ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರು ವಂಚಿತ ಕೂದಲು ಮಾರುವವರು

Last Updated 10 ಏಪ್ರಿಲ್ 2013, 6:31 IST
ಅಕ್ಷರ ಗಾತ್ರ

ಕೆ.ಆರ್.ನಗರ: ರಾಜ್ಯದ ವಿವಿಧ ಭಾಗಗಳಿಂದ 15 ವರ್ಷಗಳ ಹಿಂದೆ ಪಟ್ಟಣಕ್ಕೆ ಆಗಮಿಸಿದ್ದ ಅಲೆಮಾರಿ ಜನಾಂಗದವರು ಇಂದಿಗೂ ಸೂರು ವಂಚಿತರಾಗಿದ್ದಾರೆ. ನಾಗರಿಕ ಸೌಲಭ್ಯಗಳೆಲ್ಲದರಿಂದಲೂ ಇವರು ವಂಚಿತರು.

ಬಡವರಿಗಾದರೂ 20X30 ಅಳತೆಯ ಒಂದು ಮನೆ, ಅಡುಗೆ ಕೋಣೆ, ಬಚ್ಚಲು ಕೋಣೆ, ಕುಳಿತು ಕೊಳ್ಳಲು, ಮಲಗಲು ಸ್ಥಳ, ವಿದ್ಯುತ್ ದೀಪ ಬೇಕೇ ಬೇಕು. ಆದರೆ ಈ ಅಲೆಮಾರಿ ಜನರಿಗೆ ಇವ್ಯಾವವೂ ಇಲ್ಲ. ಅವರ ಮನೆಯೆಂದರೆ ಗುಡಿಸಲು ಎನ್ನಲೂ ಬರುವುದಿರಲ್ಲ. ಕೇವಲ ಟೆಂಟ್ ಅಷ್ಟೇ!

ತಮ್ಮದಲ್ಲದ ಜಾಗದಲ್ಲಿ 5ಗಿ8 ಅಡಿ ಅಳತೆಯ ಗುಡಿಸಲನ್ನು ನಿರ್ಮಿಸಿಕೊಂಡಿದ್ದಾರೆ. ತೆಂಗಿನ ಗರಿ, ಮರದ ತುಂಡು ಬಳಸಿ ನಿರ್ಮಿಸಿಕೊಂಡ ಗುಡಿಸಿಲಿನ ಮೇಲೆ ಯಾರೋ ಬಿಸಾಕಿದ ಬಟ್ಟೆ, ಪ್ಲಾಸ್ಟಿಕ್ ತಂದು ನೆರಳು ಮಾಡಿಕೊಂಡಿದ್ದಾರೆ. ಗುಡಿಸಲಿನ ಒಳಗೆ ಇಬ್ಬರು ಮಲಗಿಕೊಳ್ಳುವಷ್ಟು ಮಾತ್ರ ಜಾಗ ಇದೆ. ಅಲ್ಲಿಯೇ ಒಂದೆರಡು ಪಾತ್ರೆ, ಚಾಪೆ, ಹಾಸಿಗೆ. ಅಲ್ಲಿರುವ ಇಕ್ಕಟ್ಟಾದ ಜಾಗದಲ್ಲಿಯೇ ಕುಟುಂಬದ ನಾಲ್ಕಾರು ಜನ ಮಲಗುತ್ತಾರೆ.

ಬಹುತೇಕ ಗುಡಿಸಲುಗಳಿಗೆ ಬೀಗ ಹಾಕುವ ಪರಿಪಾಠವೂ ಇಲ್ಲ. 15 ವರ್ಷಗಳ ಹಿಂದೆ ಹುಬ್ಬಳ್ಳಿ, ಅರಸೀಕರೆ, ಚನ್ನರಾಯಪಟ್ಟಣ ಸೇರಿದಂತೆ ವಿವಿಧ ಊರುಗಳಿಂದ ಕೊರಮ, ಭೋವಿ, ಸಿಳ್ಳೆಕ್ಯಾತ, ಗಂಗೆಮತ ಜನಾಂಗಕ್ಕೆ ಸೇರಿದ ಸುಮಾರು 25ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿಗೆ ವಲಸೆ ಬಂದು ನೆಲೆಸಿದ್ದಾರೆ.

ಇಂದಿನವರೆಗೂ ಇವರಿಗೆ ಪಡಿತರ ಚೀಟಿಯಾಗಲೀ, ಚುನಾವಣೆ ಗುರುತಿನ ಪತ್ರವಾಗಲಿ ಸಿಕ್ಕಿಲ್ಲ. ಈಚೆಗೆ ನಡೆದ ಪುರಸಭೆ ಚುನಾವಣೆಯ ಸಂದರ್ಭದಲ್ಲಿ ದಲಿತ ಸಂಘಟನೆಯ ಸದಸ್ಯರೊಬ್ಬರು ಇಲ್ಲಿರುವ ಕೆಲವರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಿದರಲ್ಲದೇ ಆಧಾರ ಕಾರ್ಡ್, ಬಿಪಿಎಲ್ ಪಡಿತರ ಚೀಟಿ ಕೂಡ ಮಾಡಿಸಿಕೊಟ್ಟಿದ್ದಾರೆ. ಆದ್ದರಿಂದ ಇವರ ಬಳಿ ಈಗ ಕೆಲವು ಓಟುಗಳಿವೆ.

ಚುನಾವಣೆ ಪ್ರಚಾರಕ್ಕಾಗಿ ಬರುವವರಿಗೆ ರಸ್ತೆ ಮಾಡಿಸಿಕೊಡಿ, ಬೀದಿ ದೀಪ, ನಲ್ಲಿ ಹಾಕಿಸಿ, ಚರಂಡಿ ನಿರ್ಮಿಸಿಕೊಡಿ ಎಂದು ಇಲ್ಲಿರುವ ಯಾರೂ ಕೇಳುತ್ತಿಲ್ಲ. ನಿಮಗೆ ವೋಟ್ ಹಾಕುತ್ತೇವೆ. ನಮಗೆ ವಾಸಿಸಲು ಮನೆ ಕೊಡಿ ಎಂದಷ್ಟೇ ಮನವಿ ಮಾಡುತ್ತಿದ್ದಾರೆ.

ಕೂದಲು ಮಾರಿ ಜೀವನ: ಗಂಡ ಹೆಂಡತಿ ಮಕ್ಕಳು ಸೇರಿದಂತೆ ಇಡೀ ಕುಟುಂಬ ಬಟ್ಟೆ, ಪಿನ್ನು, ತಲೆ ಕೂದಲು ಮಾರಿ ಸಂಸಾರ ಸಾಗಿಸುತ್ತದೆ. ಕೆಲವರ ಮಕ್ಕಳು ಇದೀಗ ಅಂಗನವಾಡಿಗೆ ಕಾಲಿಟ್ಟಿದ್ದಾರೆ. ಪರಿಶಿಷ್ಟ ಜನಾಂಗದ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಹಲವು ಯೋಜನೆಗಳು ಇಂತಹ ನಿರ್ಗತಿಕರಿಗೆ ದೊರಕದೇ ಉಳ್ಳವರ ಪಾಲಾಗುತ್ತಿರುವುದು ದುರದೃಷ್ಟಕರ.

ಒಂದು ಹೊತ್ತಿನ ಊಟಕ್ಕೂ ತತ್ವಾರ
ನಾವು ಪಟ್ಟಣಕ್ಕೆ ಬಂದು 15 ವರ್ಷಗಳೇ ಕಳೆದವು. ನಾವು ಈಗ ಅಲೆಮಾರಿಗಳಾಗಿ ಉಳಿದಿಲ್ಲ. ಆದರೆ ನಮ್ಮದೇ ಆದ ಯಾವುದೇ ಆಸ್ತಿ ಇಲ್ಲ. ಮನೆಗಳಿಲ್ಲ. ನಮ್ಮ ಮಕ್ಕಳೆಲ್ಲ ಇಂದಿಗೂ ನಮ್ಮಂತೆಯೇ ಬಟ್ಟೆ, ಪಿನ್ನು, ತಲೆ ಕೂದಲು ಮಾರುತ್ತಾರೆ. ದುಡಿದ ಹಣ ಒಂದು ಹೊತ್ತಿನ ಊಟಕ್ಕೂ ಸಾಕಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ನಾವು ಸ್ವಂತ ಮನೆ ಕಟ್ಟಿಕೊಳ್ಳುವುದು ಸಾಧ್ಯವಿಲ್ಲ. ಸರ್ಕಾರದ ಯೋಜನೆಗಳ ಬಗ್ಗೆ ತಿಳಿ ಯುತ್ತಿಲ್ಲ. ಅಧಿಕಾರಿಗಳು ನಮ್ಮತ್ತ ಸುಳಿದಿಲ್ಲ.
-ಸೋಮು, ತಲೆ ಕೂದಲು ವ್ಯಾಪಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT