ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯ ನಗರಿಯ ಕ್ರೀಡೋತ್ಸಾಹ...

Last Updated 1 ಜುಲೈ 2012, 19:30 IST
ಅಕ್ಷರ ಗಾತ್ರ

ಗುಲ್ಬರ್ಗದಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ಅಸಹನೀಯ ಬಿಸಿಲ ಬೇಗೆ. ಈ ವರ್ಷ ಇದೀಗ ಜೂನ್ ಮುಗಿದರೂ ಇನ್ನೂ ಮಳೆಯ ಸುಳಿವಿಲ್ಲ.... ಇವುಗಳೆಲ್ಲದರ ನಡುವೆಯೂ ಈ ಪ್ರದೇಶದ ಬಹಳಷ್ಟು ಹಳ್ಳಿ ಪಟ್ಟಣಗಳಲ್ಲಿ ಒಂದಿಲ್ಲಾ ಒಂದು ಕ್ರೀಡಾ ಚಟುವಟಿಕೆ ನಡೆಯುತ್ತಿರುವುದೊಂದು ವಿಶೇಷ. ರಾಜ್ಯದ ಕ್ರೀಡಾ ಮುಖ್ಯವಾಹಿನಿಯಲ್ಲಿ ಈ ಪ್ರದೇಶದವರು ಎದ್ದು ಕಂಡಿರುವುದು ತೀರಾ ಕಡಿಮೆ ಎನಿಸಿದರೂ, ಜಿಲ್ಲಾದ್ಯಂತ ಕ್ರೀಡಾ ಕಾರ್ಯಕ್ರಮಗಳಿಗೆ ಬರವಿಲ್ಲ.

ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಬಲ್ಲ ಸಾಮರ್ಥ್ಯವುಳ್ಳ ಅನೇಕ ಕ್ರೀಡಾಪಟುಗಳು ಗುಲ್ಬರ್ಗ ಜಿಲ್ಲೆಯಲ್ಲಿದ್ದಾರೆ. ಅವರಲ್ಲಿ ಆಸಕ್ತಿಯಿದೆ. ತಕ್ಕ ಪ್ರತಿಭೆಯೂ ಸೇರಿದೆ. ಇದನ್ನು ಪ್ರೋತ್ಸಾಹಿಸಲು ಅಭಿಮಾನಿಗಳಿದ್ದಾರೆ. ಆದರೆ, ಪೋಷಕರ ಹಾಗೂ ಅಧಿಕಾರಿಗಳ ಆಸಕ್ತಿಗೆ ಕೊಂಚ `ಬರ~ ಇದೆ. ಅದಕ್ಕಾಗಿ ಹಿಂದುಳಿದ ಹಣೆಪಟ್ಟಿಯ ಬಿಸಿ ಈ ಜಿಲ್ಲೆಯ ಕ್ರೀಡಾಕ್ಷೇತ್ರಕ್ಕೂ ತಟ್ಟಿದೆ. 

ರಾಜ್ಯದಲ್ಲೇ ಶತಮಾನದ ಗರಿಷ್ಠ ತಾಪಮಾನ ಕಂಡರೂ ಗುಲ್‌ಮೊಹರ್ ಊರಿನಲ್ಲಿ  ಕ್ರೀಡೋತ್ಸಾಹ ಬತ್ತಿಲ್ಲ. ಸೂರ್ಯನಗರಿಯು ಸಮಸ್ಯೆಗಳ ಆಗರವೆನಿಸಿದ್ದರೂ  ಕ್ರೀಡಾಕೂಟಗಳು ಮಾತ್ರ ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಕಳೆದ ಏಪ್ರಿಲ್-ಮೇ ತಿಂಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ಮೀರಿದ ಉಷ್ಣಾಂಶವಿತ್ತು. ಆದರೂ ಕ್ರಿಕೆಟ್, ಟೆನಿಸ್, ಹಾಕಿ, ವಾಲಿಬಾಲ್ ಹೀಗೆ ವಿವಿಧ ಟೂರ್ನಿಗಳು ನಡೆದವು. ಇದು ಈ ಸಲದ ವಿಶೇಷವೇನಲ್ಲ. ಪ್ರತಿ ವರ್ಷವೂ ಹೀಗೆಯೇ.

ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಭಾಗದ ಸ್ಪರ್ಧಿಗಳ ಹೆಜ್ಜೆಗುರುತು ತೀರಾ ಕಡಿಮೆ ಎನಿಸಿದರೂ, ಆ ನಿಟ್ಟಿನಲ್ಲಿ ಕ್ರೀಡಾಪಟುಗಳ ಯತ್ನ ನಡೆದೇ ಇದೆ. ಕ್ರಿಕೆಟ್‌ನಲ್ಲಿ ರಘೋತ್ತಮ ನವಲಿ, ಅಥ್ಲೆಟಿಕ್ಸ್‌ನಲ್ಲಿ ಶ್ರೀದೇವಿ, ಟೆನಿಸ್‌ನಲ್ಲಿ ದೀಪಕ್ ದೇಸಾಯಿ ಮತ್ತಿತರರು ಸಾಕಷ್ಟು ಗಮನ ಸೆಳೆದಿದ್ದಾರೆ. ಪ್ರಾಥಮಿಕ-ಪ್ರೌಢ ಶಾಲಾ ಹಂತದಲ್ಲಿ ಇಲ್ಲಿ ತರಬೇತಿ ಪಡೆದ ಪ್ರತಿಭೆಗಳು ಅವಕಾಶಕ್ಕಾಗಿ ಬೆಂಗಳೂರು ಸೇರಿದ ನಿದರ್ಶನಗಳೂ ಇವೆ.

1983ರ ವಿಶ್ವಕಪ್ ಚಾಂಪಿಯನ್ ತಂಡದ ಕೆಲ ಸದಸ್ಯರು ಹಾಗೂ ಭಾರತೀಯ ಇತರೆ ತಂಡದ ನಡುವೆ ರೋಜರ್ ಬಿನ್ನಿ ಸಹಾಯಾರ್ಥ ಪ್ರದರ್ಶನ ಪಂದ್ಯ 1991ರಲ್ಲಿ ಗುಲ್ಬರ್ಗದಲ್ಲಿ ನಡೆದಿತ್ತು. ಎರಡು ಐಟಿಎಫ್ ಟೆನಿಸ್ ಟೂರ್ನಿ, ರಾಷ್ಟ್ರಮಟ್ಟದ ವಾಲಿಬಾಲ್ ಟೂರ್ನಿ, ಹಾಕಿ, ರಾಷ್ಟ್ರೀಯ ಮಟ್ಟದ ಅಂತರ ವಿಶ್ವವಿದ್ಯಾಲಯ ಕ್ರಿಕೆಟ್ ಟೂರ್ನಿಗಳು, ರಾಷ್ಟ್ರೀಯ ಕ್ರೀಡಾಕೂಟವು ಇಲ್ಲಿ ನಡೆದಿರುವುದರ ನೆನಪು ಕ್ರೀಡಾಸಕ್ತರ ಮನದಲ್ಲಿ ಇನ್ನೂ ಉಳಿದಿದೆ.

ನೂತನ ವಿದ್ಯಾಲಯ (ಎನ್‌ವಿ) ಮತ್ತು ಖಾಜಾ ಬಂದೇನವಾಜ್ ಹೌಸ್ ಆಫ್ ಸ್ಪೋರ್ಟ್ಸ್ ಕ್ರಿಕೆಟ್ ಬಿಸಿಯನ್ನು ಹೆಚ್ಚಿಸುತ್ತಿರುವ ಪ್ರಮುಖ ಸಂಸ್ಥೆಗಳು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ರಾಯಚೂರು ವಲಯದ ಅಂತರ ಶಾಲಾ ಕ್ರಿಕೆಟ್ ಟೂರ್ನಿಗಳು ಇಲ್ಲಿ ನಡೆದ ಉದಾಹರಣೆಗಳಿವೆ. ಆಗಾಗ್ಗೆ ಕ್ರಿಕೆಟ್ ತರಬೇತಿ ಶಿಬಿರಗಳೂ ಇಲ್ಲಿ ಆಯೋಜನೆಯಾಗುತ್ತವೆ.
ಗುಲ್ಬರ್ಗದಲ್ಲಿ ಖಾಜಾ ಬಂದೇ ನವಾಜ್ ಗೋಲ್ಡ್ ಕಪ್ ನಾಕೌಟ್ ರಾಜ್ಯ ಮಟ್ಟದ ಕ್ರಿಕೆಟ್ (16 ವರ್ಷದೊಳಗಿನವರ ವಿಭಾಗ) ಟೂರ್ನಿಯಲ್ಲಿ ಸ್ಥಳೀಯ ತಂಡಗಳ ಜೊತೆ ಕಿರಣ್ ಮೋರೆ ಆಕಾಡೆಮಿ ಬರೋಡಾ, ಪ್ರವೀಣ್ ಅಮ್ರೆ ಆಕಾಡೆಮಿ ಮುಂಬೈ, ವೆಂಗ್‌ಸರ್ಕರ್ ಆಕಾಡೆಮಿ ಮುಂಬೈ,  ತೆಲಂಗಾಣ, ಮುಂಬೈ, ಬೆಂಗಳೂರು ಮತ್ತಿತರ ತಂಡಗಳು ಪೈಪೋಟಿ ನಡೆಸಿದ್ದವು.

`ಬಿಸಿಲಿನ ತಾಪದಲ್ಲಿ ಆಡುವುದು ಕಷ್ಟ. ಬಳಲಿಕೆ, ನೀರಡಿಕೆ ಮತ್ತಿತರ ಸಮಸ್ಯೆಗಳು ಇತರ ಪ್ರದೇಶಗಳಿಗಿಂತ ಇಲ್ಲಿ ಹೆಚ್ಚು ಕಾಡುತ್ತದೆ. ಇನ್ನೊಂದೆಡೆ ಶೈಕ್ಷಣಿಕ ಸ್ಪರ್ಧೆಗಳಿಗೆ ಪೋಷಕರು ಹಾಕುವ ಒತ್ತಡ, ಆಸಕ್ತ ಕ್ರೀಡಾಪಟುಗಳಿಗೆ ಎದುರಾಗುವ ಆರ್ಥಿಕ ಸಂಕಷ್ಟದಿಂದ ಹಿನ್ನಡೆಯಾಗುತ್ತದೆ. ಆದರೂ ನಮ್ಮ ಪ್ರಯತ್ನ ನಿರಂತರ~ ಎನ್ನುತ್ತಾರೆ ಕ್ರಿಕೆಟ್ ತರಬೇತುದಾರ ಮಾಧವ ಜೋಶಿ ಮತ್ತು ಅರ್ಷದ್ ಹುಸೇನ್. 

ಕುಸ್ತಿ ಈ ಭಾಗದ ಬಹು ಜನಪ್ರಿಯ ಕ್ರೀಡೆ. ಅದರಲ್ಲೂ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಅದರ ಸೊಬಗು ನೋಡಲು ಇನ್ನೂ ಚೆಂದ. ರಾಜ್ಯ ಸರ್ಕಾರದಲ್ಲಿ ಸಚಿವರಾಗಿರುವ ರೇವೂ ನಾಯಕ ಬೆಳಮಗಿ ಸ್ವತಃ  ಕಣಕ್ಕಿಳಿದು ಮೈಮರೆತು ಕಾದಾಡುತ್ತಾರೆ. ಸಾಕಷ್ಟು ಕುಸ್ತಿ ಟೂರ್ನಿಗಳು ನಡೆದಾಗ ಅವರು ಅಖಾಡಕ್ಕಿಳಿಯುವ ಮೂಲಕ ಉದ್ಘಾಟನೆ ನೆರವೇರಿಸಿದ್ದೂ ಇದೆ. ದೇಶಿಯ ಕ್ರೀಡೆಗೆ ಇಲ್ಲಿ ಹೆಚ್ಚು ಪ್ರೋತ್ಸಾಹವಿದೆ. ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶಗಳಿಂದಲೂ ಸ್ಪರ್ಧಿಗಳು ಪಾಲ್ಗೊಳ್ಳುವುದು ಕುಸ್ತಿಗೆ ಹೆಚ್ಚು ಜನಪ್ರಿಯತೆ ಸಿಗಲು ಕಾರಣವಾಗಿದೆ.

ಕೆಲವು ದಿನಗಳ ಹಿಂದೆ ಗೋಲ್ಡ್ ಕಪ್ ಹಾಕಿ ಟೂರ್ನಿ ನಡೆದಿತ್ತು.  ಸುಡುವ ಬಿಸಿಲಿನಲ್ಲೂ ಜನ ನಿಂತು ಪಂದ್ಯ ವೀಕ್ಷಿಸಿದ್ದರು. ತಮಿಳುನಾಡು, ಬೆಂಗಳೂರು, ಮುಂಬೈ, ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ) ಬೆಂಗಳೂರು, ಎಂಪಿ ಹಾಕಿ ಆಕಾಡೆಮಿ ಭೋಪಾಲ್, ಸರ್ಕಾರಿ ಕ್ರೀಡಾ ಶಾಲೆ ಕೂಡಗಿ, ಆಂಧ್ರ ಪ್ರದೇಶ, ಕೇರಳ ತಂಡಗಳು ಪಾಲ್ಗೊಂಡಿದ್ದವು. 

 ವಾಲಿಬಾಲ್ ಟೂರ್ನಿಗಳು ಇಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಷಹಬಾದ್ ಯೂತ್ ಕ್ಲಬ್ ಆಶ್ರಯದಲ್ಲಿ ರಾಷ್ಟ್ರೀಯ ವಾಲಿಬಾಲ್ ಟೂರ್ನಿ ಇತ್ತೀಚಿಗೆ ನಡೆದಿತ್ತು. ಈ ಟೂರ್ನಿಯಲ್ಲಿ ನಾಗಪುರ, ಔರಂಗಾಬಾದ್, ಮುಂಬೈ, ಹೈದರಾಬಾದ್, ಸಿಂದಗಿ ಸೇರಿದಂತೆ ಹಲವು ಪ್ರದೇಶಗಳ ತಂಡಗಳು ಪಾಲ್ಗೊಂಡಿದ್ದವು.  ಮೈದಾನದಲ್ಲಿ ಬೆಳಗಾಗುವ ತನಕವೂ ಜನ ಕಿಕ್ಕಿರಿದಿದ್ದು ಆಟದ ಸೊಬಗನ್ನು ಅನುಭವಿಸಿದ್ದರು. ಟೆನಿಸ್ ಟೂರ್ನಿಗಳನ್ನು ನಡೆಸಲು ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಕೋರ್ಟ್ ಇದೆ. ಗುಲ್ಬರ್ಗ ಜಿಲ್ಲಾ ಲಾನ್ ಟೆನಿಸ್ ಸಂಸ್ಥೆ ಬಾಲಕ-ಬಾಲಕಿಯರಿಗೆ ಟೆನಿಸ್ ತರಬೇತಿಯನ್ನು ಆಗಾಗ್ಗೆ ಆಯೋಜಿಸುತ್ತದೆ.

ಇಲ್ಲಿಯೇ ವಿಶ್ವವಿದ್ಯಾಲಯ ಇರುವುದರಿಂದ ಅನೇಕ ಪ್ರಮುಖ  ಕ್ರೀಡಾಕೂಟಗಳು ನಡೆದಿವೆ. ಸಮರ್ಪಕ ಸೌಲಭ್ಯಗಳು ಹಾಗೂ ಪ್ರೋತ್ಸಾಹದ ಕೊರತೆ ಇರುವುದನ್ನೂ ತಳ್ಳಿ ಹಾಕುವಂತಿಲ್ಲ.  ಹೀಗೆ ಸೂರ್ಯನ ತಾಪ ಹೆಚ್ಚಿದ್ದರೂ ಕೋಟೆಗಳ ಊರಲ್ಲಿ  ಕ್ರೀಡೋತ್ಸವಕ್ಕಂತೂ ಕೊರತೆ ಇಲ್ಲ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT