ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯನಿಗೂ ಸೂಟಿ ನೀಡಿದ ಮಳೆ

Last Updated 18 ಜೂನ್ 2011, 6:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಳಿನಗರದಲ್ಲಿ ಶುಕ್ರವಾರ ಬೆಳ್ಳಂಬೆಳಿಗ್ಗೆಯೇ ಶುರುವಾದ ಮೃಗಶಿರ ಮಳೆ ಒಂದಿನಿತೂ ವಿಶ್ರಾಂತಿ ಪಡೆಯದೆ ಇಡೀ ದಿನ ಸುರಿಯುತ್ತಲೇ ಇತ್ತು. ಸುರಿಯುವ ಮಳೆಯಲ್ಲಿಯೇ ಎರಡೂ ನಗರಗಳ ನಿತ್ಯದ ಕಲಾಪಗಳು ಎಂದಿನಂತೆ ನಡೆದವು. ಹೀಗಾಗಿ ರಸ್ತೆಗಳ ಮೇಲೆ ಕೊಡೆಗಳ ಮೆರವಣಿಗೆ ಬಲು ಜೋರಾಗಿತ್ತು.

ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಮಳೆಯಿಂದ ಹರ್ಷಚಿತ್ತರಾದ ರೈತರು, ಬಿಟ್ಟೂಬಿಡದೆ ಹನಿಯುತ್ತಿದ್ದ ಸೋನೆಯಲ್ಲೇ ಬಿತ್ತನೆ ತಯಾರಿಗಾಗಿ ಹೊಲಗಳಿಗೆ ತೆರಳುತ್ತಿದ್ದರು. ಟ್ರ್ಯಾಕ್ಟರ್‌ಗಳು ಕೃಷಿ ಕಾರ್ಮಿಕರನ್ನು ತುಂಬಿಕೊಂಡು ಕೆಸರು ಗದ್ದೆಗಳಾದ ರಸ್ತೆಗಳಲ್ಲಿ ಏದುಸಿರು ಬಿಡುತ್ತಾ ಓಡುತ್ತಿದ್ದರೆ, ಹತ್ತಿರದ ಹೊಲಗಳಿಗೆ ಕಾರ್ಮಿಕರು ಬುತ್ತಿಗಂಟನ್ನು ನೆತ್ತಿ ಮೇಲೆ ಹೊತ್ತುಕೊಂಡು ನೆನೆಯುತ್ತಲೇ ಹೊರಟಿದ್ದರು.

`ಈಗ ನಿಲ್ಲಲಿದೆ, ಇನ್ನೇನು ನಿಲ್ಲಲಿದೆ~ ಎಂದು ಕಾದು, ಕಾದು ಸುಸ್ತು ಹೊಡೆದ ವಿದ್ಯಾರ್ಥಿಗಳು ಸುರಿಯುತ್ತಿದ್ದ ಮಳೆಯಲ್ಲೇ ಶಾಲೆಗೆ ದೌಡಾಯಿಸುತ್ತಿದ್ದ ದೃಶ್ಯ ಬೆಳಗಿನ ಹೊತ್ತಿನಲ್ಲಿ ಸಾಮಾನ್ಯವಾಗಿತ್ತು. ಅಪ್ಪ ಹಿಡಿದ ಕೊಡೆಯಲ್ಲಿ `ಬ್ಯಾಗಿಗೂ ನೀರು ಬೀಳಬಾರದು, ಅಂಗಿಯೂ ತೊಯ್ಯಬಾರದು~ ಎಂದು ಮಕ್ಕಳು ಸರ್ಕಸ್ ನಡೆಸುತ್ತಿದ್ದ ನೋಟ ನೋಡುಗರಿಗೆ ಕಚಗುಳಿ ಇಡುತ್ತಿತ್ತು.

ತರಕಾರಿ ಹಾಗೂ ಹಣ್ಣಿನ ಮಾರುವವರು ಮಳೆಗೆ ಶಾಪ ಹಾಕುತ್ತ ರಸ್ತೆಯ ಮೇಲೆ ಹರಿಯುತ್ತಿದ್ದ ನೀರಿನಲ್ಲೇ ವ್ಯಾಪಾರಕ್ಕೆ ಕುಳಿತಿದ್ದರು. ದುರ್ಗದಬೈಲ್‌ನಲ್ಲಿ ನೇರಳೆ ಹಣ್ಣು ಮಾರುವವರ ಗೋಳಾಟ ಹೇಳ ತೀರದಾಗಿತ್ತು.

ಮಾರುಕಟ್ಟೆಗಳೆಲ್ಲ ಕೆಸರು ಗದ್ದೆಗಳಾಗಿದ್ದವು. ಗ್ರಾಹಕರು ಕೇಳಿದ ದರಕ್ಕೆ ನಿಟ್ಟುಸಿರು ಬಿಡುತ್ತಾ ತರಕಾರಿ ಮಾರುತ್ತಿದ್ದ ಮಹಿಳೆಯರ ಕಣ್ಣೀರು ಮಳೆ ನೀರಿನೊಂದಿಗೆ ಕರಗಿ ಹೊರಟಿತ್ತು. ಆದರೆ, ಸುರಿಯುವ ಮಳೆಯಲ್ಲಿಯೇ ಮುಚ್ಚಿದ್ದ ಅಂಗಡಿಗಳ ಮುಂದೆ ಜರ್ಕಿನ್, ರೇನ್‌ಕೋಟ್‌ಗಳು ಹಾಗೂ ಕೊಡೆಗಳ ಮಾರಾಟ ಮಾತ್ರ ಜೋರಾಗಿಯೇ ನಡೆಯಿತು.

ಮಳೆ ಓಡಾಟಕ್ಕೆ ಅವಕಾಶವನ್ನೂ ನೀಡದ್ದರಿಂದ ರಸ್ತೆಗಳಲ್ಲಿ ಜನ ಸಂಚಾರ ವಿರಳವಾಗಿತ್ತು. ಸಂಜೆ ಬಿಡುವು ಕೊಡಬಹುದು ಎಂದು ಲೆಕ್ಕಹಾಕಿ ತಿನಿಸುಗಳನ್ನು ತಯಾರು ಮಾಡಿಕೊಂಡು ಬಂದಿದ್ದ ತಳ್ಳುವ ಅಂಗಡಿಕಾರರು ಗ್ರಾಹಕರಿಲ್ಲದೆ ನಿರಾಸೆ ಅನುಭವಿಸಿದರು. ರಸ್ತೆಗಳಲ್ಲಿ `ಸರ್ ಭರ್~ ಎಂದು ಓಡಾಡುತ್ತಿದ್ದ ವಾಹನಗಳು ರಸ್ತೆ ಪಕ್ಕದಲ್ಲಿ ಹೊರಟಿದ್ದ ಅಲ್ಪ ಸಂಖ್ಯೆಯ ಪಾದಚಾರಿಗಳ ಮೇಲೆ ಕೆಸರಿನ ಓಕುಳಿ ಆಡುತ್ತಿದ್ದವು.

ಅಲ್ಲಲ್ಲಿ ಕೆಲವು ಚರಂಡಿಗಳು ಕಟ್ಟಿಕೊಂಡು ಜನ ಓಡಾಡಲು ತೊಂದರೆ ಅನುಭವಿಸಿದ್ದನ್ನು ಬಿಟ್ಟರೆ ದಿನವಿಡೀ ಮಳೆ ಸುರಿದರೂ ಅವಳಿನಗರದಲ್ಲಿ ಯಾವುದೇ ರೀತಿಯ ಹಾನಿ ಸಂಭವಿಸಿದ ಕುರಿತು ವರದಿಯಾಗಿಲ್ಲ. ಶುಕ್ರವಾರ ಅರೆ ಕ್ಷಣವೂ ಸೂರ್ಯನ ಮುಖ ದರ್ಶನಕ್ಕೆ ಮುಂಗಾರು ಮೋಡಗಳು ಅವಕಾಶ ಕೊಡಲಿಲ್ಲ.

ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ತಬಕದ ಹೊನ್ನಳ್ಳಿಯಲ್ಲಿ ಜಿಲ್ಲೆಯಲ್ಲೇ ಅತ್ಯಧಿಕ ಪ್ರಮಾಣದ ಮಳೆ (9.6 ಮಿ.ಮೀ) ಬಿದ್ದರೆ, ಕಲಘಟಗಿಯಲ್ಲಿ 8.8 ಮಿ.ಮೀ. ಮಳೆ ಸುರಿದಿದೆ.

ಕಲಘಟಗಿ: ಧಾರಾಕಾರ ಮಳೆ
ಕಲಘಟಗಿ:
ಕಳೆದ ಎರಡು ದಿನಗಳಿಂದ ಎಡಬಿಡದೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆ, ಸ್ಥಳೀಯರಿಗೆ ಮಲೆನಾಡಿನ ಮಳೆಯ ಅನುಭವ ನೀಡುತ್ತಿದೆ.

ಇಡೀ ದಿನ ಸುರಿದ ಮಳೆಯಿಂದಾಗಿ ಪಟ್ಟಣ ಬಿಕೋ ಎನ್ನುತ್ತಿದ್ದು, ಜನಸಂಚಾರವೂ ವಿರಳವಾದಂತೆ ಕಂಡುಬಂದಿದೆ. ವ್ಯಾಪಾರ ವಹಿವಾಟುಗಳೂ ಅತಿಕಡಿಮೆ ಎನ್ನುವಂತೆ ನಡೆದರೆ, ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಸುರಿವ ಮಳೆಯಲ್ಲಯೇ ಕೊಡೆ ಹಿಡಿದು ಪ್ರಯಾಸಪಟ್ಟು ಹೋಗುವ ದೃಶ್ಯ ಕಂಡು ಬಂತು.

ಸುರಿಯುತ್ತಿರುವ ಮಳೆಯಿಂದಾಗಿ, ಕೃಷಿ ಚಟುವಟಿಕೆಗೆ ಹಿನ್ನಡೆ ಉಂಟಾಗಿದ್ದು, ಬಿತ್ತನೆ ಕಾರ್ಯ ಸ್ಥಗಿತವಾಗಿದೆ.ಹೊಲಗದ್ದೆಗಳಲ್ಲಿ ನಿಂತ ನೀರಿನಿಂದಾಗಿ ಬಿತ್ತನೆ ಕಾರ್ಯ ನಡೆಯುತ್ತಿಲ್ಲ. ನಾಲ್ಕು ದಿನಗಳಾದರೂ ಮಳೆ ತೆರವಾಗಿ ಬಿಸಿಲು ಬೀಳುವಂತಾದರೆ ಕೃಷಿ ಕಾರ್ಯಗಳು ಚುರುಕುಗೊಳ್ಳುತ್ತವೆ ಎಂಬುದು ಕೃಷಿಕರ ಅನಿಸಿಕೆ.

ಇನ್ನೊಂದೆಡೆ, ಹಳಿಯಾಳ ಕಲಘಟಗಿ ಮಾರ್ಗದಲ್ಲಿನ ಮಂಗ್ಯಾನಹಳ್ಳಕ್ಕೆ ಸೇತುವೆಯ ನಿರ್ಮಾಣ ಕಾರ್ಯ ವಿಳಂಬವಾಗಿದ್ದು, ಸಂಚಾರಯೋಗ್ಯವಾಗದೇ ಇರುವುದುರಿಂದ ಈ ರಸ್ತೆಯ ಮೂಲಕ ಸಂಪರ್ಕ ಕಡಿದಂತಾಗಿದ್ದು, ಪ್ರಯಾಣಿಕರು ಸಂಗಮೇಶ್ವರ ಗ್ರಾಮವನ್ನು ಸುತ್ತುವರಿದು ಸಂಚರಿಸುತ್ತಿದ್ದರೂ, ಆ ಮಾರ್ಗವೂ ಮಳೆಯ ಕಾರಣದಿಂದ ಕಡಿತಗೊಳ್ಳುವ ಆತಂಕವನ್ನು ಪ್ರಯಾಣಿಕರು ವ್ಯಕ್ತಪಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT