ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆ.30ಕ್ಕೆ ಬೆಂಗಳೂರಲ್ಲಿ ಜಾಗೃತಿ ಸಮಾವೇಶ

ಪುಣೆ ಒಪ್ಪಂದ ಕರಾಳ ದಿನ
Last Updated 12 ಸೆಪ್ಟೆಂಬರ್ 2013, 8:44 IST
ಅಕ್ಷರ ಗಾತ್ರ

ರಾಯಚೂರು: ಪುಣೆ ಒಪ್ಪಂದದ ಕರಾಳ ದಿನ ನೆನಪಿಗಾಗಿ ಸೆಪ್ಟೆಂಬರ್‌ 30ರಂದು ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ) ರಾಜ್ಯ ಸಮಿತಿಯಿಂದ ಜನ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದು ಸಂಚಾಲಕ ಆರ್‌.ಮೋಹನರಾಜ್ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1932ರ ಸೆಪ್ಟೆಂಬರ್‌ 24ರಂದು ಡಾ.ಬಿ.ಆರ್‌. ಅಂಬೇಡ್ಕರ್‌ ಮತ್ತು ಮಹಾತ್ಮಾ ಗಾಂಧಿ ಅವರ ನಡುವೆ ಮೀಸಲಾತಿಗೆ ಸಂಬಂಧ ಆಗದ ಒಪ್ಪಂದವೇ ಐತಿಹಾಸಿಕವಾದ ಪುಣೆ ಒಪ್ಪಂದವಾಗಿದೆ. ಈ ಒಪ್ಪಂದದಿಂದ ದಲಿತ ಸಮುದಾಯಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ. ಎಸ್ಸಿ/ಎಸ್ಟಿ ಮತ್ತು ಹಿಂದುಳಿದ ವರ್ಗಗಳ ಸಮಸ್ಯೆ ಬಗೆಹರಿದಿಲ್ಲ. 1992ರಲ್ಲಿ ಜಾರಿಗೆ ಬಂದ ಖಾಸಗೀಕರಣ, ಜಾಗತೀಕರಣದಿಂದ ಶೋಷಿತ ಸಮುದಾಯಗಳು ಶೋಷಣೆಗೆ ಸಿಲುಕಿವೆ ಎಂದರು.

ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಘೋಷಣೆ ಆಗಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರನ್ನು ಹಾಗೂ ನೀಡಿದವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು. ಈ ಹುದ್ದೆಗಳನ್ನು ಹಿಂಪಡೆದು ಬ್ಯಾಕ್‌ಲಾಗ್‌ ಹುದ್ದೆಗಳಾಗಿ ಪರಿಗಣಿಸಬೇಕು, ಭೂಬ್ಯಾಂಕ್‌ ಬಡ, ಚಿಕ್ಕ ಹಿಡುವಳಿದಾರರನ್ನು ಒಕ್ಕಲೆಬ್ಬಿಸುವ ದುರುದ್ದೇಶ ಹೊಂದಿದೆ. ಇದನ್ನು ರದ್ದುಪಡಿಸಬೇಕು, ಸರ್ಕಾರಿ ಜಾಗೆಯಲ್ಲಿ ವಾಸಿಸುತ್ತಿರುವ ನಿವೇಶನ ರಹಿತರಿಗೆ ಹಕ್ಕು ಪತ್ರ ನೀಡಬೇಕು, ವಿವಿಧ ಯೋಜನೆಯಡಿ ಮನೆ ನಿರ್ಮಿಸಿಕೊಂಡವರಿಗೆ ಹಣ ಬಿಡುಗಡೆ ಮಾಡಬೇಕು, ಸಮಾಜ ಕಲ್ಯಾಣ ಇಲಾಖೆ ಪುನರ್‌ ಸಂಘಟಿಸಬೇಕು. ಇವು ಬೇಡಿಕೆಗಳು ಎಂದು ವಿವರಿಸಿದರು.

ಪರಿಶಿಷ್ಟ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಶಿಫಾರಸ್ಸು ಮಾಡಿದ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿ ಜಾರಿಗೆ ತರಬೇಕು. ವಸತಿನಿಲಯ ಸಮಗ್ರ ಸುಧಾರಣೆ ಆಗಬೇಕು. 2013–14ರಲ್ಲಿ ಮಂಜೂರಾದ ವಸತಿ ನಿಲಯಗಳನ್ನು ಮುಚ್ಚಬಾರದು ಎಂಬುದು ಸೇರಿದಂತೆ ಹಲವು ಪ್ರಮುಖ ಬೇಡಿಕೆ ಈಡೇರಿಕೆಗಾಗಿ ಸರ್ಕಾರಕ್ಕೆ ಒತ್ತಾಯಿಸಿ ಸೆಪ್ಟೆಂಬರ್‌ 30ರಂದು  ಜಾಗೃತಿ ಸಮಾವೇಶ ಆಯೋಜಿಸಲಾಗಿದೆ. ವಿಚಾರವಂತರು ಮತ್ತು ಪ್ರಗತಿಪರರು ಪಾಲ್ಗೊಳ್ಳಬೇಕು ಎಂದರು.

ದಲಿತ ಸಂಘರ್ಷ ಸಮಿತಿ ಬಲಿಷ್ಠಗೊಳಿಸುವುದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ದಲಿತ ವಿರೋಧಿ ನೀತಿಯ ಸಂಬಂಧವಾಗಿ ಚರ್ಚಿಸಲು ಅಕ್ಟೋಬರ್‌ 25,26 ಮತ್ತು 27ರಂದು ರಾಯಚೂರು ಜಿಲ್ಲೆಯಲ್ಲಿ ಮೂರು ದಿನಗಳ ರಾಜ್ಯಮಟ್ಟದ ಅಧ್ಯಯನ ಶಿಬಿರ ಆಯೋಜಿಸಲಾಗುವುದು ಎಂದರು.

ಸಂಘಟನೆ ಮುಖಂಡರಾದ ರವೀಂದ್ರನಾಥ ಪಟ್ಟಿ, ಎಂ.ಆರ್‌ ಭೇರಿ, ಎಂ ಈರಣ್ಣ, ಹುಲಿಗೆಪ್ಪ ಕೆಸರಟ್ಟಿ, ಎನ್‌.ಕೆ ನೆಲಹಾಳ, ಮಾರೆಪ್ಪ, ಮಹಮ್ಮದ್‌ ಅಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT