹೋಗಬೇಕು. ತಾಯಿಗೆ ಕೂಲಿ ಮಾಡಾಕೆ ಆಗಲ್ಲ. ಕುಡುಕರ ದಾಂಧಲೆ ಹೇಳತೀರದು. ಕುಡಿದವರು ಯಾರಾದರೂ ಗುಡಿಸಲಿಗೆ ಬೆಂಕಿ ಇಟ್ಟಾರು ಅಂತಾ ಭಯ. ಮಗನ್ನ ಓದಿಸಬೇಕು ಅಂದರೆ ಮನೆನೂ  ಇಲ್ಲಾ ... ಲೈಟೂ ಇಲ್ಲ.. ವಿಧವೆಯರ  ಸಂಬಳ ಮಾಡಿಸಿಕೊಡ್ತೀವಿ ಅಂತಾ ಹೇಳಿ ಕೆಲವರು ಒಂದೂವರೆ ಸಾವಿರ ಕಿತ್ತುಕೊಂಡಿದ್ದಾರೆ. ನನ್ನ ಮಗನ ಗತಿ ಏನು? ಸಂಬಳನೂ ಬರ‌್ತಿಲ್ಲ' ಎಂದು ಕಣ್ಣೀರು ಸುರಿಸುತ್ತಾರೆ ದಲಿತ ಮಹಿಳೆ ರಂಗಮ್ಮ.

ಮನೆ ನೀಡಿ ಅಂತಾ ಜಿಲ್ಲಾಧಿಕಾರಿಗೆ, ತಹಶೀಲ್ದಾರರಿಗೆ ಮತ್ತು ಗ್ರಾಮ ಪಂಚಾಯ್ತಿಗೆ ಹಲವು ಬಾರಿ ಅರ್ಜಿ ಸಲ್ಲಿಸಿದ್ದು, ಪ್ರಯೋಜನವಾಗಿಲ್ಲ. ಸರ್ಕಾರದ ಯೋಜನೆ ಅರ್ಹರಿಗೆ ತಲುಪುತ್ತಿಲ್ಲ. ಶೀಘ್ರ ಸರ್ಕಾರ ರಂಗಮ್ಮನಿಗೆ ಮನೆ ನೀಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಗುಡಿಸಲು ಹಾಕಿ ಹೋರಾಟ ಮಾಡುತ್ತೇವೆ ಎನ್ನುತ್ತಾರೆ ಗ್ರಾಮದ ಜೆಡಿಎಸ್ ಮುಖಂಡರಾದ ಆಂಜನೇಯ, ಕೃಷ್ಣಮೂರ್ತಿ, ಪ್ರಕಾಶ್, ದೇವೆಂದ್ರಪ್ಪ ಮತ್ತು ಅಣಬೇರಿನ  ಅನಿಲ್ ಕುಮಾರ್.   
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT