ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೃಜನಶೀಲ, ಕಷ್ಟಸಾಧ್ಯ ಕೃಷಿ

Last Updated 1 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ವಿಶ್ವ ಮೈತ್ರಿಯ ಈ ದಿನಗಳಲ್ಲಿ ಯಾವುದೇ ಪ್ರದೇಶದ ಭಾಷೆ ಮತ್ತು ಸಾಹಿತ್ಯವನ್ನು ತಿಳಿಯುವುದು ಅಗತ್ಯವಾಗಿದೆ. ಬೈಬಲ್ ಮತ್ತು ಪಾಶ್ಚಾತ್ಯ ಸಾಹಿತ್ಯವು ಭಾರತೀಯ ಭಾಷೆಗಳಲ್ಲಿ ಮತ್ತು ಭಾರತದ ಆಧ್ಯಾತ್ಮಿಕ ಗ್ರಂಥಗಳು ಹಾಗೂ ಭಾರತೀಯ ಸಾಹಿತ್ಯವು ಯೂರೋಪಿನ ಭಾಷೆಗಳಲ್ಲಿ ಅನುವಾದಗೊಂಡು ಆ ಮೂಲಕ ಪೂರ್ವ ಮತ್ತು ಪಶ್ಚಿಮದ ಅಂತರವನ್ನು ದೂರಮಾಡಿದೆ.  ಭಾಷಾಂತರ ಸಾಮಾನ್ಯ ಅರ್ಥದಿಂದ ವ್ಯಾಪಕ ಅರ್ಥದವರೆಗೆ ಜೀವನಕ್ಕೆ ಮತ್ತು ಸಾಹಿತ್ಯಕ್ಕೆ ಒಂದು ಮುಖ್ಯ ಹಾಗೂ ಅನಿವಾರ್ಯ ಅಗತ್ಯದ ಪ್ರಕ್ರಿಯೆಯಾಗಿದೆ.

ಅನುವಾದ ಎರಡು ಭಾಷೆಗಳ ಒಳನೋಟ, ಒಳಸಂವೇದನೆಯನ್ನು ಆಯಾಮ ಭಾಷೆಯಲ್ಲಿ ಹಿಡಿದಿಡುವ ಒಂದು ಕಷ್ಟಸಾಧ್ಯ ಕೃಷಿ. ಮೂಲ ಲೇಖಕನ ಮನೋಧರ್ಮ ಮತ್ತು ಅನುವಾದಕನ ಮನೋಧರ್ಮದಲ್ಲಿ ಹೊಂದಾಣಿಕೆಯಾಗಬೇಕು. ಭಾಷೆ ಒಂದು ಸಾಂಸ್ಕೃತಿಕ ಅನುಭವವನ್ನು ಅವಲಂಬಿಸಿರುತ್ತದೆ. ಇದಿಲ್ಲದಿದ್ದರೆ ಅನುವಾದ ತಪ್ಪು ಗ್ರಹಿಕೆಗೆ ದಾರಿ ಮಾಡುತ್ತದೆ. ಭಾಷಾಂತರಕಾರನಿಗೆ ಆಯಾ ಭಾಷೆಗಳ ನುಡಿಗಟ್ಟು, ವಿಶಿಷ್ಟವಾದ ಶಬ್ದಗಳನ್ನು ಮೂಲದ ಅರ್ಥಕ್ಕೆ ಚ್ಯುತಿ ಬರದಂತೆ ಅನುವಾದಿಸುವ ಜಾಣ್ಮೆ, ಎರಡು ಭಾಷೆಗಳ ಆಳವಾದ ಜ್ಞಾನ ಬೇಕಾಗುತ್ತದೆ. ಅನುವಾದದ ಕೆಲಸ ಅನುವಾದಕನ ಸೃಜನಶೀಲತೆಯನ್ನು ಕೆಣಕಿ, ಅವನಿಗೆ ಸವಾಲೊಡ್ಡುತ್ತದೆ. ಇಂಥ ಸವಾಲನ್ನು ಎದುರಿಸಲು ಅನುವಾದಕನಲ್ಲಿ ಸೃಜನಶೀಲತೆಯಿರಬೇಕು.

ಇಲ್ಲಿ ಶಿವರಾಮ ಕಾರಂತರ `ನಿಜಕ್ಕೂ ಸ್ವಂತ ಬರವಣಿಗೆಗಿಂತ ಕಷ್ಟದ ಕೆಲಸ ಅನುವಾದ~ ಎಂಬ ಮಾತು ಉಲ್ಲೇಖನೀಯ. ಅನುವಾದಕ ಯಾವ ಕೃತಿಯನ್ನು ಅನುವಾದಿಸುತ್ತಾನೋ ಆ ಮೂಲ ಲೇಖಕರೊಂದಿಗೆ ನೇರ ಸಂಪರ್ಕ ಸಾಧಿಸಿ ಅವರಿಂದ ಸಮರ್ಪಕ ಮಾಹಿತಿಯನ್ನು ಪಡೆದು ಅನುವಾದಿಸುವುದು ಸೂಕ್ತ. (ಆಗ ಇಂಥ ಸಂಪರ್ಕಕ್ಕೆ ಇಂಗ್ಲಿಷ್ ಭಾಷೆ ಮಾಧ್ಯಮವಾಗಬಹುದು).

ಸ್ವಾನುಭವ: ನಾನು ನನ್ನ 14ನೇ ವಯಸ್ಸಿಗೆ ಹಿಂದಿ ಕಲಿಯಲು ಪ್ರಾರಂಭಿಸಿ 4 ವರ್ಷಗಳಲ್ಲಿ ಹಿಂದಿಯಲ್ಲಿ ಪದವಿ ಪಡೆದಿದ್ದೆ. ಆಗಲೇ ನನಗೆ ಹಿಂದಿಯ ಕೃತಿಗಳನ್ನು ಅನುವಾದಿಸುವ `ಚಟ~ ಅಂಟಿಕೊಂಡಿತ್ತು. ನಾನಾಗ ಹಿಂದಿಯ ಒಂದು ಕ್ಲಾಸಿಕ್ ಕಾದಂಬರಿಯನ್ನೂ ಅನುವಾದಿಸಿದ್ದೆ. ಡಿಸೆಂಬರ್ 1976ರ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ನನ್ನ ಅನುವಾದಿತ ಕಥೆ- `ಒಂದು ಶೈಕ್ಷಣಿಕ ಕಥೆ~ ಪ್ರಪ್ರಥಮವಾಗಿ ಪ್ರಕಟವಾಗಿತ್ತು.

ಆನಂತರ ನಾನು ತಿರುಗಿ ನೋಡಲೇ ಇಲ್ಲ. ಇದುವರೆಗೆ 45 ಪುಸ್ತಕಗಳನ್ನು ಅನುವಾದ ಮಾಡಿದ್ದೇನೆ.. ಸುಮಾರು 900ಕ್ಕೂ ಮೇಲ್ಪಟ್ಟ ಅನುವಾದಿತ ಕಥೆ, ಕವನ, ಮಕ್ಕಳ ಸಾಹಿತ್ಯ ಇತ್ಯಾದಿ ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕನ್ನಡದ ಪ್ರಮುಖ ಲೇಖಕರಾದ ಕುವೆಂಪು, ಡಾ. ಜಿ.ಎಸ್. ಶಿವರುದ್ರಪ್ಪ, ತೇಜಸ್ವಿ, ಚದುರಂಗ,  ಕೆ.ವಿ. ತಿರುಮಲೇಶ್, ನಾ. ಮೊಗಸಾಲೆ ಮೊದಲಾದವರ ಪರಿಚಯವಾಗಿದೆ. ಹಿಂದಿ ಹಾಗೂ ಇನ್ನಿತರ ಭಾರತೀಯ ಭಾಷೆಗಳ ಪ್ರಸಿದ್ಧ ಸಾಹಿತಿಗಳಾದ ಕಮಲೇಶ್ವರ್, ಭೀಷ್ಮ ಸಹಾನಿ, ವಿಮಲ್ ಮಿತ್ರ, ಅಸಗರ್ ವಜಾಹತ್, ನರೇಂದ್ರ ಕೋಹಲಿ, ರಾಜೇಂದ್ರ ಅವಸ್ಥಿ, ಅಬಿದ್ ಸುರತಿ, ಕಮಲಾದಾಸ್, ಸುನೀಲ್ ಗಂಗೋಪಾಧ್ಯಾಯ, ಅಮೃತಾ ಪ್ರೀತಮ್, ಮಹೀಪ್‌ಸಿಂಗ್, ಖುಶ್ವಂತ್‌ಸಿಂಗ್, ಸೀತಾಕಾಂತ ಮಹಾಪಾತ್ರ, ಕೆ. ಸಚ್ಚಿದಾನಂದನ್ ನನ್ನ ಮಿತ್ರರಾಗಿದ್ದಾರೆ. ಇಂಥ ಅದೃಷ್ಟ ಬಹುಶಃ ಮೂಲ ಲೇಖಕರಿಗೂ ಸಿಗಲಾರದು! ಆದರೆ ಅನುವಾದಕರಿಗೆ ಯೋಗ್ಯ ಪ್ರೋತ್ಸಾಹ ಸಿಗುತ್ತಿಲ್ಲ. ಕೇಂದ್ರ ಸಾಹಿತ್ಯ ಅಕಾಡೆಮಿ, ನಾಶನಲ್ ಬುಕ್ ಟ್ರಸ್ಟ್, ಕುವೆಂಪು ಭಾಷಾ ಭಾರತಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿವೆ. ಆದರೆ ಇಂಥ ಸಂಸ್ಥೆಗಳಿಗೆ ಒಂದು ಮಿತಿ ಇರುತ್ತದೆ. ಪತ್ರಿಕೆಗಳು ತಿಂಗಳಿಗೊಂದು ಅನುವಾದಿತ ಕಥೆ/ಕವನಗಳನ್ನು ಪ್ರಕಟಿಸಿ ಅನುವಾದಕರಿಗೆ ಪ್ರೋತ್ಸಾಹಿಸಬೇಕು.

ಕಡೆಯದಾಗಿ ನಾನು ಇಲ್ಲಿ ಒಂದು ಪ್ರಸಂಗವನ್ನು ಹೇಳಲು ಬಯಸುತ್ತೇನೆ. ಒಮ್ಮೆ ನಾನು ಅನಿವಾಸಿ ಭಾರತೀಯ ಸಾಹಿತಿಯೊಬ್ಬರ ಕಾದಂಬರಿಯನ್ನು ಅನುವಾದಿಸುವಾಗ ಅದರಲ್ಲಿ ಮದ್ಯಕ್ಕೆ ಸಂಬಂಧಿಸಿದ ಹೆಸರೊಂದು ಬರುತ್ತದೆ. ನಾನು ಆ ಹೆಸರು ಮದ್ಯಕ್ಕೇ ಸಂಬಂಧಿಸಿದ್ದು ಎಂಬುದನ್ನು ದೃಢೀಕರಿಸಿಕೊಳ್ಳುವ ಸಲುವಾಗಿ ನಾಲ್ಕಾರು ವೈನ್ ಶಾಪ್‌ಗಳನ್ನು ಹತ್ತಿಳಿದೆ.
 
ಹಾಗೆ ಒಂದು ವೈನ್ ಶಾಪ್‌ನಿಂದ ಹೊರಬಂದಾಗ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ನನ್ನ ಪರಿಚಿತರೊಬ್ಬರು ನನ್ನನ್ನು ನೋಡಿ ನಾನು ಕುಡಿಯುತ್ತೇನೆ ಎಂದು ತಿಳಿದು ನನ್ನನ್ನು ಅಸಡ್ಡೆಯಿಂದ ನೋಡಲು ಪ್ರಾರಂಭಿಸಿದರು. ನನಗೆ ಈಚೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಪ್ರಶಸ್ತಿ ಲಭಿಸಿದಾಗ ಅವರಿಗೆ ವಿಷಯ ತಿಳಿದು ನನ್ನ ಮಿತ್ರರೊಬ್ಬರಲ್ಲಿ ಹೀಗೆಂದು ಪಿಸುಗುಟ್ಟಿದರಂತೆ. `ಈಚೆಗೆ ಅವರು ಕುಡಿಯೋದನ್ನು ಜಾಸ್ತಿ ಮಾಡಿರಬೇಕು!~
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT